Advertisement

ಮಕ್ಕಳನ್ನು ಬೆಳೆಸುವುದು ಹೀಗೆ…..

06:00 AM Nov 29, 2017 | Harsha Rao |

ಪ್ರತಿ ಮಗುವಿನ ಬುದ್ಧಿಶಕ್ತಿ, ಗ್ರಹಿಕಾ ಶಕ್ತಿ ಇನ್ನೊಂದು ಮಗುವಿಗಿಂತ ಭಿನ್ನವಾಗಿರುತ್ತದೆ. ಮೆದುಳಿನ ಸಾಮರ್ಥ್ಯದ ವೃದ್ಧಿ ಒಂದೇ ದಿನದಲ್ಲಿ ಆಗುವಂಥ ಕೆಲಸವಲ್ಲ. ಪಾಲಕರು ಮಕ್ಕಳ ಮೆದುಳಿನ ಬೆಳವಣಿಗೆಗೆ ಕೆಲವು ವ್ಯಾಯಾಮಗಳನ್ನು ಮಾಡಿಸಬೇಕು. ಆಗಮಾತ್ರ ಹಂತ ಹಂತವಾಗಿ ಬದಲಾವಣೆ ತರಲು ಸಾಧ್ಯ.                                                       
 1.ದೀರ್ಘ‌ ಉಸಿರಾಟ
ಉಸಿರಾಟ ಕೂಡ ವ್ಯಾಯಾಮವೇ. ಅದನ್ನು ಪಾಲಕರು ಮಕ್ಕಳಿಗೆ ಕಲಿಸಿಕೊಡಬೇಕು. ಅಂದರೆ ಮೂಗಿನಿಂದ ನಿಧಾನವಾಗಿ ಉಸಿರನ್ನು ಒಳಗೆಳೆದುಕೊಂಡು ನಂತರ ಮೆಲ್ಲನೆ ಉಸಿರನ್ನು ಹೊರಬಿಡಲು ಹೇಳಿಕೊಡಬೇಕು. ಇದು ಮಕ್ಕಳ ಮಾನಸಿಕ ಆಯಾಸವನ್ನು ಕಡಿಮೆಗೊಳಿಸುತ್ತದೆ. ಇಂಥ ಸರಳ ಅಭ್ಯಾಸದಿಂದ ಮಕ್ಕಳ ಏಕಾಗ್ರತೆಯೂ ಹೆಚ್ಚುತ್ತದೆ. 

Advertisement

2. ಆಟ ಆಡುವುದು
   ಬರೀ ಓದು, ಓದು ಎಂದು ಮಕ್ಕಳನ್ನು ಪೀಡಿಸುತ್ತಿರಬೇಡಿ. ಮಗು ಶೈಕ್ಷಣಿಕವಾಗಿ ಬೆಳೆಯಲು ಪಠ್ಯೇತರ ಚಟುವಟಿಕೆಗಳೂ ಸಹಕಾರಿ ಎಂಬುದು ನೆನಪಿರಲಿ. ಮಗುವನ್ನು ಹೊರಾಂಗಣ ಆಟಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಸಮಯವಿದ್ದರೆ ಮಕ್ಕಳ ಜೊತೆ ನೀವೂ ಮಗುವಾಗಿ ಆಟವಾಡಿ. ಅದರಿಂದ ಬಾಂಧವ್ಯ ವೃದ್ಧಿಯಾಗುವುದಷ್ಟೇ ಅಲ್ಲದೆ, ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯೂ ಆಗುತ್ತದೆ.

 3. ಮೆದುಳಿನ ವ್ಯಾಯಾಮ
   ಮಕ್ಕಳು ಚಿಕ್ಕವರಿದ್ದಾಗಲೇ ತಮ್ಮ ಹೆಸರಿನ ಕಾಗುಣಿತ ಹೇಳುವುದು, ಮನೆಯ ಎಲ್ಲ ಸದಸ್ಯರ ಹೆಸರುಗಳನ್ನು ಹೇಳಿಸುವುದು, ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಎಣಿಸಲು ಹೇಳುವುದು, ಮನೆಯ ವಿಳಾಸವನ್ನು ಹೇಳಿಕೊಡುವುದು, ಮೊಬೈಲ್ ಸಂಖ್ಯೆಗಳನ್ನು ನೆನಪಿಡುವಂತೆ ಮಾಡುವುದು…ಹೀಗೆ ಮೆದುಳಿಗೆ ವ್ಯಾಯಾಮವಾಗುವಂಥ ಚಟುವಟಿಕೆಗಳನ್ನು ಮಾಡಿಸಬೇಕು. ಮಕ್ಕಳ ಕಲ್ಪನಾಶಕ್ತಿ ವೃದ್ಧಿಸುವ, ಕುತೂಹಲ ಮೂಡಿಸುವ ಕಥೆಗಳನ್ನೂ ಹೇಳಿಕೊಟ್ಟರೆ ಇನ್ನೂ ಒಳ್ಳೆಯದು. 

4. ದೈಹಿಕ ವ್ಯಾಯಾಮ
  ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ವ್ಯಾಯಾಮದ ಮಹತ್ವವನ್ನು ತಿಳಿಸಬೇಕು. ಮುಂಜಾನೆ ಸರಳವಾದ ದೈಹಿಕ ವ್ಯಾಯಾಮಗಳನ್ನು ಮಾಡಿಸಬೇಕು. ಉದಾ: ಬಲಗೈಯನ್ನು ಎಡ ಮೊಣಕಾಲಿಗೆ, ಎಡಕೈಯನ್ನು ಬಲ ಮೊಣಕಾಲಿಗೆ ಬಗ್ಗಿ ಮುಟ್ಟುವುದು ಮತ್ತೆ ಮೇಲೇಳುವುದು..ಈ ರೀತಿ ಕನಿಷ್ಠ 5-10 ನಿಮಿಷದವರೆಗೆ ಮಾಡುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ವಾರದಲ್ಲಿ ಕನಿಷ್ಠ ಎರಡು ದಿನವಾದರೂ ಮಕ್ಕಳನ್ನು ಹತ್ತಿರದ ಪಾರ್ಕ್‌ಗೆ ಕರೆದೊಯ್ಯಿರಿ. ಇಂತಹ ಚಟುವಟಿಕೆಗಳಿಂದ ಮೆದುಳಿನ ಜೀವಕೋಶಗಳು ಗಣನೀಯವಾಗಿ ಬೆಳೆದು ರಕ್ತಸಂಚಲನ ಸರಾಗವಾಗಿ ಬುದ್ಧಿಶಕ್ತಿ ಬೆಳೆಯುತ್ತದೆ.

-ಬಿ.ಎಲ್.ಶಿವರಾಜ್ ದೇವದುರ್ಗ

Advertisement
Advertisement

Udayavani is now on Telegram. Click here to join our channel and stay updated with the latest news.

Next