ಮುಂಬಯಿ: ರಜಾ ದಿನಗಳಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುವುದು ಇತ್ತೀಚೆಗಿನ ವರ್ಷದಲ್ಲಿ ಸಾಮಾನ್ಯವಾಗಿದೆ. ಪ್ಯಾನ್ ಇಂಡಿಯಾದಂತಹ ಚಿತ್ರಗಳು ದೊಡ್ಡ ಹಬ್ಬ ಅಥವಾ ವಿಶೇಷ ದಿನದಂದು ಆಗುತ್ತವೆ.
2025ರಲ್ಲಿ ದೊಡ್ಡ ಬಾಕ್ಸಾಫೀಸ್ ದಂಗಲ್ ಉಂಟಾಗುವ ಸಾಧ್ಯತೆಯಿದೆ. ಒಂದೇ ವಾರದಲ್ಲಿ ಮೂರು ದೊಡ್ಡ ಚಿತ್ರಗಳು ಥಿಯೇಟರ್ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿರುವ ʼವಾರ್ -2ʼ (War -2) ಬಾಲಿವುಡ್ನಲ್ಲಿ ರಿಲೀಸ್ ಆಗಲಿರುವ ವರ್ಷದ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾಗಳಲ್ಲೊಂದು. ಹೃತಿಕ್ ರೋಷನ್ (Hrithik Roshan), ಜೂ.ಎನ್ ಟಿಆರ್ (Jr NTR) ಹಾಗೂ ಕಿಯಾರ ಅಡ್ವಾಣಿ (Kiara Advani) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಲ್ಟಿಸ್ಟಾರ್ಸ್ ʼವಾರ್ -2ʼ ಏಪ್ರಿಲ್ ತಿಂಗಳಿನಲ್ಲಿ ಶೂಟ್ ಮುಗಿಸಿ, ಆಗಸ್ಟ್ 15ರ ಸಂದರ್ಭದಲ್ಲಿ ರಿಲೀಸ್ ಆಗುವ ಪ್ಲ್ಯಾನ್ ಹಾಕಿಕೊಂಡಿದೆ ಎನ್ನಲಾಗಿದೆ.
ಈ ಚಿತ್ರದ ಜತೆ ಬಾಲಿವುಡ್ನ ಮತ್ತೊಂದು ಬಹುನಿರೀಕ್ಷಿತ ʼಲಾಹೋರ್: 1947ʼ (Lahore: 1947) ಸಿನಿಮಾ ಕೂಡ ಆಗಸ್ಟ್ 15ರ ವೀಕೆಂಡ್ನಲ್ಲೇ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಭಾರತದ ಸ್ವಾತಂತ್ಯದ ಸುತ್ತ ಸಾಗುವ ಈ ಸಿನಿಮಾ ಆಗಸ್ಟ್ 15ರಂದೇ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಬಹು ಸಮಯದ ಬಳಿಕ ಆಮೀರ್ ಖಾನ್ (Aamir Khan) ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಅತಿಥಿ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. ಪ್ರಧಾನ ಪಾತ್ರದಲ್ಲಿ ಸನ್ನಿ ಡಿಯೋಲ್ (Sunny Deol), ಪ್ರೀತಿ ಜಿಂಟಾ (Preity Zinta) ಕಾಣಿಸಿಕೊಳ್ಳಲಿದ್ದಾರೆ.
ಈ ಎರಡು ಚಿತ್ರಗಳಿಗೆ ಟಕ್ಕರ್ ನೀಡಲು ಕಾಲಿವುಡ್ನಿಂದ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ʼಕೂಲಿʼ (Coolie) ಚಿತ್ರ ರಿಲೀಸ್ ಆಗಲಿದೆ.
ಲೋಕೇಶ್ ಕನಕರಾಜ್ (Lokesh Kanagaraj) ನಿರ್ದೇಶನದ ʼಕೂಲಿʼ ಈಗಾಗಲೇ ಶೇ.70 ರಷ್ಟು ಚಿತ್ರೀಕರಣ ಮುಗಿಸಿದೆ. ಜನವರಿ ಮಧ್ಯದಲ್ಲಿ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ.
‘ಕೂಲಿʼಯಲ್ಲಿ ಮಲ್ಟಿಸ್ಟಾರ್ಸ್ ಗಳಿರಲಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್, ಕನ್ನಡದ ಉಪೇಂದ್ರ, ಟಾಲಿವುಡ್ನ ನಾಗಾರ್ಜುನ್, ಶ್ರುತಿ ಹಾಸನ್, ಮಾಲಿವುಡ್ ನ ಶೌಬಿನ್ ಸೇರಿದಂತೆ ದೊಡ್ಡ ಪಾತ್ರವರ್ಗವೇ ಇರಲಿದೆ.
ʼಕೂಲಿʼ ಆಗಸ್ಟ್ 15ರ ಸಂದರ್ಭದಲ್ಲೇ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಅಂದುಕೊಂಡಂತೆ ಈ ಮೂರು ಚಿತ್ರಗಳು ಒಂದೇ ವಾರದಲ್ಲಿ ರಿಲೀಸ್ ಆದರೆ ಬಾಕ್ಸಾಫೀಸ್ನಲ್ಲಿ ದಂಗಲ್ ಆಗುವುದರ ಜತೆಗೆ ಪ್ರೇಕ್ಷಕರಿಗೆ ಸಖತ್ ಮನರಂಜನೆ ಸಿಗುವುದು ಪಕ್ಕಾ.