ನವದೆಹಲಿ: 2020ರ ಸಾಲಿನಲ್ಲಿ ರಸ್ತೆ ಅಪಘಾತದಲ್ಲಿ 3,74,397 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ಬಹಿರಂಗಗೊಂಡಿದೆ. 2019ಕ್ಕೆ ಹೋಲಿಸಿದಲ್ಲಿ ಇದು ಕಡಿಮೆ ಪ್ರಮಾಣದ ಸಾವಿನ ಸಂಖ್ಯೆಯಾಗಿದೆ ಎಂದು ಹೇಳಿದೆ.
2019ರ ಸಾಲಿನಲ್ಲಿ ರಸ್ತೆ ಅಪಘಾತದಲ್ಲಿ ಒಟ್ಟು 4,21,104 ಮಂದಿ ಸಾವನ್ನಪ್ಪಿರುವುದಾಗಿ ಎನ್ ಸಿಆರ್ ಬಿ(ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ)ಯ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಒಂದು ಲಕ್ಷ ಜನಸಂಖ್ಯೆಯಲ್ಲಿ ಶೇ.27.07ರಷ್ಟು ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದು, 2019ರಲ್ಲಿ ಶೇ.31.04ರಷ್ಟು ಮಂದಿ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ವಿವರಿಸಿದೆ. 2020ರಲ್ಲಿ 3,54,796 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1,33,201 ಮಂದಿ ಸಾವನ್ನಪ್ಪಿದ್ದು, 3,35,201 ಮಂದಿ ಗಾಯಗೊಂಡಿರುವುದಾಗಿ ವರದಿ ಹೇಳಿದೆ.
ಶೇ.60ರಷ್ಟು ರಸ್ತೆ ಅಪಘಾತಕ್ಕೆ ಅಧಿಕ ವೇಗ ಕಾರಣ ಎಂದು ವರದಿ ತಿಳಿಸಿದೆ. ಅತೀ ವೇಗದ ವಾಹನ ಚಾಲನೆಯಿಂದ 75,333 ಮಂದಿ ಸಾವನ್ನಪ್ಪಿದ್ದು, 2,09,736 ಮಂದಿ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಎನ್ ಸಿಆರ್ ಬಿ ವರದಿ ಪ್ರಕಾರ, ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು ಬಲಿಪಶುವಾಗಿದ್ದು, ನಂತರ ಕಾರು, ಲಾರಿ ಮತ್ತು ಬಸ್ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.