Advertisement

ಸಮಾಜದ ವೈಷಮ್ಯ ಸ್ಥಿತಿಗೆ ಭಗವದ್ಗೀತೆ ಸಂಜೀವಿನಿ

05:30 PM Oct 29, 2018 | Team Udayavani |

ಹುಬ್ಬಳ್ಳಿ: ಇಂದಿನ ವೈಷಮ್ಯ ಸ್ಥಿತಿಗೆ ಭಗವಾನ್‌ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಸಂಜೀವಿನಿಯಾಗಿದೆ. ಜೀವನದಲ್ಲಿ ಗೀತೆಯ ಅನುಸರಣೆಯಿಂದ ಉತ್ತಮ ಸಮಾಜ ನಿರ್ಮಿಸಬಹುದು ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಭಗವದ್ಗೀತಾ ಅಭಿಯಾನ ಸಮರ್ಪಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರವಿವಾರ ಇಲ್ಲಿನ ಸ್ಟೇಶನ್‌ ರಸ್ತೆಯ ಶೃಂಗಾರ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

Advertisement

ವಿಶ್ವದಲ್ಲಿ ಇಂದು ಭಯೋತ್ಪಾದನೆ ತಾಂಡವಾಡುತ್ತಿದೆ. ಉತ್ತಮವಾಗಿರುವ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣಗಳು ನಡೆದಿದ್ದು, ಸಮಾಜ ದ್ವಂದ್ವದಲ್ಲಿ ಸಿಲುಕಿಕೊಂಡಿದೆ. ಮಾನಸಿಕ ನೆಮ್ಮದಿ ಕಳೆದುಕೊಂಡಿದೆ. ಇದೆಲ್ಲದರ ಪರಿಹಾರವಾಗಿ ಶ್ರೀಕೃಷ್ಣ ಉಪದೇಶಿಸಿದ ಭಗವದ್ಗೀತೆಯ ಅನುಷ್ಠಾನ ಮತ್ತು ಅನುಸಂಧಾನದಿಂದ ಮತ್ತೆ ಮಾನವ ಕುಲವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಅನೇಕ ದಿನಗಳಿಂದ ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಈ ಗೀತಾ ಅಭಿಯಾನದ ಬೃಹತ್‌ ಸಮರ್ಪಣಾ ಸಮಾರಂಭ ನಗರದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿದೆ. ಭಕ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಬೇಕು ಎಂದರು.

ಪದ್ಮಶ್ರೀ ಡಾ| ಎಂ.ಎಂ. ಜೋಶಿ ಮಾತನಾಡಿ, ಸ್ವರ್ಣವಲ್ಲಿ ಶ್ರೀಗಳು ಸಮಾಜಮುಖಿಯಾಗಿ ಭಗವದ್ಗೀತಾ ಅಭಿಯಾನ ಹಮ್ಮಿಕೊಳ್ಳುವ ಮೂಲಕ ನೈತಿಕತೆ ಮತ್ತು ಸಂಸ್ಕಾರ ಬಿತ್ತುತ್ತಿದ್ದಾರೆ. ಇಂಥ ಕಾರ್ಯಕ್ರಮಕ್ಕೆ ನಗರವು ಸದಾ ಸಿದ್ಧವಾಗಿದ್ದು, ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ಬ್ರಾಹ್ಮಣ ಸಮಾಜದ ಮುಖಂಡ ಎಂ.ಬಿ. ನಾತು ಮಾತನಾಡಿ, ಗೀತಾ ಜಯಂತಿ ಡಿ. 19ರಂದು ಭಗವದ್ಗೀತಾ ಅಭಿಯಾನದ ಸಮರ್ಪಣೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ವಲಯಗಳನ್ನಾಗಿಸಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಲಕ್ಷಕ್ಕೂ ಅಧಿಕ ಜನತೆ ಆಗಮಿಸುವುದರಿಂದ ವಿವಿಧ ಸಮಿತಿ ರಚಿಸಲಾಗಿದೆ. ಮಾಡಬೇಕಾದ ಕೆಲಸ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡಬೇಕಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದರು.

ನ್ಯಾಯವಾದಿ ಬಿ.ಡಿ. ಹೆಗಡೆ, ವಿನಾಯಕ ಆಕಳವಾಡಿ, ಅನಂತ ಹೆಗಡೆ ಸೇರಿದಂತೆ ಇತರರು ಮಾತನಾಡಿ, ಶ್ರೀಗಳು ಸದಾಕಾಲ ಶ್ರೀಕೃಷ್ಣನ ಗೀತೆಯಿಂದಲೇ ಸಮಾಜದ ಉದ್ಧಾರವೆಂದು ಕಂಡಿದ್ದಾರೆ. ಆ ನಿಟ್ಟಿನಲ್ಲಿ ಸರ್ವ ಸಮಾಜದ ಏಳ್ಗೆ ಬಯಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ ತಂದಿದೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲಾಗುವುದು ಎಂದರು.

ಎಸ್‌ಎಸ್‌ಕೆ ಸಮಾಜದ ನೀಲಕಂಠ ಜಡಿ, ವಿಠಲ ಲದ್ವಾ, ಗೀತಾ ಅಭಿಯಾನದ ಪ್ರಚಾರ ಸಮಿತಿ ಮುಖಂಡ ಎ.ಸಿ. ಗೋಪಾಲ, ಶೃಂಗಾರ ಪ್ಯಾಲೇಸ್‌ ಮಾಲೀಕ ತುಳಸಿದಾಸ ಧರ್ಮದಾಸ ಬಂಧುಗಳು, ಹೋಟೆಲ್‌ ಉದ್ಯಮಿ ಕೃಷ್ಣರಾಜ ಕೆಮ್ತೂರು, ಜುವೆಲರಿ ಮಾಲೀಕ ಶ್ರೀಕಾಂತ ಕರಿ, ನೀಲಕಂಠ ಆಕಳವಾಡಿ, ಕನ್ಹಯ್ನಾಲಾಲ್‌ ಠಕ್ಕರ, ಮನೋಹರ ಪರ್ವತಿ, ವೆಂಕಟರಮಣ ಹೆಗಡೆ, ಶ್ರೀಕಾಂತ ಹೆಗಡೆ ಮೊದಲಾದವರಿದ್ದರು. ವೀಣಾ ಶಿವರಾಮ ಹೆಗಡೆ ತಂಡದಿಂದ ಭಗವದ್ಗೀತಾ ಶ್ಲೋಕ ಪಠಣ ನಡೆಯಿತು. ಸುಭಾಸಸಿಂಗ ಜಮಾದಾರ ನಿರೂಪಿಸಿದರು. ಅರವಿಂದ ಮುತಗಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next