Advertisement

ಹುಬ್ಬಳ್ಳಿ ಎಪಿಎಂಸಿ: ಆರ್ಥಿಕ ಸಂಕಷ್ಟ ಆದಾಯ ಮೂಲಕ್ಕೆ ತಡಕಾಟ

01:08 PM Aug 07, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಮ್ಮೆ ಹೊಂದಿರುವ ಇಲ್ಲಿನ ಅಮರಗೋಳದ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆದಾಯ ಕುಸಿತದಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ವೆಚ್ಚಗಳನ್ನು ನೀಗಿಸುವ ನಿಟ್ಟಿನಲ್ಲಿ ಶೇ.50 ಸಿಬ್ಬಂದಿ ಕಡಿತ ಮಾಡಲಾಗಿದೆ. ಭವಿಷ್ಯದಲ್ಲಿ ಆದಾಯ ಮೂಲ ವೃದ್ಧಿಸುವ ನಿಟ್ಟಿನಲ್ಲಿ ಎಪಿಎಂಸಿ ಚಿಂತನೆಗೆ ಮುಂದಾಗಿದೆ.

ಕೃಷಿ ಉತ್ಪನ್ನಗಳ ಖರೀದಿ ಮೇಲಿನ ಸೆಸ್‌ಅನ್ನು ಸರಕಾರ ಕಡಿತಗೊಳಿಸಿದ್ದರಿಂದ ಎಪಿಎಂಸಿಯ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಮಾರುಕಟ್ಟೆ ಹೊರಗಡೆ ಖರೀದಿಸಿದರೆ ಸೆಸ್‌ ಇಲ್ಲವಾಗಿದ್ದು, ಎಪಿಎಂಸಿ ಪ್ರಾಂಗಣದ ಒಳಗಡೆ ವಹಿವಾಟು ಸಹ ಕುಂಠಿತವಾಗುತ್ತಿರುವುದು, ಕೋವಿಡ್‌ ಲಾಕ್‌ಡೌನ್‌, ಅತಿವೃಷ್ಟಿ, ಬೆಳೆಹಾನಿ ಇನ್ನಿತರ ಕಾರಣಗಳು ಸಹ ಎಪಿಎಂಸಿಗೆ ಆರ್ಥಿಕ ಸಂಕಷ್ಟ ಹೆಚ್ಚಿಸುವಲ್ಲಿ ತಮ್ಮದೇ ಪಾತ್ರ ತೋರತೊಡಗಿವೆ. ಒಟ್ಟಾರೆಯಾಗಿ ಹುಬ್ಬಳ್ಳಿ ಎಪಿಎಂಸಿಗೆ ಬರುವ ವಾರ್ಷಿಕ ಆದಾಯದಲ್ಲಿ ಶೇ. 80-90 ಖೋತಾ ಆದಂತಾಗಿದೆ.

432 ಎಕರೆ ವ್ಯಾಪ್ತಿ ಮಾರುಕಟ್ಟೆ: ಹುಬ್ಬಳ್ಳಿಯ ಅಮರಗೋಳ ವ್ಯಾಪ್ತಿಯಲ್ಲಿರುವ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸುಮಾರು 432 ಎಕರೆ ವಿಶಾಲ ಪ್ರದೇಶ ಹೊಂದಿದೆ. ಅಕ್ಕಿಹೊಂಡದಲ್ಲಿದ್ದ ಹೋಲ್‌ಸೇಲ್‌ ಮಾರುಕಟ್ಟೆಯನ್ನು ಕೆಲ ವರ್ಷಗಳ ಹಿಂದೆ ಇಲ್ಲಿಗೆ ಸ್ಥಳಾಂತರಿಸಿದ್ದರಿಂದ ಎಪಿಎಂಸಿಯ ಕಳೆ ಹೆಚ್ಚುವಂತಾಗಿತ್ತು. ಒಟ್ಟಾರೆಯಾಗಿ ಎಪಿಎಂಸಿ ಪ್ರಾಂಗಣದಲ್ಲಿ ಸುಮಾರು 753 ಮಳಿಗೆಗಳು ಇದ್ದು, ಅನೇಕ ಗೋದಾಮುಗಳು ಇವೆ. ಎಪಿಎಂಸಿಯ ಸುಮಾರು 90 ಎಕರೆ ಭೂಮಿಯನ್ನು ಸೇವಾ ಸಂಸ್ಥೆ, ಕೃಷಿಗೆ ಸಂಬಂಧಿಸಿದ ಕಾರ್ಯಗಳಿಗೆಂದು ನೀಡಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವ ಚಿಂತನೆ ನಿಟ್ಟಿನಲ್ಲಿ ಸರಕಾರ ಕೈಗೊಂಡ ಭಾನುವಾರ ಸಂತೆಯ ಮಳಿಗೆಗಳಿಗೆ, ಕೈಗಾರಿಕಾ ಪ್ರದರ್ಶನಕ್ಕೆ ಶಾಶ್ವತ ಕಟ್ಟಡ ಸೇರಿದಂತೆ ವಿವಿಧ ಕಾರ್ಯಗಳಿಗೆ ಎಪಿಎಂಸಿ ಜಾಗ ನೀಡಿದೆ.

14-15 ಕೋಟಿ ಆದಾಯ..ಆದರೀಗ? 

Advertisement

ಹುಬ್ಬಳ್ಳಿ ಎಪಿಎಂಸಿ ಎಂದರೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪ್ರಮುಖ ಕೇಂದ್ರ ಎಂಬ ಪ್ರತೀತಿ ಇದೆ. ಕೃಷಿ ಉತ್ಪನ್ನಗಳ ವಹಿವಾಟು, ಹೋಲ್‌ಸೇಲ್‌ ಕಿರಾಣಿ, ತರಕಾರಿ, ಹಣ್ಣುಗಳ ವಹಿವಾಟು ಹೀಗೆ ವಿವಿಧ ವಹಿವಾಟಿಗೆ ತನ್ನದೇ ಖ್ಯಾತಿ ಹೊಂದಿದೆ. ಇಲ್ಲಿನ ಎಪಿಎಂಸಿಗೆ ಸೆಸ್‌ ರೂಪದಲ್ಲಿ ವಾರ್ಷಿಕ ಅಂದಾಜು 14-15 ಕೋಟಿ ಆದಾಯ ಬರುತ್ತಿತ್ತು. 2019-20ರಲ್ಲಿ ಎಪಿಎಂಸಿಗೆ ಒಟ್ಟು 14 ಕೋಟಿ ರೂ. ಆದಾಯ ಬಂದಿತ್ತು. ಅದರಲ್ಲಿ ಅಂದಾಜು 10 ಕೋಟಿ ವೆಚ್ಚವಾಗಿ 4 ಕೋಟಿ ರೂ. ಉಳಿದಿತ್ತು. ಸರಕಾರ ಸೆಸ್‌ ಕಡಿತ ಮಾಡಿರುವುದು, ಮಾರುಕಟ್ಟೆ ಹೊರಗಡೆ ಖರೀದಿಗೆ ಉತ್ತೇಜನಕ್ಕೆ ಮುಂದಾಗಿರುವುದು ಸಹಜವಾಗಿಯೇ ಎಪಿಎಂಸಿ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ.

ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ವಹಿವಾಟಿನ ಮೇಲೆ ಈ ಮೊದಲು 100ರೂ.ಗೆ 1.50 ರೂ. ಸೆಸ್‌ ಆಕರಣೆ ಮಾಡಲಾಗುತ್ತಿತ್ತು. ಸೆಸ್‌ ಎಪಿಎಂಸಿ ಆದಾಯಕ್ಕೆ ಪ್ರಮುಖ ಮೂಲವಾಗಿದೆ. ಆದರೆ, ಸರಕಾರ ಸೆಸ್‌ಅನ್ನು 1.50ರೂ.ನಿಂದ 60 ಪೈಸೆಗೆ ಇಳಿಸಿದ್ದು, 90 ಪೈಸೆ ಖೋತಾ ಆದಂತಾಗಿದೆ. ಎಪಿಎಂಸಿ ವಾರ್ಷಿಕ ಆದಾಯ ಇದೀಗ ಶೇ.25-30ರಷ್ಟಕ್ಕೆ ಕುಸಿಯುವಂತಾಗಿದೆ. ಎಪಿಎಂಸಿಯಲ್ಲಿ ಇ-ಟೆಂಡರ್‌ ನಡೆಯುತ್ತಿರುವುದು, ತರಕಾರಿ-ಹಣ್ಣು ವಹಿವಾಟು ನಡೆಯುತ್ತಿರುವುದು ಕೊಂಚ ಕೈ ಹಿಡಿಯುವಂತೆ ಮಾಡಿದೆ. ಒಟ್ಟಾರೆಯಾಗಿ ಆದಾಯ ಕುಸಿದಿರುವುದು, ಆದಾಯ ವೃದ್ಧಿಯ ಪರ್ಯಾಯ ಮಾರ್ಗಕ್ಕೆ ಎಪಿಎಂಸಿ ತಡಕಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next