Advertisement
ಮೌಲ್ಯ ಮತ್ತು ಮಸಲ್ ಪವರ್‌ಗಳ ನಡುವಿನ ಸಂಘರ್ಷಕ್ಕೆ ದೀರ್ಘವಾದ ಇತಿಹಾಸವಿದೆ. ಅದನ್ನು ದೇವತೆಗಳ ಮತ್ತು ರಾಕ್ಷಸರ ಸಂಘರ್ಷದವರೆಗೂ ಕೊಂಡುಹೋಗಬಹುದು. ಸಾಕ್ರೆಟಿಸ್, ಏಸು ಮೊದಲಾದವರು ತಾವು ನಂಬಿದ ಮೌಲ್ಯಗಳನ್ನು ಬಿಡದೆ ಇದ್ದಾಗ ಅಧಿಕಾರ ಕೇಂದ್ರಗಳು ಅವರ ಧ್ವನಿಗಳನ್ನು ಮಸಲ್ ಪವರಿನ ಮೂಲಕ ಹತ್ತಿಕ್ಕಿದವು. ಆದರೆ ಕೊನೆಗೆ ಅವರು ನಂಬಿದ ಮೌಲ್ಯಗಳಿಗೆ ಜಯವಾಯಿತು. ಮಸಲ್ ಪವರ್‌ಗಳು ತತ್‌ಕ್ಷಣದ ವಿಜಯದಲ್ಲಿ ವಿಜೃಂಭಿಸಬಹುದು. ಆದರೆ ಅಂತಿಮ ಜಯ ಮೌಲ್ಯಗಳಿಗೆ ಎಂಬುದಕ್ಕೆ ನಮ್ಮ ಮುಂದೆ ನಡೆಯುವ ಅನೇಕ ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ.
Related Articles
Advertisement
ಎರಡನೆಯ ಮಾರ್ಗವೆಂದರೆ, ವ್ಯಕ್ತಿಯ ಬಗ್ಗೆ ಬೇರೆಯವರು ಹೇಳಿದ ಮತ್ತು ಬರೆದ ಮಾತುಗಳು ಹಾಗೂ ಬರವಣಿಗೆಗಳು. ಇದು ಕೆಲವೊಮ್ಮೆ ವ್ಯಕ್ತಿಯ ಮೇಲಿನ ದಾಕ್ಷಿಣ್ಯಕ್ಕೆ ಒಳಗಾಗಿ, ಪಡೆದ ಉಪಕಾರದ ಋಣಕ್ಕೆ ಒಳಗಾಗಿ ವ್ಯಕ್ತಿಯನ್ನು ಹೊಗಳಿರಬಹುದು. ಆತನ ಮೌಲ್ಯಗಳಲ್ಲಿ ಬೆಂಬಲಿಸಿರಬಹುದು. ಇದಲ್ಲದೆ ವ್ಯಕ್ತಿ ಹಣಕೊಟ್ಟು ಬರೆಸಬಹುದು. ಹೀಗಾಗಿ ಇದೂ ಕೂಡ ನೂರು ಶೇಕಡಾ ನಂಬಲು ಅಸಾಧ್ಯವಾಗಿರುತ್ತದೆ.
ಮೂರನೆಯ ಮಾರ್ಗ ಸತ್ಯಕ್ಕೆ ಹತ್ತಿರವಾದದ್ದು ಮತ್ತು ಹೆಚ್ಚು ಮೂರ್ತರೂಪದ್ದು. ಅದೆಂದರೆ ವ್ಯಕ್ತಿ ನಂಬಿದ ಮೌಲ್ಯಗಳು ಆತನ ಬದುಕಿನಲ್ಲಿ ಹೇಗೆ ಸಾಕಾರಗೊಂಡಿವೆ ಎಂಬುದನ್ನು ನೋಡುವುದು. ಆತ ಬದುಕಿನಲ್ಲಿ ಏನು ಮಾಡಿದ್ದಾನೆ ಅಥವಾ ಅವನು ಮಾಡಿದ ಕೆಲಸ, ಆತನು ನಂಬಿದ ಮೌಲ್ಯಗಳನ್ನು ಬಿತ್ತರಿಸುವಲ್ಲಿ ಎಷ್ಟು ಸಫಲವಾಗಿದೆ ಎಂಬುದು. ಜನರು ಇದನ್ನು ನೋಡಿ ವ್ಯಕ್ತಿಯ ಮೌಲ್ಯ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಬೇಕು. ಇಲ್ಲಿ ವ್ಯಕ್ತಿ ಮಾತನಾಡದೆ, ಆತನ ಸ್ನೇಹಿತರು, ಬಂಧುಗಳು ಮಾತನಾಡದೆ ಆತನ ಸಾಧನೆ ಮಾತನಾಡಬೇಕು. ಎಲ್ಲಾ ಟೀಕೆಗಳಿಗೂ, ವಿಮರ್ಶೆಗಳಿಗೂ ಅದುವೇ ಉತ್ತರವಾಗಬೇಕು.
ವ್ಯಕ್ತಿಯ ಚಾರಿತ್ರ ವಧೆಯನ್ನು ಬೇರೆ ಬೇರೆ ಸ್ವಾರ್ಥಗಳಿಗಾಗಿ ಮಾಡಲಾಗುತ್ತದೆ. ಇತ್ತೀಚೆಗಂತೂ ಅದಕ್ಕೊಂದು ಅನೌಪಚಾರಿಕ ರೂಪ (Format) ಸಿದ್ಧಿಸಿದೆ. ಇದಕ್ಕಾಗಿ ಖಾಸಗಿ ಟಿ.ವಿ. ಚಾನಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅದಕ್ಕೊಂದು ಚಳುವಳಿಯ ರೂಪ ಕೊಡಲು ಪ್ರಯತ್ನಿಸುತ್ತಿವೆ. ಇಂತಹ ಚಾರಿತ್ರ್ಯ ವಧೆಯ ಚಕ್ರವ್ಯೂಹದಲ್ಲಿ ಸ್ವಾಮೀಜಿಗಳು, ರಾಜಕಾರಣಿಗಳು, ಪ್ರತಿಷ್ಠಿತ ವ್ಯಕ್ತಿಗಳು, ಸಿನಿಮಾ ತಾರೆಯರು ಸಿಲುಕಿ ಪರದಾಡುವಂತಾಗಿದೆ. ಖಾಸಗಿ ಟಿ.ವಿ. ಚಾನಲ್‌ಗಳು ತಮ್ಮ ಟಿ.ಆರ್.ಪಿ.ಯನ್ನು ಇವುಗಳ ಮೂಲಕ ಹೆಚ್ಚಿಸತೊಡಗಿವೆ.
ವ್ಯಕ್ತಿ ನಿಜವಾಗಿ ಅಪರಾಧಿಯಾಗಿದ್ದರೆ ಸಮಾಜಕ್ಕೆ ಇದರಿಂದ ಪ್ರಯೋಜನವಾಗಬಹುದು. ಇದರ ಬದಲು ವ್ಯಕ್ತಿ ನಿರಪರಾಧಿಯಾಗಿದ್ದರೆ ಆತನ ಚಾರಿತ್ರ ವಧೆಯಿಂದಾದ ನಷ್ಟವನ್ನು ತುಂಬಲು ಈ ಮಾಧ್ಯಮಗಳು ಎಷ್ಟು ಸಹಕರಿಸುತ್ತವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೊಂದು ಉದಾಹರಣೆಯನ್ನು ಕೊಡಬಹುದು ಕೆಲವು ವರ್ಷಗಳ ಹಿಂದೆ ಹೈಸ್ಕೂಲ್ ಶಿಕ್ಷಕನೊಬ್ಬನ ಕಾರಣದಿಂದ ಅವನ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾದ ವಿಚಾರ ದೊಡ್ಡ ಸುದ್ದಿಯಾಯಿತು. ಮಾಧ್ಯಮಗಳು ಮುಖಪುಟದಲ್ಲಿ ಇದನ್ನು ಭಾರೀ ಸುದ್ದಿ ಮಾಡಿದವು. ಊರಿನ ಹೆಂಗಸರೆಲ್ಲ ಸೇರಿ ಸೆಗಣಿ ನೀರು ಮುಳುಗಿಸಿದ ಹಿಡಿಸೂಡಿಯಿಂದ ಆ ಶಿಕ್ಷಕನಿಗೆ ಹೊಡೆದರು. ಆದರೆ ಅನಂತರದ ವೈದ್ಯಕೀಯ ಪರೀಕ್ಷೆಯಿಂದ ಆತ ನಿರಪರಾಧಿಯೆಂದು ಗೊತ್ತಾಯಿತು. ಹುಡುಗಿಯ ಆ ಸ್ಥಿತಿಗೆ ಆಕೆಯ ಸಂಬಂಧಿಕನೇ ಕಾರಣವೆಂದು ತನಿಖೆಯಿಂದ ಗೊತ್ತಾಯಿತು. ಆ ಶಿಕ್ಷಕ ಅಪರಾಧಿಯೆಂದು ಪ್ರಚಾರ ಮಾಡಲು ತೆಗೆದುಕೊಂಡ ಉತ್ಸಾಹದ ಶೇಕಡಾ ಹತ್ತಷ್ಟನ್ನು ನಿರಪರಾಧಿಯೆಂದು ಪ್ರಚಾರ ಮಾಡಲು ತೆಗೆದುಕೊಳ್ಳಲಿಲ್ಲ. ಆತ ಕಳೆದುಕೊಂಡ ಚಾರಿತ್ರ್ಯವನ್ನು ಅನುಭವಿಸಿದ ನೋವು, ಅವಮಾನವನ್ನು ಮತ್ತೆ ಹೇಗೆ ತುಂಬಿಸುವುದು? ಕತ್ತರಿಸಿದ ಮೂಗನ್ನು ಮತ್ತೆ ಜೋಡಿಸುವುದು ಹೇಗೆ? ಹಾಗಾಗಿ ಚಾರಿತ್ರ ವಧೆ ಮಾಡುವ ಮೊದಲು ಆ ಪ್ರಕರಣವನ್ನು ಕಾನೂನಾತ್ಮಕವಾಗಿ ತನಿಖೆ ಮಾಡಿ, ಕಾನೂನಾತ್ಮಕವಾಗಿ ಶಿಕ್ಷೆಯಾಗುವಂತೆ ಜನಾಂದೋಲನಗಳು ನಡೆಯಬೇಕು. ಮಾಧ್ಯಮವಾಗಲಿ, ಸಾಮಾಜಿಕ ಜಾಲತಾಣಗಳಾಗಲಿ ತೀರ್ಪು ನೀಡುವ ಕೋರ್ಟುಗಳಾಗಬಾರದು. ಆಗ ನಮ್ಮ ನ್ಯಾಯಾಂಗದ ಬಗ್ಗೆ ಜನರಿಗೆ ಗೌರವ, ಪ್ರೀತಿ ಉಂಟಾಗುತ್ತದೆ.
ಟಿ. ಎ. ಎನ್. ಖಂಡಿಗೆ