Advertisement
ಹಣಕಾಸಿನ ವಿಚಾರಕ್ಕೆ ಬಂದಾಗ ಹೂಡಿಕೆ ಮತ್ತು ಸಾಲ ಎರಡೂ ಮುಖ್ಯವಾಗುತ್ತವೆ. ಗೃಹ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಮದುವೆ, ವೈದ್ಯಕೀಯ ವೆಚ್ಚಗಳಿಗಾಗಿ ದೊಡ್ಡ ಮೊತ್ತದ ಹಣ ಬೇಕಾದಾಗ ಸಾಲ ಮಾಡಲೇಬೇಕಾಗುತ್ತದೆ. ಆದರೆ ಇದೇ ವೇಳೆ ಹೂಡಿಕೆ ಇಲ್ಲದೇ ಹೋದರೆ, ಭವಿಷ್ಯದಲ್ಲಿ ಬಗೆ ಬಗೆಯ ಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ. ಕಷ್ಟಕಾಲದಲ್ಲಿ, ಕಾಸಿಲ್ಲ ಎಂಬ ಒಂದೇ ಕಾರಣದಿಂದ ಅತಂತ್ರ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭವೂ ಜೊತೆಯಾ ಗಬಹುದು. ಹಾಗಾಗಿ, ವೈಯಕ್ತಿಕ ಹಣಕಾಸನ್ನು ನಿರ್ವಹಿಸುವಾಗ, ಸಾಲ ಮತ್ತು ಹೂಡಿಕೆಯಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬ ಗೊಂದಲಕ್ಕೆ ಬೀಳುವುದು ಸಹಜ. ಸಾಲದ ಮರುಪಾವತಿಯನ್ನು ನೀವು ನಿರ್ಲಕ್ಷಿಸಿದರೆ, ಬಡ್ಡಿ ಹೆಚ್ಚುತ್ತಾ ಹೋಗುತ್ತದೆ. ಅದು ನಿಮ್ಮನ್ನು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿಸಬಹುದು. ನೀವು ಸಾಲ ತೀರಿಸುವುದರ ಕಡೆಗೆ ಮಾತ್ರ ಗಮನ ನೀಡಿ ಹೂಡಿಕೆಯನ್ನು ನಿರ್ಲಕ್ಷಿಸಿದರೆ, ಅದು ಹಣಕಾಸು ಉದ್ದೇಶಗಳನ್ನು ಈಡೇರಿಸಲು ನೀವು ವಿಫಲಗೊಳ್ಳಬಹುದು. ಹಾಗಾಗಿ, ಸಾಲ ಮತ್ತು ಹೂಡಿಕೆಯ ಮಧ್ಯೆ ಸಮತೋಲನವನ್ನು ಕಾಪಾಡುವುದು ಅತೀ ಮುಖ್ಯ.ಈಗಾಗಲೇ ಸಾಲದಲ್ಲಿರುವಾಗ, ನೀವು ಹಣ ಹೂಡಿಕೆ ಮಾಡಬೇಕೇ ಅಥವಾ ಪ್ರಸ್ತುತ ಇರುವ ಸಾಲ ಶೂನ್ಯವಾಗುವ ತನಕ ಕಾಯಬೇಕೇ?
Related Articles
Advertisement
ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ನಿಗಧಿತ ಸಮಯದಲ್ಲಿ ಸಾಲದ ಮರುಪಾವತಿ ಮಾಡುವುದು ತೀರಾ ಅಗತ್ಯವಾಗಿದೆ. ನೀವು ಹೆಚ್ಚುವರಿ ಹಣ ಹೊಂದಿದ್ದರೆ ಅದನ್ನು ಹೂಡಿಕೆ ಮಾಡಿ. ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ, ಯಾವುದೇ ಬಂಡವಾಳ ನಷ್ಟಲ್ಲದೆ ಅದನ್ನು ಹಿಂತೆಗೆದು ಬಳಸಲು ಸಾಧ್ಯವೇ ಎಂದು ಯೋಚಿಸಿ ನೋಡಿ.
ಸಾಧ್ಯವೆಂದಾದರೆ, ಸಾಲದ ಮೊತ್ತವನ್ನು ಪೂರ್ವಪಾವತಿ ಮಾಡುವ ಬದಲು ಹೂಡಿಕೆಗೆ ಬಳಸಬಹುದು. ಉದಾಹರಣೆಗೆ, ನೀವು ಉದ್ಯೋಗ ನಷ್ಟ ಅಥವಾ ಅಪಘಾತದಂತಹ ಸಮಸ್ಯೆಗೆ ಸಿಲುಕಿಕೊಂಡು ಹಣಕಾಸಿನ ತುರ್ತು ಎದುರಿಸಿದರೆ, ಪ್ರಸ್ತುತವಿರುವ ಸಾಲದ ಇಎಂಐ ಪಾವತಿಸಲು ಸಾಕಷ್ಟು ಹಣ ನಿಮ್ಮಲ್ಲಿ ಇಲ್ಲದಿದ್ದರೆ, ಆಗ ನೀವು ಈ ಹೂಡಿಕೆಯನ್ನು ತುರ್ತು ನಗದು ಹರಿಗೆ ಬಳಸಬಹುದು. ಆದಾಗ್ಯೂ, ಫಂಡ್‌ನಲ್ಲಿ ಮಾಡಿದ ಹೂಡಿಕೆಯ ಮೌಲ್ಯ ಉಳಿಸಿಕೊಳ್ಳುವ ಬಗ್ಗೆ ಖಾತ್ರಿ ಇಲ್ಲವಾದರೆ, ಅಂತಹ ಹೂಡಿಕೆ ಮಾಡದಿರುವುದೇ ಸೂಕ್ತ.
ನೀವು ಬಿಗ್ ಟಿಕೆಟ್ ಖರೀದಿಗಾಗಿ ಸಾಲ ಮಾಡಲು ಯೋಚಿಸುತ್ತಿದ್ದರೆ, ಆಗ ಹೆಚ್ಚುವರಿ ಆದಾಯವನ್ನು ಈ ಸಂದರ್ಭದ ಸಾಲದ ಮರುಪಾವತಿಯ ಬದಲಾಗಿ, ಸೂಕ್ತ ಹೂಡಿಕೆಗೆ ಬಳಸಿ ನಂತರ ನಿಮ್ಮ ಖರೀದಿಗಾಗಿ ಅದನ್ನು ಬಳಸುವುದು ಒಳ್ಳೆಯದು. ಉದಾಹರಣೆಗೆ, ಮೂರು ತಿಂಗಳ ನಂತರ ನೀವು ಕಾರು ಖರೀದಿಸಲು ಯೋಜಿಸುತ್ತಿದ್ದೀರಿ ಮತ್ತು ನಿಮ್ಮ ಕೈಗೆ ಈಗ 5 ಲಕ್ಷ ರೂ.ನಷ್ಟು ಹೆಚ್ಚುವರಿ ಆದಾಯ ಬಂತು ಎಂದುಕೊಳ್ಳೋಣ. ಪ್ರಸ್ತುತ ಶೇ.8.8 ಬಡ್ಡಿದರದ ಗೃಹ ಸಾಲ 20 ಲಕ್ಷ ರೂ.ನಷ್ಟು ಬಾಕಿ ಇದೆ, 15 ವರ್ಷಗಳಷ್ಟು ಪಾವತಿ ಅವಧಿ ಉಳಿದಿದೆ ಎಂದಾದರೆ, ಆ ಹೆಚ್ಚುವರಿ ಆದಾಯವನ್ನು ನಿಮ್ಮ ಗೃಹ ಸಾಲದ ಪೂರ್ವಪಾವತಿಗೆ ಬಳಸಿ ಕಾರು ಖರೀದಿಸಲು ವಾಹನ ಸಾಲ ಮಾಡುವ ಬದಲು, ನೀವು ಮೂರು ತಿಂಗಳ ಕಾಲಕ್ಕೆ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿದ ಹಣ ಕೈಗೆ ಬಂದ ನಂತರ ಕಾರು ಖರೀದಿಸಬೇಕು.
ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಿಮ್ಮ ನಿವೃತ್ತಿಯ ಗುರಿ, ಮತ್ತು ಇತರೆ ಹಣಕಾಸು ಉದ್ದೇಶಗಳ ಮೇಲಾಗುವ ಪರಿಣಾಮಗಳನ್ನು ಒಂದು ಬಾರಿ ಅವಲೋಕಿಸಿ. ಹೀಗೆಲ್ಲ ಯೋಚಿಸದೆ, ದುಡುಕಿ, ಅವಸರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಯಾವತ್ತೂ ಅಷ್ಟೇ; ಹೆಚ್ಚು ಸಾಲವಿದ್ದವನು ಬೇಗನೆ ಸೋತುಹೋಗುತ್ತಾನೆ. ಹಾಗಾಗಿ, ಗಳಿಕೆಯ ಸಾಮರ್ಥಯ ಇಲ್ಲ ಅನ್ನಿಸಿದರ, ಸಾಲ ಪಡೆಯುವ ವಿಚಾರದಲ್ಲಿ ಅಪಾಯದ ಸಂಗತಿಗಳಿಗೆ ಕೈ ಹಾಕಬೇಡಿ.
– ರಾಧ