Advertisement

Arecanut: ಬಹುಪಯೋಗಿ ಕಂಗಿನ ಬಗ್ಗೆ ನಿಮಗೆಷ್ಟು ಗೊತ್ತು?

09:58 AM Feb 26, 2024 | Team Udayavani |

ಕರಾವಳಿ, ಮಲೆನಾಡು ಭಾಗದ ಜನರು ಹೆಚ್ಚಾಗಿ ಅಡಿಕೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಿನ ಮನೆಗಳಲ್ಲಿ ಅಲ್ಪ ಸ್ವಲ್ಪವಾದರೂ ಅಡಿಕೆ ಮರಗಳು ಕಾಣಸಿಗುತ್ತವೆ. ಇಲ್ಲಿನ ಜನರಿಗೆ ಆದಾಯ ತರುವ ಮೂಲ ಅಂದ್ರೆ ಕಂಗು ಅಂದ್ರೂ ತಪ್ಪಾಗೋದಿಲ್ಲ. ಕರಾವಳಿ ಪ್ರದೇಶದಲ್ಲಿ ಪ್ರತಿಯೊಂದು ಶುಭ ಸಮಾರಂಭದಲ್ಲಿ ಅಡಕೆ ಮರದ ವಸ್ತುಗಳಿಗೆ ಮೊದಲ ಆದ್ಯತೆ.

Advertisement

ಅಡಿಕೆ ಮರದ ಸಲಾಕೆ, ಅಡಿಕೆ, ಸೋಗೆ, ಹಾಳೆ, ಹಿಂಗಾರ ಇತ್ಯಾದಿ. ಜಾತ್ರೆಯ ಸಂದರ್ಭದಲ್ಲಿ ಹಣ್ಣಾದ ಅಡಿಕೆಯನ್ನು ಕಂಬಕ್ಕೆ ಕಟ್ಟಿ ಶೃಂಗರಿಸಲಾಗುತ್ತದೆ.  ಸಲಾಕೆ ಅಥವಾ ಅಡಿಕೆ ಮರದ ಕಂಬಗಳನ್ನು “ಚಪ್ಪರ’ ಹಾಕಲು ಕರಾವಳಿ ಭಾಗದ ಜನರು ಹೆಚ್ಚಾಗಿ ಬಳಸುವುದುಂಟು.

ಒಂದು ರೀತಿಯಲ್ಲಿ ಇಂದು ದೊರಕುವ ಶಾಮಿಯಾನಗಳಿಗಿಂತ ಅಡಿ‌ಕೆ ಮರದ ಕಂಬ ಮತ್ತು ಅದರ ಸೋಗೆಯನ್ನು ಬಳಸಿಕೊಂಡು ಹಾಕುವ “ಚಪ್ಪರ’ವೇ ಬಲು ಚಂದ. ಸಮಾರಂಭಕ್ಕೊಂದು ಕಳೆ.

ಅದರಂತೆ ಕಂಗಿನ ಸೋಗೆಯಿಂದ ಹಾಕುವಂತ ಚಪ್ಪರ ಬೇರೆ ಶಾಮಿಯಾನಗಳಿಗಿಂತ ತುಂಬಾ ತಂಪಿನ ಅನುಭವ ನೀಡುತ್ತೆ. ಪ್ರತೀ ಮದುವೆಯಲ್ಲಿ ಹಿಂಗಾರ ಮತ್ತೆ ಅಡಕೆಯನ್ನು ಸಾಮಾನ್ಯವಾಗಿ ಬಳಸುತ್ತಾರೆ.  ಜತೆಗೆ ಹಿರಿಯರ ಹಿರಿತನದ ಮಾತುಗಳಿಗೆ ಮುನ್ನುಡಿ ಬರೆಯೋದು ಕೂಡಾ  ಇವುಗಳೇ .

ಮರವೊಂದು ಉಪಯೋಗ ಅನೇಕ

Advertisement

ಹಿಂಗಾರವು ಇನ್ನೇನು ಅರಳಿಕೊಂಡು ಬರುತ್ತಿದೆ ಅಂದಾಗ ಸುತ್ತಲೂ ಮಲ್ಲಿಗೆಯಂತಹ ಘಮಲನ್ನು ಸೂಸುತ್ತದೆ.  ಅದರಂತೆ ಸ್ವಲ್ಪ ಬೆಳೆತ  ಹಿಂಗಾರವನ್ನು  ಪೂಜೆಯ ಸಂದರ್ಭದಲ್ಲಿ ಹೆಚ್ಚಾಗಿ ಬಳಸುವುದುಂಟು.  ಅದರಲ್ಲೂ ನಾಗಾರಾಧನೆಗೆ ಹಿಂಗಾರವನ್ನು ಅಧಿಕ ಪ್ರಮಾಣದಲ್ಲಿ ಬಳಸುತ್ತಾರೆ.  ತುಂಬಾ ಬಳಿತ ಹೂವನ್ನು ಬಳಸುವುದಿಲ್ಲ.

ಹಾಗೆಯೇ ಹಿಂಗಾರ ಹೂವನ್ನು ಒಂದೊಂದಾಗಿ ಬಿಡಿಗೊಳಿಸಿ ದಾರದಿಂದ ನೇಯ್ದು ದೇವರಿಗೆ ಸಮರ್ಪಣೆ ಮಾಡುತ್ತಾರೆ.  ಈ ಹಿಂಗಾರದ ಹೊರ ಪದರವನ್ನು ಒಣಗಿಸಿ ಅಥವಾ ಹಸಿಯಾಗಿಯೇ ಹಸುಗಳಿಗೆ ಮೇವಿನ ರೀತಿಯಲ್ಲಿ ಉಪಯೋಗಿಸುತ್ತಾರೆ.

ಇನ್ನು ಕಂಗು ಮರದ ಸೋಗೆಯಿಂದ ದೊರಕುವ ಕಡ್ಡಿಗಳನ್ನು ಸೋಗೆಯಿಂದ ಬೇರ್ಪಡಿಸಿ  ತೆಗೆದು  ಒಟ್ಟು ಗೂಡಿಸಿ ಹಿಡುಸೂಡಿ/ಪೊರಕೆ ತಯಾರು ಮಾಡುತ್ತಾರೆ.  ಹಿಂದಿನ ಕಾಲದ ಪ್ರತೀ ಮನೆಯಲ್ಲೂ ಇಂತಹ ಪೊರಕೆಗಳನ್ನು ಕಾಣಬಹುದಾಗಿತ್ತು.

ಮನೆಯ ಒಳಾಂಗಣದಿಂದ ಅಂಗಳ ಗುಡಿಸುವವರೆಗೆ ಕಂಗಿನ ಪೊರಕೆಗಳು ಬಳಕೆಯಾಗುತ್ತಿದ್ದವು.  ಕಾಲ ಬದಲಾದ ಕಾರಣ ಇಂದು ಇಂತಹ ಪೊರಕೆಗಳನ್ನು ಕೆಲವೊಂದು ಮನೆಗಳಲ್ಲಿ ಮಾತ್ರ ಕಾಣಬಹುದು. ಅಲ್ಲದೇ ಕಡ್ಡಿಗಳನ್ನು ಬೇರ್ಪಡಿಸಿದ ನಂತರ ದೊರಕುವ ಸೋಗೆಗಳನ್ನು ಹಸುಗಳಿಗೆ ತಿನ್ನಲು, ಹಟ್ಟಿಗೆ ಮತ್ತು ತೋಟಗಳ ಇತರ ಗಿಡ-ಮರಗಳ ಬುಡಕ್ಕೆ ಗೊಬ್ಬರವನ್ನಾಗಿ ಬಳಸುತ್ತಾರೆ.

ಕೊರೋನಾ ಅನಂತರ ಹೆಚ್ಚು ಬೇಡಿಕೆಯಿರುವ ಬೆಳೆ ಅಂದರೆ ಅದು ಅಡಿಕೆ.  ಅಡಿಕೆಯನ್ನು ಮಲೆನಾಡಿನಲ್ಲಿ ಕಾಯಿಯನ್ನೇ ಕೊಯ್ದು ಸಿಪ್ಪೆ ಸುಲಿದು  ಬೇಯಿಸಿದ ಅನಂತರ ಒಣಗಿಸುತ್ತಾರೆ.

ಆದರೆ ಇತ್ತ ಕರಾವಳಿ ಭಾಗದಲ್ಲಿ  ಹಣ್ಣಾದಂತಹ ಅಡಕೆಯನ್ನು ಕೊಯ್ದು ಒಂದು ತಿಂಗಳು ಬಿಸಿಲಿನಲ್ಲಿ ಒಣಗಿಸಿ, ಅಡಿಕೆಬೀಜ ಸಿಪ್ಪೆಯನ್ನು ಬಿಡಿಸಿಕೊಂಡಿದೆ ಎಂದು ತಿಳಿದುಕೊಂಡ ಬಳಿಕ ಅದರ ಸಿಪ್ಪೆ ಸುಲಿದು ಮಾರಾಟ ಮಾಡುತ್ತಾರೆ.  ಸಾಮಾನ್ಯವಾಗಿ ಕೆ.ಜಿ  ಅಡಿಕೆಗೆ ಹೆಚ್ಚಿನ ಬೇಡಿಕೆ ಮಾರುಕಟ್ಟೆಯಲ್ಲಿದೆ.  ಅದರಂತೆ ಅಡಿಕೆಯ ಸಿಪ್ಪೆಯನ್ನು ಬೆಂಕಿ ಉರಿಸಲು, ಸೊಳ್ಳೆ ಬರದಂತೆ ತಡೆಗಟ್ಟಲು ಬಳಸುತ್ತಾರೆ.  ಹಾಗೆಯೇ ಗೊಬ್ಬರವನ್ನಾಗಿ ಕೂಡ ಬಳಸುತ್ತಾರೆ.

ಹಿಂದಿನ ಕಾಲದ ಜನರು ಅಲ್ಯೂಮೀನಿಯಂ, ಸ್ಟೀಲ್‌ ಮತ್ತು ಪ್ಲಾಸ್ಟಿಕ್‌ ತಟ್ಟೆಗಳನ್ನು ಬಳಸುತ್ತಿರಲಿಲ್ಲ.  ಬದಲಾಗಿ ಅಡಕೆ ತೋಟ ಇದ್ದ ಕಾರಣ ಹಸಿ  ಹಾಳೆಯನ್ನು ತಂದು ಅದರ ಹೊರಗೆ  ವೃತ್ತಾಕಾರ ಬರುವಂತೆ ಸ್ವಲ್ಪ ಕತ್ತರಿಸಿ   ಊಟ ಮಾಡುತ್ತಿದ್ದರು. ಆದರೆ ಜಗತ್ತು  ಬದಲಾಗುತ್ತಿದ್ದಂತೆ ಅಡಕೆ ಮರದ ಹಾಳೆಯ ಬಳಕೆ ಕಡಿಮೆಯಾಗುತ್ತಾ ಹೋಯಿತು.

ಮತ್ತೆ ಹಾಳೆ ಮುನ್ನೆಲೆಗೆ ಬಂದದ್ದು ಕೋವಿಡ್‌ ಬಂದಂತಹ ಸಂದರ್ಭದ ನಂತರ. ಆದಾಯವೇ ಇಲ್ಲದ ಅಡಿಕೆ ಕೃಷಿಕರಿಗೆ ಆದಾಯ ತಂದದ್ದು ಹಾಳೆ ತಟ್ಟೆಗಳು. ಹಲವಾರು ಹಾಳೆ ತಟ್ಟೆ ತಯಾರಿಕೆ ಫ್ಯಾಕ್ಟರಿಗಳು ತಲೆ ಎತ್ತಿದವು. ಹೀಗಾಗಿ  ಇಂದೂ ಕೂಡ ಹಲವಾರು ಕಡೆಗಳಲ್ಲಿ ಹಾಳೆಯನ್ನು ತಟ್ಟೆಗಳಂತೆ ಬಳಸುತ್ತಿದ್ದಾರೆ. ಆಯತ, ವೃತ್ತಾಕಾರದ ರೀತಿಯಲ್ಲಿ ಹಾಳೆ ತಟ್ಟೆಗಳಿಗೆ ವಿನ್ಯಾಸ ನೀಡಲಾಗುತ್ತದೆ.

ಈ ಹಾಳೆ ತಟ್ಟೆಗಳು ಯಾವುದೇ ರೀತಿಯಲ್ಲಿ ಪ್ರಕೃತಿಗೆ ಹಾನಿಯುಂಟು ಮಾಡೋದಿಲ್ಲ. ಅಲ್ಲದೇ ಬಹಳ  ಸುಲಭವಾಗಿ ಮಣ್ಣಿನಲ್ಲಿ ಕೊಳೆಯುತ್ತದೆ.  ಇನ್ನು ಹಸು, ಕರುಗಳನ್ನು ಸಾಕುವಂತಹ ಕೃಷಿಕರು ಹಾಳೆಯನ್ನು ಬಿಸಿಲಿನಲ್ಲಿ ಒಣಗಿಸಿ ಸಣ್ಣ ಸಣ್ಣದಾಗಿ ಕತ್ತರಿಸಿ ಹಸುಗಳಿಗೆ ಮೇವಿನಂತೆ ಕೂಡಾ ಬಳಸುತ್ತಾರೆ.

ಹೀಗಾಗಿ ಅಡಿಕೆ ಮರವು ಮಾನವನ ದೈನಂದಿನ ದಿನಗಳಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿವೆ. ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಸಕ್ರಿಯವಾಗಿ ಉಪಯೋಗಿಸಲ್ಪಡುತ್ತಿದೆ. ಅಡಕೆ ಕೃಷಿಕರಿಗೆ ಇದೊಂದು ಉತ್ತಮ ಲಾಭದಾಯಕ ಕೃಷಿಯಾಗಿದೆ.

-ಹೇಮಾವತಿ

ಸ್ನಾತಕೋತ್ತರ ಪದವಿ ವಿಭಾಗ

ಎಸ್‌ಡಿಎಂ ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next