ಕರುನಾಡಿನ ವಾಸ್ತುಶಿಲ್ಪದ ಪರಂಪರೆಯಲ್ಲಿ ಹಲವು ಮಾದರಿಯ ಶಿಖರ ದೇಗುಲಗಳಿವೆ. ಇದರಲ್ಲಿ ಭೂಮಿಜ ಶೈಲಿಯ ಶಿಖರಗಳದ್ದೂ ಒಂದು ಬಗೆ. ಪಿರಾಮಿಡ್ಡಿನಂತೆ ಮೇಲೆ ಏರುತ್ತಾ, ಸ್ಥೂಪ ದಲ್ಲಿ ಕೊನೆಗೊಳ್ಳುವ ಈ ಮಾದರಿಯಲ್ಲಿ ಹೊಯ್ಸಳರು ನಿರ್ಮಿಸಿದ ಎರಡು ದೇಗುಲಗಳು ಲಭ್ಯವಿದೆ. ಅವುಗಳಲ್ಲಿ ತುಮ ಕೂರು ತುರುವೇಕೆರೆಯ ಮೂಲೆ ಶಂಕರ ದೇಗುಲ ಒಂದಾದರೆ ಮತ್ತೂಂದು ನುಗ್ಗೇಹಳ್ಳಿಯ ಸದಾಶಿವ ದೇಗುಲ.
ತುರುವೇಕೆರೆಯಲ್ಲಿ ಕೆರೆಯ ಸಮೀಪವಿರುವ ಜಗತಿಯ ಮೇಲೆ ಇರುವ ಈ ಶಂಕರೇಶ್ವರ ದೇಗುಲ, ಮೂಲೆ ಶಂಕರ ಅಂತಲೇ ಪ್ರಸಿದ್ಧಿ. ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪ ಹೊಂದಿದ್ದು, ಗರ್ಭಗುಡಿಯಲ್ಲಿ 4 ಅಡಿ ಎತ್ತರದ ಶಿವಲಿಂಗವಿದೆ. ನವರಂಗದಲ್ಲಿ ಹೊಯ್ಸಳ ಶೈಲಿಯ ಕಂಬಗಳಿದ್ದು ಉಳಿದ 12 ಕಂಬಗಳು ಭಿತ್ತಿಗೆ ಹೊಂದಿಕೊಂಡಿವೆ. ಇವುಗಳ ಮಧ್ಯದಲ್ಲಿ ಶಿಖರದಂತೆ ಅಲಂಕಾರಗೊಂಡ ಚೌಕಾಕಾರದ ಸಣ್ಣ ಸ್ತಂಭಗಳಿವೆ. ದೇಗುಲ ದ ಮೂರು ಬದಿಯಲ್ಲಿ ಈ ರೀತಿಯ ಅಲಂಕಾರವಿದ್ದು, ಪೂರ್ವ ಭಾಗದಲ್ಲಿನ ಸಣ್ಣ ಜಾಲಂದ್ರದಲ್ಲಿ ಸೂರ್ಯನ ಕಿರಣ ಬೀಳುವಂತೆ ಇರುವ ರಚನೆ ವಿಶೇ ಷ.
ಇಲ್ಲಿನ ಗಣೇಶ, ಸಪ್ತ ಮಾತೃಕೆ, ಭೈರವ, ನಂದಿ ಮೂರ್ತಿಗಳು ನೋಡಲು ಚೆಂದ. ನವರಂಗದ ಭುವನೇಶ್ವರಿಯಲ್ಲಿನ ಕಮಲದ ಕೆತ್ತೆನೆಯಂತೂ ಮನೋಹರ. ಇಲ್ಲಿನ ವಿಶೇಷ ಆಕರ್ಷಣೆ, ಭೂಮಿಜ ಶೈಲಿಯ ಶಿಖರ. ಪಿರಾಮಿಡ್ ಆಕಾರದಲ್ಲಿರುವ ಈ ಶಿಖರ ನಾಲ್ಕು ಹಂತದಲ್ಲಿದ್ದು, ಕೆಳಗಿನಿಂದ ಮೇಲಕ್ಕೆ ಕಿರಿದಾಗಿ ಸ್ಥೂಪ ದ ಲ್ಲಿ ಕೊನೆ ಗೊಂಡಿದೆ.
ಇಲ್ಲಿನ ಮತ್ತೂಂದು ವಿಶೇಷ ದೀಪಸ್ಥಂಭ. ದಕ್ಷಿಣದ ಪ್ರವೇಶ ದ್ವಾರದ ಎದುರು ಇರುವ ಬದಲು ದೇಗುಲದ ಎಡಗಡೆ ಪೂರ್ವಭಾಗದಲ್ಲಿದೆ. ಇಲ್ಲಿ ದಿಕ್ಕಿನ ಅನುಸಾರವಾಗಿ ಇದು ಸ್ಥಾಪಿತವಾಗಿರಬಹುದು ಅಥವಾ ಕಾಲಾಂತರದಲ್ಲಿ ಇಲ್ಲಿ ಇರಬಹುದಾದ ಪ್ರವೇಶ ದ್ವಾರ ಮುಚ್ಚಿರಬಹುದು. ಬಲಿಪೀಠ ಸಹ ಇಲ್ಲಿ ಕಂಡು ಬರುವುದಿಲ್ಲ. ಅಂದ ಹಾಗೆ, ಈ ದೇಗುಲ ನವೀಕರಣಗೊಂಡಿದ್ದು, ಧರ್ಮಸ್ಥಳ ಮಂಜುನಾಥ ಸ್ವಾಮಿ ಟ್ರಸ್ಟ್ ವತಿಯಿಂದ.
ದರುಶನಕೆ ದಾರಿ: ತುಮಕೂರಿನಿಂದ 71 ಕಿ.ಮೀ. ದೂರ ದ ಲ್ಲಿದೆ. ಬೆಂಗಳೂರು- ಶಿವಮೊಗ್ಗ ಹೆದ್ದಾ ರಿಯಲ್ಲಿ ಕೆ.ಬಿ. ಕ್ರಾಸ್ ಮೂಲಕವಾಗಿ ಅಥವಾ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಕುಣಿಗಲ್ ಮೂಲಕವಾಗಿ ಈ ದೇಗುಲವನ್ನು ತಲುಪಬಹುದು.
ಶ್ರೀನಿವಾಸ ಮೂರ್ತಿ ಎನ್.ಎಸ್.