ನವದೆಹಲಿ: ಒಡಿಶಾದ ಬಾಲಸೋರ್ ನಲ್ಲಿ ಶುಕ್ರವಾರ (ಜೂನ್ 02) ಸಂಜೆ ಸಂಭವಿಸಿದ ಭೀಕರ ಮೂರು ರೈಲುಗಳ ಅಪಘಾತದಲ್ಲಿ ಸುಮಾರು 280ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, ಸಾವಿರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಏಕಾಏಕಿ ಮೂರು ರೈಲು ಡಿಕ್ಕಿ ಹೇಗಾಯಿತು ಎಂಬುದು ಇದೀಗ ಚರ್ಚೆಯ ವಿಷಯವಾಗಿದ್ದು, ಇದಕ್ಕೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
5-10 ನಿಮಿಷಗಳ ಅಂತರದಲ್ಲಿ ನಡೆಯಿತು ಭೀಕರ ಅಪಘಾತ:
ಆರಂಭದಲ್ಲಿ ಕೋರಮಂಡಲ್ ಶಾಲಿಮಾರ್ ಎಕ್ಸ್ ಪ್ರೆಸ್ ರೈಲು ಒಡಿಶಾದ ಬಾಲಸೋರ್ ನಲ್ಲಿ ಹಳಿ ತಪ್ಪಿದ್ದ ಪರಿಣಾಮ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆಯಲ್ಲೇ ಯಶವಂತಪುರ್-ಹೌರಾ ಸೂಪರ್ ಫಾಸ್ಟ್ ರೈಲು ಹಳಿತಪ್ಪಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲವೇ ನಿಮಿಷಗಳಲ್ಲಿ ನಿದ್ದೆಯಲ್ಲಿದ್ದ ಪ್ರಯಾಣಿಕರು ಕೊನೆಯುಸಿರೆಳೆದಿದ್ದರು.
ಕೋರಮಂಡಲ್ ಶಾಲಿಮಾರ್ ಎಕ್ಸ್ ಪ್ರೆಸ್ ರೈಲು ಹೌರಾದಿಂದ ಚೆನ್ನೈಗೆ ತೆರಳುತ್ತಿತ್ತು. ಸುಮಾರು 7ಗಂಟೆ ಸುಮಾರಿಗೆ ಕೋರಮಂಡಲ್ ರೈಲು ಹಳಿತಪ್ಪಿ, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಆ ಬಳಿಕ ಯಶವಂತ್ ಪುರ್ ಹೌರಾ ಸೂಪರ್ ಫಾಸ್ಟ್ ರೈಲು ಡಿಕ್ಕಿ ಹೊಡೆದಿತ್ತು. ಈ ಘಟನೆ 6-50ರಿಂದ 7ಗಂಟೆ ನಡುವೆ ಸಂಭವಿಸಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಘಟನೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹಲವು ಪ್ರಯಾಣಿಕರ ಶವಗಳು ರೈಲಿನ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ತ್ವರಿತವಾಗಿ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಹಳಿಯ ತುಂಬಾ ರಕ್ತದೋಕುಳಿ, ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳ ರಾಶಿ!
ಕೋರಮಂಡಲ್ ಎಕ್ಸ್ ಪ್ರೆಸ್ ರೈಲಿನ ಭೀಕರ ಅಪಘಾತದ ಕುರಿತು ಪ್ರಯಾಣಿಕರಾದ ಅನುಭವ್ ದಾಸ್ ಅವರು ವಿವರಿಸಿದ್ದು ಹೀಗೆ… ಏಕಾಏಕಿ ಅಪಘಾತ ಸಂಭವಿಸಿದ್ದು, ನಮಗೆ ಏನಾಯ್ತು ಎಂದು ತಿಳಿಯುವಷ್ಟರಲ್ಲಿ ಚೀರಾಟ, ಅಳು ಕೇಳಿಸುತ್ತಿತ್ತು…ರೈಲಿನ ಬೋಗಿಯಿಂದ ಕೆಳಗಿಳಿದು ಬಂದು ನೋಡಿದಾಗ ರೈಲ್ವೆ ಹಳಿಯ ತುಂಬಾ ರಕ್ತದೋಕುಳಿ ಹರಿಯುತ್ತಿತ್ತು..ಸುಮಾರು 200ಕ್ಕೂ ಅಧಿಕ ಶವಗಳು ಕೈ-ಕಾಲು ತುಂಡಾಗಿ ಬಿದ್ದಿದ್ದು…ಈ ಭಯಾನಕ ದೃಶ್ಯವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪವಾಡಸದೃಶವಾಗಿ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಬಹುಶಃ ಇದೊಂದು ಅತೀ ದೊಡ್ಡ ರೈಲ್ವೆ ದುರಂತಗಳಲ್ಲಿ ಒಂದಾಗಿದೆ ಎಂದು ಅನುಭವ್ ದಾಸ್ ಟ್ವೀಟ್ ಮೂಲಕ ತಿಳಿಸಿದ್ದಾರೆ.