Advertisement

HP Smart Tank 580 : ಸರಳ ಮಿತವ್ಯಯಕಾರಿ ಪ್ರಿಂಟರ್

10:42 AM May 16, 2023 | Team Udayavani |

ಒಂದು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ‍ಹೊಂದಿರುವ ಮನೆಗಳಲ್ಲಿ ಈಗ ಪ್ರಿಂಟರ್ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಮಕ್ಕಳ ಪ್ರಾಜೆಕ್ಟ್ ಕೆಲಸಗಳಿಗಿರಬಹುದು, ಮಾಹಿತಿಗಳು, ಬರಹಗಳು, ಕರಪತ್ರಗಳ ಪ್ರಿಂಟೌಟ್, ದಾಖಲಾತಿಗಳ ಜೆರಾಕ್ಸ್ ಇತ್ಯಾದಿಗಳಿಗೆ ಮನೆಯಲ್ಲೊಂದು ಪ್ರಿಂಟರ್ ಇರಬೇಕು ಎಂಬಂತಾಗಿದೆ. ಅಲ್ಲದೇ ಸಣ್ಣ ವ್ಯಾಪಾರಸ್ಥರು, ಖಾಸಗಿ ಕಚೇರಿಗಳು ಇಂತಹ ಅಗತ್ಯಗಳ ಬಳಕೆಗೆ ಎಚ್ ಪಿ ಹೊರತಂದಿರುವ ಹೊಸ ಪ್ರಿಂಟರ್ HP Smart Tank 580. ಇದರ ಮೂಲ ದರ 18,848 ರೂ. ಇದ್ದು ಪ್ರಸ್ತುತ ಅಮೆಜಾನ್.ಇನ್ ನಲ್ಲಿ 16,499 ರೂ.ಗಳಿಗೆ ದೊರಕುತ್ತಿದೆ.

Advertisement

ಸಾಮಾನ್ಯವಾಗಿ ನಾವು ಹೋಮ್ ಪ್ರಿಂಟರ್‌ಗಳ ಬಗ್ಗೆ ಮಾತನಾಡುವಾಗ, ಸಾಮಾನ್ಯವಾಗಿ ಎರಡು ಸಮಸ್ಯೆಗಳು ಬರುತ್ತವೆ- ಮೊದಲನೆಯದು ಸಂಪರ್ಕದ ಸಮಸ್ಯೆ.  ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನೊಂದಿಗೆ ಪ್ರಿಂಟರ್ ಅನ್ನು ಸಂಪರ್ಕಿಸಲು ನೀವು ಹಲವಾರು ಬಾರಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮತ್ತು ಎರಡನೆಯ ತೊಂದರೆಯು ಮುದ್ರಣದ ವೆಚ್ಚ.  ಅನೇಕ ಪ್ರಿಂಟರ್‌ಗಳ ಶಾಯಿಯು ದುಬಾರಿ ಮತ್ತು ಬೇಗನೆ ಮುಗಿಯುತ್ತದೆ.

ನೀವು ಯಾವ ವಿಧದ ಪ್ರಿಂಟರ್ ಅನ್ನು ಆರಿಸಿಕೊಂಡರೂ, ಶಾಯಿ ಅಥವಾ ಟೋನರ್ ಅನ್ನು ಬದಲಿಸುವ ವೆಚ್ಚವು ದುಬಾರಿ ಇರುತ್ತದೆ. ನೀವು ಸ್ವಲ್ಪ ಹಣವನ್ನು ಉಳಿಸಲು ಬಯಸಿದರೆ ಲೇಸರ್ ಅಥವಾ ಇಂಕ್-ಟ್ಯಾಂಕ್ ಪ್ರಿಂಟರ್ ಅನ್ನು ಆಯ್ಕೆ ಮಾಡುವುದು ಉತ್ತಮ. ಇವು ಇಂಕ್ ಜೆಟ್ ಪ್ರಿಂಟರ್ ಗಳಿಗಿಂತ ಸ್ವಲ್ಪ ಹೆಚ್ಚು ಬೆಲೆ ಹೊಂದಿದ್ದರೂ ಸಹ, ಇವುಗಳಲ್ಲಿ ಇಂಕ್ ಬದಲಿಸುವ ವೆಚ್ಚ ಕಡಿಮೆ  ಬೀಳುತ್ತದೆ.

ಈ ಹಿನ್ನೆಲೆಯಲ್ಲಿ HP ಯ ಹೊಸ ಸ್ಮಾರ್ಟ್ ಟ್ಯಾಂಕ್ 580 ಪ್ರಿಂಟರ್ ಅನ್ನು ಗಮನಿಸಿದಾಗ  ಇದು ಬಳಕೆದಾರ ಸ್ನೇಹಿ ಮತ್ತು ಜೇಬಿಗೆ ಹಗುರವಾಗಿದೆ.

ವಿನ್ಯಾಸ: ಈ ಪ್ರಿಂಟರ್ ಕಾಂಪ್ಯಾಕ್ಟ್ ವಿನ್ಯಾಸ ಹೊಂದಿದೆ. ಹೆಚ್ಚು ತೂಕ ಇಲ್ಲ. ಮನೆಯ ಚಿಕ್ಕ ಟೇಬಲ್ ಮೇಲೆಯೂ ಇಟ್ಟುಕೊಳ್ಳಬಹುದು. ಪ್ರಿಂಟರ್ ಮೇಲೆ ಎಡ ಭಾಗದಲ್ಲಿ ಮುದ್ರಣದ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಸಣ್ಣ ಎಲ್ ಸಿ ಡಿ ಡಿಸ್ ಪ್ಲೇ ಇದೆ. ಪ್ರಿಂಟ್, ಜೆರಾಕ್ಸ್, ವೈಫೈ ಕನೆಕ್ಟ್ ಮಾಡುವ ಟಚ್ ಬಟನ್ ಗಳನ್ನು ನೀಡಲಾಗಿದೆ.  ಪ್ರಿಂಟರ್ ಮೇಲ್ಭಾಗದಲ್ಲಿ, ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ಅಥವಾ ನಕಲಿಸಲು ಸ್ಕ್ಯಾನರ್ ಇದೆ.

Advertisement

ಮುಂಭಾಗದಲ್ಲಿ ಇಂಕ್ ನ ಪ್ರಮಾಣ ತಿಳಿಸಲು ಪಾರದರ್ಶಕ ಟ್ರೇಗಳು ಹೊರಗೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಿಂಟರ್ ನ ಹಿಂಬದಿಯಲ್ಲಿ ಕಾಗದ ಹಾಕಬೇಕು. ಪ್ರಿಂಟ್ ಆದ ಕಾಗದ ಮುಂಬದಿ ಬರುತ್ತದೆ. ಇದರಲ್ಲಿ ಒಂದು ಬಾರಿಗೆ 30 ಪುಟಗಳನ್ನು ಮುದ್ರಿಸಬಹುದು. ಪ್ರಿಂಟರ್ ಅನ್ನು ವೈರ್ ಲೆಸ್ ಅಥವಾ USB ಕೇಬಲ್ ಮೂಲಕ ಲ್ಯಾಪ್ ಟಾಪ್ ಗೆ ಸಂಪರ್ಕಿಸಬಹುದು.

ಸ್ಥಾಪನೆ: ಈ ಪ್ರಿಂಟರ್ ಅನ್ನು ಹೆಚ್ಚಿನ ತಾಂತ್ರಿಕ ಪರಿಣತಿಯ ಅಗತ್ಯವಿಲ್ಲದೇ  ಅಲ್ಲಿ ನೀಡಿರುವ ಬಳಕೆದಾರರ ಕೈಪಿಡಿಯಲ್ಲಿ ನೋಡಿಕೊಂಡು ನಾವೇ ಸ್ಥಾಪಿಸಿಕೊಳ್ಳಬಹುದು.ಪ್ರಿಂಟರ್ ನ ಬಾಕ್ಸ್ ನಲ್ಲಿ ಇಂಕ್ ತುಂಬುವ ಪುಟ್ಟ ಕಂಟೇನರ್ ಗಳಿದ್ದು, ಬಾಕ್ಸ್ ಜೊತೆ ಬಂದಿರುವ ಒಂದು ಕಪ್ಪು ಹಾಗೂ ಮೂರು ಬಣ್ಣದ ಇಂಕ್ ರಿಫೀಲ್ ಗಳನ್ನು ಒಂದೊಂದಾಗಿ, ಅದರೊಳಗೆ ಒತ್ತಿ ಇಟ್ಟರೆ ಇಂಕ್ ತಾನಾಗೇ ತುಂಬಿಕೊಳ್ಳುತ್ತದೆ. ಇಂಕ್ ಚೆಲ್ಲದಂತೆ ರಿಫೀಲ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ರಿಫೀಲ್ ಕೆಳಮುಖ ಮಾಡಿದರೂ ಇಂಕ್ ಚೆಲ್ಲುವುದಿಲ್ಲ. ಬಳಿಕ ಪ್ರಿಂಟ್ ಮಾಡುವ ಎರಡು ಪ್ರಿಂಟ್ ಹೆಡ್ ಗಳನ್ನು ಬಳಕೆದಾರರ ಕೈಪಿಡಿಯಲ್ಲಿರುವಂತೆ ಪ್ರಿಂಟರ್ ನ ಒಳಗೆ ಹೊಂದಿಸಬೇಕು. ಈಗ ಪ್ರಿಂಟರ್ ಬಳಕೆಗೆ ಸಿದ್ಧ.

ಲ್ಯಾಪ್ ಟಾಪ್ ಅಥವಾ ಮೊಬೈಲ್ ಫೋನ್ ಕನೆಕ್ಟ್ ಮಾಡುವುದು ಹೇಗೆ?: ನಮ್ಮ ಲ್ಯಾಪ್ ಟಾಪ್ ಅಥವಾ ಮೊಬೈಲ್ ಪೋನ್ ನಲ್ಲಿ ವೈಫೈ ಆನ್ ಮಾಡಿಕೊಂಡು ಅದರಲ್ಲಿ Direct DF HP Smart TAnk 580 ನೆಟ್ ವರ್ಕ್ ತೋರಿಸುತ್ತದೆ. ಅದಕ್ಕೆ ಪಾಸ್ ವರ್ಡ್ ಕೇಳುತ್ತದೆ. ಪಾಸ್ ವರ್ಡ್ ಯಾವುದು ಎಂದರೆ,  ಪ್ರಿಂಟರ್ ನ ಮೇಲಿರುವ ಬಟನ್ ಗಳ ಪೈಕಿ ಐ ಎಂಬ ಬಟನ್ ಅನ್ನು ಒತ್ತಿದಾಗ ಪ್ರಿಂಟರ್ ನ ತಾಂತ್ರಿಕ ಮಾಹಿತಿಗಳ ರಿಪೋರ್ಟ್ ಬರುತ್ತದೆ. ಅದರಲ್ಲಿ ವೈಫೈ ಡೈರೆಕ್ಟ್ ನೇಮ್ ಎಂಬುದರ ಕೆಳಗೆ, ವೈಫೈ ಡೈರೆಕ್ಟ್ ಪಾಸ್ವರ್ಡ್ (12 ಅಂಕಿಗಳು) ಇರುತ್ತದೆ. ಅದನ್ನು ಮೊಬೈಲ್ ನಲ್ಲಿ ವೈಫೈ ವಾಸ್ ವರ್ಡ್ ಗೆ ನಮೂದಿಸಬೇಕು. ಆಗ ನಿಮ್ಮ ಮೊಬೈಲ್ ಫೋನ್  ಎಚ್. ಪಿ . ಪ್ರಿಂಟರ್ ಗೆ ಕನೆಕ್ಟ್ ಆಗುತ್ತದೆ. ಒಮ್ಮೆ ಕನೆಕ್ಟ್ ಆದರೆ ಮತ್ತೆ ನೀವು ಪದೇ ಪದೇ ಪಾಸ್ ವರ್ಡ್ ಹಾಕುವ ಅಗತ್ಯ ಇಲ್ಲ.  ಬಳಿಕ ನೀವು ಲ್ಯಾಪ್ ಟಾಪ್ ಅಥವಾ ಮೊಬೈಲ್ ನಲ್ಲಿ ಪ್ರಿಂಟ್ ತೆಗೆಯಬೇಕಾದ ಫೋಟೋ ಇತ್ಯಾದಿಗಳ ಪ್ರಿಂಟ್ ಆಯ್ಕೆ ಕೊಟ್ಟರೆ, ಅದು ಪ್ರಿಂಟ್ ಆಗುತ್ತದೆ. ಆ ಸಂದರ್ಭದಲ್ಲಿ ನಿಮಗೆ ಕಪ್ಪು ಬಿಳುಪು ಅಥವಾ ಕಲರ್ ಆಯ್ಕೆಯನ್ನೂ ಕೇಳುತ್ತದೆ. ನಿಮಗೆ ಬೇಕಾದ ಆಯ್ಕೆ ಮಾಡಿಕೊಂಡು ಪ್ರಿಂಟ್ ಕೊಟ್ಟರೆ ಕಾಪಿ ಬರುತ್ತದೆ.

ಕಪ್ಪು ಬಿಳುಪು ಪ್ರಿಂಟ್ ಬೇಗ ಬರುತ್ತದೆ. ಬಣ್ಣದ ಪ್ರಿಂಟ್ ಕೊಟ್ಟಾಗ ಸಹಜವಾಗಿಯೇ ಕೊಂಚ ನಿಧಾನವಾಗುತ್ತದೆ. ಸಣ್ಣ ವ್ಯಾಪಾರಿಗಳು, ವರ್ಕ್ ಫ್ರಂ ಹೋಂ ಮಾಡುವವರು, ವಿದ್ಯಾರ್ಥಿಗಳ ಪಾಜೆಕ್ಟ್ ಕೆಲಸಗಳು, ಸಣ್ಣ ಪುಟ್ಟ ಕಚೇರಿಗಳನ್ನು ಹೊಂದಿರುವವರಿಗೆ ಇದು ಸೂಕ್ತ ಪ್ರಿಂಟರ್. 12 ಸಾವಿರ ಕಪ್ಪು ಬಿಳುಪು ಕಾಪಿಗಳು ಅಥವಾ 6 ಸಾವಿರ ಕಲರ್ ‍ಕಾಪಿಗಳನ್ನು ಒಂದು ಬಾರಿಯ ರೀಫಿಲ್ ನಲ್ಲಿ ಬಳಸಬಹುದು. ಒಂದು ಬಾರಿಯ ಬಳಕೆಗೆ ರೀಫಿಲ್ ಗಳನ್ನು ಬಾಕ್ಸ್ ಜೊತೆ ಉಚಿತವಾಗಿ ನೀಡಲಾಗುತ್ತದೆ.

ಸಾಮಾನ್ಯ ಇಂಕ್ಜೆಟ್ ಪ್ರಿಂಟರ್ ಗಳಿಗೆ ಹೋಲಿಸಿದಾಗ  ಇದರ ಇಂಕ್ ಅಗ್ಗವಾಗಿದೆ.  ನಿಮ್ಮ ಮನೆ ಹಾಗೂ ಸಣ್ಣ ವ್ಯಾಪಾರಕ್ಕೆ ಆಲ್ ಇನ್ ಒನ್ ಪ್ರಿಂಟರ್ ಅಗತ್ಯವಿದ್ದರೆ ಇದನ್ನು ಪರಿಗಣಿಸಬಹುದು. ನೀಡುವ ಹಣಕ್ಕೆ ತಕ್ಕ ಮೌಲ್ಯವನ್ನಂತೂ ನೀಡುತ್ತದೆ.

-ಕೆ.ಎಸ್. ಬನಶಂಕರ  ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next