Advertisement
ಯಾರೇ ಒಬ್ಬ ವ್ಯಕ್ತಿ ತನ್ನ ಮೂಲಭೂತ ಹಕ್ಕುಗಳಿಗೆ ಅಥವಾ ತನ್ನ ಕಾನೂನುದತ್ತ ಹಕ್ಕುಗಳಿಗೆ ಲೋಪವಾಗಿದೆಯೆಂದು ರಿಟ್ ಅರ್ಜಿಯನ್ನು ಹಾಕಬಹುದು. ಪ್ರಶ್ನಿತ ಆಜ್ಞೆಯಿಂದ ತನಗೆ ವೈಯಕ್ತಿಕವಾಗಿ ಯಾವ ಹಾನಿ ಇಲ್ಲವೇ ನಷ್ಟ ಆಗಿರದಿದ್ದರೆ. ಆಗ ಆ ವ್ಯಕ್ತಿ ರಿಟ್ ಅರ್ಜಿಯನ್ನು ಹಾಕುವಂತಿಲ್ಲ. ಇದಕ್ಕೆ ಇಂಗ್ಲಿಷ್‌ನಲ್ಲಿ ಲೋಕಸ್ ಸ್ಟಾಂಡಿ (Locus standi) ಅಂದರೆ “ಪ್ರಶ್ನಿಸುವ ಸ್ಥಾನ’ ಅರ್ಥಾತ್ “ಪ್ರಶ್ನಿಸುವ ಅಧಿಕಾರ’ ಎನ್ನುತ್ತಾರೆ. ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಗಳಿಗೆ ಈ ನಿಯಮದಿಂದ ವಿನಾಯಿತಿ ಇದೆ.
ಎಲ್ಲ ಸಂದರ್ಭಗಳಲ್ಲಿಯೂ, ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿಗಳನ್ನು ಹಾಕಲು ಬರುವುದಿಲ್ಲ. ರಿಟ್ ಅರ್ಜಿಗಳನ್ನು ಹಾಕಬೇಕಾದರೆ ಪ್ರಶ್ನಿತ ಆಜ್ಞೆ ಅಥವಾ ಪ್ರಶ್ನಿತ ಕಾನೂನು: ತನಗೆ ವೈಯಕ್ತಿಕವಾಗಿ ಹಾನಿಯುಂಟು ಮಾಡಿದೆ; ತನಗೆ ಬೇರೆ ಯಾವ ಪರಿಹಾರೋಪಾಯಗಳೂ ಇಲ್ಲ; ಇದ್ದರೂ, ಅವು ಶೀಘ್ರ ಪರಿಣಾಮಕಾರಿಯಲ್ಲ; ಎಂದು ತೋರಿಸಬೇಕು. ಪ್ರಶ್ನಿತ ಆಜ್ಞೆ ಹೊರಡಿಸಲ್ಪಟ್ಟ ತಾರೀಖಿನಿಂದ ಸಾಧ್ಯವಾದಷ್ಟು ಬೇಗ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವಲ್ಲಿ ತೀರಾ ವಿಳಂಬವಾಗಿರಬಾರದು. ಒಂದು ವೇಳೆ ಹಾಗೇನಾದರೂ ವಿಳಂಬವಾದರೂ, ಆ ವಿಳಂಬಕ್ಕೆ ಒಪ್ಪಬಹುದಾದ ಸಮಜಾಯಿಷಿಯನ್ನೂ ಕೊಡಬೇಕು. ಇಲ್ಲದಿದ್ದರೆ ಈ ಕಾರಣವೊಂದರಿಂದಲೇ ಅರ್ಜಿಯನ್ನು ಸ್ವೀಕೃತಿ ಸಮಯದಲ್ಲೇ ನ್ಯಾಯಾಲಯ ನಿರಾಕರಿಸಬಹುದು.
Related Articles
ಸಾಮಾನ್ಯವಾಗಿ ಸಿವಿಲ್ ನ್ಯಾಯಾಲಯದಲ್ಲಿ ಹಾಕುವ ದಾವೆಗಳ ಮೇಲೆ, ದಾವೆಯ ವಸ್ತುವಿನ ಮೌಲ್ಯದ ಮೇಲೆ ಪ್ರತಿಶತ ಇಷ್ಟೆಂದು (ಕರ್ನಾಟಕದಲ್ಲಿ ಈಗಿರುವ ಗರಿಷ್ಠ ದರ ಏಳೂವರೆ ಶೇಕಡಾ) ನ್ಯಾಯಾಲಯ ಶುಲ್ಕ ಕೊಡಬೇಕಾಗುತ್ತದೆ. ರಿಟ್ ಅರ್ಜಿಗಳ ಮೇಲೆ ಕೊಡಬೇಕಾದ ನ್ಯಾಯಾಲಯ ಶುಲ್ಕ ರಿಟ್ ಅರ್ಜಿಯ ವಸ್ತುವಿನ
ಮೌಲ್ಯದ ಮೇಲೆ ಅವಲಂಬಿತವಾಗಿಲ್ಲ. ಈಗ ನಿಗದಿಪಡಿಸಿರುವಂತೆ ರಿಟ್ ಅರ್ಜಿಗಳ ಮೇಲೆ ವಸ್ತುವಿನ ಮೌಲ್ಯ ಎಷ್ಟೇ ಆಗಿರಲಿ; ನೂರು ರುಪಾಯಿ ಶುಲ್ಕವನ್ನು ಕೊಡಬೇಕು. ಒಂದೇ ರಿಟ್ ಅರ್ಜಿಯಲ್ಲಿ ಒಬ್ಬರಿಗಿಂತ ಹೆಚ್ಚು ಅರ್ಜಿದಾರರಿದ್ದರೆ, ಪ್ರತಿ ಅರ್ಜಿದಾರನೂ ಒಂದೇ ರಿಟ್ ಅರ್ಜಿಯ ಮೇಲೂ ತಲಾ ನೂರು ರುಪಾಯಿಯಂತೆ ನ್ಯಾಯಾಲಯ ಶುಲ್ಕವನ್ನು ಕೊಡಬೇಕು.
Advertisement
ಎಸ್.ಆರ್. ಗೌತಮ್(ಕೃಪೆ: ನವ ಕರ್ನಾಟಕ ಪ್ರಕಾಶನ)