ರಾಮನಗರ: ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯ ಸಾವಿರಾರು ಮಂದಿ ಸೇರುವ ಸ್ಥಳವಾಗಿದ್ದು , ಕೋವಿಡ್ 19 ವೈರಸ್ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳಿದ್ದು, ರೈತರಿಗೆ ಇದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನಾಗರೀಕ ವಲಯದಲ್ಲಿ ವ್ಯಕ್ತವಾಗಿದೆ.
ದಿನನಿತ್ಯ ಈ ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆಹೊರೆಯ ರಾಜ್ಯಗಳಿಂದಲೂ ರೇಷ್ಮೆ ಕೃಷಿಕರು ಗೂಡು ಮಾರಲು ಬರುತ್ತಾರೆ. ಗೂಡು ಖರೀದಿಸಲು ರೀಲರ್‌ಗಳು ಸಂಖ್ಯೆಯೂ ಕಡಿಮೆ ಏನಿಲ್ಲ. ಹೀಗಾಗಿ ಇಲ್ಲಿ ನಿತ್ಯ ಸಾವಿರಾರು ಮಂದಿ ಸೇರುವ ತಾಣವಾಗಿದೆ. ಜಿಲ್ಲಾಡಳಿತ ಮತ್ತು ಮಾರುಕಟ್ಟೆಯ ಅಧಿಕಾರಿಗಳು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜಿಕರು ಆಗ್ರಹಿಸಿದ್ದಾರೆ.
ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ವ್ಯಕ್ತಿಗಳ ನಡುವೆ ಕನಿಷ್ಠ 2 ಮೀಟರ್ ಅಂತರ ಕಾಯ್ದುಕೊಳ್ಳಲು ಸರ್ಕಾರ ಸೂಚಿಸುತ್ತಲೇ ಇದೆ. ಆದರೆ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಈ ವ್ಯವಸ್ಥೆ ಕಷ್ಟ ಸಾಧ್ಯ. ಮೇಲಾಗಿ ರೇಷ್ಮೆ ಕೃಷಿಕರು ಅಕ್ಷರ ಕಲಿತವರಲ್ಲ. ಇಲ್ಲಿ ಬಹುತೇಕರಿಗೆ ಕೊರೊನಾ ಸೋಂಕಿನ ಬಗ್ಗೆ ಅರಿವಿಲ್ಲ. ದೂರದ ಊರುಗಳಿಂದ ಸಾರ್ವಜನಿಕರ ವ್ಯವಸ್ಥೆಯಲ್ಲೇ ಇಲ್ಲಿಗೆ ಬರುತ್ತಾರೆ. ಇಲ್ಲಿ ತಂಗಲು ವಿಶೇಷ ವ್ಯವಸ್ಥೆ ಇಲ್ಲ. ಶೌಚಾಲಯ ಹೊರತುಪಡಿಸಿ ಸ್ನಾನ ಮಾಡಲು ಅವಕಾಶವಿಲ್ಲ. ಹೀಗಾಗಿ ವೈಯಕ್ತಿಕ ಸ್ವಚ್ಛತೆ ಇಲ್ಲಿ ಮರೀಚಿಕೆ.
ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ: ರೇಷ್ಮೆ ಗೂಡು ಹರಾಜು ಬೆಳಗ್ಗೆ ಮುಗಿದರೂ, ರೈತರು ಸಂಜೆವರೆಗೆ ಕೆಲವೊಮ್ಮೆ ಎರಡು ಮೂರು ದಿನಗಳವರೆಗೂ ಹರಾಜು ಮೊತ್ತವನ್ನು ಪಡೆಯಲು ಕಾಯಬೇಕಾಗುತ್ತದೆ. ಇಲ್ಲಿ ರೈತರು ತಂಗುವ ವ್ಯವಸ್ಥೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ಅವರ ಆರೋಗ್ಯ ಹತ್ತಾರು ಬಗೆಯಲ್ಲಿ ಕೆಡುವ ಸಾಧ್ಯತೆ ಇದ್ದು, ಇವರ ರಕ್ಷಣೆಗೆ ಸ್ಥಳೀಯ ಆಡಳಿತ ಮತ್ತು ಗೂಡು ಮಾರುಕಟ್ಟೆಯ ಅಧಿಕಾರಿಗಳೇ ನಿರ್ವಹಿಸ ಬೇಕಾಗಿದೆ. ಆದರೆ ದುರಾದೃಷ್ಠವಶಾತ್ ಈ ವಿಚಾರದಲ್ಲಿ ಈ ಅಧಿಕಾರಿಗಳು ಸ್ವತಂತ್ರವಾಗಿ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಇಲ್ಲ. ಎಲ್ಲದಕ್ಕೂ ಸರ್ಕಾರದ ಅನುಮತಿಯೇ ಬೇಕಾಗಿದೆ. ಈ ವಿಚಾರಗಳು ಸ್ಥಳೀಯ ಘಟಾನುಘಟಿ ರಾಜಕೀಯ ನಾಯಕರಿಗೆಗೊತ್ತಿದ್ದರೂ, ಯಾವುದೊಂದು ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ.
ಮಾರುಕಟ್ಟೆ ಮುಚ್ಚಿದರೆ? : ರೇಷ್ಮೆ ಕೃಷಿ ಮತ್ತು ರೀಲಿಂಗ್ ಉದ್ಯಮ ಜಿಲ್ಲೆಯ ಆರ್ಥಿ ಕತೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಉದ್ಯಮ. ಹಾಗೊಮ್ಮೆ ರೇಷ್ಮೆ ಗೂಡು ಮಾರುಕಟ್ಟೆಯನ್ನು ಮುಚ್ಚಿಬಿಟ್ಟರೆ ಜಿಲ್ಲೆಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿ ಜನಜೀವನ ಅಸ್ತ್ಯವ್ಯಸ್ತವಾಗುವುದು ನಿಸ್ಸಂಶಯ. ಕಳೆದೊಂದು ವಾರದಿಂದ ರೇಷ್ಮೆ ಗೂಡು ದರಗಳು ಕುಸಿಯುತ್ತಿದ್ದು, ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ.
ರೇಷ್ಮೆ ಫಿಲೇಚರ್‌ಗಳು ಸುರಕ್ಷಿತವಲ್ಲ! : ಕೋವಿಡ್ 19 ವೈರಸ್ ಸೋಂಕು ಮಾನವ ದೇಹದ ಉಸಿರಾಟದ ವ್ಯವಸ್ಥೆಯನ್ನೇ ಹಾಳಗೆಡುವ ಮಹಾಮಾರಿ. ರೇಷ್ಮೆ ಗೂಡಿನಿಂದ ನೂಲು ತೆಗೆಯುವ ವೇಳೆ ಉತ್ಪತ್ತಿಯಾಗುವ ಅಲೆರ್ಜನ್‌ಗಳು ( ಅಲರ್ಜಿ ಉಂಟು ಮಾಡುವ ವೈರಾಣು) ಕೆಮ್ಮು, ಆಸ್ತಮಾಗಳಿಗೆ ಕಾರಣವಾಗುವುದು ಹೊಸ ವಿಚಾರವೇನಲ್ಲ. ಆಕಸ್ಮಿಕವಾಗಿ ಈ ಶ್ರಮಿಕ ಕಾರ್ಮಿಕ ವರ್ಗಕ್ಕೆ ಸೋಂಕು ತಗುಲಿದರೆ ದೇಹದ ಮೇಲಾಗುವ ಪರಿಣಾಮ ಘೋರ.
- ಬಿ.ವಿ.ಸೂರ್ಯ ಪ್ರಕಾಶ್