ಬೆಂಗಳೂರು: ತಂದೆಯ ಜತೆಗೆ ಸೇರಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಎಚ್‌ಎಸ್ ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, ಒಂದು ಕ್ವಿಂಟಲ್ ಗಾಂಜಾ ಜಪ್ತಿ ಮಾಡಿದ್ದಾರೆ.
ತಮಿಳುನಾಡು ಮೂಲದ ಸಾಧಿಕ್ (23) ಬಂಧಿತ. ಆರೋಪಿಯಿಂದ ಒಟ್ಟಾರೆ 52.50 ಲಕ್ಷ ರೂ. ಮೌಲ್ಯದ 105 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಸಾದಿಕ್ ಏ.12ರಂದು ಬೆಳಗ್ಗೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಅನುಮಾನಾಸ್ಪದವಾಗಿ ದ್ವಿಚಕ್ರವಾಹನದಲ್ಲಿ ಅಡ್ಡಾಡುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ವಿಚಾರಿಸಿ ಅತನ ಬಳಿಯಿದ್ದ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ 5 ಕೆ.ಜಿ. 360 ಗ್ರಾಂ. ಗಾಂಜಾ ಪತ್ತೆಯಾಗಿತ್ತು. ಕೂಡಲೇ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ “ತಂದೆ ಅಮೀರ್ ಜತೆ ಸೇರಿ ಒಡಿಶಾದಿಂದ ತಮಿಳುನಾಡಿಗೆ ಗಾಂಜಾ ತರಿಸಿಕೊಳ್ಳುತ್ತಿದ್ದೆ. ತಮಿಳುನಾಡಿನಿಂದ ಬಸ್‌ನಲ್ಲಿ ಬೆಂಗಳೂರಿಗೆ ತಂದು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದೆ’ ಎಂದು ಹೇಳಿದ್ದಾನೆ.
ಆರೋಪಿ ಕೊಟ್ಟ ಮಾಹಿತಿ ಮೇರೆಗೆ ಎಚ್‌ಎಸ್‌ಆರ್ ಲೇಔಟ್‌ನ ಬಳಿ ಇರುವ ಬಾಡಿಗೆ ಮನೆಯೊಂದರಲ್ಲಿ ಆತ ಸಂಗ್ರಹಿಸಿಟ್ಟಿದ್ದ 105 ಕೆ.ಜಿ. ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಸಾದಿಕ್ ತಂದೆ ಅಮೀರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಗಾಂಜಾಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಉನ್ನತ ಹುದ್ದೆಯಲ್ಲಿರುವ ಯುವಕರೇ ಹೆಚ್ಚಾಗಿ ತನ್ನಿಂದ ಗಾಂಜಾ ಖರೀದಿ ಮಾಡುತ್ತಿದ್ದರು ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.