ಮನೆಯಲ್ಲಿ ನಾನು, ಗಂಡ ಇಬ್ಬರೇ. ನನಗಂತೂ ನೀರು ಬಿಸಿ ಮಾಡೋದು ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ಆನ್‌ಲೈನ್ ಆರ್ಡರ್ ಎಂಬ ಬಣ್ಣದ ಗುಳ್ಳೆಯನ್ನು, ಪತಿ ಮಹಾಶಯ “ಫಟ್’ ಎಂದು ಒಡೆದುಬಿಟ್ಟರು. ಬೆಳಕಿನಿಂದ ಕತ್ತಲೆಗೆ ಬಂದ ಅನುಭವ ನನಗೆ. ಅಮ್ಮ ಬಡಿಸಿದ್ದನ್ನು ಗಡದ್ದಾಗಿ ತಿಂದುಕೊಂಡಿದ್ದವಳಿಗೆ, ತಿಂಡಿ ಮಾಡಲು ಏನೇನು ಬೇಕು ಎಂಬ ಐಡಿಯಾ ಕೂಡ ಇರಲಿಲ್ಲ.
“ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ’ ಅಂತ ಅದ್ಯಾರು ಹೇಳಿಧ್ದೋ ಗೊತ್ತಿಲ್ಲ. ಅಡುಗೆ ಮಾಡುವುದು ಅಂದ್ರೆ, ಹೇಳಿದಷ್ಟು ಸುಲಭದ ಕೆಲಸವಲ್ಲ. ಇನ್ನು, ಅಡುಗೆ ಮನೆಗೇ ಕಾಲಿಡದ ನನ್ನಂಥವರಿಗಂತೂ ಅದು ಬ್ರಹ್ಮವಿದ್ಯೆಯೇ!
ನಾನು, ಅಮ್ಮನ ಮುದ್ದಿನ ಮಗಳು. ನಾನಾಯ್ತು, ನನ್ನ ಆಫೀಸು ಕೆಲಸ ಆಯ್ತು ಅಂತ, ಅಡುಗೆ ಮನೆ ಕಡೆ ತಲೆ ಹಾಕಿ ಕೂಡ ಮಲಗದ ಮಾಡರ್ನ್ ಹುಡುಗಿ. “ಮದುವೆ ಆದ್ಮೇಲೂ ನಾನೇ ಬಂದು ಅಡುಗೆ ಮಾಡ್ಬೇಕಾಗುತ್ತೇನೋ. ಈ ಹುಡುಗಿ ಅದೇನ್ ಅಡುಗೆ ಮಾಡ್ತಾಳ್ಳೋ…’ ಅಂತೆಲ್ಲಾ ಅಮ್ಮ ಗೊಣಗಾಡಿದರೂ ಅದನ್ನು ನಾನು ಸೀರಿಯಸ್ಸಾಗಿ ತೆಗೆದುಕೊಂಡಿದ್ದೇ ಇಲ್ಲ. “ಅಡುಗೆ ಮಾಡಿಲ್ಲ ಅಂದ್ರೆ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರಾಯ್ತು ಬಿಡು’ ಅಂತ ಅಮ್ಮನ ಬಾಯಿ ಮುಚ್ಚಿಸಿಬಿಡುತ್ತಿದ್ದೆ. “ದಿನಾಲೂ ಆನ್‌ಲೈನ್‌ನಲ್ಲಿ ಊಟಕ್ಕೆ ಆರ್ಡರ್ ಮಾಡೋಕೆ ನೀನೇನು ಕುಬೇರನ ಮಗಳೇ?’ ಅಂತ ಒಳ ಮನಸ್ಸು ಪ್ರಶ್ನಿಸುತ್ತಿದ್ದರೂ, ಅಡುಗೆ ಮಾಡಲು ಕಲಿಯುವ ಮನಸ್ಸು ಮಾಡಲಿಲ್ಲ ನಾನು.
ಅಂತೂ ಇಂತೂ ಮದುವೆ ಆಗಿ, ಮಂಗಳೂರಿನಿಂದ ಬೆಂಗಳೂರಿಗೆ ಬಂದೆ. ಗಂಡ, ಮನೆ, ಊರು… ಎಲ್ಲವೂ ಹೊಸದು. ಮನೆಯಲ್ಲಿ ನಾನು, ಗಂಡ ಇಬ್ಬರೇ. ನನಗಂತೂ ನೀರು ಬಿಸಿ ಮಾಡೋದು ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ಆನ್‌ಲೈನ್ ಆರ್ಡರ್ ಎಂಬ ಬಣ್ಣದ ಗುಳ್ಳೆಯನ್ನು, ಪತಿ ಮಹಾಶಯ “ಫಟ್’ ಎಂದು ಒಡೆದುಬಿಟ್ಟರು. ಬೆಳಕಿನಿಂದ ಕತ್ತಲೆಗೆ ಬಂದ ಅನುಭವ ನನಗೆ. ಅಮ್ಮ ಬಡಿಸಿದ್ದನ್ನು ಗಡದ್ದಾಗಿ ತಿಂದುಕೊಂಡಿದ್ದವಳಿಗೆ, ತಿಂಡಿ ಮಾಡಲು ಏನೇನು ಬೇಕು ಎಂಬ ಐಡಿಯಾ ಕೂಡ ಇರಲಿಲ್ಲ.
ಅಡುಗೆ ಮನೆಯಲ್ಲಿ ನಿಂತಾಗ, ಎಲ್ಲಾ ಡಬ್ಬಗಳೂ ನನ್ನನ್ನು ನೋಡಿ ಡ್ಯಾನ್ಸ್ ಮಾಡಿದ ಹಾಗೆ ಅನ್ನಿಸತೊಡಗಿತು. ಇಂಗು ತೆಂಗು ಇದ್ದರೂ, ಅಡುಗೆ ಗೊತ್ತಿಲ್ಲದ ಮಂಗನಂತೆ ತಲೆ ತುರಿಸಿಕೊಳ್ಳುತ್ತಾ ನಿಂತಿದ್ದೆ. ಈ ಸಂಕಷ್ಟದಿಂದ ಪಾರಾಗುವುದು ಹೇಗೆ ಅಂತ ಯೋಚಿಸಿದಾಗ ನೆನಪಾಗಿದ್ದು, ಚಿಕ್ಕಮ್ಮ. ಅವರಿಗೆ ಫೋನ್ ಮಾಡಿ ಕೇಳಿದ ಮೊದಲ ಪ್ರಶ್ನೆ- “ಅನ್ನ ಹೇಗೆ ಮಾಡುವುದು?’ ಅವರಂತೂ, ತಲೆ ಚಚ್ಚಿಕೊಳ್ಳುತ್ತಲೇ, ಸೂಚನೆಗಳನ್ನು ನೀಡಿದರು. ಹಾಗೂ ಹೀಗೂ ಆಡಿಯೋ ಕಾಲ್, ವೀಡಿಯೋ ಕಾಲ್ ಮಾಡಿ, ಏನೇನು, ಎಷ್ಟೆಷ್ಟು ಹಾಕಬೇಕು, ಯಾವಾಗ ಹಾಕಬೇಕು ಎಂದು ಹತ್ತು ಸಲ ಕೇಳಿಕೊಂಡು, ಅನ್ನ-ನುಗ್ಗೇಕಾಯಿ ಪಲ್ಯ ಮಾಡಿ ಬಡಿಸುವಾಗ, ಎವರೆಸ್ಟ್‌ಗಿಂತ ಎತ್ತರದ ಶಿಖರ ಏರಿದ ಹಾಗೆ ಆಗಿತ್ತು. ಪತಿ ದೇವರು, “ಪರಾÌಗಿಲ್ಲ, ತಿನ್ನಲು ಅಡ್ಡಿ ಇಲ್ಲ’ ಎಂದು ಉಣ್ಣುತ್ತಿದ್ದರೆ, ಖುಷಿಯೋ ಖುಷಿ. ಎಲ್ಲರಿಗೂ ಕಾಲ್ ಮಾಡಿ, ನನ್ನ ಸಾಹಸವನ್ನು ಹೇಳಿದ್ದೇ ಹೇಳಿದ್ದು. ಬೆಂಗಳೂರಿಗೆ ಬಂದು ಒಂದು ತಿಂಗಳು ಚಿಕ್ಕಿಗೆ ಕಾಲ್ ಹೋಗ್ತಾನೇ ಇತ್ತು. ಈಗ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ. ಆದರೆ, ನನ್ನ ಗಂಡನ ಮೇಲೆ ಪಾಕ ಪ್ರಯೋಗ ನಡೀತಾನೇ ಇದೆ. ನನಗೆ ತಿಳಿಯುವಂತೆ ಒಂದು ಕುಕ್ ಬುಕ್ ಮಾಡಿಕೊಂಡಿದ್ದೇನೆ, ರೆಸಿಪಿ ಮರೆತು ಹೋಗ್ಬಾರ್ಧು ಅಲ್ವಾ?
-ಪ್ರಶಾಂತಿ ಶೆಟ್ಟಿ ಕೆ.