ವರದಿ: ಬಸವರಾಜ ಹೊಂಗಲ್
ಧಾರವಾಡ: ಗೆಲುವು ನಮ್ಮದೇ ಎನ್ನುವ ಆತ್ಮವಿಶ್ವಾಸದಲ್ಲಿರುವ ಅಭ್ಯರ್ಥಿಗಳು, ತೀವ್ರಗೊಂಡ ಪ್ರಚಾರ, ಗಾಳಿಗೆ ತೂರಲ್ಪಟ್ಟ ಕೋವಿಡ್ ಮುಂಜಾಗೃತಾ ಕ್ರಮಗಳು, ಸ್ಥಳೀಯ ಸಮಸ್ಯೆಗಳನ್ನಾಧರಿಸಿ ನಿಶ್ಚಯವಾಗುವುದೇ ಗೆಲುವು? ಒಟ್ಟಿನಲ್ಲಿ ಕೈ-ಕಮಲ-ದಳ ಅಭ್ಯರ್ಥಿಗಳ ಸೆಣಸಾಟಕ್ಕೆ ವೇದಿಕೆಯಾದ ಪಾಲಿಕೆ ಚುನಾವಣೆ.
ಹೌದು…, ಬಿಜೆಪಿ ಭದ್ರಕೋಟೆಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಆಯಕಟ್ಟಿನ ವಾರ್ಡ್‌ಗಳಲ್ಲಿ ಸ್ವಂತ ಬಲದ ಅಭ್ಯರ್ಥಿಗಳನ್ನು ಕಣಿಕ್ಕಿಳಿಸಿರುವ ಜೆಡಿಎಸ್ ತನ್ನ ಅಸ್ತಿತ್ವ ಸಾಬೀತು ಪಡಿಸಿದೆ. ಹೀಗಾಗಿ ಧಾರವಾಡ ನಗರದಲ್ಲಿನ ಒಟ್ಟು 27 ವಾರ್ಡ್‌ಗಳಲ್ಲಿ ಕೈ-ಕಮಲದ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. ಅಭ್ಯರ್ಥಿಗಳು ಗೆಲುವಿಗಾಗಿ ಕೊನೆಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಧಾರವಾಡ ನಗರ ಅಂದರೆ ನವಲೂರಿನ ವರೆಗೂ ಇರುವ 22 ವಾರ್ಡ್‍ಗಳಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿ, ಒಟ್ಟು 12 ವಾರ್ಡ್‌ಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 9 ಹಾಗೂ ಜೆಡಿಎಸ್ 1 ಸ್ಥಾನ ಗೆದ್ದುಕೊಂಡಿತ್ತು.
ಗ್ರಾಮೀಣದಲ್ಲಿ ಕೈ-ಕಮಲ ಸೆಣಸಾಟ: ಧಾರವಾಡ ನಗರದ 1-9 ವಾರ್ಡ್‌ಗಳು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಹಣಾಹಣಿ ನಡೆಯುತ್ತಲೇ ಇದೆ. ಈ ಹಿಂದಿನ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದ ಹೋರಾಟ ನಡೆಸಿದ್ದವು. 1-9ನೇ ವಾರ್ಡ್‌ಗಳು ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು ಇಲ್ಲಿ ಕಾಂಗ್ರೆಸ್ ಹಿಂದಿನಿಂದಲೂ ತನ್ನ ಪ್ರಾಬಲ್ಯ ಹೊಂದಿದೆ. 9 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಲ್ಲಿ ಕಾಂಗ್ರೆಸ್, 4 ಬಿಜೆಪಿ ಹಾಗೂ ಒಂದು ಜೆಡಿಎಸ್ ಗೆಲುವು ಸಾಧಿಸಿತ್ತು. ಇದೀಗ ಇಲ್ಲಿ ಕೈ-ಕಮಲದ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಅಖಾಡ ರಂಗೇರಿದೆ.
ಮೊಬೈಲ್‌ನಲ್ಲೇ ವಿ.ಕೆ. ಪ್ರಚಾರ: ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅಲ್ಲಿಂದಲೇ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಸರತ್ತು ಆರಂಭಿಸಿದ್ದಾರೆ. ಮೊಬೈಲ್ ಮೂಲಕ ವಿಡಿಯೋ ಕ್ಲಿಪ್ ಗಳನ್ನು ರೆಕಾರ್ಡ್ ಮಾಡಿ ಬಿಟ್ಟಿರುವ ವಿನಯ್, ತಮ್ಮ ಬೆಂಬಲಿಗರೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿಂದಲೇ ಚುನಾವಣಾ ಚದುರಂಗದ ಆಟ ಆಡುತ್ತಿದ್ದಾರೆ. ತಾವು ಪ್ರತಿನಿಧಿಸುತ್ತಿದ್ದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಒಂಭತ್ತು ವಾರ್ಡ್‍ಗಳಲ್ಲಿ ಕನಿಷ್ಟ 8 ವಾರ್ಡ್‌ಗಳನ್ನು ಗೆಲ್ಲಲೇಬೇಕೆಂದು ವಿನಯ್ ತಂತ್ರ ರೂಪಿಸಿದ್ದು, ಇದಕ್ಕೆ ಪ್ರತಿಯಾಗಿ ಹಾಲಿ ಶಾಸಕರಾದ ಅಮೃತ ದೇಸಾಯಿ ಕೂಡ ಸದ್ದಿಲ್ಲದೇ ಮತಬೇಟೆಗೆ ಇಳಿದಿದ್ದಾರೆ.