Advertisement
ಇನ್ನೂ ಸ್ವಾರಸ್ಯವೆಂದರೆ, 1989ರಲ್ಲಿಯೇ ಇಂತದೊಂದು ಯೋಚನೆ ಕೇಂದ್ರ ಸರ್ಕಾರಕ್ಕೆ ಬಂದಿತ್ತು. ಅದೇ ವರ್ಷ ಕೇಂದ್ರ ಮೋಟಾರ್ ವೆಹಿಕಲ್ ನಿಯಮದ 50ನೇ ವಿಧಿಯನ್ನು ತಿದ್ದುಪಡಿ ಮಾಡಿ ದೇಶದಾದ್ಯಂತ ಒಂದೇ ಮಾದರಿಯ ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕು. ನಕಲು ಮಾಡಲು ಬಾರದಂತಹ ಕ್ರೋಮಿಯಂ ಲೇಪನದ ಹಾಲೋಗ್ರಾಮ್ ಅನ್ನು ಅದು ಹೊಂದಿರಬೇಕು ಎಂದು ಸೂಚಿಸಿತ್ತು. ಸರ್ಕಾರಗಳ ಆದ್ಯತೆಗಳೇ ಬೇರೆಯಾಗಿರುವುದರಿಂದ ಈ ಯೋಜನೆ ಜಾರಿಗೆ ಬರಲೇ ಇಲ್ಲ. 2005ರ ಜೂನ್ ಒಂದರಂದು ದೇಶದ ಉಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿ, 2007ರ ಅಕ್ಟೋಬರ್ 31ರಿಂದ ಎಲ್ಲ ಹೊಸ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಜೋಡಿಸಲೇಬೇಕು. 2009ರಿಂದ ಹಳೆಯ ವಾಹನಗಳಿಗೆ ಹಂತಾನುಹಂತವಾಗಿ ಜಾರಿ ಮಾಡಿ ಎಂದು ತಾಕೀತು ಮಾಡಿದ್ದೂ ಆಯ್ತು. ಸರ್ಕಾರ ಮಾತ್ರ ಜಪ್ಪಯ್ಯ ಎನ್ನಲಿಲ್ಲ.
Related Articles
Advertisement
ಈ ಪ್ಲೇಟ್ ಹಾಕಿಸಿಕೊಳ್ಳಲು ನಿರ್ದಿಷ್ಟ ವೆಚ್ಚವನ್ನು ವಾಹನ ಮಾಲೀಕರೆ ಮಾಡಬೇಕಾಗಿದೆ. ಈ ಹಿಂದೆ ಸಿಕ್ಕ ಮಾಹಿತಿಗಳ ಪ್ರಕಾರ, ನಾಲ್ಕು ಚಕ್ರದ ವಾಹನಗಳಿಗೆ 334 ರೂ., ದ್ವಿಚಕ್ರ ವಾಹನಕ್ಕೆ 111 ರೂ. ನಿಗದಿಪಡಿಸಲಾಗಿದೆ. ಕಮರ್ಷಿಯಲ್ ವಾಹನಗಳಿಗೆ 134 ರೂ. ಹಾಗೂ ದೊಡ್ಡ ಗಾತ್ರದ ವ್ಯಾಪಾರೀ ವಾಹನಗಳಿಗೆ 258 ರೂ. ಬೆಲೆ ನಿಶ್ಚಯಿಸಲಾಗಿದೆ. ಈ ದರ ನಿಗದಿಯಲ್ಲಿಯೇ ನಿಯಮ ಜಾರಿಯ ಬೀಜವೂ ಇದೆ. ಹಲವು ರಾಜ್ಯಗಳಲ್ಲಿ ಬೋರ್ಡ್ ಗುತ್ತಿಗೆ ಹಿಡಿಯಲು ಮೇಲಿನ ದರ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಬಾರಿ ಟೆಂಡರ್ ಕರೆದರೂ ಯಾವುದೇ ಕಂಪನಿ ಮುಂದೆ ಬಂದಿಲ್ಲ. ನಾಗಾಲ್ಯಾಂಡ್‌ನಲ್ಲಿ 1,250 ರೂ. ವಸೂಲಿಸಲಾಗುತ್ತಿದ್ದರೆ. ಮಿಜೋರಾಂನಲ್ಲಿ 900 ರೂ. ಪಡೆಯಲಾಗುತ್ತಿದೆ ಎಂದು ಅಲ್ಲಿನ ವಾಹನ ಮಾಲೀಕರು ಗುರುಗುಟ್ಟುತ್ತಿದ್ದಾರೆ.
ಒಂದೊಮ್ಮೆ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಆರಂಭವಾದರೆ ವಾಹನ ಚಾಲಕರು ಸಂಬಂಧಿಸಿದ ಆರ್‌ಟಿಓ ಕಚೇರಿಯಲ್ಲಿ ಅಥವಾ ಮಾನ್ಯತೆ ಪಡೆದ ಗುತ್ತಿಗೆದಾರ ಕಂಪನಿಯಲ್ಲಿ ಹೆಚ್‌ಎಸ್‌ಆರ್‌ಪಿ ಹಾಕಿಸಿಕೊಳ್ಳಬಹುದು. ನಮ್ಮ ಸ್ಮಾರ್ಟ್ ರಿಜಿಸ್ಟ್ರೇಷನ್ ಕಾರ್ಡ್‌ನ್ನು ಕೊಟ್ಟ 48 ಘಂಟೆಗಳಲ್ಲಿ ಆರ್‌ಟಿಓ ನಮಗೆ ಹೆಚ್‌ಎಸ್‌ಆರ್‌ಪಿ ಮಂಜೂರು ಮಾಡುತ್ತಾರೆ. ಒಂದೊಮ್ಮೆ ಅಪಘಾತದ ಸಂದರ್ಭದಲ್ಲಿ ಹೆಚ್‌ಎಸ್‌ಆರ್‌ಪಿ ಹಾನಿಯಾದಲ್ಲಿ ಅಥವಾ ಇನ್ನಾವುದೇ ಕಾರಣಕ್ಕೆ ಬದಲಿಸಬೇಕಾದರೂ ಆರ್‌ಟಿಓನಿಂದಲೇ ಬದಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ಬೋರ್ಡ್‌ಗೆ ಐದು ವರ್ಷಗಳ ಗ್ಯಾರಂಟಿಯನ್ನು ತಯಾರಕ ನೀಡಬೇಕಾಗುತ್ತದೆ.
ಸುಪ್ರೀಂಕೋರ್ಟ್ ಈಗಾಗಲೇ ಹರ್ಯಾಣ ಸರ್ಕಾರಕ್ಕೆ 50 ಸಾವಿರ ರೂ. ದಂಡ ವಿಧಿಸಿ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದೆ. ಆದರೆ ಭಂಡ ಸರ್ಕಾರಗಳಿಗೆ ವಾಹನ ಕಳ್ಳತನ ತಪ್ಪಿಸುವ ಸಂಕಲ್ಪಶಕ್ತಿಯೂ ಕಾಣಿಸುತ್ತಿಲ್ಲ. ಹೆಚ್‌ಎಸ್‌ಆರ್‌ಪಿ ಬಳಸಿ ದೇಶದ ವಾಹನಗಳ ಸಂಪೂರ್ಣ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಿಡಬೇಕು ಎಂಬುದು ಸಾರಿಗೆ ಸಚಿವಾಲಯದ ಕನಸು. ದೇಶದ ಭದ್ರತೆಯಿಂದ ಈ ಕೆಲಸ ತುರ್ತಾಗಿ ಆಗಬೇಕಿತ್ತು. ಆದರೆ ಈ ನಿಟ್ಟಿನಲ್ಲಿ ಯಾವುದೇ ತರಾತುರಿ ಮಾತ್ರ ಕಾಣುತ್ತಿಲ್ಲ. ಹೆಚ್‌ಎಸ್‌ಆರ್‌ಪಿ ಲಾಭ ಏನು?
ಸಾರಿಗೆ ಇಲಾಖೆ ಹೆಚ್ಚು ಭದ್ರತೆಯ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅದರ ಲಾಭಗಳತ್ತ ಕೂಡ ಬೆರಳು ಮಾಡಿ ತೋರಿಸಲಾಗುತ್ತಿದೆ. – ಯಾವುದೇ ವಾಹನ ಚಾಲಕ ಟ್ರಾಫಿಕ್ ನಿಯಮ ಉಲ್ಲಂಘನೆ ಅಪರಾಧದಲ್ಲಿ ಭಾಗಿಯಾದರೆ ಸುಲಭವಾಗಿ ಗುರುತಿಸಲು ಸಾಧ್ಯ. – ವಾಹನ ಮಾರಾಟದಲ್ಲಿ ವಿಶ್ವಾಸಾರ್ಹತೆ ಮೂಡುತ್ತದೆ. ಕದ್ದ ವಾಹನವನ್ನು ಯಾಮಾರಿ ಖರೀದಿಸುವ ಅಪಾಯ ಕಡಿಮೆ. ಏಕೆಂದರೆ ಹೆಚ್‌ಎಸ್‌ಆರ್‌ಪಿ ವಾಹನದ ಪೂರ್ಣ ಮಾಹಿತಿ ಒದಗಿಸುತ್ತದೆ. ಹೆಚ್‌ಎಸ್‌ಆರ್‌ಪಿಯಲ್ಲಿ ವಾಹನದ ಚಾರ್ಸಿ ನಂಬರ್, ಎಂಜಿನ್ ನಂಬರ್ ಕೂಡ ದಾಖಲಾಗಿರುತ್ತದೆ. – ಕದ್ದ ವಾಹನವನ್ನು ದಕ್ಕಿಸಿಕೊಳ್ಳುವುದು ಕಷ್ಟ ಕಷ್ಟ. ನಂಬರ್‌ಪ್ಲೇಟ್ ಅನ್ನು ನಕಲು ಮಾಡುವುದು ಕಠಿಣ. ಇದು ಕಳ್ಳರ ತಾಪ್ರತ್ರಯವನ್ನು ಹೆಚ್ಚಿಸಿ ಮಾಲೀಕರ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗಬಹುದು! – ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕೂಡಲೇ ವಾಹನದ ಗುರುತು ಲಭ್ಯವಾಗುವುದರಿಂದ ಪತ್ತೆ ಸಲೀಸು. ವಾಸ್ತವವಾಗಿ, ನಂಬರ್ ಪ್ಲೇಟ್‌ನಲ್ಲಿ ಲೇಸರ್ ಆಧಾರಿತವಾಗಿ ನೋಂದಣಿ ಸಂಖ್ಯೆಯನ್ನು ನಮೂದಿಸಿರುವುದರಿಂದ ಲೇಸರ್ ಡಿಟೆಕ್ಟರ್ ಕ್ಯಾಮರಾಗಳಿಂದ ವಾಹನದ ಪೂರ್ಣ ಮಾಹಿತಿಯನ್ನು ಕ್ಷಿಪ್ರ ವೇಗದಲ್ಲಿ ಪಡೆಯಬಹುದು. ಜೊತೆಜೊತೆಗೆ ಹೇಳಬೇಕಾದುದೆಂದರೆ, ಸಧ್ಯ ಭಾರತದಲ್ಲಿ ಲೇಸರ್ ಡಿಟೆಕ್ಟರ್ ಕ್ಯಾಮರಾಗಳೇ ದೊರಕುತ್ತಿಲ್ಲ. ಇದರ ಆಮದು ಮಾಡಿಕೊಳ್ಳಲೂ ಒಂದು ಡೀಲ್ ಕುದುರಿದರೆ ಅಚ್ಚರಿ ಇಲ್ಲ! ಹೆಚ್‌ಎಸ್‌ಆರ್‌ಪಿ ಹ್ಯಾಗಿರುತ್ತೆ ಗೊತ್ತಾ?
ಈ ನಂಬರ್‌ಪ್ಲೇಟ್‌ಗೆ ಸ್ಪಷ್ಟ ಅಳತೆ ಇರುತ್ತದೆ. ದ್ವಿಚಕ್ರ ವಾಹನದ ಹಿಂಭಾಗದ ಪ್ಲೇಟ್ 200-100 ಮಿ.ಮೀ ಅಳತೆಯಾಗಿದ್ದರೆ ಮುಂಭಾಗದ್ದು 285-45 ಆಕಾರದಲ್ಲಿರುತ್ತದೆ. ಕಾರು ಮಾದರಿಯ ವಾಹನಕ್ಕೆ 500-120, ಭಾರದ ವಾಹನಗಳಲ್ಲಿ 340-200ರ ಅಳತೆ. ಈ ಹೆಚ್‌ಎಸ್‌ಆರ್‌ಪಿಯಲ್ಲಿ ತಿಳಿ ನೀಲಿ ಬಣ್ಣದ IND ಎಂಬ ನಮೂದು ಇರುತ್ತದೆ. ಹಾಲೋಗ್ರಾಮ್‌ನಲ್ಲಿ ಚಕ್ರದ ಗುರುತನ್ನು ಅಳವಡಿಸಿರಲಾಗುತ್ತದೆ. ಹೆಚ್‌ಎಸ್‌ಆರ್‌ಪಿಯನ್ನು ಒಂದು ಮೀ ದಪ್ಪದ ಅಲ್ಯುಮಿನಿಯಂ ಪ್ಲೇಟ್‌ನಲ್ಲಿ ತಯಾರಿಸಲಾಗಿರುತ್ತದೆ. ಪ್ಲೇಟ್‌ನ ಮೊನೆಯನ್ನು ಕತ್ತರಿಸಿ ವೃತ್ತಾಕಾರ ಕೊಡಲಾಗುತ್ತದೆ. ನಂಬರ್‌ಪ್ಲೇಟ್‌ನಲ್ಲಿ ನೋಂದಣಿಯನ್ನು ಇಂಗ್ಲೀಷ್ ಅಕ್ಷರ ಹಾಗೂ ಅರೇಬಿಕ್ ಸಂಖ್ಯೆಗಳಲ್ಲಿ ಮಾತ್ರ ದಾಖಲಿಸಲಾಗಿರುತ್ತದೆ. ಒಟ್ಟು 7 ಅಂಕಿಯನ್ನು ಲೇಸರ್‌ನಲ್ಲಿ ಮುದ್ರಿಸಿರಲಾಗುತ್ತದೆ. ಈ ನಂಬರ್ ಪ್ಲೇಟ್ ಅನ್ನು ಸ್ನಾಪ್ ಲಾಕ್ ಎಂಬ ನೂತನ ತಂತ್ರಜಾnನದ ಆಧಾರದಲ್ಲಿ ವಾಹನಕ್ಕೆ ಜೋಡಿಸಲಾಗಿರುತ್ತದೆ. ಒಂದೊಮ್ಮೆ ಇದನ್ನು ತೆಗೆಯಲು ಪ್ರಯತ್ನಿಸಿದರೆ ಮತ್ತೆ ಅದನ್ನು ಜೋಡಿಸಲು ಬರುವುದಿಲ್ಲ. – ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ