Advertisement
ಹೋಟೆಲ್‌ಗಳಿಗಿಂತಲೂ ಕಡಿಮೆ ದರ: ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ತಿಂಡಿ ಗಾಡಿಗಳು ಹೋಟೆಲ್‌ಗಳಿಗೆ ಸಡ್ಡು ಹೊಡೆಯುವ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಬೀದಿ ಬದಿಯ ಗಾಡಿಗಳ ತಿಂಡಿಗಳು ಹೋಟೆಲ್‌ಗಳ ತಿಂಡಿಗಳಿಗಿಂತಲೂ ರುಚಿ ಹಾಗೂ ಕಡಿಮೆ ದರ ಎಂಬುದು ಜನ ಸಾಮಾನ್ಯರ ನಂಬಿಕೆ. ಹೌದು ಗಾಡಿಗಳಲ್ಲಿನ ತಿಂಡಿ ದರ ಹೋಟೆಲ್‌ಗಳ ತಿಂಡಿಗಳಿಗಿಂತಲೂ ಕಡಿಮೆಯಿರುತ್ತದೆ.
Related Articles
Advertisement
ವಿವಿಧ ಬಗೆಯ ತಿಂಡಿಗಳು ಲಭ್ಯ: ಬಹುಪಾಲು ತಿಂಡಿ ಗಾಡಿಗಳಿರುವುದು ರಸ್ತೆ ಬದಿ, ಚರಂಡಿಗಳ ಬದಿ, ಬಯಲು ಮೈದಾನಗಳಲ್ಲಿಯೇ. ಈ ಗಾಡಿಗಳಲ್ಲಿ ಇಡ್ಲಿ, ವಡೆ, ಪಲಾವ್,ಚಿತ್ರಾನ್ನ, ದೋಸೆ, ರೊಟ್ಟಿ, ಪರೋಟ, ಎಗ್‌ಫ್ರೈಡ್ ರೈಸ್, ಎಗ್ ಆಮ್ಲೆಟ್, ಚಿಕನ್ ಬಿರಿಯಾನಿ,ಚಿಕನ್ ಕಬಾಬ್, ಮಟನ್ ಬಿರಿಯಾನಿ, ಪಾನಿಪೂರಿ, ಮಸಾಲೆ ಪುರಿ, ಬೇಲ್‌ಪುರಿ, ವಡೆ, ಜಿಲೇಬಿ ಪಕೋಡಾ ಹೀಗೆ ಹಲವು ತಿಂಡಿ ತಿನಿಸುಗಳು ಮಾರಾಟವಾಗುತ್ತವೆ.
ಕೆಲವು ಗಾಡಿಗಳು ಸ್ಥಳದಲ್ಲಿಯೇ ತಿಂಡಿ – ತಿನಿಸುಗಳನ್ನು ತಯಾರಿಸಿ ವಹಿವಾಟು ನಡೆಸಿದರೆ, ಕೆಲವರು ಮನೆಗಳಲ್ಲಿಯೇ ಆಹಾರ ಸಿದ್ಧಪಡಿಸಿಕೊಂಡು ಗಾಡಿಗಳಲ್ಲಿಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಕೆಲವೇ ಫ್ಲೇಟ್‌ಗಳು, ಲೋಟಗಳ, ಒಂದಿಷ್ಟು ಪಾತ್ರೆಗಳಷ್ಟೇ ಬೀದಿ ಬದಿ ಗಾಡಿಗಳಲ್ಲಿನ ವ್ಯವಸ್ಥೆ. ಇವುಗಳನ್ನು ತೊಳೆಯಲು ಎಲ್ಲಿಂದ ನೀರು ತರುತ್ತಾರೆ? ಗ್ರಾಹಕರಿಗೆ ಕೊಡುವ ನೀರು ಶುದ್ಧ ಮತ್ತು ಸ್ವತ್ಛವೇ ಎಂಬುದು ಮಾತ್ರ ನಿಗೂಢ.
ನೊಣಗಳ ಹಾವಳಿ: ಗಾಡಿಗಳಲ್ಲಿನ ಆಹಾರದ ಮೇಲೆ ನೊಣಗಳ ಹಾವಳಿ, ಧೂಳಿನ ನಿಯಂತ್ರಣ ಹೇಗೆ? ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳು, ಎಣ್ಣೆ ಯಾವ ಗುಣಮಟ್ಟದ್ದು ಎಂಬುದು ಮಾತ್ರ ಆತಂಕ ಹುಟಿುrಸುವಂತಹುದು. ಆತುರದಲ್ಲಿ ಗ್ರಾಹಕರು ತಿಂದು ಹೋಗುತ್ತಾರೆ, ಗಾಡಿ ವ್ಯಾಪಾರಗಳೂ ಅಷ್ಟೇ ಆತುರದಲ್ಲಿ ವ್ಯಾಪಾರ ಮುಗಿಸಿ ಆದಾಯದ ಲೆಕ್ಕ ಹಾಕಿಕೊಂಡು ಹೋಗುತ್ತಲೇ ಇದ್ದಾರೆ. ಶುಚಿತ್ವದ ಕಡೆಗೆ ಗಮನ ಕೊಡುವ ಬಗ್ಗೆ, ಅವರ ಮೇಲೆ ನಿಯಂತ್ರಣ ಹಾಗೂ ಎಚ್ಚರಿಕೆ ನೀಡುವವರು ಮಾತ್ರ ಇಲ್ಲ ಎಂಬುದು ಮಾತ್ರ ಆತಂಕಕಾರಿ ವಿಷಯ.
ಆಹಾರ ಸುರಕ್ಷತೆ ಪರಿಶೀಲನೆಯಿಲ್ಲ: ಸ್ಥಳೀಯ ಸಂಸ್ಥೆಗಳಲ್ಲಿರುವ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ತಿಂಡಿ ಗಾಡಿಗಳವರಿಗೆ ಚಿರಪರಿಚಿತರು. ಹಾಗಾಗಿ ಅವರ ನಡುವಿನ ಸಂಬಂಧ ಎಂತಹುದು ಎಂಬುದು ಸಾರ್ವಜನಿಕರಿಗೆ ಗೊತ್ತೇ ಇದೆ. ಆರೋಗ್ಯ ಇಲಾಖೆಯಲ್ಲಿ ಸುರಕ್ಷತೆಯ ಮೇಲೆ ನಿಗಾ ಇಡಲು ಪ್ರತ್ಯೇಕ ವಿಭಾಗವೇ ಇದೆ. ಇಲಾಖೆಯಲ್ಲಿ ಅಂತಹ ವಿಭಾಗ ಇದೆ ಎಂಬುದು ಬಹುಪಾಲು ನಾಗರಿಕರಿಗೆ ಗೊತ್ತೇ ಇಲ್ಲ . ಅಷ್ಟರ ಮಟ್ಟಿಗೆ ಆ ವಿಭಾಗದ ಅಂಕಿತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೀದಿ ಬದಿಯ ಗಾಡಿಗಳಿರಲಿ, ಹೋಟೆಲ್‌ಗಳಲ್ಲಿನ ಆಹಾರ, ಶುಚಿತ್ವ, ಆಹಾರದ ಪ್ರಮಾಣದ ಬಗ್ಗೆ ಸ್ಥಳೀಯ ಸಂಸ್ಥೆಗಳ ಆರೋಗ್ಯ ನಿರೀಕ್ಷಕರು, ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಕ್ರಮಗಳನ್ನು ಕೈಗೊಂಡ ಉದಾಹರಣೆಗಳೂ ವಿರಳ.
ಅಧಿಕಾರಿಗಳಿಗೆ ಮಾಹಿತಿಯಿಲ್ಲ: ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಬೇಕು, ಪರವಾನಗಿ ಪಡೆಯಬೇಕು ಶುಚಿತ್ವ ಕಾಪಾಡಿಕೊಳ್ಳಬೇಕು ಎಂದೆಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ನೀಡುತ್ತಾರೆ. ಆದರೆ ಇಲಾಖೆಯಲ್ಲಿ ಈವರೆಗೂ ಬೀದಿ ಬದಿಯ ತಿಂಡಿ ಗಾಡಿಗಳ ಸಂಖ್ಯೆ ಎಷ್ಟು ಎಂಬುದು ಮಾತ್ರ ಇಲ್ಲ. ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಲ್ಲಿಯಂತೂ ಈ ಬಗ್ಗೆ ಮಾಹಿತಿ ಇಲ್ಲ.
ಎಲ್ಲೆಲ್ಲಿ ಬೀದಿ ತಿಂಡಿ ಮಾರಾಟ?: ಹಾಸನ ನಗರದಲ್ಲಿ ವಿವಿಧ ರಸ್ತೆಗಳ ಬದಿ, ಆಸ್ಪತ್ರೆ, ಶಾಲಾ – ಕಾಲೇಜುಗಳ ಸಮೀಪ, ಬಸ್ ನಿಲ್ದಾಣ, ಟ್ಯಾಕ್ಸಿ ನಿಲ್ದಾಣಗಳ ಬಳಿ ಸಾವಿರಾರು ಗಾಡಿಗಳು ಬೀದಿ ಬದಿಯಲ್ಲಿ ತಿಂಡಿ – ತಿನಿಸುಗಳನ್ನು ಮಾರಾಟ ಮಾಡುತ್ತವೆ. ಹಾಸನದ ಮಹಾರಾಜ ಪಾರ್ಕ್‌ನ ಪಶ್ಚಿಮಕ್ಕೆ ಅಂದರೆ ಹಾಸನಾಂಬ ಕಲಾಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ ಎದುರು, ಸಹ್ಯಾದ್ರಿ ಚಿತ್ರಮಂದಿರದ ಎದುರು, ಗಂಧದ ಕೋಠಿ ಮತ್ತು ಬಾಲಕರ ಸರ್ಕಾರಿ ಪ್ರೌಢಶಾಲೆ ಮಧ್ಯದ ರಸ್ತೆ, ಕೇಂದ್ರೀಯ ಬಸ್ ನಿಲ್ದಾಣದ ಎದುರು, ರೈಲ್ವೆ ಟ್ರ್ಯಾಕ್ ಸಮೀಪ,
ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆ ರಸ್ತೆಯಲ್ಲಿ ತಾಲೂಕು ಪಂಚಾಯಿತಿ ಕಚೇರಿ ಸಮೀಪ, ಹಾಸನದ ಎಂ.ಜಿ.ರಸ್ತೆಯ ವಿವಿಧೆಡೆ , ಸಂತೆಪೇಟೆಯ ವಿವಿಧ ರಸ್ತೆಗಳಲ್ಲಿ ಬೀದಿ ಬದಿ ಗಾಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಚಳಿಗಾಲ ಮತ್ತು ಬೀಸಿಗೆ ಕಾಲದಲ್ಲಂತೂ ವಾಹನಗಳ ಸಂಚರಿಸುವಾಗ ರಸ್ತೆ ಬದಿಯಲ್ಲಿರುವ ತಿಂಡಿ ಗಾಡಿಗಳಿಗೂ ಆ ಧೂಳು ಮುತ್ತಿಕೊಳ್ಳುತ್ತದೆ ಧೂಳಿನಿಂದಾವೃತವಾದ ಆಹಾರ ಸೇವಿಸುವವ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಬೀದಿ ಬದಿ ವ್ಯಾಪಾರ ಮಾಡುವುದು ತಪ್ಪಲ್ಲ. ಆದರೆ ಸಾರ್ವಜನಿಕರಿಗೆ ಶುಚಿ, ರುಚಿಯಾದ ಆಹಾರ ನೀಡುವುದು ಅಗತ್ಯ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಇಬ್ಬರಿಗೂ ಒಳ್ಳೆಯದಾಗುತ್ತದೆ.
ಸೋಂಕು, ಕ್ಯಾನ್ಸರ್‌ನ ಆತಂಕ: ಬೀದಿ ಬದಿಯ ತಿಂಡಿ ಗಾಡಿಗಳಲ್ಲಿ ಶುಚಿತ್ವದ ಕೊರತೆ ಸಾಮಾನ್ಯ. ಅಲ್ಲಿನ ಆಹಾರ ತಿನ್ನುವುದರಿಂದ ಮುಖ್ಯವಾಗಿ ಸೋಂಕು ( ಇನೆ#ಕ್ಷನ್) ಆಗಬಹುದು.ಗಾಡಿಗಳಲ್ಲಿ ಇಡ್ಲಿ ತಯಾರಿಕೆಯ ವೇಳೆ ಪ್ಲಾಸ್ಟಿಕ್ ಶೀಟ್ ಬಳಸುತ್ತಾರೆ. ಕ್ಯಾನ್ಸರ್ ರೋಗ ಬರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ. ಕೆಲವು ತಿಂಡಿಗಳಿಗೆ ಬಳಸುವ ಬಣ್ಣಗಳೂ ಕ್ಯಾನ್ಸರ್ ಕಾರಕ. ರುಚಿಗಾಗಿ ಬಳಸುವ ಟೇಸ್ಟಿಂಗ್ ಪೌಡರ್‌ಗಳಿಂದಲೂ ಆರೋಗ್ಯಕ್ಕೆ ಹಾನಿ ಆಗಬಹುದು.
ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವ ಇಂತಹ ವಸ್ತುಗಳನ್ನು ಬೀದಿ ಬದಿಯ ಗಾಡಿಗಳಲ್ಲಷ್ಟೇ ಅಲ್ಲ ಹೋಟೆಲ್‌ಗಳು ಹಾಗೂ ದೊಡ್ಡ ಸಮಾರಂಭಗಳಲ್ಲಿ ಆಹಾರ ತಯಾರು ಮಾಡುವವರೂ ಬಳಸುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿರುತ್ತವೆ. ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸುವುದು ಅಗತ್ಯ. ಆದರೆ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಲ್ಲಿ ಸಿಬ್ಬಂದಿಯ ಕೊರತೆ ಇದೆ. ಆರೋಗ್ಯದಷ್ಟೇ ಆಹಾರ ಸುರಕ್ಷತೆಗೂ ಹೆಚ್ಚು ಗಮನಕಡುವ ಅಗತ್ಯವಿದೆ ಎಂದೂ ಅವರು ಸ್ಪಷ್ಟಡಿಸುತ್ತಾರೆ.
ದಾಳಿ ಮಾಡುವ ಕಾರ್ಯಕ್ರಮ: ಹಾಸನ ನಗರದಲ್ಲಿ, ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಬೀದಿ ಬದಿಯ ತಿಂಡಿ ಗಾಡಿಗಳ ಎಷ್ಟಿವೆ ಎಂಬ ಬಗ್ಗೆ ದಾಖಲೆ ಸಿದ್ಧಪಡಿಸಿಲ್ಲ ಎಂದು ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಂಕಿತ ಅಧಿಕಾರಿ ಹಿರಣ್ಣಯ್ಯ ಹೇಳಿದ್ದಾರೆ. ಸಾವಿರಾರು ಗಾಡಿಗಳಲ್ಲಿ ತಿಂಡಿ, ತಿನಿಸುಗಳ ವ್ಯಾಪಾರ ನಡೆಯುತ್ತಿದೆ. ಈ ಹಿಂದೆ ತಿಂಡಿ ಗಾಡಿಗಳು ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.
ಆದರೆ ವಿವಿಧ ಒತ್ತಡಗಳಿಂದಾಗಿ ಅದು ಅನುಷ್ಠಾನವಾಗಲೇ ಇಲ್ಲ. ಒಮ್ಮೆ ದಾಳಿ ನಡೆಸಿ ಬೀದಿ ಬದಿಯ ಗಾಡಿಗಳ ತಿಂಡಿಯ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಿ ವ್ಯಾಪಾರಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ಸಾಧ್ಯವಾಗಿಲ್ಲ. ಶೀಘ್ರದಲ್ಲಿಯೇ ದಿಢೀರ್ ದಾಳಿ ನಡೆಸಿ ಸ್ವತ್ಛತೆ, ಆಹಾರದ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳುತ್ತಾರೆ.
ಬೀದಿ ಬದಿಯ ತಿಂಡಿ ಗಾಡಿಗಳನ್ನು ನಿಯಂತ್ರಿಸದಿದ್ದರೆ ಕೆಲವೇ ವರ್ಷಗಳಲ್ಲಿ ಹೋಟೆಲ್‌ಗಳನ್ನು ಮುಚ್ಚುವ ಸ್ಥಿತಿ ಬರಬಹುದು. ಕೆಲವು ತಿಂಡಿಗಳ ವ್ಯಾಪಾರಿಗಳು ಮಾಡುವಷ್ಟು ವ್ಯಾಪಾರವನ್ನು ಕೆಲವು ಹೋಟೆಲ್‌ಗಳು ಮಾಡುತ್ತಿಲ್ಲ. ಲಕ್ಷಾಂತರ ರೂ. ಬಂಡವಾಳ ಹೂಡಿ, ತೆರಿಗೆ, ವಿದ್ಯುತ್ಛಕ್ತಿ ಬಿಲ್ ಪಾವತಿಸಿ, ಹತ್ತಾರು ಕಾರ್ಮಿಕರನ್ನಿಟ್ಟುಕೊಂಡು ಹೋಟೆಲ್ ಉದ್ಯಮ ನಡೆಸುವ ನಾವು ನಷ್ಟ ಅನುಭವಿಸುತ್ತಿದ್ದೇ ವೆ. ಸಂಬಂಧಪಟ್ಟ ಇಲಾಖೆಯುವರು ಬೀದಿ ಬದಿ ಗಾಡಿಗಳನ್ನು ನಿಯಂತ್ರಿಸಬೇಕು. -ಹೆಸರು ಹೇಳಲಿಚ್ಛಿಸದ ಹೋಟೆಲ್ ಉದ್ಯಮಿ ಶುಚಿತ್ವದ ಬಗ್ಗೆ ಬಿದಿ ಬದಿಯ ತಿಂಡಿ ಗಾಡಿಗಳನ್ನೇ ಏಕೆ ಗುರಿ ಮಾಡಬೇಕು ? ಹೋಟೆಲ್‌ಗಳಲ್ಲಿನ ಸ್ವತ್ಛತೆ, ಆಹಾರದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆಯೇ? ನಾವು ಕಡಿಮೆ ಬಂಡವಾಳದಲ್ಲಿ ಗಾಡಿಗಳನ್ನಿಟ್ಟುಕೊಂಡು ಕಡಿಮೆ ದರದಲ್ಲಿ ಆಹಾರ ನೀಡುತ್ತೇವೆ. ನಾವು ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ಧೇವೆ. ಸಾಧ್ಯವಾದಷ್ಟೂ ಶುಚಿತ್ವ ಕಾಪಾಡಿಕೊಳ್ಳುತ್ತಿದ್ದೇವೆ. ಗ್ರಾಹಕರ ಎದುರೇ ಆಹಾರ ತಯಾರಿಸಿ ವಿತರಿಸುವಾಗ ಶುಚಿ ಇಲ್ಲದಿದ್ದರೆ ಗ್ರಾಹಕರು ಸುಮ್ಮನಿರುತ್ತಾರೆಯೇ ?
-ಹೆಸರು ಹೇಳಿಕೊಳ್ಳಲಿಚ್ಛಿಸದ ಬೀದಿ ಬದಿ ತಿಂಡಿ ಗಾಡಿ ವ್ಯಾಪಾರಿ * ಎನ್. ನಂಜುಂಡೇಗೌಡ