Advertisement

ಎಷ್ಟು ಸಾವಿರ ಕೋಟಿ ಹಣ ಖರ್ಚಾದರೂ ಸರಕಾರ ಜನರ ಜತೆಗಿದೆ: ಮಹೇಶ್‌ 

07:05 AM Aug 23, 2018 | Team Udayavani |

ಮಡಿಕೇರಿ: ಮಹಾಮಳೆಯ ಆರ್ಭಟದಿಂದ ನೆಲೆ ಕಳೆದುಕೊಂಡವರಿಗೆ ಹೊಸ ಬದುಕು ಕಲ್ಪಿಸುವ  ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರ ಕೊಡಗಿನ ಜನತೆಯೊಂದಿಗಿದೆ. ಇದಕ್ಕಾಗಿ ಎಷ್ಟು  ಸಾವಿರ ಕೋಟಿ ರೂಪಾಯಿ ವೆಚ್ಚವಾದರೂ ಚಿಂತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 41 ಪುನರ್ವಸತಿ ಕೆೇಂದ್ರಗಳಲ್ಲಿ 4 ಸಾವಿರ ಸಂತ್ರಸ್ತರಿದ್ದಾರೆ. ಅವರೆಲ್ಲರಿಗೆ ಮತ್ತೆ ಉತ್ತಮ ಬದುಕನ್ನು ಕಲ್ಪಿಸಲಾಗುವುದು. ಬೆಳೆ ಹಾನಿಗೆ ಅಗತ್ಯ ಪರಿಹಾರ ಒದಗಿಲು ಸರಕಾರ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.

32 ಪಂಚಾಯತ್‌ಗಳಲ್ಲಿ ಸಂಕಷ್ಟ 
ಒಂದು ವಾರದ ಮಹಾಮಳೆಯಿಂದ ಕೊಡಗು ಜಿಲ್ಲೆಯ 3 ತಾಲೂಕುಗಳ 32 ಗ್ರಾಮ ಪಂಚಾಯತ್‌ಗಳು ನಲುಗಿವೆ. ಇದರಲ್ಲಿ ಮಡಿಕೇರಿ ತಾಲೂಕು 12, ಸೋಮವಾರಪೇಟೆ 12 ಮತ್ತು ವೀರಾಜಪೇಟೆ ತಾಲೂಕಿನ 8 ಪಂಚಾಯತ್‌ಗ‌ಳೆಂದು ತಿಳಿಸಿದರು. ಈ ಎಲ್ಲಾ ಪ್ರದೇಶಗಳಲ್ಲಿ ಘಟಿಸಿರುವ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ನೆರವನ್ನು ಒದಗಿಸಲು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ವಿವಿಧ ಇಲಾಖಾ ಅಧಿಕಾರಿಗಳಿಗೆ ಪೂರ್ಣ ಅಧಿಕಾರವನ್ನು ನೀಡಿ, ಅಗತ್ಯವಿರುವ ಎಲ್ಲನೆರವನ್ನು ಒದಗಿಸಲು ನಿರ್ದೇಶ ನೀಡಲಾಗಿದೆ ಎಂದರು.

ನೆರವು ಕಾರ್ಯ ಬಿರುಸು
ಜಿಲ್ಲೆಯ ಎಲ್ಲ 104 ಪಂಚಾಯತ್‌ಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅಗತ್ಯ ನೆರವು ಒದಗಿಸಲು ಆಯಾ ಪಂಚಾಯತ್‌ಗಳ ಕಂದಾಯ ಅಧಿಕಾರಿಗಳು, ಪಿಡಿಒಗಳಿಗೆ ಸೂಚಿಸಲಾಗಿದೆ. ಪರಿಹಾರ ಕಾರ್ಯ ನಡೆಸಲು ವಿವಿಧ ಇಲಾಖೆಗಳಿಗೆ ಅಗತ್ಯ ಹಣಕಾಸಿನ ಸೌಲಭ್ಯವನ್ನು ಜಿಲ್ಲಾಧಿಕಾರಿ ಒದಗಿಸಲಿದ್ದಾರೆ ಎಂದರು. ಮಹಾಮಳೆಯ ಸಂದರ್ಭ ಯಾವುದೇ ವ್ಯಕ್ತಿ ನಾಪತ್ತೆಯಾಗಿದ್ದರೂ ಜಿಲ್ಲಾಧಿಕಾರಿಗೆ ತತ್‌ಕ್ಷಣ ಮಾಹಿತಿ ಒದಗಿಸುವಂತೆ ಸೂಚಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ರಾಜ್ಯ ಕಾರ್ಯದರ್ಶಿ ಅಂಬುದಾಸ್‌, ಸಿಇಒ ಪ್ರಶಾಂತ್‌ ಕುಮಾರ್‌ ಹಾಗೂ ಹಿರಿಯ ಅಧಿಕಾರಿ ಚಾರುಲತಾ ಸೋಮಲ್‌ ಉಪಸ್ಥಿತರಿದ್ದರು.
 
ತಿಂಗಳ ವೇತನ ಘೋಷಣೆ
ಕೊಡಗಿನ ಸಂತ್ರಸ್ತರಿಗೆ ನೆರವಾಗಲು ಸ್ಥಾಪಿಸಲಾಗಿರುವ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಒಂದು ತಿಂಗಳ ವೇತನ ನೀಡುವುದಾಗಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next