ಹುಬ್ಬಳ್ಳಿ: ಬಳಕೆಗೆ ಬಾರದ ಮೊಬೈಲ್ ಬ್ಯಾಟರಿಯಿಂದ ಲೈಟ್, ಸೋಲಾರ್ ಹೆಲ್ಮೆಟ್ ಮೊಬೈಲ್ ಚಾರ್ಜರ್, ಪವರ್‌ಬ್ಯಾಂಕ್ ಕೀಚೈನ್, ಮೊಬೈಲ್ ಧ್ವನಿ ವರ್ಧಿಸುವ ಕಟ್ಟಿಗೆ ಧ್ವನಿವರ್ಧಕ.ಹೀಗೆ ವಿದ್ಯಾರ್ಥಿಗಳ ಚಿಂತನೆಯಲ್ಲಿ ಮೂಡಿ ಬಂದಿರುವ ಹಲವು ಉತ್ಪನ್ನಗಳು ಗಮನ ಸೆಳೆಯುತ್ತಿವೆ, ಖರೀದಿಗೆ ಆಕರ್ಷಿಸುತ್ತಿವೆ.
ಕೆಎಲ್‌ಇ ತಾಂತ್ರಿಕ ವಿವಿ ಸಿಟಿಐಇ ವಿದ್ಯಾರ್ಥಿಗಳಲ್ಲಿನ ಉದ್ಯಮಶೀಲತೆ ಪ್ರೇರಣೆ ಹಾಗೂ ಪ್ರೋತ್ಸಾಹ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ‘ಪ್ಯೂಪಾ’ ಪ್ರದರ್ಶನ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 32 ಶೈಕ್ಷಣಿಕ ಸಂಸ್ಥೆಗಳಿಂದ 350 ಹೆಚ್ಚು ತಂಡಗಳು ತಮ್ಮ ವಿವಿಧ ಉತ್ಪನ್ನ ಪ್ರದರ್ಶನಕ್ಕಿಟ್ಟಿವೆ.
ಮೊಬೈಲ್ ಬ್ಯಾಟರಿ ಲೈಟ್: ಬಳಕೆಗೆ ಬಾರದ ಮೊಬೈಲ್ ಬ್ಯಾಟರಿ ಬಳಸಿ 1 ತಾಸುವರೆಗೆ ಎರಡು ಎಲ್‌ಇಡಿ ಲೈಟ್ ಉರಿಯುವ ಸಾಧನವನ್ನು ಧಾರವಾಡದ ಆದರ್ಶ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿಗಳಾದ ಸಾಹಿಲ್ ಔರಂಗ್‌ವಾಲ್, ಸಮಿತ್ ವೈನೇಕಾರ ರೂಪಿಸಿದ್ದಾರೆ. ಅರ್ಧಗಂಟೆ ಚಾರ್ಜ್ ಮಾಡಿದರೆ ಒಂದು ತಾಸು ಎರಡು ಲೈಟ್‌ಗಳು ಉರಿಯುತ್ತವೆ. ಕತ್ತಲೆಯಲ್ಲಿ ನಡೆದು ಬರಲು ಹಾಗೂ ಮನೆ ಬಳಕೆಗೆ ಇದನ್ನು ಬಳಸಬಹುದು ಎಂಬುದು ವಿದ್ಯಾರ್ಥಿಗಳ ಅನಿಸಿಕೆ. ವಿದ್ಯಾರ್ಥಿಗಳು 30-35 ರೂ. ವೆಚ್ಚ ಮಾಡಿ ಒಂದು ಉತ್ಪನ್ನ ತಯಾರಿಸಿದ್ದು, 60 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಸೋಲಾರ್ ಹೆಲ್ಮೆಟ್: ಹೆಲ್ಮೆಟ್ ಮೇಲೆ ಸಣ್ಣ ಸೋಲಾರ್ ಪ್ಯಾನೆಲ್ ಅಳವಡಿಸಿ, ಹಿಂಭಾಗಕ್ಕೆ ಮೊಬೈಲ್ ಚಾರ್ಜರ್ ಅಳವಡಿಸಿದರೆ ಹೇಗೆ ಎಂಬ ಚಿಂತನೆಗೆ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಮಿತ್ತ ಪಾಟೀಲ ಎಂಬುವರು ಉತ್ಪನ್ನ ರೂಪ ನೀಡಿದ್ದಾರೆ. ಹೆಲ್ಮೆಟ್ ಧರಿಸಿ ಬಿಸಿಲಿನಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುವಾಗ ಸೌರ ಶಕ್ತಿಯಾಧರಿಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಹೆಲ್ಮೆಟ್ ಹೊರತುಪಡಿಸಿ ಈ ಉತ್ಪನ್ನದ ದರ 1,300 ರೂ. ಆಗಿದೆ. ಇದೇ ವಿದ್ಯಾರ್ಥಿ ಸೋಲಾರ್ ಪ್ಯಾನೆಲ್ ಬಳಸಿ ಮೊಬೈಲ್ ಚಾರ್ಜ್ ಪವರ್ ಬ್ಯಾಂಕ್‌ನ ಕೀಚೈನ್ ರೂಪಿಸಿದ್ದಾರೆ. ಕೀ ಚೈನನ್ನು ಬ್ಯಾಗ್‌ಗೆ ಅಳವಡಿಸಿಕೊಂಡು ಸಾಗಿದರೆ ಸಾಕು. ತುರ್ತು ಸಂದರ್ಭದಲ್ಲಿ ಪವರ್ ಬ್ಯಾಂಕ್‌ನಿಂದ ಮೊಬೈಲ್ ಚಾರ್ಜ್ ಮಾಡಿಕೊಳ್ಳ ಬಹುದಾಗಿದೆ. ಇದರ ಬೆಲೆಯೂ 1,300ರೂ. ಆಗಿದೆ.
ಕಟ್ಟಿಗೆ ಧ್ವನಿವರ್ಧಕ: ಬಿವಿಬಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಇರಿಸಬಹುದಾದ ಸಣ್ಣ ಕಟ್ಟಿಗೆ ಬಾಕ್ಸ್ ರೂಪಿಸಿ ಅದನ್ನೇ ಧ್ವನಿವರ್ಧಕವಾಗಿಸಿದ್ದಾರೆ. ಕಟ್ಟಿಗೆ ಮುಂಭಾಗವನ್ನು ಧ್ವನಿವರ್ಧಕ ರೂಪದಲ್ಲಿ ಕೆತ್ತನೆ ಮಾಡಲಾಗಿದೆ. ಮೊಬೈಲ್ ಇರಿಸಲು ಹಿಂದೆ ವಿಶಿಷ್ಟ ಬಾಕ್ಸ್ ಮಾಡಲಾಗಿದೆ. ಮೊಬೈಲ್‌ನಲ್ಲಿ ಸಂಗೀತ ಆರಂಭಿಸಿ ಬಾಕ್ಸ್‌ನಲ್ಲಿಟ್ಟರೆ ಧ್ವನಿ ವರ್ಧಕದ ಮೂಲಕ ಹೆಚ್ಚಿನ ಧ್ವನಿ ಹೊರಹೊಮ್ಮುತ್ತದೆ. ವಿದ್ಯಾರ್ಥಿಗಳಾದ ಗೌರವ್ ಭೂಷಣ, ಸೋನಾಲ್ ಕುಮಾರ, ಅಂಜುನ್ ಪಿಳೈ ಇದನ್ನು ರೂಪಿಸಿದ್ದು, 500ರೂ.ಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ.
ತೇವಾಂಶ ಸೆನ್ಸಾರ್: ಮಣ್ಣಿನ ತೇವಾಂಶವನ್ನು ಸೆನ್ಸಾರ್‌ಗಳ ಮೂಲಕ ಪತ್ತೆ ಮಾಡುವ ಸಲಕರಣೆಯನ್ನು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಭೂಮಿ ಒಣದಾಗಿದ್ದರೆ ಸ್ವಯಂ ಚಾಲಿತವಾಗಿ ನೀರು ಹರಿಯುವಿಕೆ ಆರಂಭವಾಗುತ್ತದೆ. ಭೂಮಿ ತೋಯ್ದ ನಂತರ ನೀರು ಹರಿಯುವಿಕೆ ನಿಲ್ಲುತ್ತದೆ. ಒಂದು ಎಕರೆ ಪ್ರದೇಶಕ್ಕೆ ಇದನ್ನು ಅಳವಡಿಸಲು ಅಂದಾಜು 4,000ರೂ. ವೆಚ್ಚವಾಗುತ್ತದೆಯಂತೆ.