ಬೆಂಗಳೂರು: “ಶಿಕ್ಷಕರ ವರ್ಗಾವಣೆಯ ಕರಡು ಸಿದ್ಧವಾಗಿದೆ. ಕರಡನ್ನು ಶಿಕ್ಷಕರ ದಿನಾಚರಣೆಯಂದೇ ಪ್ರಕಟಿಸುತ್ತೇವೆ,’ ಎಂದು ಹೇಳಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಈ ವರೆಗೆ ಅದನ್ನು ಪ್ರಕಟಿಸುವ ಮನಸ್ಸೇ ಮಾಡಿಲ್ಲ…! ಶಿಕ್ಷಕರಿಗೆ ಅನುಕೂಲವಾಗುಂತೆ ಕೆಲವೊಂದು ಬಲಾವಣೆ ತಂದಿದ್ದೇವೆ. ದಂಪತಿ ಶಿಕ್ಷಕರಿಗೆ ಹೆಚ್ಚಿನ ವಿನಾಯ್ತಿ ನೀಡುತ್ತಿದ್ದೇವೆ.
ಒಂದೇ ಶಾಲೆಯಲ್ಲಿ 10 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ವರ್ಗಾಯಿಸುತ್ತೇವೆ. ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರನ್ನು ವರ್ಗಾಯಿಸುವುದಿಲ್ಲ. ಎಂಬಿತ್ಯಾದಿ ಹಲವು ಅಂಶಗಳನ್ನು ಆಗಾಗ ಸಚಿವ ತನ್ವೀರ್ ಸೇಠ್ ಸಾರ್ವಜನಿಕವಾಗಿ ಹೇಳುತ್ತಾ ಬಂದಿದ್ದರು. ಆದರೆ, ವರ್ಗಾವಣೆಗೆ ಬೇಕಾದ ಕರಡು ಪ್ರಕಟಿಸುವ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ಮಾತ್ರ ನೀಡುತ್ತಿಲ್ಲ.
ರೋಸಿಹೋದ ಶಿಕ್ಷಕರು: ವರ್ಗಾವಣೆಗಾಗಿ ಕಾಯುತ್ತಿರುವ ಶಿಕ್ಷಕರು, ಸೆ.5ರಿಂದ ಪದೇಪದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಪರಿಶೀಲಿಸುತ್ತಿದ್ದಾರೆ. ಆದರೆ, ವರ್ಗಾವಣೆಗೆ ಸಂಬಂಧಿಸಿದ ಯಾವ ವಿಷಯವನ್ನು ಪ್ರಕಟಿಸಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.
ಧರಣಿ ಸತ್ಯಾಗ್ರಹ: ಅಖೀಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನೂತನ ಪಿಂಚಣಿ ರದ್ಧತಿ, ರಾಷ್ಟ್ರೀಯ ಪ್ರಾಥಮಿಕ ಶಾಲಾ ಮಂಡಳಿ ಸ್ಥಾಪನೆ, ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಸೌಲಭ್ಯ ಜಾರಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಸ್ಥಾಪನೆ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಅವಕಾಶ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆ.7ರ ಬೆಳಗ್ಗೆ 11 ಗಂಟೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.