ಗಂಗಾವತಿ: ಯಾವುದೇ ಷರತ್ತುಗಳಿಲ್ಲದೆ ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಪಡೆಯುವ ಮೂಲಕ ಪಕ್ಷದ ಧ್ವಜವನ್ನು ಸ್ವೀಕರಿಸಿ ಕಾಂಗ್ರಸ್ ಪಕ್ಷವನ್ನು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೊಪ್ಪಳ ಜಿಲ್ಲೆಯ ಬಗ್ಗೆ ತಮಗೆ ಸಮಗ್ರ ಮಾಹಿತಿ ಇದೆ. ಇಲ್ಲಿ ಎಚ್.ಜಿ.ರಾಮುಲು ಕುಟುಂಬ ಪ್ರಬಲವಾಗಿದ್ದು ಕೊಪ್ಪಳ ಸೇರಿ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದ್ದುಎಚ್.ಆರ್. ಶ್ರೀನಾಥ ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಸೇರ್ಪಡೆಯಾಗಿದ್ದರು. ಇದೀಗ ಪುನಃ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರಿಂದ ಕೊಪ್ಪಳ ಜಿಲ್ಲೆಯ 5 ಮತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಪಡೆಯಲಿದ್ದು ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ,ಶಿವಕುಮಾರ್ ಮಾತನಾಡಿ, ಯಾವುದೇ ಷರತ್ತಿಲ್ಲದೇ ಎಚ್.ಆರ್.ಶ್ರೀನಾಥ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸ್ವತಃ ಸೋನಿಯಾ ಗಾಂಧಿ ಸಹ ಎಚ್.ಜಿ.ರಾಮುಲು ಕುಟುಂಬದ ಕುರಿತು ಗೌರವ ಹೊಂದಿದ್ದಾರೆ. ಇಂದಿರಾಗಾಂಧಿ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಚ್.ಜಿ.ರಾಮುಲು ಕುಟುಂಬವನ್ನು ಕಂಡು ಮಾತನಾಡುತ್ತಿದ್ದರು. ಇಂತಹ ಸಂಬಂಧ ಹೊಂದಿದ ಕುಟುಂಬ ಕಾಂಗ್ರೆಸ್ ನಿಂದ ಕೆಲ ಕಾರಣಗಳಿಂದ ದೂರವಾಗಿತ್ತು. ಇದೀಗ ಪುನಃ ಕಾಂಗ್ರೆಸ್ ಸೇರ್ಪಡೆ ಸಂತೋಷವಾಗಿದೆ. ನಮ್ಮ ಸರ್ವೇ ಪ್ರಕಾರ ಕೊಪ್ಪಳದ 5 ಮತ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆ ಎಂದರು.
ಬಿಜೆಪಿಯವರನ್ನು ಸೋಲಿಸಲು ಪಣ
ಪಕ್ಷ ಸೇರ್ಪಡೆಯಾಗಿ ಮಾತನಾಡಿದ ಎಚ್.ಆರ್.ಶ್ರೀನಾಥ್, ಕಳೆದ ಮೂರು ವರ್ಷ ವನವಾಸದಲ್ಲಿದ್ದೆ ಇದೀಗ ಮರಳಿ ಮನೆ ಬಂದಂತಾಗಿದೆ . ಇಂದಿರಾಜೀ ಕಾಲದಿಂದ ನಮ್ಮ ತಂದೆ ಎಚ್.ಜಿ.ರಾಮುಲು ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು. ಸಂಕಷಷ್ಟ ಕಾಲದಲ್ಲಿ ಇಂದಿರಾಜೀಯವರ ಜತೆ ಇದ್ದರು. ಹಿಂದುಳಿದವರು, ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆಗೆ ಯಾವುದೇ ಷರತ್ತಿಲ್ಲದೇ ನಾನು ಕಾಂಗ್ರೆಸ್ ಸೇರಿದ್ದೇನೆ. ಬಿಜೆಪಿಯವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ನೆಪದಲ್ಲಿ ದೇಶದಲ್ಲಿ ತಳವೂರಿದರು. ಇದೀಗ ಕಿಷ್ಕಿಂದಾ ಅಂಜನಾದ್ರಿಯ ನೆಪದಲ್ಲಿ ಕರ್ನಾಟಕದಲ್ಲಿಯೂ ನೆಲಯೂರಲು ಇನ್ನಿಲ್ಲದ ಗಿಮಿಕ್ ಮಾಡುತ್ತಿದ್ದಾರೆ. ಇದನ್ನು ನಾನು, ಇಕ್ಬಾಲ್ ಅನ್ಸಾರಿ ಮತ್ತು ಮಲ್ಲಿಕಾರ್ಜುನ ನಾಗಪ್ಪ, ಇಡೀ ಕಾಂಗ್ರೆಸ್ ಮತ್ತು ಸ್ಥಳೀಯರೊಡನೆ ಸೇರಿ ಬಿಜೆಪಿಯವರನ್ನು ಸೋಲಿಸಲು ಪಣ ತೊಟ್ಟಿದ್ದೆವೆ ಎಂದರು.
ಎಚ್.ಜಿ.ರಾಮುಲು ಕುಟುಂಬ ಹಾಗೂ ಎಂ.ಎಸ್.ಅನ್ಸಾರಿ ಕುಟುಂಬ ಹಲವು ದಶಕಗಳ ಕಾಲ ಜನರ ಏಳ್ಗೆಗಾಗಿ ಕೆಲಸ ಮಾಡಿವೆ. ಕಾರಣಾಂತರಗಳಿಂದ ಭಿನ್ನಾಭಿಪ್ರಾಯ ಬಂದಿತ್ತು.ಇದೀಗ ಪುನಃ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಸಂತೋಷವಾಗಿದೆ. ಎಲ್ಲರೂ ಕೂಡಿ ಜಿಲ್ಲೆಯ 5 ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ, ಕಾರ್ಯಾಧದ್ಯಕ್ಷ ಸಲೀಂ ಆಹಮದ್, ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ್ ಎಸ್ ತಂಗಡಗಿ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಎಂ.ಮಲ್ಲಿಕಾರ್ಜುನ ನಾಗಪ್ಪ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಅಮರೇಗೌಡ ಭಯ್ಯಾಪೂರ ಸೇರಿ ಅನೇಕರಿದ್ದರು.