Advertisement

ಕಾರಿನ ಕ್ಲಚ್‌ ಕೇಬಲ್‌ ಹಾಕುವುದು ಹೇಗೆ?

10:35 AM Oct 11, 2019 | mahesh |

ಕಾರಿನಲ್ಲಿ ಕ್ಲಚ್‌ ಬಹುಮುಖ್ಯವಾದ ಅಂಗ. ಗಿಯರ್‌ ಹಾಕಬೇಕಾದರೆ ಕ್ಲಚ್‌ ಒತ್ತಲೇ ಬೇಕು. ಹೀಗೆ ಒತ್ತಿದಾಗ ಪೆಡಲ್‌ ಮತ್ತು ಕ್ಲಚ್‌ ಮಧ್ಯೆ ಸಂಪರ್ಕಿಸುವುದು ಕ್ಲಚ್‌ ಕೇಬಲ್‌. ಒಂದು ವೇಳೆ ಇವು ತುಂಡಾದರೆ, ಸ್ಟೀಲ್‌ ವಯರ್‌ ಹರಿದು ಹೋಗಿದ್ದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

Advertisement

ಪರೀಕ್ಷೆ ಹೇಗೆ?
ಕಾರನ್ನು ಜಾಕ್‌ ಹಾಕಿ ಎತ್ತಬೇಕು ಅಥವಾ ರ್‍ಯಾಂಪ್‌ ಮೇಲೆ ನಿಲ್ಲಿಸಬೇಕು. ಗಿಯರ್‌ ಬಾಕ್ಸ್‌ ಬದಿಯಿಂದ ಕ್ಲಚ್‌ ಕೇಬಲ್‌ ಸಂಪರ್ಕ ತಪ್ಪಿಸಿ. ಈಗ ಕ್ಲಚ್‌ ಪೆಡಲ್‌ ಅನ್ನು ತುಸು ಒತ್ತಿ. ಕೇಬಲ್‌ ಸರಾಗವಾಗಿ ಚಲಿಸುತ್ತಿದೆ ಎಂದಾದರೆ ಸಮಸ್ಯೆಯಿಲ್ಲ. ಒಂದು ವೇಳೆ ಸರಾಗವಾಗಿ ಚಲಿಸುತ್ತಿಲ್ಲ ಎಂದಾದರೆ ಒಳಭಾಗದಲ್ಲಿ ಕಡಿದಿರಬಹುದು ಅಥವಾ ಕೇಬಲ್‌ ಓರೆಕೋರೆಯಾಗಿ ಸಿಕ್ಕಿ ಹಾಕಿದಂತೆ ಇದ್ದು ಸಮಸ್ಯೆಯಾಗಿರಬಹುದು.

ಒಂದು ವೇಳೆ ಈ ಯಾವುದೇ ಸಮಸ್ಯೆ ಇಲ್ಲ ಎಂದಾದರೆ ಒಂದು ಬಾರಿ ಪೆಡಲ್‌ನಿಂದಲೂ ಕೇಬಲ್‌ ತೆಗೆದು ಮತ್ತೆ ಮರುಜೋಡಿಸಬಹುದು.

ಕೇಬಲ್‌ ಬದಲಾವಣೆ
ಆರಂಭದಲ್ಲಿ ಕೇಬಲ್‌ ಸಂಪರ್ಕವನ್ನು ಗಿಯರ್‌ಬಾಕ್ಸ್‌ ನಿಂದ ತೆಗೆಯಿರಿ. ಪೆಡಲ್‌ ಕ್ಲೆವಿಸ್‌ ಪಿನ್‌ನಿಂದ ತೆಗೆದು ಕೇಬಲ್‌ ಹೊರತೆಗೆಯಿರಿ. ನೆನಪಿಡಿ. ಕೇಬಲ್‌ ಪೆಡಲ್‌ಗೆ ಜೋಡಣೆಯಿರುವ ವೇಳೆ ವಾಶರ್‌ಗಳು, ಬೋಲ್ಟ್‌ಗಳು ಇರುತ್ತವೆ. ಇವುಗಳು ಯಾವ ಸ್ಥಾನದಲ್ಲಿ ಹೇಗಿವೆ ಎಂಬುದನ್ನು ಗಮನಿಸಿ. ಪುನರ್‌ ಜೋಡಣೆ ವೇಳೆ ಸುಲಭವಾಗುತ್ತದೆ. ಒಂದು ವೇಳೆ ಮರೆತು ಹೋಗಬಹುದು ಎಂಬ ಸಂಶಯವಿದ್ದರೆ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಇಟ್ಟುಕೊಳ್ಳಿ.

ಕೇಬಲ್‌ ಗುಣಮಟ್ಟದ್ದಾಗಿರಲಿ. ಮಾರುಕಟ್ಟೆಯಿಂದ ಕೇಬಲ್‌ ತರುವ ವೇಳೆ ನಿರ್ದಿಷ್ಟ ಉದ್ದದ ಕೇಬಲ್‌ ಎಂದೇ ಖಚಿತಪಡಿಸಿ ತನ್ನಿ. ಹೊಸ ಕೇಬಲ್‌ ಹಾಕುವ ವೇಳೆ ಜಾಗರೂಕವಾಗಿ ಹಾಕಿ ಯಾವುದೇ ಅಡೆತಡೆಗೆ ಸಿಗದೆ ಇರುವಂತೆ ಪರೀಕ್ಷಿಸಿ. ಪೆಡಲ್‌ ಲಿಂಕೇಜ್‌ಗೆ ಸಿಕ್ಕಿಸಿ, ಎಂಜಿನ್‌ ಭಾಗದಿಂದ ಬಂದ ಕೇಬಲ್‌ ಅನ್ನು ಕ್ಲಚ್‌ ಲಿವರ್‌ಗೆ ಸಿಕ್ಕಿಸಿ. ಬೇಕಾದಷ್ಟೇ ನಟ್‌ ಬಿಗಿಗೊಳಿಸಿ. ಹೆಚ್ಚು ಬಿಗಿ ಬೇಡ. ಹಾಗೆಯೇ ಕಡಿಮೆ ಬಿಗಿಯೂ ಬೇಡ. ಫ್ರೀಪ್ಲೇ ಅಡ್ಜಸ್ಟ್‌ ಮಾಡಿ ಪೆಡಲ್‌ ಒತ್ತಿ ನೋಡಿ. ಪೆಡಲ್‌ನ ಫ್ರೀ ಪ್ಲೇ 10ರಿಂದ 25 ಎಂ.ಎಂ. ಅಂತರವಿರಬೇಕು. ಈಗ ಕ್ಲಚ್‌ ಲಿವರ್‌ನಲ್ಲಿ ಸರಿಯಾಗಿ ಕುಳಿತಿದೆಯೇ ಎಂದು ಪರೀಕ್ಷಿಸಿ, ಬಳಿಕ ವಾಹನ ಒಂದು ಬಾರಿ ಚಾಲನೆ ಮಾಡಿ. ಸರಿಯಾಗಿಲ್ಲ ಎಂದಿದ್ದರೆ ಮತ್ತೆ ಅಡ್ಜಸ್ಟ್‌ ಮಾಡಿ ಸರಿಪಡಿಸಿ.

Advertisement

ಕ್ಲಚ್‌ ವಯರ್‌ ಹಾಳಾಗಿರುವುದು ಗೊತ್ತಾಗುವುದು ಹೇಗೆ?
ಕ್ಲಚ್‌ ಪೆಡಲ್‌ ಒತ್ತುವುದೇ ಕಷ್ಟ: ಕೆಲವೊಮ್ಮೆ ಕ್ಲಚ್‌ ಪೆಡಲ್‌ ಒತ್ತುವುದೇ ಕಷ್ಟವಾಗಬಹುದು. ಒಂದು ವೇಳೆ ಶಕ್ತಿ ಹಾಕಿದರೆ ಕೂಡಲೇ ತುಂಡಾಗಿ ಗಿಯರ್‌ ಹಾಕಲು ಸಾಧ್ಯವಾಗದೇ ಇರಬಹುದು.

ಕ್ಲಚ್‌ ಪೆಡಲ್‌ ನಿರ್ಜೀವ: ಕಾರಿನೊಳಗೆ ಕ್ಲಚ್‌ ಪೆಡಲ್‌ ನೆಲಕ್ಕಚ್ಚಿರಬಹುದು. ಅದನ್ನು ಎತ್ತಿದರೂ ಸರಿಯಾಗಿ ನಿಲ್ಲುತ್ತಿಲ್ಲ ಎಂದಾದರೆ ಹಾಳಾಗಿದೆ ಎಂದರ್ಥ.
ಗಿಯರ್‌ ಸ್ಲಿಪ್‌: ಕೆಲವೊಮ್ಮೆ ಕ್ಲಚ್‌ ಕೇಬಲ್‌ ಸಮಸ್ಯೆಯಿಂದಾಗಿ ಗಿಯರ್‌ ಹಾಕುವ ವೇಳೆ ಸ್ಲಿಪ್‌ ಆಗುವ ಸಮಸ್ಯೆಗಳೂ ಕಂಡುಬರಬಹುದು.

ಜರ್ಕಿಂಗ್‌: ಕ್ಲಚ್‌ ಕೇಬಲ್‌ ಹಾಳಾಗಿ ಗಿಯರ್‌ ಹಾಕುವ ವೇಳೆ ಕಾರು ಜರ್ಕ್‌ ಸಿಕ್ಕಂತೆ ಭಾಸವಾಗುವ ಸಾಧ್ಯತೆಯೂ ಇರುತ್ತದೆ.

- ಈಶ

Advertisement

Udayavani is now on Telegram. Click here to join our channel and stay updated with the latest news.

Next