Advertisement

ಭಗವದ್ಗೀತೆ ಪ್ರತಿಯೊಂದು ಶ್ಲೋಕ ಜ್ಞಾನದ ಕಿಡಿ

05:35 PM Oct 30, 2018 | |

ಹುಬ್ಬಳ್ಳಿ: ಭಗವದ್ಗೀತೆಯ ಪ್ರತಿಯೊಂದು ಶ್ಲೋಕ ಜ್ಞಾನದ ಕಿಡಿ ಹೊತ್ತಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ರೈಲ್ವೆ ನಿಲ್ದಾಣ ಸಮೀಪದ ಈಶ್ವರ ದೇವಸ್ಥಾನದಲ್ಲಿ ಸೋಮವಾರ ಭಗವದ್ಗೀತೆ ಅಭಿಯಾನದ ಕುರಿತು ನಡೆದ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಗವದ್ಗೀತೆ ಒಂದು ಬೆಂಕಿ ಪೊಟ್ಟಣವಿದ್ದಂತೆ. ಅದರಲ್ಲಿನ ಪ್ರತಿಯೊಂದು ಶ್ಲೋಕವೂ ಜ್ಞಾನದ ಬೆಳಕು ನೀಡುತ್ತದೆ ಎಂದರು.

Advertisement

ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಶರೀರಕ್ಕೆ ಕೆಲಸ ಕಡಿಮೆಯಾಗಿ, ಮನಸಿಗೆ ಉದ್ವೇಗ ಜಾಸ್ತಿ ಆಗುತ್ತಿದೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಡಯಾಬಿಟಿಸ್‌, ರಕ್ತದೊತ್ತಡ, ಹೃದಯ ತೊಂದರೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಭಗವದ್ಗೀತೆಯಲ್ಲಿ ತಿಳಿಸಿದ ರೀತಿಯಲ್ಲಿ ಜೀವನ ಕ್ರಮ ಅನುಸರಿಸಬೇಕು ಎಂದರು. ಮಾನಸಿಕ ಆರೋಗ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಪಾಲಕರ ಒತ್ತಡ ತಾಳಲಾಗದೇ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಮುಕ್ತವಾಗಿ ಅಧ್ಯಯನ ಮಾಡಲು ಪೂರಕ ವಾತಾವರಣ ಸೃಷ್ಟಿಸಬೇಕು. ನಮ್ಮ ದೇಶದ ಜ್ವಲಂತ ಸಮಸ್ಯೆಗಳಿಗೆ ಭಗವದ್ಗೀತೆ ಪರಿಹಾರ ನೀಡಬಲ್ಲದು ಎಂದು ತಿಳಿಸಿದರು.

ಭಗವದ್ಗೀತಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು. 11 ವರ್ಷಗಳ ಹಿಂದೆ ಹುಬ್ಬಳ್ಳಿಯಿಂದಲೇ ಅಭಿಯಾನ ಆರಂಭಗೊಂಡಿತ್ತು. ಧಾರವಾಡ ಜಿಲ್ಲೆಯ 6 ಲಕ್ಷ ಜನರಿಗೆ ಭಗವದ್ಗೀತೆ ತಲುಪಿಸಬೇಕು. ಅಭಿಯಾನ ಯಶಸ್ವಿಗೊಳಿಸುವಲ್ಲಿ ಮಹಿಳಾ ಮಂಡಳಗಳ ಪಾತ್ರ ಮಹತ್ವದ್ದಾಗಿದೆ. ಭಗವದ್ಗೀತೆ ಹಾಲಿದ್ದಂತೆ. ಅದನ್ನು ನಾವು ಕುಡಿಯಬೇಕು. ಹಾಗೂ ಇತರರಿಗೂ ಕುಡಿಯಲು ಕೊಡಬೇಕು ಎಂದು ನುಡಿದರು.

ಜಿತೇಂದ್ರ ಮಜೇಥಿಯಾ, ಎಂ.ಬಿ. ನಾತು, ಶಾಂತಾರಾಮ ಭಟ್‌, ವಿದ್ಯಾ ಗಂಗಾವತಿಕರ, ಉಷಾ ಕುಲಕರ್ಣಿ, ರಾಜಶ್ರೀ ಜಡಿ, ಅನಘಾ ಲಿಮಯೆ, ರೂಪಾ ಜಮಾದಾರ, ಶೋಭಾ ನಾಕೋಡ ಇದ್ದರು. ಮಂಜುನಾಥ ಭಟ್‌ ವೇದಘೋಷ ಮಾಡಿದರು. ಸುಮಾ ಭಟ್‌ ಪ್ರಾರ್ಥಿಸಿದರು. ಸುಭಾಸಸಿಂಗ್‌ ಜಮಾದಾರ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next