ಕಲ್ಮಶವೇ ಇಲ್ಲದ ಒಂದು ಊರಿನಲ್ಲಿ ರಾಜಕೀಯದ ಚಹರೆಯಿಂದ ಹಾಗೂ ದನದ ವಿಚಾರದಲ್ಲಿ ಯಾವೆಲ್ಲ ರಾದ್ಧಾಂತ ನಡೆದುಹೋಗುತ್ತದೆ ಎಂಬ ಸಂಗತಿಯನ್ನೇ ಮುಂದಿಟ್ಟುಕೊಂಡು ಕೋಸ್ಟಲ್‌ವುಡ್‌ನಲ್ಲಿ ಹೊಸ ಸಿನೆಮಾವೊಂದು ಸೆಟ್ಟೇರಲು ರೆಡಿಯಾಗಿದೆ. ವಿಶೇಷವೆಂದರೆ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ‘ಮದಿಪು’ ಸಿನೆಮಾ ಮಾಡಿದ ಚೇತನ್ ಮುಂಡಾಡಿ ಅವರ ನಿರ್ದೇಶನದಲ್ಲಿ ಈಗ ಎರಡನೇ ಸಿನೆಮಾ ಸಿದ್ಧವಾಗಲಿದೆ.
ದನದ ವಿಚಾರ ಕರಾವಳಿಯಲ್ಲಿ ಬಹುದೊಡ್ಡ ರೀತಿಯಲ್ಲಿ ಬೇರೆ ಬೇರೆ ರೀತಿಯ ಆಯಾಮಗಳನ್ನು ಪಡೆಯುತ್ತದೆ. ಇದೇ ಕಾರಣಕ್ಕಾಗಿ ಗ್ರಾಮದೊಳಗಿನ ಅನ್ಯೋನ್ಯ ಸಂಬಂಧಗಳು ಕೂಡ ವಿಪರೀತ ಹಂತ ತಲುಪಿ, ಮನುಷ್ಯತ್ವವನ್ನೇ ಮರೆಯುವ ಸಂದರ್ಭವೂ ಎದುರಾಗಿದ್ದುಂಟು. ಆದರೆ, ಮನುಷ್ಯ ಸಂಬಂಧ ಇಷ್ಟಕ್ಕೆ ಸೀಮಿತವೇ? ಇದರಿಂದ ಹೊರತಾದ ಒಡನಾಟವಿಲ್ಲವೇ? ಈ ಎಲ್ಲ ವಿಚಾರಗಳ ಅಂಶಗಳನ್ನು ಮುಖ್ಯನೆಲೆಯಲ್ಲಿಟ್ಟು ಸಿನೆಮಾ ಮಾಡಲು ಚೇತನ್ ಮುಂದಾಗಿದ್ದಾರೆ.
ರಾಜಕೀಯ ಹಾಗೂ ಧರ್ಮದ ವಿಚಾರದಲ್ಲಿ ಗ್ರಾಮವೊಂದು ಯಾವ ಮಟ್ಟಕ್ಕೆ ಬದಲಾಗುತ್ತದೆ ಹಾಗೂ ಹಾಗೆ ಬದಲಾಗುವುದರಿಂದ ಏನು ಸಮಸ್ಯೆ ಎಂಬ ತಾತ್ವಿಕ ನೆಲೆಯಲ್ಲಿಟ್ಟು ಸಿನೆಮಾ ಮಾಡಲಿದ್ದಾರೆ. ಸಮಾಜದ ತಪ್ಪನ್ನು ಸಮಾಜಕ್ಕೆ ಹೇಳುವ, ಆ ಮೂಲಕ ಸಮಾಜದಲ್ಲಿ ಬದಲಾವಣೆಯ ಆಶಯ ಕಾಣುವುದೇ ಈ ಸಿನೆಮಾದ ಉದ್ದೇಶ ಎನ್ನುತ್ತಾರೆ ಚೇತನ್.
ಅಂದಹಾಗೆ ಈ ಸಿನೆಮಾದಲ್ಲಿ ಹೊಸ ಮುಖಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ. ಹೆಚ್ಚಾ ಕಡಿಮೆ ಮುಂದಿನ ತಿಂಗಳು ಈ ಸಿನೆಮಾ ಶೂಟಿಂಗ್ ಆರಂಭಿಸಲಿದೆ. ಗ್ರಾಮಾಂತರ ಭಾಗದ ಶಿಶಿಲ ವ್ಯಾಪ್ತಿಯಲ್ಲಿ ಸುಮಾರು 15 ದಿನ ಶೂಟಿಂಗ್ ನಡೆಯಲಿದೆ. ನಿರ್ಮಾಪಕರು ಯಾರು ಎಂಬುದು ಇನ್ನೂ ಫಿಕ್ಸ್ ಆಗಿಲ್ಲ. ತಾಂತ್ರಿಕವಾಗಿ ಚಿತ್ರವನ್ನು ಶ್ರೀಮಂತಿಕೆಯಿಂದ ತರಲು ನಿರ್ಧರಿಸಲಾಗಿದೆ.
ಈ ಸಿನೆಮಾದ ಇನ್ನೊಂದು ವಿಶೇಷವೆಂಬಂತೆ, ಇಲ್ಲಿ ಎಲ್ಲ ಭಾಷೆಗಳು ಕೂಡ ಇವೆ. ಹವ್ಯಕ ಕನ್ನಡವಿದೆ. ಕೊರಗ ಸಮಾಜದ ಭಾಷೆಯಿದೆ. ಬ್ಯಾರಿ ಭಾಷೆಯಿದೆ. ನಾಡ ತುಳುವಿದೆ. ಕನ್ನಡವೂ ಇದೆ. ಹೀಗಾಗಿ ಎಲ್ಲ ಭಾಷಿಗರು ಒಪ್ಪುವ ರೀತಿಯ ಸಿನೆಮಾವಾಗಿ ಹೊಸ ಸಿನೆಮಾ ಮೂಡಿಬರಲಿದೆ. ಸದ್ಯಕ್ಕೆ ಸಿನೆಮಾಕ್ಕೆ ಟೈಟಲ್ ಫಿಕ್ಸ್ ಮಾಡಿಲ್ಲ. ಒಂದು ವಾರದ ಒಳಗೆ ಟೈಟಲ್ ಅಂತಿಮಗೊಳ್ಳಲಿದೆ. ರಿಯಾಲಿಟಿ ಕಥೆಯನ್ನೇ ಇಟ್ಟುಕೊಂಡಿರುವ ಕಾರಣದಿಂದ ಈ ಸಿನೆಮಾ ವಿಭಿನ್ನ ನೆಲೆಯಲ್ಲಿ ಮೂಡಿಬರುವ ಸಾಧ್ಯತೆ ಇದೆ.
ದಿನೇಶ್ ಇರಾ