Advertisement
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಎಂದರೆ ಏನು ?ದೇಶದ 1 ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆ ಇದಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಗೊಳಿಸುವ ಜತೆಗೆ ಇಂಧನ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವಲ್ಲಿ ಈ ಯೋಜನೆ ನೆರವಾಗಲಿದೆ. ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಲು ಕೇಂದ್ರ ಸರಕಾರ ಸಬ್ಸಿಡಿಯನ್ನು ಒದಗಿಸಲಿದೆಯಲ್ಲದೆ ಅಗತ್ಯಬಿದ್ದಲ್ಲಿ ಸಾಲವನ್ನು ಒದಗಿಸಲಿದೆ. ಸೌರ ಫಲಕಗಳ ಅಳವಡಿಕೆಯ ಬಳಿಕ ಯೋಜನೆಯ ಫಲಾನುಭವಿಗಳು ಮಾಸಿಕ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲಿದ್ದಾರೆ. ಇದರಿಂದ ಪ್ರತೀ ಕುಟುಂಬಕ್ಕೆ ವಿದ್ಯುತ್ ಬಿಲ್‌ನಲ್ಲಿ ವಾರ್ಷಿಕ 18,000ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ಗಳ ಮೂಲಕ ಈ ಯೋಜನೆಯನ್ನು ಮನೆಮನೆಗೆ ತಲುಪಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗಾಗಿಯೇ ಸರಕಾರ ವೆಬ್‌ಪೇಜ್‌ನ್ನು ಕೂಡ ಬಿಡುಗಡೆಗೊಳಿಸಿದ್ದು, ಅದರಲ್ಲಿ ಯೋಜನೆಯ ಕುರಿತಂತೆ ಸವಿವರವಾದ ಮಾಹಿತಿಯನ್ನು ನೀಡಲಾಗಿದೆ. ಈ ಯೋಜನೆಗೆ ಯಾರೆಲ್ಲ ಅರ್ಹರು ?
*ಭಾರತೀಯ ಪ್ರಜೆಯಾಗಿರಬೇಕು.
*ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂ. ಒಳಗಿರಬೇಕು.
* ಮನೆಯಲ್ಲಿ ಸರಕಾರಿ ಉದ್ಯೋಗದಲ್ಲಿರುವ ಸದಸ್ಯರಿಲ್ಲದಿದ್ದರೆ ಅರ್ಜಿ ಸಲ್ಲಿಸಬಹುದು.
*ಆಧಾರ್‌ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.
*ಅರ್ಜಿದಾರರು ಸ್ವಂತ ಮನೆಯನ್ನು ಹೊಂದಿರಬೇಕು.
*ಅರ್ಜಿದಾರರು 18 ವರ್ಷ ಮೇಲ್ಪಟ್ಟವರಾಗಿರಬೇಕು.
* ಅರ್ಜಿದಾರರು ಅಗತ್ಯ ದಾಖಲೆಪತ್ರ ಹೊಂದಿರಬೇಕು.
*ಡಿಸ್ಕಾಂಗಳಿಂದ ಒಪ್ಪಿಗೆ ಲಭಿಸಿದ ಬಳಿಕ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗುವುದು.
Related Articles
*ಅರ್ಹ ಫಲಾನುಭವಿಗಳಿಗೆ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕಗಳ ಅಳವಡಿಕೆಗೆ ಸಬ್ಸಿಡಿ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲದ ನೆರವು ಲಭಿಸಲಿದೆ.
*ಗರಿಷ್ಠ 10 ಕಿ.ವ್ಯಾ. ಸೌರ ವಿದ್ಯುತ್ ಉತ್ಪಾದನೆಗೆ ಅಗತ್ಯ ವಿರುವ ಸೌರ ಫಲಕಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಲು ಸರಕಾರ ಈ ಸೌಲಭ್ಯವನ್ನು ಒದಗಿಸಲಿದೆ.
*ಮೊದಲ 3 ಕಿ.ವ್ಯಾ.ವರೆಗೆ ಶೇ. 40 ಮತ್ತು ಆ ಬಳಿಕದ ಸಾಮರ್ಥ್ಯಕ್ಕೆ ಶೇ. 20 ಸಬ್ಸಿಡಿಯನ್ನು ಸರಕಾರ ನೀಡಲಿದೆ.
*5 ವರ್ಷಗಳ ನಿರ್ವಹಣ ಗ್ಯಾರಂಟಿ ಇದೆ.
* ವಿದ್ಯುತ್ ಬಿಲ್ ಕಡಿತವಾಗಲಿದೆ.
*ಫಲಾನುಭವಿಗಳು ಹೆಚ್ಚುವರಿ ವಿದ್ಯುತ್ ಅನ್ನು ಉತ್ಪಾದಿಸಿದಲ್ಲಿ ಅದನ್ನು ಮಾರಾಟ ಮಾಡಿ ಆದಾಯ ಗಳಿಸಬಹುದು.
*ಮಾಸಿಕ 300 ಯೂನಿಟ್‌ವರೆಗೆ ಉಚಿತ ವಿದ್ಯುತ್
Advertisement
ಯಾವೆಲ್ಲ ದಾಖಲೆಪತ್ರಗಳು ಅಗತ್ಯ*ಆಧಾರ್ ಕಾರ್ಡ್
* ಪಡಿತರ ಚೀಟಿ
*ಮತದಾರರ ಗುರುತಿನ ಚೀಟಿ
*ಪಾನ್‌ಕಾರ್ಡ್
* ಕಳೆದ ಆರು ತಿಂಗಳುಗಳ ಅವಧಿಯ ವಿದ್ಯುತ್ ಬಿಲ್
*ಮೊಬೈಲ್ ಸಂಖ್ಯೆ
*ಪಾಸ್‌ಪೋರ್ಟ್ ಗಾತ್ರದ ಫೋಟೋ
*ಬ್ಯಾಂಕ್ ಖಾತೆ
* ಆದಾಯ ಪ್ರಮಾಣ ಪತ್ರ
* ಮನೆಯ ದಾಖಲೆಪತ್ರಗಳು,
*ವಿಳಾಸ ದೃಢೀಕರಣ ಪ್ರಮಾಣಪತ್ರ
* ಇ-ಮೇಲ್ ವಿಳಾಸ ಸೋಲಾರ್ ರೂಫ್ ಟಾಪ್ ಕ್ಯಾಲ್ಕುಲೇಟರ್
ಸೋಲಾರ್ ರೂಫ್ ಟಾಪ್ ಯೋಜನೆಯಡಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್ ಉತ್ಪಾದಿಸಲು ಆಸಕ್ತರಾಗಿರುವವರು ತಮಗೆ ಅಗತ್ಯವಿರುವ ಸೌರ ಫಲಕಗಳು, ವಿದ್ಯುತ್ ಉತ್ಪಾದನ ಪ್ರಮಾಣ, ವ್ಯಾಪ್ತಿ, ಹೂಡಿಕೆ ಪ್ರಮಾಣ ಮತ್ತಿತರ ಮಾಹಿತಿಗಳನ್ನು ಸೋಲಾರ್ ರೂಫ್ ಟಾಪ್ ಕ್ಯಾಲ್ಕುಲೇಟರ್ ಮೂಲಕ ಪಡೆಯಬಹುದಾಗಿದೆ. ಆಸಕ್ತರು ಈ ಕೆಳಗಿನ ವಿಧಾನದಲ್ಲಿ ಸೋಲಾರ್ ರೂಫ್ಟಾಪ್ ಕ್ಯಾಲ್ಕುಲೇಟರ್‌ನಿಂದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. solarrooftop.gov.in. ಈ ವೆಬ್‌ಸೈಟ್‌ನಲ್ಲಿ ಸೋಲಾರ್ ರೂಫ್ ಟಾಪ್ ಕ್ಯಾಲ್ಕುಲೇಟರ್ ಆಪ್ಶನ್‌ಗೆ ಕ್ಲಿಕ್ ಮಾಡಿ ಈ ಮಾಹಿತಿಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ?
>ಮೊದಲ ಹಂತ
*ಮೊದಲಿಗೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಅಧಿಕೃತ ವೆಬ್‌ಸೈಟ್https://pmsuryaghar.gov.in ತೆರೆಯಬೇಕು.
*ಹೋಮ್‌ಪೇಜ್‌ನಲ್ಲಿ ಕ್ವಿಕ್ ಲಿಂಕ್ ಸೆಕ್ಷನ್‌ಗೆ ಹೋಗಿ ಅಪ್ಲೈ ಫಾರ್ ರೂಫ್ ಟಾಪ್ ಗೆ ಕ್ಲಿಕ್ ಮಾಡಬೇಕು. ಆಗ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ.
*ಅದರಲ್ಲಿ ಅರ್ಜಿದಾರರು ತಮ್ಮ ಮಾಹಿತಿಯನ್ನು ತುಂಬಬೇಕು. ಅರ್ಜಿದಾರರ ಜಿಲ್ಲೆ, ರಾಜ್ಯ, ವಿದ್ಯುತ್ ಸರಬರಾಜು ಕಂಪೆನಿಯ ಹೆಸರು, ವಿದ್ಯುತ್ ಗ್ರಾಹಕರ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
>2ನೇ ಹಂತ
*ಬಳಿಕ ನೆಕ್ಸ್ಟ್ ಆಯ್ಕೆಯನ್ನು ಒತ್ತಿದರೆ ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ.
*ಅದರಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಕಡ್ಡಾಯವಾಗಿ ತುಂಬಬೇಕು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
>ಮೂರನೇ ಹಂತ
* ಡಿಸ್ಕಾಂನಿಂದ ಅನುಮೋದನೆ ಬರುವವರೆಗೆ ಕಾಯಬೇಕು. ಅನುಮೋದನೆ ದೊರೆತ ಬಳಿಕ ಡಿಸ್ಕಾಂನಲ್ಲಿ ನೋಂದಣಿಯಾದ ಯಾವುದೇ ಗ್ರಾಹಕರಿಂದ ಪ್ಲಾಂಟ್ ಪಡೆದು ಅಳವಡಿಸಬಹುದು.
>ನಾಲ್ಕನೇಯ ಹಂತ
* ಪ್ಲಾಂಟ್ ಸ್ಥಾಪಿಸಿದ ಬಳಿಕ ಅದರ ಮಾಹಿತಿಯನ್ನು ಸಬ್‌ಮಿಟ್ ಮಾಡಬೇಕು ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಬೇಕು.
>ಐದನೇ ಹಂತ
*ನೆಟ್ ಮೀಟರ್ ಅಳವಡಿಕೆ ಮತ್ತು ಡಿಸ್ಕಾಂನವರು ತಪಾಸಣೆ ನಡೆಸಿದ ಬಳಿಕ ಪೋರ್ಟಲ್‌ನಿಂದ ಕಮಿಷನಿಂಗ್ ಪ್ರಮಾಣಪತ್ರವನ್ನು ನೀಡುತ್ತಾರೆ.
>ಆರನೇ ಹಂತ
*ಪ್ರಮಾಣಪತ್ರ ದೊರೆತ ಬಳಿಕ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ರದ್ದಾದ ಚೆಕ್ ಅನ್ನು ಪೋರ್ಟಲ್ ಮೂಲಕ ಸಬ್‌ಮಿಟ್ ಮಾಡಬೇಕು. 30 ದಿನಗಳೊಳಗೆ ಅರ್ಜಿದಾರರ ಖಾತೆಗೆ ಸಬ್ಸಿಡಿ ವರ್ಗಾವಣೆಗೊಳ್ಳುತ್ತದೆ. *ರಂಜಿನಿ, ಮಿತ್ತಡ್ಕ