Advertisement

ಸಿನಿಮಾ ಸ್ಫೂರ್ತಿ; ಸುಳಿವು ಕೊಟ್ಟ ಮಟನ್ ಸೂಪ್, ಸಿಕ್ಕಿಬಿದ್ದ ಹಂತಕಿ !

02:59 PM Dec 13, 2017 | Team Udayavani |

ಹೈದರಾಬಾದ್:ಟಾಲಿವುಡ್ ನಲ್ಲಿ ಸೂಪರ್ ಹಿಟ್ ಆದ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್  ನಟನೆಯ ಯೆವಡು ಸಿನಿಮಾದಿಂದ ಸ್ಫೂರ್ತಿ ಪಡೆದು ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಸಿನಿಮೀಯ ರೀತಿಯಲ್ಲೇ ಕೊಲೆಗೈದು ಸಿಕ್ಕಿಹಾಕಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಟಾಲಿವುಡ್ ನ ಯೆವಡು( ಬಾಲಿವುಡ್ ನ ಫೇಸ್ ಆಫ್) ಸಿನಿಮಾ ಸ್ಫೂರ್ತಿ!

27 ವರ್ಷದ ಸ್ವಾತಿ ನಾಗರ್ ಕುರ್ನೂಲ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಳು. ಈಕೆ ಸುಧಾಕರ ರೆಡ್ಡಿ(32) ಜತೆ ವಿವಾಹವಾಗಿತ್ತು. ವಿವಾಹವಾಗಿ ಮೂರು ವರ್ಷ ಕಳೆದಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದರು. ಏತನ್ಮಧ್ಯೆ ಬೆನ್ನು ನೋವಿನಿಂದ ಬಳಲುತ್ತಿದ್ದ ಸ್ವಾತಿಯನ್ನು ಫಿಸಿಯೋ ಥೆರಪಿಸ್ಟ್ ವೈದ್ಯ ರಾಜೇಶ್ ಬಳಿ ಪತಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದ. ಮುಂದೆ ರಾಜೇಶ್ ಮತ್ತು ಸ್ವಾತಿ ನಡುವೆ ಪ್ರೇಮಾಂಕುರವಾಗಿತ್ತು!

ಕೊಲೆಗೆ ಸ್ಕೆಚ್ ಹಾಕಿದ ಪತ್ನಿ!

ಪ್ರಿಯಕರ ರಾಜೇಶ್ ಜತೆ ಸೇರಿಕೊಂಡ ಸ್ವಾತಿ ತನ್ನ ಗಂಡ ಸುಧಾಕರ್ ನನ್ನು ಹತ್ಯೆಗೈದು ಆಸ್ತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಚು ರೂಪಿಸಿದ್ದಳು.

Advertisement

ಅದು ಭರ್ಜರಿ ಸಂಚು!

ನವೆಂಬರ್ 27ರಂದು ಸುಧಾಕರ್ ರೆಡ್ಡಿಗೆ ಅನಸ್ತೇಶಿಯಾ(ಪ್ರಜ್ಞೆ ತಪ್ಪಿಸುವ) ಕೊಟ್ಟಿದ್ದರು, ಬಳಿಕ ರೆಡ್ಡಿ ಪ್ರಜ್ಞಾತಪ್ಪಿದ್ದ. ತದನಂತರ ಆತನ ತಲೆ ಮೇಲೆ ಹೊಡೆದು ಕೊಲೆಗೈದು, ಕಾಡಿನಲ್ಲಿ ಶವವನ್ನು ಸುಟ್ಟು ಹಾಕಿದ್ದರು.

ಇದೆಲ್ಲಾ ಘಟನೆ ನಂತರ ಯೆವಡು ಸಿನಿಮಾದಂತೆ ತನ್ನ ಪ್ರಿಯಕರನ ಮುಖಕ್ಕೆ ಆಸಿಡ್ ಎರಚಿದ್ದಳು. ತನ್ನ ಗಂಡನ ಮೇಲೆ ಯಾರೂ ಅಪರಿಚಿತರು ದಾಳಿ ನಡೆಸಿದ್ದರು ಎಂದು ಕುಟುಂಬಸ್ಥರಲ್ಲಿ ಕಥೆ ಕಟ್ಟಿದ್ದಳು. ಆಸಿಡ್ ಎರಚಿದ್ದು ಯಾಕೆಂದರೆ ರಾಜೇಶ್ ನಿಗೆ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸೋದು!

ಮುಖ ಸುಟ್ಟುಕೊಂಡಿದ್ದ ಪ್ರಿಯಕರನ್ನು ಪತಿ ಎಂದೇ ಎಲ್ಲರನ್ನು ನಂಬಿಸಲು ಯತ್ನಿಸಿದ್ದಳು. ಇದರ ಮುಂದುವರಿದ ಭಾಗ ಎಂಬಂತೆ ರಾಜೇಶ್ ನ ಮುಖದ ಪ್ಲ್ಯಾಸ್ಟಿಕ್ ಸರ್ಜರಿಗಾಗಿ ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಳು. ಕಥೆ ತಿರುವು ಪಡೆದುಕೊಂಡಿದ್ದೇ ಇಲ್ಲಿಂದ!

ಸಿಕ್ಕಿಬಿದ್ದ ಚಾಲಾಕಿ ಪತ್ನಿ!

ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಮಟನ್ ಸೂಪ್ ಅನ್ನು ತಿರಸ್ಕರಿಸಿದ್ದೇ ಪೊಲೀಸರಿಗೆ ದೊಡ್ಡ ಸುಳಿವು ಕೊಟ್ಟಿತ್ತು! ರಾಜೇಶ್, ಸ್ವಾತಿಯ ಪ್ಲ್ಯಾನ್ ತಲೆಕೆಳಗಾಗಿದ್ದೇ ಮಟನ್ ಸೂಪ್ ನಿಂದ!

ಆಸ್ಪತ್ರೆಗೆ ದಾಖಲಿಸಿದ್ದ ದಿನದಿಂದಲೇ ರೆಡ್ಡಿಯ ಮನೆಯವರಿಗೆ ಅನುಮಾನ ಕಾಡಲು ಶುರುವಾಗಿತ್ತು. ಸುಧಾಕರ್ ರೆಡ್ಡಿ ತಾಯಿ, ಅಣ್ಣ ರಾಜೇಶ್ ಮೇಲೆ ಅನುಮಾನ ಬಂದು ಪರೀಕ್ಷಿಸಲು ಮುಂದಾಗಿದ್ದರು. ಆದರೆ ಮನೆಯವರ ಪ್ರಶ್ನೆಗಳಿಗೆ ಉತ್ತರ ಕೊಡಲು ರಾಜೇಶ್ ಗೆ ಸಾಧ್ಯವಾಗುತ್ತಿರಲಿಲ್ಲವಾಗಿತ್ತು. ಆತ ಬರೆದು ತೋರಿಸುವ ಮೂಲಕ ಸಂವಹನ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ರೆಡ್ಡಿ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಟನ್ ಸೂಪ್ ನೀಡಿದ್ದಾಗ ರಾಜೇಶ್ ಅದನ್ನು ನಿರಾಕರಿಸಿದ್ದ, ತಾನು ಶುದ್ಧ ಸಸ್ಯಹಾರಿ ಎಂದು ಹೇಳಿದ್ದ. ಹಾಗಾದರೆ ಇಲ್ಲೇನೋ ಸಂಚು ನಡೆದಿದೆ ಎಂದು ಊಹಿಸಿದ ಪೊಲೀಸರು ಪತ್ನಿ ಸ್ವಾತಿಯ ವಿಚಾರಣೆ ನಡೆಸಿದಾಗ, ಸತ್ಯ ಬಯಲಾಗಿತ್ತು. ತನ್ನ ಪ್ರಿಯಕರನ ಜತೆ ಸೇರಿ ಪತಿಯನ್ನು ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಳು!

ಭಾನುವಾರ ಸ್ವಾತಿಯನ್ನು ಪೊಲೀಸರು ಬಂಧಿಸಿದ್ದರು. ಸ್ವಾತಿ 2014ರಲ್ಲಿ ಬಿಡುಗಡೆಯಾಗಿದ್ದ ತೆಲುಗು ಸಿನಿಮಾ ಯೆವಡು ಸ್ಫೂರ್ತಿಯಿಂದ ಕೊಲೆ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ರಾಜೇಶ್ ಡಿಸ್ ಚಾರ್ಜ್ ಆದ ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next