Advertisement

ನೀವು ಪ್ರಯಾಣಿಸುವ ಕ್ಯಾಬ್‌ ಎಷ್ಟು ಸುರಕ್ಷಿತ?

11:46 AM Aug 03, 2017 | |

ಬೆಂಗಳೂರು: ಹಿಂದೊಂದು ಸಮಯವಿತ್ತು. ರಾತ್ರಿ ಗಂಟೆ ಹತ್ತಾದರೂ ಮಗಳು ಮನೆಗೆ ಬರಲಿಲ್ಲ ಎಂದರೆ, ಪೋಷಕರ ಎದೆಯಲ್ಲಿ ಢವ… ಢವ… ಅದೇ ಅಂಜಿಕೆಯಲ್ಲಿ ಮಗಳ ಮೊಬೈಲ್‌ಗೆ ಕರೆ ಮಾಡಿದರೆ “ನೀವು ಕರೆ ಮಾಡಿರುವ ಸಂಖ್ಯೆ ಸದ್ಯಕ್ಕೆ ಸ್ವಿಚ್‌ ಆಫ್ ಆಗಿದೆ…’ ಎಂಬ ರೆಕಾರ್ಡೆಡ್‌ ಧ್ವನಿ! 

Advertisement

ಅಷ್ಟೇ, ಹೆತ್ತವರು ಸೀದಾ ಪೊಲೀಸ್‌ ಠಾಣೆಗೆ ಹೋಗಿ ಕಂಪ್ಲೇಂಟ್‌ ಕೊಡುತ್ತಿದ್ದರು. ಆದರೆ ಪ್ರಸ್ತುತ ಬೆಂಗಳೂರು ನಗರದಲ್ಲಿ ಆ ಪರಿಸ್ಥಿತಿ ಬದಲಾಗಿದೆ. ರಾತ್ರಿ ಹನ್ನೊಂದಾದರೂ ಮಗಳು ಮನೆಗೆ ಬಂದಿಲ್ಲವೆಂದರೆ ಪೋಷಕರು ಭಯಬೀಳುವುದಿಲ್ಲ. ಕಾರಣ ಮಗಳು “ಓಲಾ/ ಉಬರ್‌’ ಕ್ಯಾಬ್‌ನಲ್ಲಿ ಸೇಫಾಗಿ ಬರುತ್ತಿದ್ದಾಳೆ ಅನ್ನೋ ನಂಬಿಕೆ! 

ಆ್ಯಪ್‌ ಆಧರಿತ ಈ ಕ್ಯಾಬ್‌ ಸೇವಾ ಕಂಪನಿಗಳ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣವೇ ಪ್ರಯಾಣಿಕರ ಸುರಕ್ಷತೆ. ಹಿರಿಯ ನಾಗರಿಕರು, ಒಂಟಿ ಮಹಿಳೆ, ಯುವತಿಯರನ್ನು ಮಧ್ಯರಾತ್ರಿಯಲ್ಲೂ ಸುರಕ್ಷಿತವಾಗಿ ಮನೆಗೆ ತಲುಪಿಸುವ ಭರವಸೆಯೊಂದಿಗೆ ಈ ಕ್ಯಾಬ್‌ ಸಂಸ್ಥೆಗಳು ಸೇವೆ ಆರಂಭಿಸಿದ್ದವು.

ಆದರೆ ಇತ್ತೀಚೆಗೆ ಸೇವೆಯ ಉದ್ದೇಶ ಪಕ್ಕಕ್ಕಿರಿಸಿ ಲಾಭದ ಮೊರೆ ಹೋಗಿರುವ ಆ್ಯಪ್‌ ಆಧರಿತ ಕ್ಯಾಬ್‌ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆಯನ್ನು ಮರೆತಿವೆ ಎನ್ನುತ್ತಿದೆ ಮಾಧ್ಯಮವೊದಂರ ತನಿಖಾ ವರದಿ. “ಸಿಎನ್‌ಎನ್‌-ನ್ಯೂಸ್‌ 18′ (ನೆಟ್‌ವರ್ಕ್‌ 18) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಆ್ಯಪ್‌ ಆಧರಿತ ಕ್ಯಾಬ್‌ ಸೇವೆಯ ಕುರಿತು ತನಿಖಾ ವರದಿ ಪ್ರಕಟಿಸಿದ್ದು, ಈ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆಗೆ ಅಷ್ಟೇನೂ ಮಹತ್ವ ನೀಡಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿದೆ.

ಇದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ 2015ರಿಂದ 2017ರವರೆಗೆ ಕ್ಯಾಬ್‌ ಚಾಲಕರಿಂದ ನಡೆದ ಲೈಂಗಿಕ  ದೌರ್ಜನ್ಯ, ಅತ್ಯಾಚಾರ, ಸುಲಿಗೆ, ದರೋಡೆ ಮತ್ತು ಅಪಹರಣ ಪ್ರಕರಣಗಳ ಮೇಲೆ ವಾಹಿಬೆಳಕು ಚೆಲ್ಲಿದೆ. 2017ರ ಏಪ್ರಿಲ್‌ 28ರಂದು ಬೆಂಗಳೂರಿನಲ್ಲಿ  ಓಲಾ ಕ್ಯಾಬ್‌ ಚಾಲಕನೊಬ್ಬ ಮಹಿಳಾ ಪ್ರಯಾಣಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸೇರಿ 2015-17ರ ಅವಧಿಯಲ್ಲಿ ಕ್ಯಾಬ್‌ ಚಾಲಕರಿಂದ 7 ಗಂಭೀರ ಅಪರಾಧ ಕೃತ್ಯಗಳು ನಡೆದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 

Advertisement

ಕ್ಯಾಬ್‌ ಸಂಸ್ಥೆಗಳು ಚಾಲಕರಿಂದ ಅಗತ್ಯ ದಾಖಲೆ ಸಂಗ್ರಹಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ನಕಲಿ ಚಾಲನೆ ಪರವಾನಗಿ ಹೊಂದಿರುವ, ಸಂಸ್ಥೆ ಜೊತೆ ನೋಂದಣಿ ಮಾಡಿಕೊಳ್ಳದೇ ಇರುವ ಚಾಲಕರು ಕ್ಯಾಬ್‌ ಚಾಲನೆ ಮಾಡುತ್ತಿದ್ದಾರೆ. ಇಂಥ ಅನಧಿಕೃತ ಚಾಲಕರು ಯಾವುದೇ ಸಂದರ್ಭದಲ್ಲೂ ಪ್ರಯಾಣಿಕರ ಮೇಲೆ ದೌರ್ಜನ್ಯ ಎಸಗಿ, ಹಣ ದೋಚಿ ಪರಾರಿಯಾಗಬಹುದು ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. 

ಹೆಣ್ಮಕ್ಲಿಗೆ ರಾತ್ರಿಕ್ಯಾಬ್‌ ಸಿಗಲ್ಲ!
ರಾತ್ರಿ 11 ಗಂಟೆ ನಂತರ ಮಹಿಳೆಯರಿಗೆ ಆ್ಯಪ್‌ ಆಧರಿತ ಕ್ಯಾಬ್‌ ಸೇವೆ ಸಿಗುವುದು ತೀರಾ ವಿರಳ ಎಂದು ವಾಹಿನಿ ವರದಿಯಲ್ಲಿ ಹೇಳಿದೆ. ಮಹಿಳೆ ಅಥವಾ ಯುವತಿಯರು ತಡರಾತ್ರಿ ಯಾವುದೇ ಪ್ರದೇಶದಿಂದ ಕ್ಯಾಬ್‌ ಬುಕ್‌ ಮಾಡಲು ಮುಂದಾದರೆ, ಎಷ್ಟೇ ಪ್ರಯತ್ನಿಸಿದರೂ ಕೆಲವೊಮ್ಮೆ ಹತ್ತಿರದಲ್ಲಿ ಯಾವುದೇ ಕ್ಯಾಬ್‌ ಸಿಗುವುದಿಲ್ಲ.

ಇದೇ ಅವಧಿಯಲ್ಲಿ ಅವರ ಪಕ್ಕದಲ್ಲಿರುವ ಸ್ನೇಹಿತ ಅದೇ ಸಂಸ್ಥೆಯ ಆ್ಯಪ್‌ ಮೂಲಕ ಪ್ರಯತ್ನಿಸಿದರೆ ಒಂದೆರಡು ನಿಮಿಷದ ಅಂತರದಲ್ಲೇ ಹಲವು ಕ್ಯಾಬ್‌ಗಳು ಲಭ್ಯವಿರುತ್ತವೆ! ತನ್ನ ವರದಿಗಾರ್ತಿಯರು ರಾತ್ರಿ 11ರ ನಂತರ ಕ್ಯಾಬ್‌ ಬುಕ್‌ ಮಾಡಲು ಯತ್ನಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದು ಅದು ಹೇಳಿದೆ. 

ಕ್ಯಾಬ್‌ ಸೇವೆಯಲ್ಲಿನ ಹಲವು ಲೋಪಗಳು
-ನೀವು ಸ್ಮಾರ್ಟ್‌ಫೋನ್‌ ಮೂಲಕ ಕ್ಯಾಬ್‌ ಬುಕ್‌ ಮಾಡಿದ ನಂತರ ನಿಮ್ಮ ಸ್ಕ್ರೀನ್‌ ಮೇಲೆ ಬಂದ ಚಿತ್ರದಲ್ಲಿರುವ ವ್ಯಕ್ತಿಯೇ ಚಾಲಕನಾಗಿರುತ್ತಾನೆ ಎಂಬುದು ತಪ್ಪು ಕಲ್ಪನೆ.
-ಹಲವು ಸಂದರ್ಭಗಳಲ್ಲಿ ಫೋಟೋದಲ್ಲಿರುವ ವ್ಯಕ್ತಿ ಬದಲು ಬೇರೊಬ್ಬ ವ್ಯಕ್ತಿ ಕ್ಯಾಬ್‌ ಚಾಲನೆ ಮಾಡುತ್ತಿರುತ್ತಾನೆ.„
-ನಿಮ್ಮ ಕ್ಯಾಬ್‌ ಚಾಲನೆ ಮಾಡುವ ಹಲವು ಡ್ರೈವರ್‌ಗಳು ಆ್ಯಪ್‌ ಆಧರಿತ ಕ್ಯಾಬ್‌ ಸಂಸ್ಥೆಯ ಜೊತೆ ನೋಂದಣಿ ಮಾಡಿಕೊಂಡಿರುವುದಿಲ್ಲ.
-ಸಾಕಷ್ಟು ಕ್ಯಾಬ್‌ಗಳ ಚಾಲಕರು ನಕಲಿ ಚಾಲನೆ ಪರವಾನಗಿ ಹೊಂದಿರುತ್ತಾರೆ.
-ಇಂಥ ನಕಲಿ ಚಾಲಕರ ದಾಖಲೆಗಳ ಪರಿಶೀಲನೆಗೆ ಕ್ಯಾಬ್‌ ಸಂಸ್ಥೆಗಳು ಆದ್ಯತೆ ನೀಡುತ್ತಿಲ್ಲ.
-ಸಮರ್ಪಕ ದಾಖಲೆ ಒದಗಿಸದ ಚಾಲಕ ಯಾವುದೇ ಸಮಯದಲ್ಲೂ ಅಪರಾಧ ಎಸಗಿ ಪರಾರಿಯಾಗಬಲ್ಲ

Advertisement

Udayavani is now on Telegram. Click here to join our channel and stay updated with the latest news.

Next