ಮೈಸೂರು ಭಾಗದ ಪ್ರಭಾವಿ ಮುಖಂಡ, ಪ್ರಬುದ್ಧ ರಾಜಕಾರಣಿ, ಹಿರಿಯ ಕಾಂಗ್ರೆಸ್ ಮುಖಂಡ, ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವ ಎಚ್.ಎಸ್.ಮಹದೇವ ಪ್ರಸಾದ್(58ವರ್ಷ) ಮಂಗಳವಾರ ಬೆಳಗ್ಗಿನ ಜಾವ ಚಿಕ್ಕಮಗಳೂರಿನ ಸೆರಾಯ್ ರೆಸಾರ್ಟ್ ನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಿರಿಯ ಸಚಿವ ಮಹದೇವ ಪ್ರಸಾದ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದೆ. ಚಾಮರಾಜನಗರ ಗುಂಡ್ಲುಪೇಟೆ ಕ್ಷೇತ್ರದ ಶಾಸಕಾಗಿರುವ ಎಚ್.ಎಸ್.ಮಹದೇವ ಪ್ರಸಾದ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಕ್ಕರೆ ಮತ್ತು ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.ಬಳಿಕ 5 ಬಾರಿ ಶಾಸಕರಾಗಿದ್ದರು. ಪ್ರಸಾದ್ ಅವರು ಪತ್ನಿ ಡಾ.ಗೀತಾ, ಪುತ್ರ ಗಣೇಶ್ ಪ್ರಸಾದ್ ಸೇರಿದಂತೆ ಬಂಧು, ಬಳಗವನ್ನು ಅಗಲಿದ್ದಾರೆ. ನಾಳೆ ಮಹದೇವ ಪ್ರಸಾದ್ ಅವರ ಹುಟ್ಟೂರಾದ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.