Advertisement

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿಂದ ಗೆಜ್ಜೆ ಹಬ್ಬ

11:28 AM Jan 14, 2019 | Team Udayavani |

ಹುಬ್ಬಳ್ಳಿ: ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ 23ನೇ ವಾರ್ಷಿಕೋತ್ಸವ ಪ್ರಯುಕ್ತ ‘ಗೆಜ್ಜೆ ಹಬ್ಬ’ ಇಲ್ಲಿನ ನ್ಯೂ ಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ರವಿವಾರ ನಡೆಯಿತು.

Advertisement

ಕಲಾ ಕೇಂದ್ರದಿಂದ ರವಿದಾತಾರ ಪ್ರಶಸ್ತಿ ಸ್ವೀಕರಿಸಿ ದ ವಿದುಷಿ ವಾರಿಜಾ ನಲಿಗೆ ಮಾತನಾಡಿ, ನೃತ್ಯದಿಂದ ಆಧ್ಯಾತ್ಮ ಜ್ಞಾನ ಬೆಳೆಯುತ್ತದೆ. ಪುರಾಣ ಶಾಸ್ತ್ರ ಅಧ್ಯಯನ ಮಾಡುವುದರಿಂದ ನಾಟ್ಯ ಶಾಸ್ತ್ರಜ್ಞಾನ ಬೆಳೆಯುತ್ತದೆ. ನಾಟ್ಯಶಾಸ್ತ್ರ ತರಬೇತಿ ಪಡೆದ ತಕ್ಷಣ ಮಕ್ಕಳು ಕಾರ್ಯಕ್ರಮ ನೀಡಬೇಕು ಎನ್ನುವ ಮನಸ್ಥಿತಿಯನ್ನು ಪಾಲಕರು ಬೆಳೆಸಿಕೊಳ್ಳಬಾರದು. ನೃತ್ಯ ಒಂದು ತಪಸ್ಸು ಇದ್ದಂತೆ. ಕೆಲ ತಿಂಗಳ ತರಬೇತಿ ಪಡೆದಾಕ್ಷಣ ನೃತ್ಯ ಕರಗತವಾಗಿದೆ ಎನ್ನುವ ಭಾವನೆ ಬೇಡ ಎಂದರು.

ಡಾ| ಗಂಗೂಬಾಯಿ ಹಾನಗಲ್ಲ ಮ್ಯೂಸಿಕ್‌ ಫೌಂಡೇಶನ್‌ ಅಧ್ಯಕ್ಷ ಮನೋಜ ಹಾನಗಲ್ಲ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಕ್ಷೇತ್ರದಲ್ಲಿ ದೊಡ್ಡ ಪ್ರತಿಭೆಗಳಿವೆ. ಆದರೆ ಈ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಾಗಿದೆ. ಸರಕಾರ ಕೂಡ ಈ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. 30-40 ವರ್ಷಗಳ ಹಿಂದೆ ಈ ಭಾಗವನ್ನು ತೊರೆದು ಕಳೆದವರನ್ನು ಉತ್ತರ ಕರ್ನಾಟಕ ಕೋಟಾದಡಿ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಈ ಭಾಗದ ಪ್ರತಿಭೆಗಳನ್ನು ವಂಚಿತರನ್ನಾಗಿಸುತ್ತಿದೆ. ಸರಕಾರ ಈ ಕುರಿತು ಸೂಕ್ತ ಗಮನ ಹರಿಸಬೇಕು ಎಂದು ಹೇಳಿದರು.

ಕಲಾ ಕೇಂದ್ರದ ನೃತ್ಯ ಗುರು ವಿದುಷಿ ಡಾ| ಸಹನಾ ಭಟ್ಟ ಮಾತನಾಡಿ, ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ 23 ವಸಂತಗಳಲ್ಲಿ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ. ಕೇಂದ್ರದಲ್ಲಿ ನೃತ್ಯ ತರಬೇತಿ ಪಡೆದ ವಿದ್ಯಾರ್ಥಿಗಳು ವಿವಿಧ ಭಾಗದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ ಎಂದರು.ಡಾ| ಕಿರಣ ಕುಲಕರ್ಣಿ, ಅನಿಲ ಬಾಸಗಿ, ಕಾಡಪ್ಪ ಮೈಸೂರು, ದಿನೇಶ ವಾಗ್ಮೋಡೆ, ಸತೀಶ ಭಟ್ಟ ಇನ್ನಿತರರಿದ್ದರು.

ಪ್ರಶಸ್ತಿ ಪ್ರದಾನ: ವಿದುಷಿ ವಾರಿಜಾ ನಲಿಗೆ ಅವರಿಗೆ ರವಿದಾತಾರ ಪ್ರಶಸ್ತಿ ಹಾಗೂ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಾದ ವಿದ್ವಾನ್‌ ಮಂಜುನಾಥ ಗೋರ್ಕಲ್‌ ಹಾಗೂ ವಿದುಷಿ ಮೇಘನಾ ರಾವ್‌ ಅವರಿಗೆ ಪ್ರಸಕ್ತ ಸಾಲಿನ ರವಿದಾತಾರ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

Advertisement

ಗಮನ ಸೆಳೆದ ನೃತ್ಯ ರೂಪಕ: ಕಲಾ ಕೇಂದ್ರದ ಬಾಲ ಪ್ರತಿಭೆಗಳು ಹಾಗೂ ಹಿರಿಯ ವಿದ್ಯಾರ್ಥಿಗಳ ವಿವಿಧ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಡಾ| ಸಹನಾ ಭಟ್ಟ ಅವರು ನಿರ್ದೇಶಿಸಿ ಪ್ರಸ್ತುತ ಪಡಿಸಿದ ಶಾಕುಂತಲಾ ನೃತ್ಯ ರೂಪಕ ಗಮನ ಸಳೆಯಿತು. ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯರೂಪಕ ಪ್ರಸ್ತುತ ಪಡಿಸಿದರು. ಪ್ರದೀಪ ಭಟ್ಟ ಅವರ ಸಾಹಿತ್ಯ ಹಾಗೂ ಬಾಲಸುಬ್ರಹ್ಮಣ್ಯ ಶರ್ಮ ಅವರು ಸಂಗೀತ ನಿರ್ದೇಶನ ಇಂಪು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next