Advertisement

ಬಿಡಾಡಿ ದನಗಳ ಮೇಲೆ ನಿಗಾ

03:36 PM Nov 02, 2018 | Team Udayavani |

ಹುಬ್ಬಳ್ಳಿ: ಬಿಡಾಡಿ ದನಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾನಗರ ಪಾಲಿಕೆ ಬಿಡಾಡಿ ದನಗಳ ತೆರವಿಗೆ ಪೂರಕ ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಡಾಡಿ ದನಗಳಿಂದಾಗಿ ನಗರದ ಹಲವೆಡೆ ಅಪಘಾತಗಳು ಸಂಭವಿಸಿವೆ. ಹಲವು ದ್ವಿಚಕ್ರವಾಹನ ಸವಾರರು ಗಾಯಗೊಂಡಿದ್ದರೆ, ದನಕರುಗಳು ಕೂಡ ಗಾಯಗೊಂಡಿವೆ. ಬಿಡಾಡಿ ದನಗಳು ರಸ್ತೆ ಮಧ್ಯ ಕೂಡುವುದರಿಂದ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

Advertisement

ಹಿಂದೆ ಹಲವು ಬಾರಿ ಬಿಡಾಡಿ ದನಗಳ ಮೇಲೆ ಪಾಲಿಕೆ ಕ್ರಮ ಕೈಗೊಳ್ಳಲಾಗಿತ್ತಾದರೂ ಇದರಿಂದ ನಿರೀಕ್ಷಿತ ಮಟ್ಟದ ಫ‌ಲ ಸಿಕ್ಕಿಲ್ಲ. ದನದ ಮಾಲಿಕರನ್ನು ಕರೆಸಿ ಹಲವು ಬಾರಿ ತಾಕೀತು ಮಾಡಿದ್ದರೂ ದನಗಳನ್ನು ಬೀದಿಗೆ ಬಿಡುವ ಪರಿಪಾಠ ಕಡಿಮೆಯಾಗಿಲ್ಲ. ಹಂದಿಗಳ ತೆರವು ಕಾರ್ಯಾಚರಣೆಯಂತೆ ಬಿಡಾಡಿ ದನಗಳ ತೆರವಿಗೆ ಕಟ್ಟುನಿಟ್ಟಿನ ಹಾಗೂ ನಿರಂತರ ಕಾರ್ಯಾಚರಣೆ ನಡೆಸುವುದು ಅವಶ್ಯಕವಾಗಿದೆ. ಹೀಗಾಗಿ ಪಾಲಿಕೆ ಈಗ ದಿಟ್ಟ ಕ್ರಮ ಕೈಗೊಂಡಿದೆ.

ಅಂಚಟಗೇರಿ ಸಮೀಪದ ಬಿಡಾಡಿ ದನಗಳ ಆಶ್ರಯ ತಾಣ ಪಾಂಜರಪೋಳಕ್ಕೆ ದೀಪಾವಳಿ ಬಳಿಕ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಡಾಡಿ ದನಗಳನ್ನು ಹಿಡಿದು ತಂದು ಪಾಂಜರಪೋಳದಲ್ಲಿ ಇಡಲಾಗುತ್ತದೆ. ಆದರೆ ದನಗಳ ಮಾಲಿಕರು ನೇರವಾಗಿ ಪಾಂಜರಪೋಳಕ್ಕೆ ಬಂದು ಇಲ್ಲಿನ ಸಿಬ್ಬಂದಿಯೊಂದಿಗೆ ಜಗಳ ಮಾಡಿ, ದನಗಳ ನಿರ್ವಹಣೆಯ ಖರ್ಚು ಸಹ ನೀಡದೆ ಮತ್ತೆ ದನಗಳನ್ನು ಒಯದು ಬೀದಿಗೆ ಬಿಡುತ್ತಾರೆ. ದನಗಳನ್ನು ಇವರು ತರುವುದು,ಅವರು ಅವುಗಳನ್ನು ಒತ್ತಾಯ ಪೂರ್ವಕವಾಗಿ ಮರಳಿ ಒಯ್ಯುವುದು ನಿತ್ಯದ ಕಾಯಕವಾಗಿದೆ.

ಪಾಂಜರಪೋಳ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಗಳು ಜರುಗಿವೆ. ದನಗಳ ಕೆಲ ಮಾಲಿಕರು ರಾತ್ರಿ ಪಾಂಜರಪೋಳಕ್ಕೆ ಕಲ್ಲೆಸೆಯುತ್ತಾರೆ. ಇಲ್ಲಿರುವ ಸಿಬ್ಬಂದಿಗೆ ಜೀವ ಬೆದರಿಕೆ ಹಾಕುತ್ತಾರೆ. ಹೀಗಾಗಿ ಸಿಬ್ಬಂದಿ ಕೈಯಲ್ಲಿ ಜೀವ ಹಿಡಿದುಕೊಂಡೇ ಕೆಲಸ ಮಾಡುವ ಸ್ಥಿತಿಯಿದೆ. ಈ ಕುರಿತು ಪೊಲೀಸರಿಗೂ ದೂರು ನೀಡಲಾಗಿದೆ. ಇದರಿಂದಾಗಿ ಪಾಂಜರಪೋಳದಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂಜರಿಯುವಂತಾಗಿದೆ. ಹೀಗಾಗಿ ಪೊಲೀಸರು ಇಲ್ಲಿಗೆ ಆಗಾಗ ಭೇಟಿ ನೀಡಿದರೆ ಇಲ್ಲಿ ಕೆಲಸ ಮಾಡುವವರಿಗೂ ಧೈರ್ಯ ಬರುತ್ತದೆ. ದನಗಳನ್ನು ಪಾಂಜರಪೋಳದಿಂದ ಬಿಡಿಸಿಕೊಳ್ಳಲು ಕೆಲವು ಪಾಲಿಕೆ ಸದಸ್ಯರು ಕೂಡ ಪ್ರಭಾವ ಬೀರುತ್ತಾರೆ. ಪಾಂಜರಪೋಳದವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಕೂಡ ಬಿಡಾಡಿ ದನಗಳ ಮೇಲಿನ ಕ್ರಮಕ್ಕೆ ಅಡ್ಡಿಯಾಗಿದೆ. ಒಂದೆಡೆ ಮಹಾಪೌರರು ಬಿಡಾಡಿ ದನಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳುತ್ತಿದ್ದರೆ, ಇನ್ನೊಂದೆಡೆ ಕೆಲವು ಪಾಲಿಕೆ ಸದಸ್ಯರು ಬಿಡಾಡಿ ದನಗಳ ಮಾಲೀಕರಿಗೆ ಅಭಯ ರಕ್ಷೆ ನೀಡುತ್ತಿರುವುದು ವಿಪರ್ಯಾಸ.

ಪಾಂಜರಪೋಳಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದನಗಳ ಮಾಲಿಕರು ಪಾಂಜರಪೋಳ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಲಾಗಿದ್ದು, ಇಲ್ಲಿ ಪೊಲೀಸರನ್ನು ನೇಮಕ ಮಾಡಲು ಸಾಧ್ಯವಿಲ್ಲದಿದ್ದರೆ ಆಗಾಗ ಪೊಲೀಸರು ಭೇಟಿ ನೀಡುವ ವ್ಯವಸ್ಥೆಯಾಗಬೇಕಿದೆ. ಈ ದಿಸೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೊಂದಿಗೆ ಮಾತನಾಡುತ್ತೇನೆ.
ಸುಧೀರ ಸರಾಫ‌,
ಮಹಾಪೌರರು

Advertisement

„ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next