ಬೆಂಗಳೂರು: ಕೇಂದ್ರ ಸರ್ಕಾರ ರಫೆಲ್ ಯುದ್ಧ ವಿಮಾನ ಖರೀದಿಗೆ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಕೇಂದ್ರದ ಮಾಜಿ ಸಚಿವ ಜೈಪಾಲ ರೆಡ್ಡಿ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಚ್‌ಎಎಲ್‌ಗೆ ನೀಡಿದ್ದ ಯುದ್ಧ ವಿಮಾನ ತಯಾರಿಕೆ ಅವಕಾಶವನ್ನು ಕಸಿದುಕೊಂಡು ಫ್ರಾನ್ಸ್‌ನ ಡಸಾಲ್ಟ್ ಕಂಪನಿಗೆ ನೀಡಲಾಗಿದೆ.
ಎಚ್‌ಎಎಲ್‌ಗೆ ಟೆಂಡರ್ ನೀಡಿದ್ದರಿಂದ ಸುಮಾರು 10 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತಿತ್ತು. ಕೇಂದ್ರ ಸರ್ಕಾರ ಟೆಂಡರ್ ರದ್ದು ಪಡಿಸಿದ್ದರಿಂದ ಸರ್ಕಾರದ ಸಂಸ್ಥೆಗೆ ನಷ್ಟವಾಗಿದೆ. ಅಲ್ಲದೇ ಸಾವಿರಾರು ಯುವಕರು ಉದ್ಯೋಗ ವಂಚಿತರಾಗುವಂತೆ ಮಾಡಿದೆ ಎಂದು ದೂರಿದರು.
ಆದರೆ, ಪ್ರಧಾನಿ ನರೇಂದ್ರ ಮೋದಿ ರಿಲಾಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡಲು ಡಸಾಲ್ಟ್ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. 126 ವಿಮಾನ ಖರೀದಿಸಬೇಕಿದ್ದ ಹಣದಲ್ಲಿ ಕೇವಲ 36 ವಿಮಾನ ಖರೀದಿ ಮಾಡಿದ್ದಾರೆ. ಇಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಅತ್ಯಂತ ಕಡಿಮೆ ದರದಲ್ಲಿ ಯುದ್ಧ ವಿಮಾನಗಳನ್ನು ಖರೀದಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವರು ಹೇಳುತ್ತಾರೆ. ಉಕ್ಕು ಉದ್ಯಮದಲ್ಲಿ ರಿಲಾಯನ್ಸ್ ಕಂಪನಿಗೆ ಆಗಿರುವ ನಷ್ಟವನ್ನು ವಿಮಾನ ಖರೀದಿ ಮೂಲಕ ಭರಿಸುವ ಪ್ರಯತ್ನ ನಡೆಯುತ್ತಿದೆ, ಈ ವ್ಯವಹಾರಕ್ಕೆ ಸಹಿ ಹಾಕಿರುವ ಮನೋಹರ್ ಪಾರಿಕ್ಕರ್, ಈ ಕುರಿತು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಯುದ್ಧ ವಿಮಾನ ಖರೀದಿ ಬಗ್ಗೆ ಸಂಸತ್ತಿನ ಜಂಟಿ ಸದನದಲ್ಲಿ ಚರ್ಚೆಯಾಗಬೇಕು. ಚಳಿಗಾಲದ ಅಧಿವೇಶನದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚರ್ಚೆಗೆ ಆಗ್ರಹಿಸಿದ್ದರು. ಪ್ರಧಾನಿ ಮೋದಿ ಏಕೆ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಜೈಪಾಲ ರೆಡ್ಡಿ ಪ್ರಶ್ನಿಸಿದರು.