ಇತ್ತೀಚೆಗಷ್ಟೇ ಗೆಳತಿಯೊಬ್ಬಳು ಫೋನ್ ಮಾಡಿ, “ಯಾಕೋ ತುಂಬಾನೇ ಬೇಜಾರು ಕಣೆ, ಯಾಕೆ ಕೆಲಸಬಿಟ್ಟು ಮನೆಯಲ್ಲಿ ಕುಳಿತೆ ಅನಿಸ್ತಿದೆ’ ಎಂದಾಗ ಅರೆ… ಮೊನ್ನೆಯಷ್ಟೆ ಫೇಸ್‌ಬುಕ್‌ನಲ್ಲಿ “ಫೀಲಿಂಗ್ ಹ್ಯಾಪಿ ವಿತ್ ಫ್ಯಾಮಿಲಿ’ ಎಂದು ಅತ್ತೆ, ಮಾವ, ನಾದಿನಿ, ಗಂಡ, ಮಕ್ಕಳ ಜತೆ ಫೋಟೋ ಹಾಕಿದ್ದಳು. ಅದಕ್ಕೆ ನೂರಾರು ಲೈಕ್ಸ್, ಒಂದಷ್ಟು ಕಮೆಂಟ್‌ಗಳು ಬಂದಿದ್ದವು. ಇವಳು ಎಲ್ಲರಿಗೂ “ಥ್ಯಾಂಕ್ಯೂ ಥ್ಯಾಂಕ್ಯೂ’ ಎಂದು ಪ್ರತಿಕ್ರಿಯೆ ನೀಡಿದ್ದಳು. ನನಗಾಗ ಇವಳೆಷ್ಟು ಸುಖೀ ದೇವರೆ’ ನನ್ನದೋ ಗಡಿಯಾರದಂತೆ ಒಂದು ನಿಮಿಷವು ಪುರುಸೊತ್ತು ಇಲ್ಲದ ಕೆಲಸ. ಬೆಳಿಗ್ಗೆ ಏಳು, ಕಸ-ಮುಸುರೆ ತಿಕ್ಕು, ಗಂಡ, ಮಕ್ಕಳ ದಿನನಿತ್ಯದ ವಸ್ತುಗಳನ್ನು ರೆಡಿ ಮಾಡು, ತಿಂಡಿ-ತೀರ್ಥಗಳ ಸಮಾರಾಧನೆ, ಕೊನೆಗೆ ಉಳಿದಿದ್ದನ್ನು ತನ್ನ ಹೊಟ್ಟೆಗೆ ಹಾಕಿಕೊಂಡು ಮುಖಕ್ಕೊಂದಿಷ್ಟು ಪೌಡರ್, ತುಟಿಗೊಂದಿಷ್ಟು ಲಿಪ್‌ಸ್ಟಿಕ್ ಮೆತ್ತಿಕೊಂಡು, ಬಿಗ್‌ಬಜಾರ್‌ನ ಸೇಲ್‌ನಲ್ಲಿ ಕೊಂಡ ಟಾಪ್‌ಗೆ ಕಪ್ಪು ಲೆಗ್ಗಿನ್ಸ್ ತೊಟ್ಟು, ಕೊತ್ತಂಬರಿಸೊಪ್ಪಿನಂತಹ ಕೂದಲನ್ನು ಗಾಳಿಗೆ ಹಾರಿಸಿಕೊಂಡು ನಡೆ ಆಫೀಸ್‌ಗೆ ಅನ್ನುವುದು!
ಇನ್ನು ಆಫೀಸ್‌ನಲ್ಲಿ ಕಂಪ್ಯೂಟರ್‌ಗೆ ಕಣ್ಣುನೆಟ್ಟು, ಕೀಲಿಮಣೆಗೆ ಕೈಕೊಟ್ಟು ಕುಳಿತರೂ ತಲೆಯಲ್ಲಿ ಒಂದಷ್ಟು ಯೋಚನೆಗಳು ಯರ್ರಾಬಿರ್ರಿ ಹರಿದಾಡುತ್ತವೆ. ಗ್ಯಾಸ್ ಆಫ್ ಮಾಡಿದ್ದೇನಾ? ಹಾಲು ಫ್ರಿಡ್ಜ್ನಲ್ಲಿ ಇಟ್ಟಿದ್ದೇನಾ? ತೆಂಗಿನಕಾಯಿ ಇದೆಯಾ, ಇಲ್ವಾ? ಎಂಬಿತ್ಯಾದಿಗಳ ಮಧ್ಯೆ ಕಳೆದುಹೋಗುತ್ತಿರುವಾಗ, “”ಆಯೆ¤àನ್ರಿ ಕೆಲಸ, ಯಾಕ್ರಿ ಎರಡು ಕಡೆ ಏಗೋದಕ್ಕೆ ಆಗದೇ ಒದ್ದಾಡುತ್ತೀರಿ, ಸುಮ್ನೆ ಗಂಡ-ಮಕ್ಕಳ ಯೋಗಕ್ಷೇಮ ನೋಡಿಕೊಂಡು ಮನೆಯಲ್ಲಿ ಇರಬಾರದಾ?” ಎಂಬ ಬಾಸ್‌ನ ಕೊಂಕುನುಡಿಗೆ ತುಟಿಯಂಚಿನಲ್ಲಿಯೇ ಅಸಮಾಧಾನದ ನಗೆ ನಕ್ಕು ಬಿಡುತ್ತಿದ್ದೆ. ಎಲ್ಲವನ್ನೂ ಕೇಳಿಸಿಕೊಂಡು, ಸಹಿಸಿಕೊಂಡು ಆಗಾಗ ಎದೆಯ ಭಾರ ಕಡಿಮೆ ಮಾಡಿಕೊಳ್ಳುವುದಕ್ಕೆ ಫೇಸ್‌ಬುಕ್‌ನಲ್ಲಿ ಏನೋ ಒಂದು ಗೀಚಿ ಮನಸ್ಸನ್ನು ಖುಷಿಪಡಿಸಿಕೊಳ್ಳುವುದೇ ದಿನಚರಿಯಾಗಿದೆ.
ಇಲ್ಲಿ ಕೇವಲ ಬದಲಾವಣೆಗೆ ತೆರೆದುಕೊಳ್ಳುವುದಕ್ಕಾಗಿ ಹೆಣ್ಣು ಕೆಲಸಕ್ಕೆ ಹೋಗುತ್ತಾಳೆ ಎಂಬುದು ಸುಳ್ಳು ಎನ್ನಬಹುದೇನೋ. ಕೆಲವರು ಮನೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಗಂಡನೊಬ್ಬನೇ ದುಡಿದರೆ ಸಂಸಾರದ ಬಂಡಿ ಸಾಗುವುದಿಲ್ಲ ಎಂದು ಹೆಣ್ಣು ದುಡಿಯುವ ಜವಾಬ್ದಾರಿ ಹೊರುತ್ತಾರೆ. ಮೊಬೈಲ್ ಕರೆನ್ಸಿಗೋ, ಅಕ್ಷಯ ತೃತೀಯ ದಿನದಂದು ಮಗಳಿಗೊಂದು ಪುಟ್ಟ ಕಿವಿಯೋಲೆ, ಮಗನ ಹುಟ್ಟುಹಬ್ಬಕ್ಕೆ ಅವನಿಗೊಂದು ಸೈಕಲ್ ಖರೀದಿ ಮಾಡುವಷ್ಟದಾರೂ ತಾನು ಸ್ವಾವಲಂಬಿಯಾಗಬೇಕು, ಎಲ್ಲವನ್ನೂ ಗಂಡನ ಮುಂದೆ ಕೇಳೊದಕ್ಕೆ ಆಗುವುದಿಲ್ಲ ಎಂಬ ಭಾವವೊಂದು ಹೆಂಗಳೆಯರ ಮನದಂಗಳದಲ್ಲಿ ಸುಳಿದಾಡುತ್ತಿರುತ್ತದೆ. ಹೀಗಾಗಿ ಸ್ವಲ್ಪ ಕಷ್ಟವಾದರೂ ಮನೆ-ಆಫೀಸ್ ಎರಡೂ ಕಡೆ ಕೆಲಸವನ್ನು ನಿಭಾಯಿಸುತ್ತಾರೆ.
ಕೆಲಸಕ್ಕೆ ಹೋಗುವ ಮಹಿಳೆಯರದ್ದು ಈ ಪರಿಯಾದರೆ ಹೋಗದೇ ಮನೆಯಲ್ಲಿದ್ದು ಮನಸ್ಸಿನೊಳಗೆ ಗುದ್ದಾಡುವವರದ್ದು ಇನ್ನೊಂದು ಪರಿ. “ಯಾಕಾದರೂ ಮನೆಯಲ್ಲಿ ಕುಳಿತುಕೊಂಡೆವು, ಈ ಗಂಡ-ಮಕ್ಕಳು, ಅತ್ತೆ ಮಾವ, ಮನೆಕೆಲಸದಿಂದ ಒಂದಷ್ಟು ಹೊತ್ತು ದೂರ ಇದ್ದು ಸಹೋದ್ಯೋಗಿಗಳ ಜತೆ ಬೆರೆತು ನಾವು ನಾವಾಗಿರಬೇಕು’ ಎಂಬ ತುಡಿತ. ನನ್ನ ಗೆಳತಿಗಾಗಿದ್ದು ಇದೇ ಸ್ಥಿತಿ. ಉದ್ಯೋಗ ಸಿಕ್ಕಿ ಒಂದೆರಡು ವರ್ಷದಲ್ಲಿ ಮದುವೆ, ಆಮೇಲೆ ಮಕ್ಕಳು. ಈಗ ಮತ್ತೆ ಬದಲಾವಣೆಗೆ ಒಡ್ಡಿಕೊಳ್ಳುವ ಹಪಾಹಪಿ. ಉದ್ಯೋಗ ಮಾಡುತ್ತಿರುವಾಗ ಯಾಕಪ್ಪಾ ಈ ಜೀವನ, ಮದುವೆ ಆಗಿ ಗಂಡ, ಮಗುವನ್ನು ನೋಡಿಕೊಂಡು ಆರಾಮಾಗಿ ಇರೋಣ ಅನಿಸುತ್ತೆ. ಆ ಜೀವನಕ್ಕೆ ಒಗ್ಗಿಕೊಂಡಾಗ ಮತ್ತೆ ಉದ್ಯೋಗದ ಕಡೆಗೆ ಮನಸ್ಸು ವಾಲುತ್ತದೆ. ಒಟ್ಟಾರೆ ಇಲ್ಲಿರಲಾರೆ ಅಲ್ಲಿ ಹೋಗಲಾರೆ ಎಂಬಂಥ ಸ್ಥಿತಿ!
ಎದುರಿಸುವ ಬಗೆ ಎಂತು?
ಮಗುವಿದೆ ಅಥವಾ ಆಫೀಸ್‌ನ ಕಿರಿಕಿರಿ ಬೇಡ ಎನ್ನುವವರು ಮನೆಯಲ್ಲಿಯೇ ಕುಳಿತು ಮಾಡುವಂತಹ ಒಂದಷ್ಟು ಆದಾಯ ಗಳಿಸುವ ಕೆಲಸವನ್ನು ನೆಚ್ಚಿಕೊಳ್ಳಬಹುದು. ಬರವಣಿಗೆಯ ಮೇಲೆ ಪ್ರೀತಿ ಇರುವವರು ಕ್ರಿಯಾತ್ಮಕ ಬರವಣಿಗೆಗೆ ಅವಕಾಶ ನೀಡುವ ಪತ್ರಿಕೆಗಳಿಗೆ ಒಂದಷ್ಟು ಲೇಖನಗಳನ್ನು ಬರೆಯಬಹುದು, ಅನುವಾದ ಮಾಡುವವರಿಗೂ ಈಗ ಸಾಕಷ್ಟು ಅವಕಾಶಗಳಿವೆ. ಮನೆಯಲ್ಲಿಯೇ ಕುಳಿತು ಸೀರೆಗಳಿಗೆ ಕುಚ್ಚು ಹಾಕುವುದು, ರೇಷ್ಮೆ ದಾರ, ಟೆರ್ರಾಕೋಟಾಗಳನ್ನು ಉಪಯೋಗಿಸಿಕೊಂಡು ಕಿವಿಯೋಲೆ, ಸರದಂತಹ ಆಭರಣಗಳನ್ನು ಮಾಡಬಹುದು. ಮನೆಯಲ್ಲಿಯೇ ಸೋಪ್, ಚಾಕೋಲೇಟ್, ಕೇಕ್‌ಗಳನ್ನು ತಯಾರು ಮಾಡಿ ಮಾರಾಟಮಾಡಬಹುದು. ಇದಕ್ಕೆಲ್ಲಾ ದೊಡ್ಡ ಮಟ್ಟಿನ ಬಂಡವಾಳ ಬೇಕೆಂದೇನಿಲ್ಲ. ಸ್ವಲ್ಪ ಸಮಯ, ಮಾಡುವ ಆಸಕ್ತಿ ಇದ್ದರೆ ಸಾಕು. ಇಂದು ಫೇಸ್‌ಬುಕ್, ವಾಟ್ಸಾಪ್ ತಿಳಿಯದವರಿಲ್ಲ. ಇದರಲ್ಲಿ ನೀವು ತಯಾರಿಸಿದ ಆಭರಣ, ತಿನಿಸುಗಳ ಫೊಟೋವನ್ನು ಸ್ನೇಹಿತರು, ಇತರರೊಂದಿಗೆ ಹಂಚಿಕೊಂಡರೆ ಎಲ್ಲೋ ಒಂದು ಕಡೆ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ.
ಪವಿತ್ರಾ ಶೆಟ್ಟಿ