Advertisement

ಮಾಹಿತಿಪೂರ್ಣ ಒಪ್ಪಿಗೆ ಏಕೆ ಹೇಗೆ ?

10:59 PM Jul 27, 2019 | Sriram |

ಇಂದಿನ ದಿನಗಳಲ್ಲಿ ವೈದ್ಯ – ರೋಗಿ ಸಂಬಂಧ ಹದಗೆಟ್ಟಿರುವುದು ಸರ್ವವಿದಿತ. ಒಂದು ಕಾಲದಲ್ಲಿ ರೋಗಿಯ ಚಿಕಿತ್ಸೆಯ ಬಗೆಗಿನ ಪ್ರಮುಖ ನಿರ್ಧಾರಗಳನ್ನು ವೈದ್ಯರೇ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದುದುಂಟು. “ವೈದ್ಯರು ತಮ್ಮ ಹಿತೈಷಿ. ಆದ್ದರಿಂದ ಅವರು ಯಾವ ನಿರ್ಧಾರ ಕೈಗೊಂಡರೂ ಅದನ್ನು ರೋಗಿಯ ಒಳಿತಿಗಾಗಿಯೇ ಮಾಡುತ್ತಾರೆ’ ಎಂಬ ಭರವಸೆ ಜನರಲ್ಲಿ ವ್ಯಾಪಕವಾಗಿದ್ದರಿಂದ ಈ ವ್ಯವಸ್ಥೆ ಹಲವಾರು ದಶಕಗಳ ಕಾಲ ಚಾಲ್ತಿಯಲ್ಲಿತ್ತು. ಒಂದೊಮ್ಮೆ ವೈದ್ಯರ ನಿರ್ಧಾರ ತಪ್ಪಾಗಿ ಪರಿಣಮಿಸಿದಾಗಲೂ ಅದಕ್ಕೆ ವೈದ್ಯರನ್ನು ವೈಯಕ್ತಿಕವಾಗಿ ಯಾರೂ ಹೊಣೆಗಾರರನ್ನಾಗಿಸುತ್ತಿರಲಿಲ್ಲ. ವೈದ್ಯರ ನೈತಿಕತೆಯನ್ನು ಪ್ರಶ್ನಿಸುವುದಂತೂ ಕೇಳರಿಯದ ಮಾತಾಗಿತ್ತು. ರೋಗಿ ಗುಣಮುಖನಾಗುತ್ತಾನೋ ಇಲ್ಲವೋ ಎಂಬುದು ದೈವದ ಕೈಯಲ್ಲಿದೆ. ಮಾನವನದೇನಿದ್ದರೂ ಪ್ರಯತ್ನ ಮಾತ್ರ ಎಂಬ ಭಾವವೂ ಈ ವ್ಯವಸ್ಥೆಗೆ ಪೂರಕವಾಗಿತ್ತು.

Advertisement

ಈಗ ಕಾಲ ಬದಲಾಗಿದೆ ಎಂಬುದನ್ನು ಪುನಃ ಹೇಳಬೇಕಿಲ್ಲ. ಇಂದು ಯಾವನೇ ವೈದ್ಯ ರೋಗಿಯ ಚಿಕಿತ್ಸೆಯ ಬಗ್ಗೆ ಏಕಪಕ್ಷೀಯ ನಿರ್ಧಾರ ತಳೆಯುವ ಧೈರ್ಯ ಮಾಡಿದರೆ ಅದು ಹುಂಬತನವಾದೀತು. ಇಂದು, ರೋಗಿ ಹಾಗೂ ಆತನ ಕಡೆಯವರು ಚಿಕಿತ್ಸೆಯ ಬಗ್ಗೆ ವೈದ್ಯರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು, ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡ ನಂತರವೇ ಒಪ್ಪಿಗೆ ಕೊಡುವುದೋ ಇಲ್ಲವೋ ಎಂಬ ಬಗ್ಗೆ ನಿರ್ಧರಿಸಲು ಬಯಸುತ್ತಾರೆ. ಮಾಹಿತಿ ಪಡೆದುಕೊಂಡು, ಅದನ್ನರಿತ ನಂತರ ಚಿಕಿತ್ಸೆಗೆ ಕೊಡುವ ಒಪ್ಪಿಗೆಯೇ “ಮಾಹಿತಿ ಪೂರ್ಣ ಒಪ್ಪಿಗೆ’ (informed consent) ಅನ್ನಿಸಿಕೊಳ್ಳುತ್ತದೆ.

ತುರ್ತು ಚಿಕಿತ್ಸೆಯ ಆವಶ್ಯಕತೆ ಇದ್ದಾಗಲೂ ಮಾಹಿತಿಪೂರ್ಣ ಒಪ್ಪಿಗೆಯನ್ನು ಪಡೆಯಲೇಬೇಕು ಎಂಬ ಪರಿಸ್ಥಿತಿ ಬಂದದ್ದು ಹೇಗೆ ಎಂದು ತಿಳಿಯೋಣ. ಇಂದಿನ ಅಂತರ್ಜಾಲ (Internet) ನಿಯಂತ್ರಿತ ಜಗತ್ತಿನಲ್ಲಿನ ಆಗಿರುವ “ಮಾಹಿತಿ ಸ್ಫೋಟ’ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು ಎಂದು ಖಂಡಿತವಾಗಿ ಹೇಳಬಹುದು. ಯಾವುದೇ ಕಾಯಿಲೆಯಿರಲಿ ಅದರ ಲಕ್ಷಣಗಳು, ತಪಾಸಣಾ ಕ್ರಮ, ಲಭ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಅಂತರ್ಜಾಲದಲ್ಲಿ ಅಪರಿಮಿತ ಮಾಹಿತಿ ಸುಲಭವಾಗಿ ಸಿಗುತ್ತದೆ. ತರಬೇತಿ ಇಲ್ಲದ ಮನಸ್ಸಿಗೆ ಇಂತಹಾ ಮಾಹಿತಿಯಿಂದ ಭೀತಿಯುಂಟಾಗುತ್ತದೆಯೇ ಹೊರತು ಧೈರ್ಯ ಬರಲಾರದು. ಇನ್ನು ಶಸ್ತ್ರ ಚಿಕಿತ್ಸೆಯ ಬಗೆಗಂತು ಹೇಳುವುದೇ ಬೇಡ. ಶಸ್ತ್ರ ಕ್ರಿಯೆಯ ಕಾಂಪ್ಲಿಕೇಶನ್‌ಗಳ ಬಗ್ಗೆ ಮಾಹಿತಿ ತಿಳಿದ ರೋಗಿಗೆ ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯ ಬಗ್ಗೆ ಸಂಶಯವೇಳುವುದು ಸಹಜ. ವೈದ್ಯರೂ ಕೂಡ ಇಂದು ತಥ್ಯಾಧಾರಿತ ಮಾಹಿತಿ ಕೊಡುತ್ತಾರೆಯೇ ಹೊರತು ರೋಗಿಯ ಕಡೆಯವರಿಗೆ ಚಿಕಿತ್ಸೆಯ ಬಗ್ಗೆ ಯಾವುದೇ ಆಶ್ವಾಸನೆಗಳನ್ನು ಕೊಡಲು ಹಿಂಜರಿಯುತ್ತಾರೆ. “ಎಲ್ಲಾದರೂ ಚಿಕಿತ್ಸೆ ವಿಫ‌ಲವಾದರೆ?’ಎಂಬ ಭಾವ ಆತನನ್ನು ಬಾಧಿಸುತ್ತಿರುತ್ತದೆ. ಹಾಗಾಗಿ ಚಿಕಿತ್ಸೆ ಬೇಕು ಅಥವಾ ಬೇಡ ಎನ್ನುವ ಅಂತಿಮ ಜವಾಬ್ದಾರಿ ರೋಗಿಯ ಕಡೆಯವರ ಮೇಲೆಯೇ ಇಂದು ಬಿದ್ದಿರುವುದು ನಿಜ. ಇಂದಿನ ಪರಿಸ್ಥಿತಿಗೆ ಎರಡನೆಯ ಪ್ರಮುಖ ಕಾರಣವೆಂದರೆ ವಿಪರೀತವಾಗಿ ಏರಿರುವ ಹಾಗೂ ಏರುತ್ತಿರುವ ಚಿಕಿತ್ಸಾ ವೆಚ್ಚ. ಇದಕ್ಕೆ ಕಾರಣಗಳನ್ನು ಚರ್ಚಿಸುವುದು ಇಲ್ಲಿ ಅಪ್ರಸ್ತುತ. ಆದರೆ ಸಂಕೀರ್ಣ ಕಾಯಿಲೆಗಳ ಚಿಕಿತ್ಸೆ ಇಂದು ಸಾಮಾನ್ಯ ಜನರ ಕೈಗೆಟುಕದಂತಾಗಿದೆ ಎಂಬುದು ಕಹಿ ಸತ್ಯ. ವೈದ್ಯ ಲೋಕದಲ್ಲಿ ಚಿರನೂತನ ಸತ್ಯವೇನೆಂದರೆ ಎಷ್ಟೇ ವೆಚ್ಚ ಮಾಡಿದಾಗ್ಯೂ ರೋಗಿ ಶತಾಂಶ ಬದುಕುತ್ತಾನೆ ಎಂಬ ಭರವಸೆ ಯಾವ ವೈದ್ಯನೂ ಕೊಡಲಾರ ಎಂಬುದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ನಂತರವೂ ರೋಗಿ ಬದುಕಲಿಲ್ಲವೇಕೆ ಎಂಬುದರ ವಿಶ್ಲೇಷಣೆಯನ್ನು ರೋಗಿ ಮರಣಿಸಿದ ನಂತರ ಆತನ ಕಡೆಯವರು ಅರಗಿಸಿಕೊಳ್ಳುವುದು ಕಷ್ಟ. ಆದ್ದರಿಂದಲೇ ಚಿಕಿತ್ಸೆಯ ಸಾಧಕ -ಬಾಧಕಗಳ ಚರ್ಚೆ – ವಿಶ್ಲೇಷಣೆಗಳು, ಚಿಕಿತ್ಸೆಯ ವೆಚ್ಚ ಇತ್ಯಾದಿಗಳ ಮಾಹಿತಿ ವಿನಿಮಯಗಳನ್ನು ಚಿಕಿತ್ಸೆ ಆರಂಭಿಸುವ ಮೊದಲೇ ಮಾಡುವುದು ಸೂಕ್ತ.

ವೈದ್ಯಲೋಕ ಸಮಾಜದ ನಂಬಿಕೆಯನ್ನು ಕಳೆದುಕೊಳ್ಳಲು ಇನ್ನೊಂದು ಮುಖ್ಯ ಕಾರಣವೆಂದರೆ ಸಮಾಜ ವೈದ್ಯರನ್ನು ಪ್ರಶ್ನಿಸಲಾರಂಭಿಸಿದ್ದನ್ನು ವೈದ್ಯಲೋಕ ಅರಗಿಸಿಕೊಳ್ಳಲಾಗದೇ ಇದ್ದದ್ದು. ಚಿಕಿತ್ಸೆಯ ಸಮರ್ಪಕತೆಯ ಜೊತೆಗೆ ವೈದ್ಯರ ನೈತಿಕತೆಯನ್ನೂ ಪ್ರಶ್ನಿಸುವ ಪರಿಪಾಠ ಬೆಳೆದು ಬಂದಿರುವುದು ವೈದ್ಯಲೋಕಕ್ಕೆ ನುಂಗಲಾರದ ತುತ್ತಾಗಿದೆ. ತಾನು ಎಷ್ಟೇ ಶ್ರಮ ಪಟ್ಟರೂ ರೋಗಿ ಉಳಿಯದೇ ಹೋದಾಗ ರೋಗಿಯ ಕಡೆಯವರು ಚಿಕಿತ್ಸೆಯ ಸಮರ್ಪಕತೆಯ ಜೊತೆಗೆ ವೈದ್ಯ ನೈತಿಕತೆಯನ್ನೇ ಸಂಶಯಿಸಿದರೆ ಚಿಕಿತ್ಸೆ ನೀಡಿದ ವೈದ್ಯನ ಮನೋಬಲ ಕುಸಿಯುವುದು ನಿಶ್ಚಿತ. ಇದರಿಂದಾಗಿ ಸಂಕೀರ್ಣ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಇನ್ನೆಲ್ಲಿಗೋ ಸಾಗಹಾಕುವ ಮನೋಧರ್ಮ ವೈದ್ಯರಲ್ಲಿ ಬೆಳೆಯುತ್ತಿರುವುದು ಸುಳ್ಳಲ್ಲ.

ಸದ್ಯದ ಪರಿಸ್ಥಿತಿ ಮೇಲ್ಕಾಣಿಸಿದಂತೆ ಇರುವಾಗ, ಇದಕ್ಕೆ “ಯಾರು ಕಾರಣ’ಎಂಬ ಪ್ರಶ್ನೆಗಿಂತ “ಏನು ಕಾರಣ’ಎಂಬ ಪ್ರಶ್ನೆಯೇ ಮುಖ್ಯವಾಗುತ್ತದೆ. ಲಕ್ಷಾಂತರ ರೂಪಾಯಿ ವಚ್ಚ ಮಾಡಿದ ನಂತರವೂ ರೋಗಿಯನ್ನು ಉಳಿಸಿಕೊಳ್ಳಲಾಗದ ಆತನ ಸಂಬಂಧಿಕರೂ, ತಾನೆಷ್ಟೇ ಪ್ರಯತ್ನ ಪಟ್ಟರೂ ರೋಗಿಯನ್ನು ಉಳಿಸಿಕೊಡಲಾಗದ ವೈದ್ಯ ಇಬ್ಬರೂ ಅಸಹಾಯಕರೇ. ಹತಾಶೆ ಇಬ್ಬರಿಗೂ ಆಗಿರುತ್ತದೆ. ದುರದೃಷ್ಟ ವಶಾತ್‌ ಇಂದು ಚಿಕಿತ್ಸೆ ದುಬಾರಿ ಬಾಬತ್ತು ಆಗಿರುವುದರಿಂದ ಮತ್ತು ತಪ್ಪು ಮಾಹಿತಿಗಳಿಂದ ರೋಗಿಯ ಕಡೆಯವರ ಹತಾಶೆ ವ್ಯವಸ್ಥೆಯ ಬಗೆಗಿನ ರೋಷವಾಗಿ ಮಾರ್ಪಡುತ್ತದೆ. ದುಃಖದಿಂದಲಾಗಿ ಸಮಚಿತ್ತ ಕಳೆದುಕೊಂಡ ರೋಗಿಯ ಕಡೆಯವರಿಗೆ ವ್ಯವಸ್ಥೆಯ ಮುಖವಾಗಿ ಆಸ್ಪತ್ರೆಯಲ್ಲಿ ಕಾಣಸಿಗುವುದು ವೈದ್ಯನೋರ್ವನೇ! ಆದ್ದರಿಂದಲೇ ವೈದ್ಯ ಮೇಲೆ ಅಸಹನೆ, ಸಂಶಯ, ರೋಷ ಇತ್ಯಾದಿಗಳು ಪ್ರಕಟಗೊಳ್ಳುತ್ತವೆ. ಇಲ್ಲಿ ರೋಗಿಯ ಕಡೆಯವರ ವರ್ತನೆ ಅರ್ಥವಾಗುವಂತದ್ದಾದರೂ ಸರಿಯೆನ್ನಲಾಗದು. ಈ ರೀತಿಯ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಹೆಜ್ಜೆಯೇ ಮಾಹಿತಿಪೂರ್ಣ ಒಪ್ಪಿಗೆ ಪಡೆಯುವ ಪ್ರಕ್ರಿಯೆ.

Advertisement

ಯಾವುದೇ ನಿರ್ದಿಷ್ಟ ಚಿಕಿತ್ಸೆಯಾಗಿರಲಿ, (ಉದಾ: ಶಸ್ತ್ರ ಚಿಕಿತ್ಸೆ, ವಿಕಿರಣ ಚಿಕಿತ್ಸೆ ಕಿಮೋಥೆರಪಿ, ರಕ್ತ ಪೂರಣ, ಕೃತಕ ಉಸಿರಾಟದ ಯಂತ್ರ (ವೆಂಟಿಲೇಟರ್‌) ಅಳವಡಿಸುವುದು ಇತ್ಯಾದಿ) ಅದನ್ನು ರೋಗಿಗೆ ನೀಡುವ ಮೊದಲು ಆತನ/ಆಕೆಯ ಬಳಿ ಹಾಗೂ ಆತನ ನಿಕಟ ಸಂಬಂಧಿಗಳ ಬಳಿ ವಿಶದವಾಗಿ ಚರ್ಚಿಸುವ ಪ್ರಕ್ರಿಯೆಯೇ ಮಾಹಿತಿ ಪೂರ್ಣ ಒಪ್ಪಿಗೆ. ಇಲ್ಲಿ ಮೊತ್ತ ಮೊದಲಾಗಿ ಆ ನಿರ್ದಿಷ್ಟ ಚಿಕಿತ್ಸೆಯ ಆವಶ್ಯಕತೆ ಏನು? ಅದಕ್ಕೇನಾದರೂ ಪರ್ಯಾಯ ಚಿಕಿತ್ಸೆ ಇದೆಯೇ? ಈ ಚಿಕಿತ್ಸೆಯಿಂದ ಯಾವ ರೀತಿಯ ಪರಿಣಾಮವನ್ನು ನಿರೀಕ್ಷಿಸಬಹುದು? ಒಂದು ವೇಳೆ ಸತ್ಪರಿಣಾಮ ಉಂಟಾದಲ್ಲಿ ಅದು ತಾತ್ಕಾಲಿಕವೇ ದೀರ್ಘ‌ಕಾಲಿಕವೇ? ಎಂಬಿತ್ಯಾದಿ ವಿವರಗಳನ್ನು ರೋಗಿಯ ಕಡೆಯವರಿಗೆ ವಿವರಿಸಬೇಕಾದದ್ದು ಚಿಕಿತ್ಸೆ ನೀಡುವ ವೈದ್ಯರ ಕರ್ತವ್ಯ. ಚಿಕಿತ್ಸೆಯ ಸಾಧಕ -ಬಾಧಕಗಳ ತಾಂತ್ರಿಕ ಮಾಹಿತಿಯೊಂದಿಗೆ ಚಿಕಿತ್ಸಾ ವೆಚ್ಚದ ಮಾಹಿತಿಯನ್ನು ನೀಡುವುದು ಬಹಳ ಮುಖ್ಯ ಅದರ ಜೊತೆಗೆ, ಅನಿವಾರ್ಯವೆನಿಸಿದಲ್ಲಿ ಚಿಕಿತ್ಸೆಯಲ್ಲಿ ಮಾರ್ಪಾಡು ಮಾಡಬೇಕಾಗಬಹುದೆಂಬ ಸಂಗತಿಯನ್ನು ರೋಗಿಯ ಕಡೆಯವರಿಗೆ ತಿಳಿಸಿರುವುದು ಲೇಸು. ಇದೆಲ್ಲವನ್ನೂ ಅರಿತು ಒಪ್ಪಿಗೆ ನೀಡಬೇಕಾದದ್ದು ರೋಗಿಯ ಮತ್ತು ಆತನ/ಆಕೆಯ ಕಡೆಯವರ ಜವಾಬ್ದಾರಿ ಹಾಗೂ ಕರ್ತವ್ಯ . “ನಮಗೇನು ತಿಳಿಯುತ್ತದೆ? ನಿಮಗೆ ಯಾವುದು ಸೂಕ್ತ ಅನ್ನಿಸುತ್ತದೋ ಅದನ್ನು ಮಾಡಿ’, “ನಿಮ್ಮನ್ನೇ ನಂಬಿ ಬಂದಿದ್ದೇವೆ. ನಮಗೆ ಡಾಕ್ಟ್ರೇ ದೇವರು’ ಇತ್ಯಾದಿ ಅಹವಾಲುಗಳನ್ನು ಪುರಸ್ಕರಿಸಲು ಇಂದು ವೈದ್ಯರು ಹಿಂದೇಟು ಹಾಕುತ್ತಿರುವುದು ಇಂದಿನ ವಿದ್ಯಮಾನದ ದ್ಯೋತಕವಾಗಿದೆ. ಮೊದಲು ವೈದ್ಯರ ಬಳಿ ದೈನ್ಯದಿಂದ ಕೇಳಿಕೊಂಡವರು ಅಮಾಯಕರೇ ಆಗಿದ್ದರೂ ಒಂದು ವೇಳೆ ಚಿಕಿತ್ಸೆ ವಿಫ‌ಲವಾದಲ್ಲಿ ವೈದ್ಯರನ್ನು ದೂರಲು ಇನ್ನೊಬ್ಬರು ಬರಬಾರದೆಂದೇನೂ ಇಲ್ಲವಲ್ಲ? ಆದ್ದರಿಂದಲೇ ಇಂದು ಮಾಹಿತಿ ಪೂರ್ಣ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಚಿಕಿತ್ಸೆಯ ಅನಿವಾರ್ಯ ಭಾಗವಾಗಿದೆ.

ಈ ರೀತಿಯ ಮಾಹಿತಿಪೂರ್ಣ ಒಪ್ಪಿಗೆ ಪಡೆಯುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಮೊದಲನೆಯದಾಗಿ ರೋಗಿಯ ಕಡೆಯವರ ಆಡುಭಾಷೆಯಲ್ಲೇ ಈ ಪ್ರಕ್ರಿಯೆ ನಡೆಯುವುದು ಉಚಿತ. ಏಕೆಂದರೆ, ಅವರು ತಮ್ಮಲ್ಲಿನ ಸಂಶಯ, ಅನುಮಾನಗಳನ್ನು ವೈದ್ಯರ ಬಳಿ ಚರ್ಚಿಸಲು ಅವರ ಆಡುಭಾಷೆಯೇ ಸೂಕ್ತ. ಎರಡನೆಯದಾಗಿ ರೋಗಿಯ ಕಡೆ ಚಿಕಿತ್ಸೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದ ಪ್ರಮುಖ ವ್ಯಕ್ತಿ (ಹೆತ್ತವರು, ಗಂಡ, ಹೆಂಡತಿ, ಮಕ್ಕಳು ಇತ್ಯಾದಿ) ಈ ಪ್ರಕ್ರಿಯೆಯಲ್ಲಿ ಇರುವುದು ಒಳ್ಳೆಯದು. ಈ ಪ್ರಕ್ರಿಯೆ ನಡೆಯುವ ಸಮಯಕ್ಕೆ ಅವರು ಹಾಜರಿರುವಂತೆ ರೋಗಿಯ ಕಡೆಯವರಿಗೆ ಸೂಚಿಸಬೇಕು. ಇಲ್ಲದಿದ್ದಲ್ಲಿ ಅವರಿಗೆ ಪ್ರತ್ಯೇಕವಾಗಿ ಇನ್ನೊಮ್ಮೆ ಮಾಹಿತಿ ನೀಡಬೇಕಾಗುತ್ತದೆ. ಮೇಲೆ ವಿವರಿಸಿದಂತೆ ಚಿಕಿತ್ಸೆಯ ತಾಂತ್ರಿಕ ಅಂಶ, ಸಾಧಕ ಬಾಧಕಗಳ ಮಾಹಿತಿ, ಅಂದಾಜು ವೆಚ್ಚ, ಸಮಯ ಬರಬಹುದಾದ ಸಂಕೀರ್ಣತೆಗಳು ಇತ್ಯಾದಿಗಳನ್ನು ಆದಷ್ಟು ನವಿರಾಗಿ ತಿಳಿಸಬೇಕು. ಅನಗತ್ಯ ಆಶಾವಾದ ತೋರಿಸಿ ರೋಗಿ ಚಿಕಿತ್ಸೆಗೆ ಒಪ್ಪುವಂತೆ ಮಾಡಲೂ ಬಾರದು. ಹಾಗೆಯೇ ಸಂಕೀರ್ಣತೆಗಳ ಬಗ್ಗೆ ಅನಗತ್ಯ ಮಾಹಿತಿ ನೀಡಿ ರೋಗಿ ಚಿಕಿತ್ಸೆಯಿಂದ ವಿಮುಖನಾಗುವಂತೆಯೂ ಮಾಡಬಾರದು. ಆದರೆ ಈ ರೀತಿಯ ಸಮನ್ವಯ ಸಾಧಿಸಲು ಹಲವಾರು ವರ್ಷಗಳ ಅನುಭವವಿದ್ದರೂ ಕೆಲವೊಮ್ಮೆ ಸಾಲದು.

ಇಷ್ಟೆಲ್ಲಾ ಮಾಹಿತಿ ಪಡೆದ ನಂತರ ರೋಗಿ ಹಾಗೂ ಆತನ ಕಡೆಯವರು ಸ್ವಯಂ ಪ್ರೇರಣೆಯಿಂದ ಒಪ್ಪಿಗೆ ಕೊಟ್ಟಲ್ಲಿ ಮಾತ್ರ ಅದು “ಮಾಹಿತಿ ಪೂರ್ಣ’ಒಪ್ಪಿಗೆ ಎನ್ನಿಸಿಕೊಳ್ಳುತ್ತದೆ. ತದನಂತರ ಒಪ್ಪಿಗೆ ಪತ್ರದಲ್ಲಿ ಅದೇ ಮಾಹಿತಿಯನ್ನು ನಮೂದಿಸಿ ರೋಗ ಮತ್ತವನ ಕಡೆಯವರ ರುಜು ಪಡೆಯಲಾಗುತ್ತದೆ. ಇಂದಿನ ದಿನಗಳಲ್ಲಿ ಮಾಹಿತಿ ಸಂವಹನ ನಡೆದಿದೆ ಎಂಬುದನ್ನು ಸಾಧಿಸಲು ಈ ಪ್ರಕ್ರಿಯೆಯ ವೀಡಿಯೋ ಚಿತ್ರೀಕರಣವನ್ನು ಹಲವು ಆಸ್ಪತ್ರೆಗಳಲ್ಲಿ ಮಾಡಲಾಗುತ್ತದೆ. ಚಿಕಿತ್ಸೆಯ ವಿವರಗಳನ್ನು ವೈದ್ಯರು ವಿವರಿಸಿದ್ದಾರೆ ಎಂಬುದಕ್ಕೆ ಸುಲಭದಲ್ಲಿ ಅಲ್ಲಗಳೆಯಲಾಗದ ಒಂದು ದಾಖಲೆ ಈ ಮಾಹಿತಿಪೂರ್ಣ ಒಪ್ಪಿಗೆ ಪಡೆಯುವ ಪ್ರಕ್ರಿಯೆ.

ಚಿಕಿತ್ಸೆಯ ವೈಫ‌ಲ್ಯದ ಬಗೆಗಿನ ಅತೃಪ್ತಿ ಬೇರೆ. ವೈದ್ಯರ ನೈತಿಕತೆಯ ಮೇಲಿನ ಸಂಶಯ, ನಿರ್ಲಕ್ಷ್ಯದ ಆರೋಪ ಬೇರೆ. ರೋಗಿ ಗುಣಮುಖನಾಗದೇ ಇದ್ದಾಗ ಅತೃಪ್ತಿ ಇದ್ದದ್ದೇ ಆದರೆ ಪ್ರತೀ ಬಾರಿ ಚಿಕಿತ್ಸಾ ವೈಫ‌ಲ್ಯವುಂಟಾದಾಗ ಅದು ವೈದ್ಯರ ನಿರ್ಲಕ್ಷ್ಯದಿಂದಾಯಿತು ಅಥವಾ ಹಣಕಾಸಿನ ವಿಷಯಕ್ಕೆ ಆಯಿತು ಎನ್ನುವ ಮನೋಭಾವ ಇಂದು ಚಾಲ್ತಿಯಲ್ಲಿರುವುದರಿಂದ ವೈದ್ಯರ ಮೇಲಿನ ಹಲ್ಲೆ ಇತ್ಯಾದಿ ದುಷ್ಕರ್ಮಗಳಿಗೆ ಮೂಲವಾಗಿದೆ. ಭಾವಾವೇಶದಲ್ಲಿ ಜನರು ತಾವು ಕುಳಿತಿರುವ ಕೊಂಬೆಯನ್ನೇ ತಾವು ಕಡಿಯುತ್ತಿದ್ದೇವೆ ಎಂಬ ಪರಿಜ್ಞಾನವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಮಾಹಿತಿ ಪೂರ್ಣ ಒಪ್ಪಿಗೆ ಪಡೆದು ಚಿಕಿತ್ಸೆ ನೀಡುವುದರಿಂದ ವೈದ್ಯಲೋಕದ ಬಗೆಗಿನ ಜನರ ಸಂಶಯ ಸಂಪೂರ್ಣವಾಗಿ ನಶಿಸದು. ಹಲ್ಲೆ ಯಾ ಕಿಡಿಗೇಡಿತನದ ಮೊಕದ್ದಮೆಗಳು ಕಡಿಮೆಯಾದಾವು. ವೈದ್ಯ – ರೋಗಿ ಸಂಬಂಧವನ್ನು ಮೊದಲಿನಂತೆ ನೇರ್ಪುಗೊಳಿಸಬೇಕಿದ್ದರೆ ವೈದ್ಯಲೋಕ ಹಾಗೂ ಸಮಾಜ ಎರಡೂ ಕಡೆಯವರು ತಾವು ಪ್ರತಿಸ್ಪರ್ಧಿಗಳಲ್ಲ. ಒಬ್ಬರಿಲ್ಲದೆ ಇನ್ನೊಬ್ಬರಿರಲಾಗದು ಎಂಬ ತಥ್ಯವನ್ನಿಂದು ಅರಿತುಕೊಳ್ಳಬೇಕಾಗಿದೆ. ಸಮಾಜ ಅಂತರ್ಜಾಲದಿಂದ ಪಡೆದ ತನ್ನ ಅರೆಬರೆ ಜ್ಞಾನವನ್ನು ಬದಿಗಿರಿಸಿ ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ತಜ`ರೊಂದಿಗೆ ಸಕ್ರಿಯವಾಗಿ ಭಾಗವಹಿಸಬೇಕು. ಇತ್ತ ವೈದ್ಯರೂ ಕೂಡ “”ತಾನು ರೋಗಿ ಒಳಿತಿಗಾಗಿ ಶ್ರಮಪಟ್ಟರೆ ಸಾಕು. ಅದನ್ನು ಯಾರಿಗೂ ವಿವರಿಸಬೇಕಾಗಿಲ್ಲ. ಅಥವಾ ಯಾರೂ ಅದನ್ನು ಪ್ರಶ್ನಿಸುವ ಹಾಗಿಲ್ಲ’ಎಂಬ ಒಣ ಜಂಬವನ್ನೂ ಬಿಡಬೇಕು. ವೈದ್ಯನಿಲ್ಲದಿದ್ದರೆ ರೋಗಿಗೆ ಉಳಿಗಾಲವಿಲ್ಲ. ಅಂತೆಯೇ ಹೆಚ್ಚಿನ ವೈದ್ಯರಿಗೆ ವೈದ್ಯಕೀಯವಲ್ಲದೆ ಬೇರೆ ಜೀವನೋಪಾಯ ತಿಳಿದಿಲ್ಲ!

ಅದೇನಿದ್ದರೂ ಈ ಗಂಭೀರ ಸಮಸ್ಯೆಯ ಪರಿಹಾರ ಸದ್ಯೋಭವಿಷ್ಯದಲ್ಲಿ ಆಗದಿದ್ದಲ್ಲಿ ಸಮಾಜದ ಪ್ರತಿಭಾವಂತ ಯುವಕ-ಯುವತಿಯರು ವೈದ್ಯಕೀಯ ರಂಗದಿಂದ ವಿಮುಖರಾಗುವುದರಲ್ಲಿ ಸಂಶಯವಿಲ್ಲ. ಈ ಪ್ರತಿಭಾ ಪಲಾಯನ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂಬುದೇ ಆತಂಕದ ವಿಚಾರ.

ವೈದ್ಯರೇ ಎಲ್ಲವನ್ನೂ ನಿರ್ಧರಿಸುತ್ತಿದ್ದ ವ್ಯವಸ್ಥೆ ಒಳ್ಳೆಯದೋ, ರೋಗಿಯ ಸಹಭಾಗಿತ್ವದಲ್ಲಿ ಚಿಕಿತ್ಸೆ ನಿರ್ಧರಿಸಲ್ಪಡುವ ಈಗಿನ ವಿಧಾನ ಒಳ್ಳೆಯದೋ ಎಂದು ನಿರ್ಧರಿಸುವುದು ಅಷ್ಟು ಸರಳವಲ್ಲ, ಆದರೆ ಇಲ್ಲಿ ಚರ್ಚೆಗೆ ಅವಕಾಶವೇ ಇಲ್ಲ. ಏಕೆಂದರೆ, ರೋಗಿಯ ಮಾಹಿತಿಪೂರ್ಣ ಒಪ್ಪಿಗೆಯಿಲ್ಲದೆ ಯಾವುದೇ ಚಿಕಿತ್ಸೆ ನಡೆಸಕೂಡದೆಂದು ಕಾನೂನು ವಿಧಿಸಿರುವುದರಿಂದ ವೈದ್ಯರು ಮಾಹಿತಿ ಪೂರ್ಣ ಒಪ್ಪಿಗೆಯನ್ನು ರೋಗಿ ಹಾಗೂ ಆತನ/ಆಕೆಯ ಸಂಬಂಧಿಕರಿಂದ ಪಡೆದ ಮೇಲಷ್ಟೇ ಚಿಕಿತ್ಸೆ ಪ್ರಾರಂಭಿಸಬೇಕಾಗುವುದು ಅನಿವಾರ್ಯ.

-ಡಾ| ಶಿವಾನಂದ ಪ್ರಭು,
ಪ್ರಾಧ್ಯಾಪಕರು, ಸರ್ಜರಿ ವಿಭಾಗ
ಕೆ.ಎಂ.ಸಿ.ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next