ನವದೆಹಲಿ: ಪಾಕಿಸ್ತಾನ ಕಂಡರೆ ನಮಗೆ ಬಿಲ್‌ಕುಲ್ ಆಗುವುದೇ ಇಲ್ಲ! ಇದು ಬಹುತೇಕ ಭಾರತೀಯರ ಒಕ್ಕೊರಲ ಮಾತು. ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆ “ಪ್ಯೂ’ನ ಸಮೀಕ್ಷೆ ಪ್ರಕಾರ, ಶೇ.72 ರಷ್ಟು ಭಾರತೀಯರಿಗೆ ಪಾಕಿಸ್ತಾನವೆಂದರೆ ಇಷ್ಟವಿಲ್ಲ. ಅದರಲ್ಲೂ ಶೇ.64 ರಷ್ಟು ಮಂದಿಗೆ ಪಾಕಿಸ್ತಾನವೆಂದರೆ ನಖಶಿಖಾಂತ ಸಿಟ್ಟು. 2013ರಿಂದಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದ ಬಗ್ಗೆ ದಾಖಲೀಕರಣ ಮಾಡುತ್ತಿರುವ ಪ್ಯೂ ರಿಸರ್ಚ್ ಸಂಸ್ಥೆ, ಇದೇ ಮೊಟ್ಟ ಮೊದಲ ಬಾರಿಗೆ, ಭಾರತೀಯರಲ್ಲಿ ಪಾಕ್ ಕುರಿತ ಭಾರಿ ದ್ವೇಷವನ್ನು ಕಂಡಿದೆ.
ಇದು ಕೇವಲ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಂದಿಯ ಭಾವನೆ ಎಂದು ತಿಳಿದರೆ ಅದು ತಪ್ಪು. ಪಾಕಿಸ್ತಾನದವರನ್ನು ಬಿಜೆಪಿಯವರಷ್ಟೇ ಅಲ್ಲ, ಕಾಂಗ್ರೆಸ್‌ನವರೂ ತೀವ್ರವಾಗಿ ವಿರೋಧಿಸುತ್ತಾರೆ ಎಂದು ಈ ಸಂಶೋಧನೆ ಹೇಳಿದೆ. ಅಂದರೆ ಬಿಜೆಪಿಯ ಶೇ.70 ಮತ್ತು ಕಾಂಗ್ರೆಸ್‌ನ ಶೇ.63 ರಷ್ಟು ಮಂದಿ ಪಾಕ್ ಕಂಡರೆ ಇಷ್ಟವಿಲ್ಲ ಎಂದಿದ್ದಾರೆ.
ಈ ಮಧ್ಯೆ ಪಾಕಿಸ್ತಾನ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಜನ ಒಪ್ಪಿಲ್ಲ. ಇದು ವ್ಯರ್ಥಶ್ರಮವೆಂದೇ ಭಾವಿಸಿದ್ದಾರೆ. ಅಂದರೆ, ಶೇ.21ರಷ್ಟು ಮಂದಿ ಮಾತ್ರ ಪಾಕ್ ಕುರಿತ ಮೋದಿ ನಿಲುವನ್ನು ಒಪ್ಪಿದ್ದಾರೆ. ಆದರೆ ವಿಶೇಷವೆಂದರೆ ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರದ ನಿಲುವನ್ನು 10ರಲ್ಲಿ 4 ಮಂದಿ ಒಪ್ಪಿದ್ದಾರೆ. ಅದರಲ್ಲೂ 18ರಿಂದ 29ರ ಒಳಗಿನ ಯುವ ಜನತೆ ಕಾಶ್ಮೀರ ವಿಚಾರದಲ್ಲಿ ಮೋದಿ ಅವರನ್ನು ಹೆಚ್ಚು ಕಡಿಮೆ ಸಂಪೂರ್ಣವಾಗಿ ಒಪ್ಪಿದೆ. ಇದಕ್ಕೆ ಭಿನ್ನವಾಗಿ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಕಾಶ್ಮೀರ ಸಮಸ್ಯೆ ಪರಿಹರಿಸುತ್ತಿರುವ ಮೋದಿ ಸರ್ಕಾರದ ಪ್ರಯತ್ನವನ್ನು ಅರ್ಧದಷ್ಟು ಮಾತ್ರ ಒಪ್ಪಿದ್ದಾರೆ.
ಸರ್ಜಿಕಲ್ ಸ್ಟ್ರೈಕ್‌ಗೆ ಓಕೆ
ಶೇ.62 ರಷ್ಟು ಭಾರತೀಯರು ಕಾಶ್ಮೀರ ಸಮಸ್ಯೆಯನ್ನು ಭಾರಿ ದೊಡ್ಡದು ಎಂದೇ ನಂಬಿದ್ದು, ಮಾತುಕತೆ ಏಕೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಇವರ ಪ್ರಕಾರ, ಏಕದಂ ಬಂದೂಕು ತೆಗೆದುಕೊಂಡು ಹೋಗಿ, ಕಾರ್ಯಾಚರಣೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.63 ರಷ್ಟು ಮಂದಿ ಸೇನಾ ಕಾರ್ಯಾಚರಣೆ ಬಗ್ಗೆಯೇ ಒಲವು ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಯ ಮುಖ್ಯಾಂಶಗಳು
ಪಾಕ್ ಕಂಡರೆ ದ್ವೇಷ – ಶೇ.72
ಬಿಜೆಪಿ ಬೆಂಬಲಿಗರು – ಶೇ.70
ಕಾಂಗ್ರೆಸ್ ಬೆಂಬಲಿಗರು – ಶೇ.63
ಪಾಕ್ ಕುರಿತ ಮೋದಿ ನಿಲುವು
ಸರಿ ಇಲ್ಲ – ಶೇ.79
ಸರಿಯಾಗಿದೆ – ಶೇ.21
ಕಾಶ್ಮೀರ ಸಮಸ್ಯೆ ದೊಡ್ಡದೇ?
ಹೌದು – ಶೇ.62
ಇಲ್ಲ – ಶೇ.38
ಕಾಶ್ಮೀರ ಸಮಸ್ಯೆಗೆ ಸೇನಾ ಕಾರ್ಯಾಚರಣೆಯೇ ಪರಿಹಾರ – ಶೇ.63