ನವದೆಹಲಿ:ಮಾನವ ಸಂಪನ್ಮೂಲ ಅಭಿವೃದ್ಧಿ (ಎಂಎಚ್ ಆರ್ ಡಿ) ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯವನ್ನಾಗಿ ಬದಲಾಯಿಸುವ ಮರುನಾಮಕರಣದ ಪ್ರಸ್ತಾಪಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿರುವುದಾಗಿ ವರದಿ ತಿಳಿಸಿದೆ.
ಸೋಮವಾರ ರಾತ್ರಿ ಪ್ರಕಟಿಸಲಾಗಿರುವ ಗಜೆಟ್ ನೋಟಿಫಿಕೇಶನ್ ನಲ್ಲಿ ಘೋಷಿಸಿರುವಂತೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾನವ ಸಂಪನ್ಮೂಲ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯವಾಗಿ ಬದಲಾಯಿಸಲು ಅಂಕಿತ ಹಾಕಿರುವುದಾಗಿ ತಿಳಿಸಿತ್ತು.
1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಶಿಕ್ಷಣ ಸಚಿವಾಲಯದ ಹೆಸರನ್ನು ಮಾನವ ಸಂಪನ್ಮೂಲ ಸಚಿವಾಲಯ ಎಂದು ಮರುನಾಮಕರಣ ಮಾಡಿದ್ದರು. 1986ರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸಲಾಗಿತ್ತು. 1992ರಲ್ಲಿ ಕೊನೆಯದಾಗಿ ಎನ್ ಇಪಿಗೆ ತಿದ್ದುಪಡಿ ತರಲಾಗಿತ್ತು.
ಪ್ರಧಾನಿ ರಾಜೀವ್ ಗಾಂಧಿ ಅವರ ಸಚಿವ ಸಂಪುಟದಲ್ಲಿ ಮೊದಲ ಮಾನವ ಸಂಪನ್ಮೂಲ ಸಚಿವರಾಗಿ ಪಿವಿ ನರಸಿಂಹ ರಾವ್ ಅವರನ್ನು ಆಯ್ಕೆ ಮಾಡಲಾಗಿತ್ತು ಎಂದು ವರದಿ ಹೇಳಿದೆ.
ಮಾನವ ಸಂಪನ್ಮೂಲ ಸಚಿವಾಲಯದ ಹೆಸರನ್ನು ಮತ್ತೆ ಪುನಃ ಶಿಕ್ಷಣ ಸಚಿವಾಲಯವನ್ನಾಗಿ ಬದಲಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲ ಪ್ರಸ್ತಾಪವನ್ನು ಇಟ್ಟಿತ್ತು. ಇದರನ್ವಯ ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಕಾರ್ಯದಲ್ಲಿ ತೊಡಗಿತ್ತು.