Advertisement

ಎಲ್ಲರಿಗಿಂತ ಮೇರಿ ಕೋಮ್‌ ಹೇಗೆ ಭಿನ್ನ?

02:15 AM Nov 29, 2018 | |

ವಯಸ್ಸು ಏರುತ್ತಿದ್ದರೂ ಕಲಿಕೆಯ ವೇಗವನ್ನು ಯಥಾರೀತಿ ಕಾಯ್ದುಕೊಂಡು ಹೋಗುವವರು ಇದ್ದಾರಲ್ಲ, ಅಂಥವರ ಸಂಖ್ಯೆ ತೀರಾ ಕಡಿಮೆ. ನಮಗೆ ವಯಸ್ಸು ಹೆಚ್ಚಾಗುತ್ತಾ ಹೋದಂತೆ ಜಡತೆ/ತಾಟಸ್ಥ್ಯ ಬಂದು ಬಿಡುತ್ತದೆ, ಕಲಿಕೆಯನ್ನು ನಿಲ್ಲಿಸಿಬಿಡುತ್ತೇವೆ. ಆದರೆ, ಒಂದು ಪುಟ್ಟ ಮಗು ಪ್ರತಿ ಕ್ಷಣವೂ ಏನಾದರೊಂದನ್ನು ತಿಳಿದುಕೊಳ್ಳಲು-ಕಲಿಯಲು ಪ್ರಯತ್ನಿಸುತ್ತಲೇ ಇರುತ್ತದೆ. 35 ವರ್ಷದ ಮೇರಿ ಕೋಮ್‌ ಅಕ್ಷರಶಃ ಒಂದು ಪುಟ್ಟ ಮಗುವಿನಂತೆಯೇ ಬದುಕುತ್ತಿದ್ದಾರೆ. ಅವರು ಮಾಡಿದ ಸಾಧನೆಯನ್ನು ಸರಿಗಟ್ಟುವುದಿರಲಿ, ಆ ಸಾಧನೆಗಳ ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದೂ ಕಷ್ಟದ ಕೆಲಸ. ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಮೋರಿ ಕೋಮ್‌ ಎಂದರೆ “ಕಠಿಣ ಪರಿಶ್ರಮ, ಸಮರ್ಪಣೆ, ಬದ್ಧತೆಗೆ ಪರ್ಯಾಯ ಹೆಸರು’ ಎಂದು. ನನಗೆ ಭಾರತದ ಮುಖ್ಯ ಬಾಕ್ಸಿಂಗ್‌ ಕೋಚ್‌ ಆಗಿ ಅನೇಕ ಕ್ಯಾಂಪ್‌ಗ್ಳಲ್ಲಿ ಮೇರಿ ಕೋಮ್‌ರೊಂದಿಗೆ ಒಡನಾಡುವ, ಅವರನ್ನು ಅರ್ಥಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಮೇರಿ ಕೋಮ್‌ ಎರಡೂವರೆ ವರ್ಷದ ಹಿಂದೆ ರಾಜ್ಯಸಭೆಯ ಸದಸ್ಯರಾದರು. ಅವರು ದೆಹಲಿಯಲ್ಲಿದ್ದಾಗಲೆಲ್ಲ ಸಂಸತ್‌ ಅಧಿವೇಶನವನ್ನು ಮಿಸ್‌ ಮಾಡಿಕೊಂಡದ್ದೇ ಇಲ್ಲ. ನಮ್ಮಲ್ಲಿ ಕ್ರೀಡೆ ಅಥವಾ ಇನ್ನಿತರೆ ಕ್ಷೇತ್ರದ ಹೆಸರಾಂತ ಜನರನ್ನು ಸಂಸತ್ತಿಗೆ ಕಳುಹಿಸಲಾಗುತ್ತದೆ, ಆದರೆ ಮೇರಿ ಕೋಮ್‌ರಂತೆ, ತಮಗೆ ವಹಿಸಲಾದ ಈ ಲೋಕತಾಂತ್ರಿಕ ಜವಾಬ್ದಾರಿಯನ್ನು ಇಷ್ಟೊಂದು ನಿಷ್ಠೆಯಿಂದ ನಿಭಾಯಿಸಿದ ಮತ್ತೂಬ್ಬ ಕ್ರೀಡಾಪಟುವನ್ನು ನಾನು ನೋಡಿಲ್ಲ. ಸಂಸತ್ತಿನಲ್ಲಿ ತಮ್ಮ ಉಪಸ್ಥಿತಿ ಜಾಸ್ತಿ ಇದ್ದಷ್ಟೂ, ತಮ್ಮ ಕ್ಷೇತ್ರದಲ್ಲಿನ ಒಂದಲ್ಲ ಒಂದು ಸಮಸ್ಯೆಗಳು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ಮುನ್ನೆಲೆಗೆ ಬರುತ್ತವೆ ಎನ್ನುವುದು ಅವರಿಗೆ ಗೊತ್ತಿದೆ. 

Advertisement

ಇಂಟರ್‌ನ್ಯಾಷನಲ್‌ ಬಾಕ್ಸಿಂಗ್‌ ಅಸೋಷಿಯೇಷನ್‌ ಸೇರಿದಂತೆ ಅನೇಕ ಸಂಸ್ಥೆಗಳ ರಾಯಭಾರಿಯಾಗಿ, ಹಿರಿಯ ಪೊಲೀಸ್‌ ಅಧಿಕಾರಿಯಾಗಿ, ಬಾಲಿವುಡ್‌ನ‌ ಒಂದು ಸಫ‌ಲ ಚಿತ್ರಕ್ಕೆ ಕಥಾಪ್ರೇರಣೆಯಾಗಿ…ಹೀಗೆ ಅನೇಕ ರೀತಿಯಿಂದ ಸಫ‌ಲರಾಗಿದ್ದರೂ, ಮೇರಿ ಕೋಮ್‌ ಅವರ ಪರಿಶ್ರಮವನ್ನು ಕೇವಲ “ವ್ಯಕ್ತಿಗತ’ ಮಹತ್ವಾಕಾಂಕ್ಷೆಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅವರ ಪರಿಶ್ರಮದ ಉದ್ದೇಶ ವೈಯಕ್ತಿಕ ಮಹತ್ವಾಕಾಂಕ್ಷೆಗೂ ಮೀರಿದ್ದು. ಆಕೆ ಪ್ರತಿನಿಧಿಸುವ ಪ್ರದೇಶವಿದೆಯಲ್ಲ, ಆ ಪ್ರದೇಶದಿಂದ ಪದೇ ಪದೇ ಮೇರಿ ಕೋಮ್‌ರಂಥವರು ಹುಟ್ಟುವುದಿಲ್ಲ. ಹೀಗಾಗಿ ತಮ್ಮ ಬೆಳವಣಿಗೆಯಿಂದ ದೇಶಕ್ಕೆ ಎಷ್ಟು ಖುಷಿಯಾಗುತ್ತದೋ, ಅದಕ್ಕಿಂತಲೂ ಹೆಚ್ಚಿನ ಮಟ್ಟದ ಬದಲಾವಣೆ ಹಿಂಸಾಗ್ರಸ್ತ ಈಶಾನ್ಯ ಭಾಗದಲ್ಲಿ ಆಗುತ್ತದೆ ಎನ್ನುವುದು ಅವರಿಗೆ ತಿಳಿದಿದೆ. ಇಲ್ಲದಿದ್ದರೆ, 5 ಬಾರಿ ವಿಶ್ವ ಚಾಂಪಿಯನ್‌ ಮತ್ತು ಮೂರು ಮಕ್ಕಳ ತಾಯಿಯಾದ ನಂತರವೂ, ಪ್ರಪಂಚದ ಬಿಸಿ ರಕ್ತದ ಯುವ ಬಾಕ್ಸಿಂಗ್‌ ಪಟುಗಳನ್ನು ಎದುರಿಸುವ ದುಸ್ಸಾಹಸ ಮಾಡುವ ಅಗತ್ಯವಾದರೂ ಮೇರಿಗೆ ಏನಿದೆ? ಮೇರಿ ಕೋಮ್‌ ತಮ್ಮ ವೃತ್ತಿಯಲ್ಲಿ ಸ್ಥಾಪಿಸಿರುವ ಮೈಲಿಗಲ್ಲನ್ನು ತಲುಪಲು, ಇನ್ನಿತರೆ ಮಹಿಳಾ ಬಾಕ್ಸರ್‌ಗಳಿಗೆ ಅಷ್ಟು ಸುಲಭ ಸಾಧ್ಯವಲ್ಲ.

ಇತರೆ ಶಾರೀರಿಕ ಕ್ರೀಡೆಗಳಂತೆಯೇ ಬಾಕ್ಸಿಂಗ್‌ನಲ್ಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಚ್ಚು ಸವಾಲುಗಳಿರುತ್ತವೆ. ಬಹಳಷ್ಟು ಮಹಿಳಾ ಕ್ರೀಡಾಪಟುಗಳು ತಮ್ಮ ಮುಖದ ವಿಷಯದಲ್ಲಿ ಬಹಳ ಜಾಗರೂಕರಾಗಿರುತ್ತಾರೆ. ಬಾಕ್ಸಿಂಗ್‌ ಮಾಡುವಾಗ ಗಾಯವಾಗಿ, ಆ ಗಾಯದ ಕಲೆ ಮುಖದ ಮೇಲೆ ಉಳಿದುಬಿಟ್ಟರೆ ಅದು ಮುಂದೆ ತಮ್ಮ ಮದುವೆಗೆ ಅಡ್ಡಿಯಾಗಬಹುದು ಎನ್ನುವ ಭಯ ಅವರಿಗಿರುತ್ತದೆ. ಅದರಲ್ಲೂ ಬಾಕ್ಸಿಂಗ್‌ನಲ್ಲಿ ಈ ರೀತಿಯ ಅಪಾಯದ ಸಾಧ್ಯತೆ ಹೆಚ್ಚಾಗಿರುತ್ತದೆ. ಪುರುಷ ಕ್ರೀಡಾಪಟುಗಳಿಗೆ ಹೋಲಿಸಿದರೆ ಮಹಿಳೆಯರಿಗೆ ಮನೆಯ ಜವಾಬ್ದಾರಿಗಳೂ ಅಧಿಕವಿರುತ್ತವೆ. ಮದುವೆ ಅಥವಾ ಮಕ್ಕಳಾದಮೇಲಂತೂ ಮಹಿಳಾ ಕ್ರೀಡಾಪಟುಗಳ ಕೆರಿಯರ್‌ ಅಜಮಾಸು ಅಂತ್ಯವಾಯಿತು ಎಂದೇ ಭಾವಿಸಲಾಗುತ್ತದೆ. ಆದರೆ ಮೇರಿ ಕೋಮ್‌ ತಮ್ಮ ಸಾಧನೆಯ ಮೂಲಕ ಈ ಎಲ್ಲಾ ನೆಪಗಳನ್ನು-ಮಾತುಗಳನ್ನು ಕ್ಷುಲ್ಲಕವೆಂದು ಸಾಬೀತುಮಾಡಿದ್ದಾರೆ. ಆದಾಗ್ಯೂ ಮೇರಿ ಕೋಮ್‌ ಅವರ ಸಾಧನೆಯಲ್ಲಿ, ಅವರ ಪತಿ ಮತ್ತು ಇಡೀ ಪರಿವಾರದ ಕೊಡುಗೆ ಇದೆಯಾದರೂ, ಆಕೆ ಇಡೀ ದೇಶಕ್ಕೆ “ಪ್ಯಾಷನ್‌’ ಅಂದರೆ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮೇರಿ ಕೋಮ್‌ ತೋರಿಸಿಕೊಟ್ಟ ಹಾದಿಯಲ್ಲೇ ಇತರೆ ಹೆಣ್ಣುಮಕ್ಕಳೂ ನಡೆದು ತಮ್ಮ ಸಂಘರ್ಷ ಮುಂದುವರಿಸಿದರೆಂದರೆ ಆಶ್ಚರ್ಯಪಡಬೇಕಿಲ್ಲ. ಕೆಲವರಂತೂ ಈಗಾಗಲೇ ಈ ಹಾದಿಯಲ್ಲಿ ಪಯಣ ಆರಂಭಿಸಿಬಿಟ್ಟಿದ್ದಾರೆ. ಮಕ್ಕಳನ್ನು ಹೆತ್ತ ಮೇಲೆಯೂ ಟ್ರೇನಿಂಗ್‌ಗೆ ಬಂದು ಬೆವರು-ರಕ್ತ ಸುರಿಸುವ ಇಂಥ ಸಾಹಸಿ ಹೆಣ್ಣುಮಕ್ಕಳಿಗೆ ನಾನು ನಮಿಸುತ್ತೇನೆ! 

ನನಗೆ ಚೆನ್ನಾಗಿ ನೆನಪಿದೆ, ಭಾರತದಲ್ಲಿ ಬಾಕ್ಸಿಂಗ್‌ ಆರಂಭಗೊಂಡಾಗ, ಪ್ರತಿಯೊಬ್ಬರೂ “ಈ ಕ್ರೀಡೆ ನಮ್ಮ ದೇಶಕ್ಕೆ ಸರಿಹೊಂದುವುದಿಲ್ಲ’ ಎಂದೇ ಹೇಳುತ್ತಿದ್ದರು. ಶಾರೀರಿಕ ಫಿಟೆ°ಸ್‌ಜೊತೆಗೆ, ಮೂರು-ಮೂರು ನಿಮಿಷದ ರೌಂಡ್‌ಗಳಲ್ಲಿ ಪ್ರತಿ ಕ್ಷಣದಲ್ಲೂ ಯಾವುದೇ ರೀತಿಯಿಂದಲೂ ಮುಖಕ್ಕೆ ಅಪ್ಪಳಿಸಬಹುದಾದ ಪಂಚ್‌ನಿಂದ ತಪ್ಪಿಸಿಕೊಳ್ಳುವುದು ಅಥವಾ ಎದುರಾಳಿಯ ದಾಳಿಯನ್ನು ಊಹಿಸಿ ಪ್ರತಿದಾಳಿ ಮಾಡುವುದು ವಾಸ್ತವದಲ್ಲಿ ಸುಲಭದ ಕೆಲಸವಲ್ಲ. ಆದರೆ ಮೇರಿ ಕೋಮ್‌ಗೆ ಬಾಲ್ಯದಿಂದಲೇ ಸೋಲೊಪ್ಪಿಕೊಳ್ಳುವ ಗುಣವಿರಲಿಲ್ಲ. ಹೀಗಾಗಿ ಅವರಿಗೆ ಬಾಕ್ಸಿಂಗ್‌ನೆಡೆಗೆ ಈ ರೀತಿಯ ಬದ್ಧತೆ ಬೆಳೆಯಿತು. 

ಮೇರಿ ಕೋಮ್‌ ಬಾಲ್ಯದಿಂದಲೂ ತಮ್ಮ ಪ್ರದೇಶದಲ್ಲಿ ಅಶಾಂತಿಯನ್ನು ನೋಡಿದವರು, ಆದರೆ ಅಲ್ಲಿ ನಿತ್ಯ ನಡೆಯುತ್ತಿದ್ದ ಈ ಗದ್ದಲಗಳೇ ಅವರ ಶಕ್ತಿಯನ್ನು ಹೆಚ್ಚಿಸುತ್ತಾ ಬಂದವು. ಒಂದು ವೇಳೆ ಜೀವನದಲ್ಲಿ ಮುಂದೆ ಹೋಗದಿದ್ದರೆ, ಹಿಂದೆ ತಮಗೆ ಏನು ಕಾದಿದೆ ಎನ್ನುವುದು ಅವರಿಗೆ ತಿಳಿದಿತ್ತು! ಅವರು ಅಚ್ಚರಿ ಮೂಡಿಸುವ ರೀತಿಯಲ್ಲಿ ಮುಂದೆ ಸಾಗಿ, ತಮ್ಮ ಪ್ರದೇಶದಲ್ಲಿ ಸೃಷ್ಟಿಯಾಗಿದ್ದ ನ್ಯೂನತೆಗಳನ್ನು ತಗ್ಗಿಸಲು ಸಹಾಯ ಮಾಡಿದರು ಮತ್ತು ಸಹಾಯ ಮಾಡುತ್ತಿದ್ದಾರೆ. ಮೇರಿ ಕೋಮ್‌ ತಮ್ಮ ರಾಜ್ಯ ಮಣಿಪುರದಲ್ಲಿ ಬಾಕ್ಸಿಂಗ್‌ ಅಕಾಡೆಮಿ ಸ್ಥಾಪಿಸಿದ್ದಾರೆ. ಇತ್ತೀಚೆಗಷ್ಟೇ ಆ ಅಕಾಡೆಮಿಯಿಂದ ಒಬ್ಬ ಅಂತಾರಾಷ್ಟ್ರೀಯ ತಾರೆ ಹೊರಹೊಮ್ಮಿದ್ದಾನೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ 

Advertisement

ಮೇರಿ ಕೋಮ್‌ಗೆ ಸರಿಯಾದ ತೂಕ ಮಿತಿಯಲ್ಲಿ ಅವಕಾಶ ಸಿಕ್ಕಿತೆಂದರೆ, ಅವರು ಅಲ್ಲಿಂದಲೂ ಪದಕ ಹೊತ್ತು ತರುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನಿಸ್ಸಂಶಯವಾಗಿಯೂ ಮೇರಿಯವರ ಈ ಸಾಧನೆಗಳ ಫ‌ಲವಾಗಿಯೇ ಇಂದು ದೇಶಾದ್ಯಂತ ಅನೇಕ ಕಡೆಗಳಲ್ಲಿ ಮಹಿಳಾ ಬಾಕ್ಸಿಂಗ್‌ ತಂಡಗಳು, ತರಬೇತಿ ಕೇಂದ್ರಗಳು ಆರಂಭವಾಗತೊಡಗಿವೆ. 

ಕೇವಲ ಭಾರತದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಪುರುಷರ ಬಾಕ್ಸಿಂಗ್‌ಗೆ ಸಮನಾಗಿ ಮಹಿಳಾ ಬಾಕ್ಸಿಂಗ್‌ ಸದ್ದು ಮಾಡುತ್ತಿರುವುದು ಇದೇ ಮೊದಲು. ಗಮನಿಸಬೇಕಾದ ಅಂಶವೆಂದರೆ, ಭಾರತದಲ್ಲಿ ಪುರುಷ ಬಾಕ್ಸರ್‌ಗಳು ಹೆಸರು-ಸ್ಥಾನಮಾನ-ಅಂತಸ್ತು ಗಳಿಸಿದ ಮೇಲೆ ಬಾಕ್ಸಿಂಗ್‌ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡುತ್ತಾರೆ. ಆದರೆ ಮಹಿಳಾ ಬಾಕ್ಸರ್‌ಗಳು ನಿವೃತ್ತಿಯ ನಂತರವೂ ಬಾಕ್ಸಿಂಗ್‌ಗೆ ಮನ್ನಣೆ ಕೊಡುತ್ತಾರೆ. ಇದೇ ಕಾರಣದಿಂದಾಗಿಯೇ ಇಂದು ಭಾರತದ ಬಾಕ್ಸಿಂಗ್‌ ಪಟುಗಳ ಹೆಸರು ಪ್ರಸ್ತಾಪಕ್ಕೆ ಬಂದಾಗಲೆಲ್ಲ ಮಹಿಳಾ ಬಾಕ್ಸರ್‌ಗಳ ಹೆಸರು ಹೆಚ್ಚು ಕಾಣಿಸಿಕೊಳ್ಳುತ್ತವೆ. 

ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ ನಿಜಕ್ಕೂ ಅದ್ಭುತವಾಗಿ ಆಯೋಜನೆಯಾಗಿತ್ತು. ಮುಂಬರುವ ವರ್ಷಗಳಲ್ಲಿ, ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ಇಷ್ಟೇ ವೇಗದಲ್ಲಿ ಕೆಲಸ ಮಾಡುತ್ತಾ ಹೋದರೆ ಮತ್ತು ಇತರೆ ವಿಶ್ವ ಮಟ್ಟದ ಆಯೋಜನೆಗಳನ್ನು ಮಾಡಿದರೆ ನಿಶ್ಚಿತವಾಗಿಯೂ ಭಾರತದಲ್ಲಿ ಮಹಿಳಾ ಬಾಕ್ಸಿಂಗ್‌ನ ಭವಿಷ್ಯ ಉಜ್ವಲವಾಗುತ್ತದೆ. ಅನ್ಯ ಮಹಿಳಾ ಬಾಕ್ಸರ್‌ಗಳು ತಮ್ಮ ತಮ್ಮ ತೂಕಮಿತಿಯಲ್ಲಿ ಇತರೆ ದೇಶದವರನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಬಾಕ್ಸಿಂಗ್‌ ಎನ್ನುವುದು ಎಂಥ ಆಟವೆಂದರೆ, ಯಾರದ್ದಾದರೂ ಹೆಸರು ಹೇಳಿ, ಅವರ ಬಗ್ಗೆ “ಭವಿಷ್ಯ’ ನುಡಿಯುವುದು ಸರಿಯಲ್ಲ. 

ಉದಾಹರಣೆಗೆ, ಭಾರತದಲ್ಲಿ ಒಂದು ಸಮಯದಲ್ಲಿ 81 ಕಿಲೋ ತೂಕಮಿತಿಯಲ್ಲಿ ಗುರುನಾಮ್‌ ಸಿಂಗ್‌ನಂಥ ಬಾಕ್ಸರ್‌ ಇದ್ದ. “ಇಡೀ ಹಿಂದೂಸ್ತಾನದಲ್ಲಿ ಮುಂದಿನ ಹತ್ತುವರ್ಷಗಳಲ್ಲಿ ಈ ತೂಕಮಿತಿಯಲ್ಲಿ ಮತ್ತೂಬ್ಬ ಬಾಕ್ಸರ್‌ನ ಅಗತ್ಯವೇ ಇರುವುದಿಲ್ಲ. ಗುರುನಾಮ್‌ ಸಿಂಗ್‌ ಒಬ್ಬನೇ ಸಾಕು’ ಎನ್ನುವುದೇ ಕೋಚಿಂಗ್‌ ಸದಸ್ಯರ ನಿಲುವಾಗಿತ್ತು. ಸತ್ಯವೇನೆಂದರೆ, ಆ ಕ್ರೀಡಾಪಟು ನಿಜಕ್ಕೂ ಫಿಟ್‌ ಆಗಿದ್ದ ಮತ್ತು ಅದ್ಭುತ ಪ್ರತಿಭೆ ಹೊಂದಿದ್ದ. ಆದರೆ ತರಬೇತಿಯ ಸಮಯದಲ್ಲಿ ಜೋರಾಗಿ ಬಿದ್ದ  ಒಂದು ಪಂಚ್‌, ಆತನ ವೃತ್ತಿಯನ್ನೇ ಅಂತ್ಯಗೊಳಿಸಿಬಿಟ್ಟಿತು! ಈ ಕಾರಣಕ್ಕಾಗಿಯೇ, ಮೇರಿ ಕೋಮ್‌ ಇಷ್ಟು ವರ್ಷಗಳಿಂದ ಈ ರೀತಿಯ ಅಪಾಯಕಾರಿ ಮತ್ತು ಅತ್ಯಂತ ಸವಾಲಿನ ಆಟದಲ್ಲಿ ಸ್ಥಿರತೆ  ಉಳಿಸಿಕೊಂಡು ಬಂದಿರುವುದನ್ನು ಭಾರತವಷ್ಟೇ ಅಲ್ಲ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತಾಗಿದೆ. ಮೇರಿ ಕೋಮ್‌ “ಭಾರತ ರತ್ನ’ ಗೌರವಕ್ಕೆ ನಿಜಕ್ಕೂ ಅರ್ಹರು. 

 (ಲೇಖಕರು ನ್ಯಾಷನಲ್‌ ಬಾಕ್ಸಿಂಗ್‌ ತಂಡದ ಮಾಜಿ ಮುಖ್ಯ ಕೋಚ್‌ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು)

ಕೃಪೆ: ಅಮರ್‌ ಉಜಾಲಾ ಹಿಂದಿ

ಗುರುಬಕ್ಷ್ ಸಿಂಗ್‌ ಸಂಧು

Advertisement

Udayavani is now on Telegram. Click here to join our channel and stay updated with the latest news.

Next