Advertisement

ಸೋಂಕಿತರ ಮೇಲೆ ನಿಗಾ ಇಡುವ “ಆರೋಗ್ಯ ಸೇತು ಆ್ಯಪ್”ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ?

09:06 AM Apr 15, 2020 | Mithun PG |

ವಿಶ್ವದೆಲ್ಲೆಡೆ ಕೋವಿಡ್-19 ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಭಾರತದಲ್ಲಿ ಕೂಡ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದ್ದು ಸೋಂಕಿತರ ಮೇಲೆ ನಿಗಾ ಇಡಲು ಆರೋಗ್ಯ ಸೇತು ಎಂಬ ಆ್ಯಪ್ ಹೊರತಂದಿದೆ.

Advertisement

ಏನಿದು ಆರೋಗ್ಯ ಸೇತು ? ಹೇಗೆ ಕಾರ್ಯನಿರ್ವಹಿಸುತ್ತದೆ ?

ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ರಿಯಲ್ ಟೈಂ ಮಾಹಿತಿ ನೀಡಲಿದೆ. ದಕ್ಷಿಣ ಕೊರಿಯಾ ಹಾಗೂ ಸಿಂಗಾಪುರದಲ್ಲಿ ಕೂಡಾ ಇದೇ ರೀತಿ ಟ್ರ್ಯಾಕಿಂಗ್ ಅಪ್ಲಿಕೇಷನ್ ಬಳಸಿ ಕೋವಿಡ್ 19 ಸೋಂಕು ಹರಡದಂತೆ ನಿಯಂತ್ರಿಸಲಾಯಿತು ಎಂಬ ಅಂಕಿ ಅಂಶದ ಆಧಾರದ ಮೇಲೆ ಆರೋಗ್ಯ ಸೇತು ಆ್ಯಪ್ ರೂಪಿಸಲಾಗಿದೆ.

ಕೋವಿಡ್-19 ವೈರಸ್‌ ಸೋಂಕಿತರು ಹಾಗೂ ಶಂಕಿತರ ಚಲನವಲನವನ್ನು ಜಿಪಿಎಸ್‌ ತಂತ್ರಜ್ಞಾನ ಸಹಾಯದಿಂದ ಸೆರೆಹಿಡಿಯಲಾಗುತ್ತದೆ. ಇದರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್‌ ಸಹಿತ 11 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಕೋವಿಡ್ 19 ಸೋಂಕು ಹರಡುವ ಬಗೆ, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಿವೆ. ಸ್ವಯಂ ಮೌಲ್ಯ ಮಾಪನ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮೊಬೈಲ್‌ ಪರದೆಯ ಮೇಲೆ ಮೂಡಲಿವೆ. ಅದಕ್ಕೆ ಉತ್ತರಿಸಿದ ಬಳಿಕ ಫಲಿತಾಂಶ ನೀಡಲಾಗುತ್ತದೆ.

ರೋಗಿಗಳ ಚಲನವಲನದ  ಮೇಲೆ ನಿಗಾ

Advertisement

ಈ ಆ‍್ಯಪ್ ಮೂಲಕ ಕೊವಿಡ್-19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮ್ ನಲ್ಲಿ ಟ್ರ್ಯಾಕ್ ಮಾಡಬಹುದು. ಕೋವಿಡ್-19 ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಗುರುತಿಸಬಹುದು. ಒಂದು ವೇಳೆ ಸೋಂಕಿತ ವ್ಯಕ್ತಿಯೇನಾದರೂ ಆರೋಗ್ಯವಂತರ ಬಳಿಗೆ (1 ಮೀಟರ್ ಅಂತರ) ಸುಳಿದರೆ ಅಲರ್ಟ್ ನೀಡಲಿದೆ. ಆ ಮೂಲಕ ಮೊಬೈಲ್‌ನ ಮೂಲಕವೇ ಜನಸಾಮಾನ್ಯರು ತಮ್ಮ ಸುತ್ತಲಿನ ಸೋಂಕಿತರು ಹಾಗೂ ಸೋಂಕು ವಲಯಗಳನ್ನು ಗುರುತಿಸಬಹುದಾಗಿದೆ.

ಆ್ಯಪ್‌ನಲ್ಲಿ ಕೊರೋನಾ ವೈರಸ್​​ಗೆ ಸಂಬಂಧಿಸಿದ ರೋಗ ಲಕ್ಷಣಗಳನ್ನು ದಾಖಲಿಸಬಹುದಾಗಿದೆ. ನಾವು ಈ ಮಾಹಿತಿ ದಾಖಲಿಸಿದ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ರವಾನೆಯಾಗಲಿದೆ. ಇದು ಕೊರೋನಾ ವೈರಸ್​ ಬಂದ ರೋಗಿ ಇರುವ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡುವಂಥ ವ್ಯವಸ್ಥೆ ಈ ಆ್ಯಪ್​​ ಹೊಂದಿದೆ.

ಬಳಕೆ ಹೇಗೆ ?

ಗೂಗಲ್ ಅಥವಾ ಆ್ಯಪಲ್ ಪ್ಲೇ ಸ್ಟೋರಿನಲ್ಲಿ NIC eGov Mobile AppsTools ಅಭಿವೃದ್ಧಿಪಡಿಸಿರುವ Aarogya Setu ಆಪ್ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್‌ ಮಾಡಿಕೊಂಡು ಬಳಿಕ ಬ್ಲೂಟೂತ್‌ ಮತ್ತು ಲೊಕೇಶನ್‌ ಆನ್‌ ಮಾಡಿರಬೇಕು. ಅದರಲ್ಲಿ ಸೆಟ್‌ ಲೊಕೇಶನ್‌ ಎಂದಿರುವುದನ್ನು ALWAYS ಎಂದು ಕೊಡಬೇಕು.

ಕೋವಿಡ್ ವೈರಸ್ ಬಗ್ಗೆ ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ, ಈ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ‘ಆರೋಗ್ಯ ಸೇತು’ ಮೊಬೈಲ್‌ ಅಪ್ಲಿಕೇಷನ್‌ ಬಗ್ಗೆ ವಿಶ್ವಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next