Advertisement

Hubballi: ಮಳೆ ಇಲ್ಲದಿದ್ದರೂ 9 ಜಿಲ್ಲೆಗಳಲ್ಲಿ ಭಾರೀ ನೆರೆ!

03:16 PM Aug 02, 2024 | Team Udayavani |

ಹುಬ್ಬಳ್ಳಿ: ಅತಿವೃಷ್ಟಿಯಾದಾಗ ಪ್ರವಾಹ ಸಹಜ. ಆದರೆ ಮಳೆ ಇಲ್ಲದಿದ್ದರೂ ಅಥವಾ ಸಾಧಾರಣ ಮಳೆಯಾದರೂ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ನೆರೆ ಬರುತ್ತದೆ. ಈ ವರ್ಷವೂ ಅಂಥದೇ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ!

Advertisement

ಕೃಷ್ಣಾ, ಘಟಪ್ರಭಾ, ಮಲಪ್ರಭಾ ಹಾಗೂ ತುಂಗಭದ್ರಾ ನದಿಗಳ ತೀರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಣೆಕಟ್ಟುಗಳಿಂದ ಹೊರ ಬಿಡುವ ಅಪಾರ ಪ್ರಮಾಣದ ನೀರಿನಿಂದ ಈ ಊರುಗಳಲ್ಲಿ ಅಕ್ಷರಶಃ ಜಲಪ್ರಳಯವೇ ಆಗಿದೆ. ನದಿ ಪಾತ್ರದ ಜನರು ಸ್ಥಳಾಂತರಗೊಳ್ಳುವ ಅನಿವಾರ್ಯ ಸೃಷ್ಟಿಯಾಗಿದೆ. ಕೃಷ್ಣೆ ಉಕ್ಕಿ ಹರಿಯುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ, ಜಮಖಂಡಿ, ತೇರದಾಳ ತಾಲೂಕಿನಲ್ಲಿ ಮತ್ತೆ ನೆರೆ ಆವರಿಸಿದೆ. ಹಿಪ್ಪರಗಿ ಗ್ರಾಮ ಜಲಾವೃತವಾಗಿದೆ.

ಹಳಿಂಗಳಿ ಗ್ರಾಮದ ನೂರಾರು ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಘಟಪ್ರಭಾ ತೀರದ ಮಹಾಲಿಂಗಪುರ, ಮುಧೋಳ, ಮಲಪ್ರಭಾ ನದಿ ತೀರದ ಕುಳಗೇರಿ ಕ್ರಾಸ್‌, ಬಾದಾಮಿ ಭಾಗದಲ್ಲೂ ಪ್ರವಾಹ ಭೀತಿ ಎದುರಾಗಿದೆ. ಕಾಳಜಿ ಕೇಂದ್ರಗಳಲ್ಲಿ ಜನ, ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ.

ಆಲಮಟ್ಟಿಯಿಂದ 3.50 ಲಕ್ಷ ಕ್ಯುಸೆಕ್‌ ನೀರು ಹೊರ ಬಿಡುತ್ತಿರುವುದರಿಂದ ಕೋಲ್ಹಾರ್‌, ನಿಡಗುಂದಿ, ಮುದ್ದೇಬಿಹಾಳ ತಾಲೂಕಿನ ಹಲವು ಗ್ರಾಮಗಳನ್ನು ನೆರೆ ಆವರಿಸಿದೆ. ನಾರಾಯಣಪುರ ಬಸವಸಾಗರ ಜಲಾಶಯದಿಂದ 3.25 ಲಕ್ಷ ಕ್ಯುಸೆಕ್‌ ನೀರು
ಬಿಡುತ್ತಿರುವುದರಿಂದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ
ಸಂಪರ್ಕ ಕಡಿತಗೊಂಡಿದೆ. ದೇವದುರ್ಗ ತಾಲೂಕಿನ ಸುಮಾರು ಮೇದರಗೊಳು, ಅಂಜಳ, ಹೇರುಂಡಿ, ಲಿಂಗದಹಳ್ಳಿ, ಸೇರಿ ವಿವಿಧ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ನೀರು ನುಗ್ಗಿದೆ. ರಾಯಚೂರು ತಾಲೂಕಿನ 17 ಗ್ರಾಮಗಳಿಗೂ ಜಲಕಂಟಕ ಎದುರಾಗಿದೆ. ತಾಲೂಕಿನ ಕುರ್ವಕುಲಾ, ಕುರ್ವಕುದಾ ನಡುಗಡ್ಡೆ ಗಳು ಸಂಪರ್ಕ ಕಡಿದುಕೊಂಡಿವೆ.

ತುಂಗಭದ್ರಾ ತೀರದಲ್ಲೂ ಭೀತಿ
ತುಂಗಭದ್ರಾ ಜಲಾಶಯದಿಂದ 1.96 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸುತ್ತಿರುವುದರಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆ ನಡುಗಡ್ಡೆಯಾಗಿದೆ. ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಇತಿಹಾಸ ಪ್ರಸಿದ್ಧ ಋಷಿಮುಖ ಸ್ಮಾರಕ ಮುಳುಗಿದೆ. ಹಂಪಿಯ ಹಲವು ಸ್ಮಾರಕಗಳು ಜಲಾವೃತವಾಗಿವೆ.

Advertisement

ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ, ಮಲೆಬೆನ್ನೂರು
ತಾಲೂಕುಗಳಲ್ಲಿ ನೆರೆ ಆವರಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿರುವುದರಿಂದ ವರದಾ ನದಿಯಿಂದ ಹಾವೇರಿ ಜಿಲ್ಲೆಯ ಹಾವೇರಿ, ಸವಣೂರು, ಹಾನಗಲ್‌ ತಾಲೂಕಿನಲ್ಲಿ ನೆರೆ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next