Advertisement
ಭಾರತೀಯ ರಿಸರ್ವ್ ಬ್ಯಾಂಕ್, ಮೇ 4ರಂದು, ರೆಪೊ ಬಡ್ಡಿ ದರವನ್ನು ಶೇ. 4ರಿಂದ 40 ಬೇಸಿಸ್ ಪಾಯಿಂಟ್ ವೃದ್ಧಿಗೊಳಿಸಿ ಶೇ. 4.4ಕ್ಕೆ ಹೆಚ್ಚಿಸಿತ್ತು. ಅನಿರೀಕ್ಷಿತವಾಗಿ ಬಂದ ನಿರ್ಧಾರ ಇದಾದರೂ, ಅಮೆರಿಕದ ಕೇಂದ್ರ ಬ್ಯಾಂಕ್, ಫೆಡರಲ್ ರಿಸರ್ವ್ ಕೂಡಾ ತನ್ನ ಹಣಕಾಸು ನೀತಿಯ ಭಾಗವಾಗಿ ಏರುತ್ತಿರುವ ಹಣದುಬ್ಬರ ಸಮಸ್ಯೆಯನ್ನು ತಡೆಯಲು ಅರ್ಧ ಪ್ರತಿಶತದಷ್ಟು ಬಡ್ಡಿ ದರವನ್ನು ಹೆಚ್ಚಿಸಿರುವುದರ ಪೂರ್ವಭಾವಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ನಿರ್ಧಾರ ಕೈಗೊಂಡಿತ್ತು. ಆರ್‌ಬಿಐನ ರೆಪೋ ದರಗಳ ಬದಲಾವಣೆಯನ್ನು ವಿಶ್ಲೇಷಿಸಿದಾಗ ಕಂಡುಬರುವ ಗಮನಾರ್ಹ ಅಂಶವೆಂದರೆ, ಇತ್ತೀಚಿನ ಎರಡು ವರ್ಷದ ಅವಧಿಯಲ್ಲಿ ಜಾರಿಯಲ್ಲಿದ್ದ ರೆಪೋ ದರವೇ ಕಳೆದ ಎರಡು ದಶಕದ ಅವಧಿಯಲ್ಲಿ ಜಾರಿಯಲ್ಲಿದ್ದ ಅತ್ಯಂತ ಕಡಿಮೆ ಪ್ರಮಾಣದ ರೆಪೋ ದರ ಎಂಬುದು. ಕೊರೊನಾ ಬಂದ ಆರಂಭದ ಸಂದರ್ಭದಲ್ಲಿ ಆರ್ಥಿಕತೆ ಹದಗೆಡುವ ಹಂತದಲ್ಲಿದ್ದಾಗ ಚಾಲ್ತಿಯಲ್ಲಿದ್ದ ಶೇ.4.4ರ ರೆಪೋ ದರವನ್ನು ಶೇ.4ಕ್ಕೆ ತಗ್ಗಿಸಲಾಗಿತ್ತು. ಈಗ ಮತ್ತೆ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಅದೇ ಸ್ಥಿತಿಗೆ ಏರಿಸಲಾಗಿದೆಯಷ್ಟೇ.
Advertisement
ಸಾಮಾನ್ಯವಾಗಿ ರೆಪೋ ದರ ಬದಲಾದಾಗ ಹೊಸದಾಗಿ ಮಂಜೂರಾಗುವ ಸಾಲಗಳು ಹೇಗಿದ್ದರೂ ಹೊಸ ಬಡ್ಡಿ ದರದಲ್ಲೇ ಇಎಂಐಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಚಾಲ್ತಿಯಲ್ಲಿರುವ ಸಾಲಗಳ ಬಾಕಿ ಇರುವ ಅಸಲು ಮೊತ್ತದ ಮೇಲೆ ಪರಿಷ್ಕೃತ ಬಡ್ಡಿ ದರದ ಪರಿಣಾಮವನ್ನು ಮುಂದೆ ಪಾವತಿಗೆ ಬಾಕಿ ಇರುವ ಕಂತುಗಳಿಗೆ ಅನ್ವಯವಾಗುವಂತೆ ಹಂಚಲಾಗುತ್ತದೆ. ಇದರ ಪರಿಣಾಮ ಎಎಂಐ ಮೊತ್ತದಲ್ಲಿ ತುಸು ವೃದ್ದಿಯಾಗಿತ್ತದೆ. ತತ್ಪರಿಣಾಮ ಉಳಿತಾಯದ ಮೇಲೂ ತುಸು ಹೊಡೆತ ಬೀಳುತ್ತದೆ.
ತುಸು ಸುಲಭದಲ್ಲಿ ಉದಾಹರಣೆಯೊಡನೆ ಹೇಳುವುದಾದರೆ, ನಿಮ್ಮ ಸಾಲದ ಮೊತ್ತ ರೂಪಾಯಿ 25 ಲಕ್ಷ ಎಂದಿಟ್ಟುಕೊಳ್ಳಿ. ಶೇ.8ರ ಬಡ್ಡಿ ದರದಲ್ಲಿ ಮುಂದಿನ 15 ವರ್ಷದ ಕಂತುಗಳ ಮೇಲೆ ಕೊಡಬೇಕಾಗುವ ಇಎಂಐ 23,891 ರೂ ಆಗಿದ್ದರೆ, ಪ್ರಸ್ತುತ ರೆಪೋ ಬಡ್ಡಿ ದರ ವೃದ್ದಿಯಾದ ಪರಿಣಾಮ ಅದೇ ಸಾಲದ ಇಎಂಐ 24,472 ರೂ. ಆಗುತ್ತದೆ. ಈ ಹೆಚ್ಚುವರಿ ಪಾವತಿ ಎಲ್ಲ ವರ್ಗದ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.
ರೆಪೋ ದರ ಹೆಚ್ಚಿಸುವ ಹಂತದಲ್ಲಿ ಬ್ಯಾಂಕ್‌ಗಳು ನಿಶ್ಚಿತ ಠೇವಣಿ (ಎಫ್‌ಡಿ) ದರಗಳನ್ನು ವೃದ್ಧಿಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಇದರಿಂದ ಜನರ ಕೈಯಲ್ಲಿ ಖರ್ಚುಮಾಡಲು ಅಧಿಕವಾಗಿ ಲಭ್ಯವಿರುವ ಹಣ ಹೂಡಿಕೆಯಾಗಿ ಮತ್ತೆ ಬ್ಯಾಂಕಿಂಗ್ ವಲಯಕ್ಕೆ ಸೇರುತ್ತದೆ ಎನ್ನುವುದು ರೆಪೋ ದರ ಹೆಚ್ಚಿಸಿ ಹಣದುಬ್ಬರ ನಿಯಂತ್ರಿಸುವ ಇನ್ನೊಂದು ಮಾರ್ಗೋಪಾಯ.
ರೆಪೋ ದರದಲ್ಲಿನ ಬದಲಾವಣೆಯ ಪರಿಣಾಮವು ಎಲ್ಲ ವಲಯಗಳ ಮೇಲೆ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಉದಾಹರಣೆಗೆ, ಬಂಡವಾಳ ಸರಕುಗಳು, ಮೂಲಸೌಕರ್ಯ ಇತ್ಯಾದಿಗಳಂತಹ ಬೃಹತ್ ಕೈಗಾರಿಕ ವಲಯಗಳು ಹೆಚ್ಚಿನ ಬಂಡವಾಳವನ್ನು ಸಾಲದ ರೂಪದಲ್ಲಿ ಕ್ರೋಡೀಕರಿಸುವುದರಿಂದ ಅವು ಪೂರೈಕೆ ಮಾಡುವ ಸರಕು ಸೇವೆಗಳ ಬೆಲೆಗಳೂ ತುಟ್ಟಿಯಾಗುತ್ತವೆ. ಅದುವೇ ಮಾಹಿತಿ ತಂತ್ರಜ್ಞಾನದಂತಹ ಕಡಿಮೆ ಸಾಲ ಪಡೆಯುವ ಕ್ಷೇತ್ರದ ಮೇಲೆ ಇದು ಅಷ್ಟಾಗಿ ಪರಿಣಾಮ ಬೀರದು.
ಬಡ್ಡಿ ಹೊರೆ-ಹೇಗೆ ನಿಭಾಯಿಸುವುದು?: ಬಡ್ಡಿ ದರದ ಏರಿಕೆ ಎಲ್ಲ ವರ್ಗದ ಜನರ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಪರಿಣಾಮ ಬೀರುತ್ತದೆ. ಇದರ ಪ್ರತಿಕೂಲ ಪರಿಣಾಮವನ್ನು ತಟಸ್ಥಗೊಳಿಸಲು, ಪ್ರತೀ ವರ್ಷ ಒಂದಿಷ್ಟು ಮೊತ್ತವನ್ನು ಸಾಲದ ಅಸಲು ಮೊತ್ತದ ಪಾವತಿಗೆ ಉಪಯೋಗಿಸಬಹುದು. ನೀವು ವರ್ಷ ಹನ್ನೆರಡು ಕಂತುಗಳ ಬದಲು ಇನ್ನೂ ಒಂದು ಕಂತು ಹೆಚ್ಚಿಗೆ ಪಾವತಿಸಿ. ಸಾಲ ಪಡೆದ ಆದ್ಯ ಅವಧಿಯಲ್ಲೇ ಇದನ್ನು ರೂಢಿ ಮಾಡಿದರೆ ದೀರ್ಘಕಾಲದ ಸಾಲದ ಅವಧಿಯಲ್ಲಿ ಬಹಳಷ್ಟು ಕಂತುಗಳು ಇದರ ಪರಿಣಾಮವಾಗಿ ಉಳಿತಾಯವಾಗುತ್ತವೆ.
ಇಷ್ಟೇ ಅಲ್ಲದೆ, ಇಂದು ಬ್ಯಾಂಕಿಂಗ್ ವ್ಯವಹಾರ ಹಿಂದಿನಂತಲ್ಲ. ಪ್ರಬಲ ಪೈಪೋಟಿ ಇರುವ ಕ್ಷೇತ್ರವಾಗಿದೆ. ಹೀಗಾಗಿ ಸಾಲದ ಬಡ್ಡಿ ದರವನ್ನು ಸಾಕಷ್ಟು ಕಡಿಮೆ ದರಕ್ಕೆ ಸಿಗುವಂತೆ ಮಾತುಕತೆ ಮಾಡಿ ಪಡೆಯುವುದರಿಂದಲೂ ರೆಪೋ ದರ ಏರಿಕೆಯಾದಾಗ ಬಹಳಷ್ಟು ಹೊಡೆತ ಬೀಳುವುದನ್ನು ತಡೆಯಬಹುದು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಯೋಚಿಸಿ. ಮೇಲಿನ ಯಾವುದೇ ಸಾಧ್ಯತೆಗಳು ನಿಮಗೆ ಸರಿಹೊಂದದಿದ್ದಲ್ಲಿ, ಸಾಲದ ಇಎಂಐ ಎಷ್ಟು ತುಟ್ಟಿಯಾಗಿದೆಯೋ ಅಷ್ಟು ಮೊತ್ತವನ್ನು ಅನಗತ್ಯ ಖರ್ಚು ನಿಯಂತ್ರಿಸುವ ಮೂಲಕ ಪರಿಣಾಮಕಾರಿಯಾಗಿ ನಿಮ್ಮ ತಿಂಗಳ ಬಜೆಟ್ ಸರಿದೂಗಿಸುವ ಬಗ್ಗೆ ಯೋಜನೆ ಮಾಡಿ. ನಿಮ್ಮ ಯಾವುದಾದರೂ ಮಹತ್ವದ ವೆಚ್ಚದಾಯಕ ಯೋಜನೆಗಳನ್ನೂ ಮುಂದೂಡಬಹುದು.
– ಪ್ರಮೋದ ಶ್ರೀಕಾಂತ ದೈತೋಟ