Advertisement
ಇಂದು ವೇಗವಾಗಿ ಬೆಳೆಯುತ್ತಿರುವ ಪತ್ರಿಕಾ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಸಾಲದೆಂಬಂತೆ ಯೂಟ್ಯೂಬ್ ಮುಂತಾದ ಯಾರು ಬೇಕಾದರೂ ಆರಂಭಿಸಬಹುದಾದ ಅಂತರ್ಜಾಲ ವಾಹಿನಿಗಳು ಸುದ್ದಿಯನ್ನು ಜನರಿಗೆ ತ್ವರಿತವಾಗಿ ತಲುಪಿಸುವ ತುಡಿತದಲ್ಲಿವೆ. ಆದರೆ ಇವೆಲ್ಲವೂ ಸಂವಿಧಾನ ತಮಗೆ ಒದಗಿಸಿದ ವಾಕ್ ಸ್ವಾತಂತ್ರ್ಯವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಸುದ್ದಿ ಮೂಲವನ್ನು ಬಹಿರಂಗಪಡಿಸುವುದಕ್ಕೆ ನೀಡಲಾದ ವಿನಾಯಿತಿಯ ರಕ್ಷಣೆಯಡಿ ಮಾಡುವ ಪ್ರಚಾರದ ರೀತಿ ಮಾತ್ರ ತೀರಾ ಅಧೋಗತಿಗೆ ಇಳಿಯುತ್ತಿದೆ.
Related Articles
Advertisement
ಇತರ ಆಯಾಮಗಳ ಬಗ್ಗೆ ಗಮನ ಹರಿಸುವುದಾದರೆ, ಕೆಲವು ತಿಂಗಳ ಹಿಂದೆ ಸಿನಿಮಾ ರಂಗದ ಘಟಾನುಘಟಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು. ಸದ್ರಿ ದಾಳಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದ್ದು, ದಾಳಿಯು ಕೆಲವು ದಿನಗಳ ಮೊದಲು ಬಿಡುಗಡೆಯಾಗಿದ್ದ ಅದ್ಧೂರಿ ವೆಚ್ಚದ ಎರಡು ಸಿನೆಮಾಗಳಿಗೆ ಹೂಡಲಾಗಿದ್ದ ಬಂಡವಾಳದ ಮೂಲ ಹುಡುಕುವಿಕೆಯ ಅಂಗವಾಗಿತ್ತು. ಇದನ್ನು ದಾಳಿಗೊಳ ಗಾಗಿದ್ದವರೇ ಒಪ್ಪಿ, ತಾಂತ್ರಿಕವಾಗಿ ಯಾವುದಾದರೂ ಲೋಪವಾಗಿದ್ದರೆ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಲಾಗುವುದು ಎಂದು ಹೇಳಿದರೂ ಒಂದು ಪಕ್ಷದ ಪರವಾಗಿದ್ದ ಕಾರಣಕ್ಕೆ ಈ ದಾಳಿ ನಡೆದಿತ್ತು ಎಂದು ಪ್ರಚಾರ ಮಾಡಲಾಗಿತ್ತು. ಈ ಪ್ರಚಾರ ಮಾಡಿದವರು ದಾಳಿಗೊಳಗಾದವರಲ್ಲಿ ಎಲ್ಲಾ ಪಕ್ಷಕ್ಕೆ ಸೇರಿದವರು ಇದ್ದರೆಂಬುದನ್ನು ಮರೆತೇ ಬಿಟ್ಟಿದ್ದರು. ಇಷ್ಟು ಮಾತ್ರವಲ್ಲದೆ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳ ಪ್ರತಿಯೊಂದು ಸಂಚಿಕೆಯಲ್ಲೂ ಪ್ರಧಾನಿಯವರ ಚಿತ್ರ. ಸಾಂವಿಧಾನಿಕ ಸಂಸ್ಥೆಗಳಾದ ಸಿ.ಬಿ.ಐ, ಆದಾಯ ತೆರಿಗೆ ಇಲಾಖೆ ಅಥವಾ ಚುನಾವಣಾ ಆಯೋಗವಿರಲಿ, ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದರೂ ಅದೆಲ್ಲವೂ ಪ್ರಧಾನಮಂತ್ರಿಯವರ ಪ್ರಲೋಭನೆಯಿಂದ ಎನ್ನುವ ಮನಸ್ಥಿತಿ. ಅದೇ ಡಾ| ರಾಜಕುಮಾರ್ ಅವರು ಇಂದಿರಾ ಗಾಂಧಿಯವರು ರಾಜಕೀಯಕ್ಕೆ ಬರುವಂತೆ ನೀಡದ್ದ ಆಹ್ವಾನವನ್ನು ತಿರಸ್ಕರಿಸಿದ ಕಾರಣಕ್ಕೆ ಅವರ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸಿದ್ದರು ಎನ್ನಲಾಗುತ್ತಿದೆ. ಹೀಗೆ ಅಂದೂ ಸ್ವಾಯತ್ತ ಸಂಸ್ಥೆಗಳ ವಿರುದ್ಧ ಆಪಾದನೆ ಮಾಡುವವರಿಗೆ ಈಗ ಆದೇ ತಿರುಗು ಬಾಣವಾದಾಗ ಬಾಯಿ ಬಡಿದುಕೊಳ್ಳುವುದೇಕೆ? ಚಿತ್ರರಂಗದ ಮೇಲಿನ ದಾಳಿಗೂ ಗುಜರಾತಿನ ಚಿತ್ರಗಳು ವಿಫಲವಾಗಿ ಕನ್ನಡ ಚಿತ್ರಗಳು ಮಿಂಚಿದ್ದಕ್ಕೆ ಸೇಡು ಎಂಬ ವಾದ ವಿತಂಡವಾದ ಎನಿಸದೆ?
ಚುನಾವಣಾ ಆಯೋಗ, ನ್ಯಾಯಾಲಯಗಳು ತಮ್ಮ ಪರವಾಗಿ ತೀರ್ಪು ನೀಡಿದರೆ ಅದು ಸರಿ, ಇಲ್ಲವಾದರೆ ಅದು ಸಂವಿಧಾನ ವಿರೋಧಿ? ಪ್ರಕೃತಿ ವಿಕೋಪಕ್ಕೆ ಸ್ಪಂದನೆ, ಅನುದಾನ ಬಿಡುಗಡೆ ಅದು ಅವರ ಕರ್ತವ್ಯ, ಕೋರಿದಷ್ಟು ಪರಿಹಾರ ನೀಡದಿದ್ದರೆ ಅದು ಪಕ್ಷಪಾತ. ತನ್ನದೇ ಪಕ್ಷದ ಕಾರ್ಯಕರ್ತರು ಕೇಜ್ರಿವಾಲರಿಗೆ ಕಪಾಳಮೋಕ್ಷ ಮಾಡಿದರೆ ಅದನ್ನು ಮೋದಿ ಮಾಡಿಸಿದ್ದು, ಚುನಾವಣಾ ಆಯೋಗ ಅಥವಾ ಆದಾಯ ತೆರಿಗೆ ಇಲಾಖೆ ಚುನಾವಣೆ ಸಮಯದಲ್ಲಿ ಗುತ್ತಿಗೆದಾರರ/ಉದ್ದಿಮೆದಾರರ ಮೇಲೆ ದಾಳಿ ಮಾಡಿದರೆ ರಾಜ್ಯದ ಮುಖ್ಯ ಮಂತ್ರಿ ಸೇರಿದಂತೆ ಘಟಾನುಘಟಿಗಳು ಸಾರ್ವಜನಿಕವಾಗಿ ಪ್ರತಿಭಟನೆ ಮಾಡುತ್ತಾರೆ. ಗುತ್ತಿಗೆದಾರರ ಮೇಲೆ ದಾಳಿ ಮಾಡಿಸಿದ್ದು ಯಾರೇ ಆಗಿದ್ದರೂ ಎಲ್ಲವೂ ಸಕ್ರಮವಾಗಿದ್ದರೆ ಯಾರ ಮೇಲೆ ದಾಳಿಯಾಗಿತ್ತೋ ಅವರು ತಲೆ ಕೆಡಿಸಿಕೊಳ್ಳುತ್ತಾರೆ, ಇಲ್ಲಿ ಪ್ರಧಾನಿಯನ್ನು ಎಳೆದು ತರುವುದೇಕೆ ಮತ್ತು ರಾಜ್ಯದ ಮುಖ್ಯಮಂತ್ರಿ-ವಿರೋಧ ಪಕ್ಷಗಳು ಬಾಯಿ ಬಡಿದುಕೊಳ್ಳುವುದೇಕೆ? ಕುಂಬಳಕಾಯಿ ಕಳ್ಳ ಗಾದೆ ನೆನಪಿಸುವಂತಿದೆ ಅಲ್ಲವೇ?
ಕೇಬಲ್ ಮಾಫಿಯಾ ನಿಯಂತ್ರಿಸಲು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಕೆಲವು ನಿಯಮಗಳನ್ನು ರೂಪಿಸಿದರೆ ಅದನ್ನು ಹಿಂದಿ ಹೇರಿಕೆ ಎಂದು ಬಿಂಬಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ತನಿಖೆಗೆ ಬಂದ ಸಿಬಿಐ ಸಿಬ್ಬಂದಿಯನ್ನೇ ಬಂಧಿಸುವಂತಹ ಉದ್ಧಟತನ ತೋರಿದ, ಸಿಬಿಐ ತನಿಖೆಗೂ ಪ್ರಧಾನಿ ಕಾರಣ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರ ಧೋರಣೆ ಎಷ್ಟರ ಮಟ್ಟಿಗೆ ಸಮರ್ಥನೀಯವೋ? ಚುನಾವಣಾ ಆಯೋಗ ಪ್ರಚಾರದ ಅವಧಿ ಕಡಿತ ಮಾಡಿದರೂ ಅದಕ್ಕೂ ಮೋದಿ ಜವಾಬ್ದಾರಿ? ಪ್ರಚಾರದ ಅವಧಿ ಮುಗಿದ ಬಳಿಕ ಪ್ರಧಾನಿಯವರು ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದರೆ ನೀತಿ ಸಂಹಿತೆಯ ಉಲ್ಲಂಘನೆ. ಬೇರೆಯವರು ಕಳೆದೊಂದು ತಿಂಗಳಿಂದ ದೇಶದ ಉದ್ದಗಲಕ್ಕೂ ದೇಗುಲ ದರ್ಶನ ಮಾಡಿದಾಗ? ಒಟ್ಟಿನಲ್ಲಿ ಶನಿದೇವರು ಒಳ್ಳೆಯದನ್ನೂ ಮಾಡುತ್ತಾರೆಂಬ ನಂಬಿಕೆ ಮರೆತು ತಮ್ಮ ಮೂಗಿನ ನೇರಕ್ಕೆ, ತಮಗೆ ಸರಿ ಅನಿಸದೇ ಇರುವುದೆಲ್ಲದಕ್ಕೂ ಶನಿಯೇ ಹೊಣೆ ಎನ್ನುವಷ್ಟರ ಮಟ್ಟಿಗೆ ಜಡ್ಡುಗಟ್ಟಿರುವ ಮನಸ್ಥಿತಿ ನಮ್ಮದಾಗಿದೆ.
ಮೋಹನದಾಸ ಕಿಣಿ, ಕಾಪು