ಮಣಿಪಾಲ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಅಕ್ಷರಶಃ ನಡುಗಿಸಿದೆ. ಬೆಳ್ಳಾರೆ ಪ್ರಕರಣ ಎಷ್ಟು ಬಿಸಿ ಮುಟ್ಟಿಸಿದೆ ಎಂದರೆ ಸಿಎಂ ಮಧ್ಯರಾತ್ರಿ ಸುದ್ದಿಗೋಷ್ಠಿ ಕರೆದು ತಮ್ಮ ಸಾಧನಾ ಸಮಾವೇಶ ಜನೋತ್ಸವ ಕಾರ್ಯಕ್ರಮವನ್ನೇ ರದ್ದು ಮಾಡಿದ್ದಾರೆ. ಹಾಗಾದರೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಯೊಂದರಲ್ಲಿ ನಡೆದ ಕೊಲೆ ಪ್ರಕರಣ ಬಿಜೆಪಿಗೆ ಮಗ್ಗುಲ ಮುಳ್ಳಾಗಿದ್ದು ಹೇಗೆ? ಹಿಂದುತ್ವದ ಬಲದಿಂದಲೇ ಕಳೆದ ಚುನಾವಣೆಯಲ್ಲಿ ಕರಾವಳಿಯನ್ನು ಸ್ವೀಪ್ ಮಾಡಿದ್ದ ಬಿಜೆಪಿಗೆ ಮತ್ತೊಂದು ಚುನಾವಣಾ ವರ್ಷದಲ್ಲಿ ಅದೇ ಕರಾವಳಿ ಹಿಂದುತ್ವ ಬಿಸಿತುಪ್ಪ ಆಗಿದ್ದು ಹೇಗೆ?
ಕರ್ನಾಟಕ ಬಿಜೆಪಿಯ ಪ್ರಯೋಗ ಶಾಲೆ ಎಂಬಂತ್ತಿದ್ದ ಕರಾವಳಿ ಇದೀಗ ಕೆರಳಿದೆ. ಓರ್ವ ಕಾರ್ಯಕರ್ತನ ಕೊಲೆ ಪಕ್ಷದ ವಿರುದ್ಧವೇ ದೊಡ್ಡ ಅಲೆ ಎಬ್ಬಿಸಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಇಲ್ಲಿ ಆಕ್ರೋಶ ಇರುವುದು ಬಿಜೆಪಿ ಪಕ್ಷದ ವಿರುದ್ಧವೇ ಹೊರತು ಸಂಘಟನೆ ಮೇಲಲ್ಲ. ಇದಕ್ಕೆ ಪ್ರಮುಖ ಕಾರಣ ಪಕ್ಷದ ಕಾರ್ಯಕರ್ತರ ಅವಗಣನೆ ಮತ್ತು ಪ್ರತಿ ಬಾರಿ ಹಿಂದೂ ಯುವಕರ ಕೊಲೆಯಾದಾಗ ಅದು ತನಗೆ ಲಾಭವಾಗುತ್ತದೆ ಎಂಬ ಶುದ್ಧ ರಾಜಕೀಯ ಲೆಕ್ಕಾಚಾರ ಹಾಗೂ ಅದರಿಂದ ಹುಟ್ಟಿಕೊಂಡ ಒಂದು ರೀತಿಯ ಉಡಾಫೆ.
2018ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ವರವಾಗಿದ್ದು ಆಗಿನ ಸಿಎಂ ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಇಮೇಜ್. ಎಲೆಕ್ಷನ್ ಗೆ ಮೊದಲು ಕೆಲವು ತಿಂಗಳ ಅಂತರದಲ್ಲಿ ನಡೆದ ಕೆಲವು ಹಿಂದೂ ಯುವಕರ ಕೊಲೆ (ಶರತ್ ಮಡಿವಾಳ, ಪ್ರಶಾಂತ್ ಪೂಜಾರಿ, ದೀಪಕ್ ಕಾಟಿಪಳ್ಳ) ಕಾಂಗ್ರೆಸ್ ವಿರೋಧಿ ಅಲೆಗೆ ಮತ್ತಷ್ಟು ಬೂಸ್ಟ್ ನೀಡಿದ್ದು ಸುಳ್ಳಲ್ಲ. ಇದು ನೆಲಮಟ್ಟದಲ್ಲಿ ಹೇಗೆ ಕೆಲಸ ಮಾಡಿತ್ತು ಎಂದರೆ “ಸರ್ಕಾರ ಕೆಲಸವೇನೋ ಮಾಡಿದೆ, ಆದರೆ ಹಿಂದೂಗಳಿಗೆ ಬದುಕಲು ಬಿಡುತ್ತಿಲ್ಲ“ ಎಂಬ ಮಾತುಗಳು ಕೇಳಿಬರುತ್ತಿತ್ತು. ಇದನ್ನೇ ಬಳಸಿಕೊಂಡ ಬಿಜೆಪಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲ ಹೊರತು ಪಡಿಸಿ ಉಳಿದೆಲ್ಲಾ ಕಡೆ ಗೆಲುವು ಸಾಧಿಸಿತ್ತು. ಅದರಲ್ಲೂ ಆರು ಮಂದಿಗೆ ಮೊದಲ ಗೆಲುವು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಹಿಂದೂ ಕಾರ್ಯಕರ್ತರನ್ನು ಟಚ್ ಮಾಡಕ್ಕಾಗಲ್ಲ ಎಂದು ಬಿಜೆಪಿ ನಾಯಕರು ಭಾಷಣ ಬಿಗಿದಿದ್ದರು. ಆದರೆ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದಿದ್ದ ಹರ್ಷ ಕೊಲೆ ಮತ್ತು ಅದರ ಬಳಿಕ ಆಕೆಯ ಸಹೋದರಿಗೆ ಆದ ಪರಿಸ್ಥಿತಿ ಕಂಡು ಕಾರ್ಯಕರ್ತರು ಬೇಸರಗೊಂಡಿದ್ದರು. ನಾವು ಹೆಗಲು ಕೊಟ್ಟು ನಮ್ಮ ಸಹಾಯದಿಂದ ಅಧಿಕಾರಕ್ಕೆ ಬಂದ ಈ ನಾಯಕರು, ನಂತರ ನಮ್ಮನ್ನು ಕಾಲ ಕಸ ಮಾಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲೂ ಕೇಳಿ ಬರುತ್ತಿತ್ತು. ಪಕ್ಷ ಏನು ಮಾಡಿದರೂ ಸಮರ್ಥನೆ ಮಾಡುತ್ತಿದ್ದ ಕಟ್ಟರ್ ಅಭಿಮಾನಿಗಳು ಕೂಡಾ ಇತ್ತೀಚೆಗೆ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿಯಲ್ಲಿ ಹಲವು ವರ್ಷಗಳಿಂದ ದುಡಿದಿದ್ದ ಪ್ರವೀಣ ನೆಟ್ಟಾರು ಕೊಲೆಯಿಂದಾಗಿ ಕಾರ್ಯಕರ್ತರ ಆಕ್ರೋಶ ಕಟ್ಟೆಯೊಡೆದಿದೆ.
ಇದನ್ನೂ ಓದಿ:ದ.ಕ.: ಇತ್ತೀಚಿನ ವರ್ಷಗಳಲ್ಲಿ ನಡೆದ ಹತ್ಯೆಗಳು: ಪ್ರಶಾಂತ, ಶರತ್, ದೀಪಕ್, ಪ್ರವೀಣ್?
ರಾಜ್ಯದ್ಯಂತ ಬಿಜೆಪಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಎಲ್ಲರ ರಾಜೀನಾಮೆ ಪತ್ರದ ಒಕ್ಕಣೆ ಒಂದೇ, ‘ಕಾರ್ಯಕರ್ತರ ಹಿತ ಕಾಯದ ಪಕ್ಷ’! ಇದೇ ಕಮಲ ನಾಯಕರ ತಲೆನೋವಿಗೆ ಕಾರಣವಾಗಿದ್ದು. ಕಾರ್ಯಕರ್ತರೆಲ್ಲರೂ ಒಂದಾಗಿ ಪಕ್ಷದ ಪರ ಕೆಲಸ ಮಾಡಬೇಕಾದ ಸಮಯದಲ್ಲಿ ಕಾರ್ಯಕರ್ತ ಸಮೂಹ ಪಕ್ಷದ ವಿರುದ್ಧ ಸಮರ ಸಾರಲು ನಿಂತಿರುವುದು ನಾಯಕರ ಕೈಕಾಲು ಕಟ್ಟಿ ಹಾಕಿದಂತಾಗಿಸಿದೆ.
ಪ್ರವೀಣ್ ಮನೆಗೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು, ಕಾರನ್ನು ಹಿಡಿದು ಅಲುಗಾಡಿಸಿದ್ದು ಸಂಪೂರ್ಣ ಆಕ್ರೋಶದ ಒಂದು ಸಿಂಬಾಲಿಕ್ ಎಂಬಂತ್ತಿತ್ತು. ಸಂಪೂರ್ಣ ಬಿಜೆಪಿ ಕಾರ್ಯಕರ್ತರ ಸಾಗರದ ನಡುವೆ ಪಕ್ಷದ ರಾಜ್ಯಾಧಕ್ಷ ನಳಿನ್ ಕಟೀಲ್ ಒಂಟಿಯಾಗಿದ್ದರು. ಬಿಜೆಪಿ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಇದೇ ಪರಿಸ್ಥಿತಿ ಚುನಾವಣೆ ಫಲಿತಾಂಶದಲ್ಲೂ ಬಂದರೆ ಅಚ್ಚರಿ ಏನಿಲ್ಲ.
ಹಿಂದುತ್ವ- ಹಿಂದೂ ಪರ ಸಂಘಟನೆಗಳ ರಾಜಕೀಯ ಮುಖವಾಣಿಯಾಗಿ ಬಂದ ಬಿಜೆಪಿಗೆ ಇದೀಗ ಅದೇ ಹಿಂದುತ್ವ ಬಿಸಿಯುಂಡೆಯಾಗಿದೆ. ಹಿಂದುತ್ವ ಬಿಟ್ಟು ಪಕ್ಷ ಮುಂದುವರಿಯುವಂತಿಲ್ಲ. ಆದರೆ ಇದೇ ಪರಿಸ್ಥಿತಿಯಲ್ಲಿ ಚುನಾವಣೆ ಕಡೆಗೆ ಹೋದರೆ ಭದ್ರ ಕೋಟೆಯಲ್ಲಿ ಬಿರುಕು ಬೀಳುವುದು ನಿಶ್ಚಿತ ಎಂಬ ವಿಚಾರ ಬುಧವಾರ ರಾಜ್ಯ ನಾಯಕರ ಅರಿವಿಗೆ ಬಂದಿರಬಹುದು.
ಕೀರ್ತನ್ ಶೆಟ್ಟಿ ಬೋಳ