ಎಸ್‌ಎಸ್‌ಎಲ್‌ಸಿಯಲ್ಲಿ ಜಸ್ಟ್ ಪಾಸ್ ಆದಾಗ, ಮುಂದೆ ನಾನು ಏನಾಗಬೇಕು ಅಂತ ಗುರಿ ಇಟ್ಟುಕೊಳ್ಳಲಾಗದಷ್ಟು ಒದ್ದಾಡಿ ಬಿಟ್ಟಿದ್ದೆ. ಹಿಂದೆ ಇದ್ದ ಗುರಿಗಳೆಲ್ಲವೂ ಕಂಗಾಲಾಗಿ ಹೋಗಿದ್ದವು. ಜೊತೆಗಿದ್ದ ಗೆಳೆಯರೆಲ್ಲ ಫಸ್ಟ್, ಸೆಕೆಂಡ್ ಕ್ಲಾಸ್‌ಗಳಲ್ಲಿ ಪಾಸಾಗಿದ್ದರೆ, ನನ್ನದು ಮಾತ್ರ ಜಸ್ಟ್ ಪಾಸ್. ಅಪ್ಪ-ಅಮ್ಮನಿಗೆ ನನ್ನ ವಿದ್ಯಾಭ್ಯಾಸದ ಬಗ್ಗೆ ತೀರಾ ಮೋಹವೇನು ಇರಲಿಲ್ಲ. ಏಕೆಂದರೆ, ಅವರೂ ಅಷ್ಟಾಗಿ ಓದಿರಲಿಲ್ಲ. ಮೂರು ಜನ ಮಕ್ಕಳಲ್ಲಿ ಕೊನೆಯವನು ನಾನು. ಪ್ರೀತಿ ಇತ್ತು. ಹೀಗಾಗಿ, ಅಪ್ಪನ ರೀತಿ ನಾನೂ ಗಾರೆ ಕೆಲಸಕ್ಕೆ ಸೇರಬಹುದು ಅಂತ ಅಂದುಕೊಂಡಿದ್ದೆ. ಅಪ್ಪ ಬರೀ ಗಾರೆ ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಜೊತೆಗೆ, ಮೇಸ್ತ್ರಿ ಗಿರಿಯೂ ಇತ್ತು. ಒಂದಷ್ಟು ಲಾಭದ ಇಡಗಂಟು ಮಾಡಿ ಬಡ್ಡಿಗೆ ಬೇರೆ ಕೊಡುತ್ತಿದ್ದರು. ಅದನ್ನು ವಸೂಲಿ ಮಾಡಲು ಆಗದೇ ಇದ್ದಾಗ ನಾನು ಹೋಗುತ್ತಿದ್ದೆ. ಇದೇ ನನ್ನ ಮೊದಲ ಪ್ರೊಫೆಷನ್. ಅಪ್ಪನಿಗೆ ಪುಸಲಾಯಿಸಿ, ಸುಳ್ಳು ಹೇಳಿ ಸಾಲ ಪಡೆದವರು ಮತ್ತೆ ಹಿಂತಿರುಗಿ ಕೊಡಲು ಸತಾಯಿಸುತ್ತಿದ್ದರು. ಬೆದರಿಕೆ ಹಾಕುತ್ತಿದ್ದರು. ಅಂಥವರಿಂದ ನಾನು ವಸೂಲಿ ಮಾಡಬೇಕಿತ್ತು. ಆಗ ನನಗೆ ಒಂದಷ್ಟು ದುಡ್ಡು ಕೊಡೋರು. ಈ ಮಧ್ಯೆ ಅಣ್ಣನಿಗೆ ಕಂಡಕ್ಟರ್ ಕೆಲಸ ಬೇರೆ ಸಿಕ್ಕಿತು. ಅವನು, ನಿನಗೂ ಕೆಲಸ ಕೊಡಿಸುತ್ತೇನೆ ಅಂತ ಬೇರೆ ಹೇಳಿದ್ದ. ಆರಂಭದಲ್ಲಿ ನಾನೂ ಕಂಡಕ್ಟರ್ ಆಗುವ ಎರಡನೇ ಕನಸನ್ನು ಕಂಡಿದ್ದು ಸುಳ್ಳಲ್ಲ. ಆದರೆ, ಅಣ್ಣ, ಮೂರು ದಿನಕ್ಕೆ ಒಂದು ಭಾರಿ, ನಿದ್ದೆ ಗೆಟ್ಟು ಮನೆಗೆ ಬರುತ್ತಿದ್ದದ್ದನ್ನು ನೋಡಿದಾಗ, ಯಾಕೋ ಆ ಕೆಲಸದ ಮೇಲೆ ಇಟ್ಟು ಕೊಂಡಿದ್ದ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು.
ಆ ಹೊತ್ತಿಗೆ ನಮ್ಮೂರಲ್ಲಿ ಖಾಸಗಿ ಫೈನಾನ್ಸ್‌ಗಳು ಚಾಲೂ ಆಗಿದ್ದವು. ದುಡ್ಡು ಇರುವ ಶ್ರೀಮಂತರು ಒಂದಷ್ಟು ಕಪ್ಪು ಹಣ ತಂದು ಇಲ್ಲಿ ಸುರಿದು, ಬ್ಯಾಂಕಿನ ರೀತಿಯೇ ಅಡಮಾನಗಳನ್ನು ಇಟ್ಟುಕೊಂಡು ಸಾಲ ಕೊಡುತ್ತಿದ್ದರು. ಆದರೆ, ಬಡ್ಡಿ ಮಾತ್ರ ತುಸು ಜಾಸ್ತಿಯೇ ಇತ್ತು. ಇದು ಕಣ್ಣಿಗೆ ಬಿದ್ದದ್ದೇ. ಸಾಲದ ವಸೂಲಿಯಲ್ಲಿ ಪಂಟರ್ ಆಗಿದ್ದ ನನಗೆ ಪ್ರತ್ಯೇಕ ಫೈನಾನ್ಸ್ ಮಾಡುವ ಹುಕಿ ಶುರುವಾಗಿತ್ತು. ಅಪ್ಪನ ಆರೋಗ್ಯ ಕ್ಷೀಣಿಸುತ್ತಿದ್ದರಿಂದ ಅವರ ಬಡ್ಡಿ ವ್ಯವಹಾರಗಳನ್ನು ಫುಲ್ ಟೈಂ ನಾನೇ ನೋಡಿಕೊಳ್ಳುತ್ತಿದ್ದೆ. ತರಕಾರಿ ಮಾರುವವರಿಗೆ, ಲೈನ್‌ಮ್ಯಾನ್‌ಗಳಿಗೆ, ರಿಯಲ್‌ಎಸ್ಟೇಟ್ ಬ್ರೋಕರ್‌ಗಳಂಥ ಒಂದಷ್ಟು ಮಂದಿಯಿಂದ ಚೆಕ್ ತೆಗೆದುಗೊಂಡು ಸಾಲ ಕೊಡುತ್ತಲಿದ್ದೆ. ಹೀಗೆ, ಚೂರು ಚೂರಾಗಿ ಸಾಲ ಕೊಡುವುದಕ್ಕಿಂತ, ಎಲ್ಲ ಸಾಲಕ್ಕೂ ಸಾಂಸ್ಥಿಕ ರೂಪವಾಗಿ ಫೈನಾನ್ಸ್ ಶುರು ಮಾಡೋಣ ಅಂತಲೇ ತೀರ್ಮಾನ ಮಾಡಿದ್ದೆ. ಆ ಹೊತ್ತಿಗೆ, ನಮ್ಮ ತಂದೆ ತೀರಿಕೊಂಡರು. ಪಿಯುಸಿಯಲ್ಲಿ ಹಾಗೂ ಹೀಗೂ ಮಾಡಿ ಸೆಕೆಂಡ್ ಕ್ಲಾಸ್‌ಲ್ಲಿ ಪಾಸಾಗಿದ್ದೆ. ಮೊದಲ ವರ್ಷದ ಡಿಗ್ರಿ ತರಗತಿಗಳಿಗೆ ಹೋಗುತ್ತಿದ್ದೆ. ಇಂಥ ಹೊತ್ತಲ್ಲಿ ಅಪ್ಪನನ್ನು ಕಳೆದು ಕೊಂಡುದರ ಪರಿಣಾಮ ಮನೆಯ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ಅಪ್ಪ ಕಾಂಟ್ರಾಕ್ಟ್ ಮಾಡಿಸುವಾಗ ಗಮನಿಸಿದ್ದ ಅನುಭವದಲ್ಲೇ, ಒಂದಷ್ಟು ಹಣ ಸೇರಿಸಿ ಮನೆಯ ಮುಂದೆ ಅಂಗಡಿ ಕಟ್ಟಿದೆ. ಬಾಡಿಗೆ ಬರಲು ಶುರುವಾಯಿತು.
ನನ್ನ ಓದು, ಮನೆಯ ನಿಭಾವಣೆ ಎಲ್ಲವನ್ನು ಗಮನಿಸಿದಾಗ, ಇನ್ನು ನನಗೆ ಕೆಲಸ ಸಿಗುವುದಾಗಲೀ, ನಾನೇ ಕೆಲಸ ಹುಡುಕುವುದಾಗಲಿ ಅನುಮಾನ. ಹೀಗಾಗಿ, ಇರುವ ಒಂದು ದಾರಿ ಎಂದರೆ ಬಡ್ಡಿ ವ್ಯವಹಾರವನ್ನೇ ವಿಸ್ತರಿಸಿ ಫೈನಾನ್ಸ್ ರೀತಿ ನಡೆಸುವುದು ಅಂತೆಲ್ಲ ಯೋಚನೆ ಮಾಡಿದ್ದಾಯಿತು.
ಅಷ್ಟರಲ್ಲಿ, ಉದ್ಯೋಗ ವಿನಿಮಯ ಕೇಂದ್ರದಿಂದ ಒಂದು ಪತ್ರ ಬಂತು. ಅದುವೇ ಪೊಲೀಸ್ ಕಾನ್‌ಸ್ಟೆàಬಲ್ ಹುದ್ದೆಗೆ ಪರೀಕ್ಷೆ ಬರೆಯಲು. ನಾಲ್ಕು, ಐದನೇ ತರಗತಿಯಲ್ಲಿದ್ದಾಗ ಏನೇ ಆದರೂ ಜೀವನದಲ್ಲಿ ಪೊಲೀಸ್ ಆಗಬೇಕು ಅಂತ ಕನಸು ಕಂಡಿದ್ದವನು ನಾನು. ಶಾಲೆಗೆ ಹೋಗುವಾಗ ಪೊಲೀಸರು ಕಂಡಾಗ ನನಗೆ ಭಯವಾಗುತ್ತಿರಲಿಲ್ಲ. ಬದಲಿಗೆ, ಅವರು ಹೇಗೆ ಮಾತನಾಡುತ್ತಾರೆ, ಹೇಗೆ ನಡೆಯುತ್ತಾರೆ, ಅವರ ಖದರ್ ಹೇಗಿರುತ್ತೆ ಎಂದೆಲ್ಲ ಗಮನಿಸುತ್ತಿದ್ದೆ. ಕಾನ್‌ಸ್ಟೇಬಲ್ ಹುದ್ದೆಗೆ ಸಂದರ್ಶನಕ್ಕೆ ಬಂದಾಗ ಇವೆಲ್ಲ ನೆನಪಾಗಿ ಬಹಳ ಖುಷಿಯಾಯಿತು. ನಾನು ಹೇಳಿಕೊಳ್ಳುವ ಅಂಕ ಪಡೆಯದೇ ಇದ್ದರೂ, ನಮಗಾಗಿ ಇದ್ದ ರಿಸರ್ವೇಷನ್ ಕೋಟಾ ನನ್ನ ಕೈ ಹಿಡಿಯಿತು. ಕೊನೆಗೆ, ಬಳ್ಳಾರಿಯ ಒಂದೂರಿಗೆ ಕಾನಸ್ಟೇಬಲ್ ಆದೆ. ಈಗ ಹೆಚ್ಚು ಕಮ್ಮಿ 10 ವರ್ಷಪೂರೈಸಿದ್ದೇನೆ. ಬಡ್ಡಿ ವ್ಯವಾಹರವೆಲ್ಲ ನಿಂತು ಹೋಗಿದೆ. ಏನಿದ್ದರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೈಂಕರ್ಯದಲ್ಲಿ ಖುಷಿಯಿಂದ ತೊಡಗಿಕೊಂಡಿದ್ದೇನೆ.
ಕಾನ್‌ಸ್ಟೇಬಲ್ ಶ್ರೀನಿವಾಸು, ರಾಮನಗರ