Advertisement

ಮನುಷ್ಯ ಜೀವ ಹೇಗೆ ಸ್ವ-ರತವೋ ಹಾಗೆಯೇ ಸ್ವ-ಭೀತವೂ !

02:09 AM Aug 04, 2019 | mahesh |

ಉಪನಿಷತ್ತು ನಿವೃತ್ತಿ ಧರ್ಮದ ಪರವಾಗಿರುವ ವಾš್ಮಯವೆನ್ನುವುದು ವಿದಿತವೇ ಇದೆ. ಆದರೆ, ನಿವೃತ್ತಿ ಧರ್ಮದ ಆಳವಾದ ಚಿಂತನೆಗಳನ್ನು ಮಂಡಿಸುವ ಮುನ್ನ ಲೋಕ ಜೀವನದಲ್ಲಿ- ಸಂಸಾರದಲ್ಲಿ- ತೊಡಗಿಕೊಂಡ ಪ್ರವೃತ್ತಿ ಪರವಾದ ಮನುಜ ಮನಸ್ಸಿನ ಪದರ ಪದರಗಳನ್ನೂ ಬಿಚ್ಚಿನೋಡುವ ಉತ್ಸಾಹವೇನೂ ಉಪನಿಷತ್ತಿಗೆ ಕಡಿಮೆಯಾಗಿಲ್ಲ. ನಿವೃತ್ತಿ ಧರ್ಮದ ಮಾನಸಿಕತೆಯು ಸಾಂಸಾರಿಕವಾದ ಮನಸ್ಸಿನ ಆಳದ ಸತ್ಯವೇ ಆಗಿದೆ ಎಂಬಂತೆ ಅದು ಗ್ರಹಿಸಿರಬಹುದು ಅಥವಾ ನಿವೃತ್ತಿ ಧರ್ಮವೆಂದರೆ ಅದು ಬರಿಯ ವಿರಕ್ತಿಯ ಮನಸ್ಸಲ್ಲ , ಅದು ಜಟಿಲವಾದ ಈ ಬದುಕಿನ ಅಂತರ್ಯಾಮಿಯಾದ ತಣ್ತೀವೊಂದನ್ನು ಕಂಡರಿಸುವ ಪ್ರಯತ್ನವೆಂದು ಉಪನಿಷತ್ತು ತಿಳಿದಿರಬಹುದು. ಅಂದರೆ ಬದುಕಿನಲ್ಲಿ ಕಟ್ಟುವ-ಸಾಧಿಸುವ-ಉತ್ಸಾಹವನ್ನು ಅದರ ಪರಾಕಾಷ್ಠೆಗೆ- ಕೊನೆಯ ಬಿಂದುವಿನ ತನಕ- ಒಯ್ದು ನೋಡದೆ, ಅದು ನಿವೃತ್ತಿಯ ಕಡೆಗೆ ಹೊರಳದು. ಕಟ್ಟುವ ಈ ಕಾಳಜಿಯನ್ನೇ ಉಪನಿಷತ್ತು ‘ಶ್ರದ್ಧೆ’ ಎಂದು ಗುರುತಿಸುವುದು. ಲೋಕದಲ್ಲಿ ವಿಪರ್ಯಾಸಗಳನ್ನು ಕಂಡಾಗ ನಿಜವಾದ ಶ್ರದ್ಧೆಯು ಪಶ್ನಿಸದೇ ಇರುವುದು ಸಾಧ್ಯವೇ ಇಲ್ಲ. ಹಾಗೆ ಪ್ರಶ್ನಿಸುವಲ್ಲಿ ತನ್ನ ಕರ್ತವ್ಯವನ್ನಷ್ಟೇ ಅದು ಕಾಣುವುದು. ಕರ್ತವ್ಯವನ್ನು ನೆರವೇರಿಸುವಲ್ಲಿ ಅಸಾಧಾರಣ ಅನುಭವಗಳಿಗೆ ಎದುರಾಗುವುದನ್ನೂ ಅದು ಹಿಂಜರಿಯದೆ ಸ್ವಾಗತಿಸುತ್ತದೆ. ಅಲ್ಲದೆ ತನ್ನ ವಿಪರ್ಯಾಸಗಳ ಅರಿವು ತನಗೇ ಆಗಿ ಲೋಕವು ಮತ್ತೆ ಸಮಾಹಿತವಾಗುತ್ತದೆಂಬುದೂ, ಹಾಗೆ ನಿರಾಳವಾದ ಲೋಕವನ್ನು ತಾನು ಮರಳಿ ನೋಡಬೇಕೆಂಬುದೂ ಶ್ರದ್ಧೆಯ ಮನಸ್ಸೇ ಆಗಿದೆ. ಈ ಕಾಳಜಿ, ಕಟ್ಟುವ ಕಾಳಜಿಯಲ್ಲವೆ? ಲೋಕವನ್ನು ಹೊಸತಾಗಿ ಕಟ್ಟುವ ಕಾಳಜಿ- ಸುಧಾರಣೋತ್ಸಾಹ- ಲೋಕವನ್ನು ಹೊಸತಾಗಿಸುವ ಮೂಲಕ ತನ್ನನ್ನೇ ಹೊಸತಾಗಿ ಕಟ್ಟಿಕೊಳ್ಳುವ ಉತ್ಸಾಹ- ಇದೊಂದು ಅಗ್ನಿಕಾರ್ಯವೇ ನಿಜ! ಅಂದರೆ ‘ಯಜ್ಞ’ದ ಇನ್ನೊಂದು ರೂಪ! ವ್ಯಕ್ತಿಣ್ತೀವೇ ಪಾಕಗೊಳ್ಳುವ ಯಜ್ಞ ! ಇದಕ್ಕನುಗುಣವಾಗಿಯೇ ಇದೆ ಯಮ-ನಚಿಕೇತರ ನಡುವಣ ಎರಡನೆಯ ವರದ ಪ್ರಸ್ತಾವನೆ.

Advertisement

ಈ ಎರಡನೆಯ ವರ ಸ್ವರ್ಗಲೋಕದ ಕಲ್ಪನೆಯ ಬಗೆಗೆ ಇದೆ. ಸ್ವರ್ಗಸಾಧಕವಾದ ಅಗ್ನಿ ರಹಸ್ಯದ ಬಗೆಗೆ ಇದೆ. ಯಜ್ಞಯಾಗಾದಿ ಕರ್ಮಗಳಿಂದ ಸ್ವರ್ಗವು ಸಾಧಿಸಲ್ಪಡುತ್ತದೆಯಾಗಿ ಕರ್ಮಕಾಂಡದ ಬಗೆಗೆ ಇದೆ. ಎಲ್ಲದಕ್ಕಿಂತ ಮಿಗಿಲಾಗಿ; ನಿಬಿಡ ಕರ್ಮಜಾಲವೇ ಆಗಿರುವ ಈ ನಮ್ಮ ಬದುಕೆಂಬ ಅಗ್ನಿಯ ರಹಸ್ಯವು ಯಮನಿಗೆ ಅಂದರೆ- ಸಾವಿಗೆ- ಗೊತ್ತಿದೆ; ಗೊತ್ತಿರಲೇಬೇಕು ಎಂಬ ಹೊಳಹು ನಚಿಕೇತನಿಗೆ ಇದೆ! ಇದು ನಚಿಕೇತನ ಮಾತು:

ಸ್ವರ್ಗೇಲೋಕೇ ನ ಭಯಂ ಕಿಂಚನಾಸ್ತಿ

ನ ತತ್ರ ತ್ವಂ ನ ಜರಯಾ ಬಿಭೇತಿ

ಉಭೇ ತೀತ್ರ್ವಾ ಅಶನಾಯಾಪಿಪಾಸೇ

Advertisement

ಶೋಕಾತಿಗೋ ಮೋದತೇ ಸ್ವರ್ಗಲೋಕೇ”

ಭಯವಿಲ್ಲ ಅಲ್ಲಿ ಸ್ವರ್ಗದಲಿ ಸ್ವಲ್ಪವೂ

ನೀನಿಲ್ಲ ಅಲ್ಲಿ ಮುಪ್ಪಿನ ಭೀತಿ ಇಲ್ಲ

ದಾಟಿ ಕ್ಷುತ್ಪಿಪಾಸೆಗಳನ್ನು ಶೋಕವನು

ಅದುವೆ ಸಮ್ಮುದವದಕೆ ಅದು ಸಗ್ಗ.

ಆಶ್ಚರ್ಯವಾಗುತ್ತದೆ ; ಸ್ವರ್ಗದ ಚಿಂತೆ ಮಾನವನನ್ನು ಬಹು ಹಿಂದಿನಿಂದಲೂ ಕಾಡಿದೆ. ಕಾಡುತ್ತಲೇ ಇದೆ. ಈ ಲೋಕವನ್ನು- ಇದು ಲೋಕವೆಂದು, ಇದು ನಮ್ಮ ಲೋಕವೆಂದು ಗ್ರಹಿಸಿದ ತತ್‌ಕ್ಷಣದಲ್ಲಿಯೇ ಈ ಲೋಕಕ್ಕಿಂತ ಭಿನ್ನವಾದ ಇನ್ನೊಂದು ಲೋಕವನ್ನು, ಇನ್ನನೇಕ ಲೋಕಗಳನ್ನು ಮನುಜರ ಮನಸ್ಸು ಊಹಿಸತೊಡಗಿದೆ! ಮನುಜರ ಪ್ರಜ್ಞೆಯು ಎಚ್ಚರಗೊಳ್ಳುವ, ಎಚ್ಚರಗೊಂಡು ಕೆಲಸ ಮಾಡುವ ರೀತಿಯೇ ಹೀಗೆ. ಅರಿವೆನ್ನುವುದು ಸಾಪೇಕ್ಷವಾಗಿದೆ. ಅಂದರೆ ಈ ಲೋಕವನ್ನು ಅರಿಯುವುದಕ್ಕೇನೇ ಇದಲ್ಲದ ಇನ್ನೊಂದರ ಕಲ್ಪನೆಯ ನೆರವು ಬೇಕು. ಇಹವನ್ನು ಇಹವೆಂದು ತಿಳಿಯುವಾಗಲೇ ಪರದ ಕಲ್ಪನೆಯೂ ಮೂಡಿಬಂತಾಗಿ ಇದು ಪರದ ನೆರವಿನಿಂದಲೇ ಇದನ್ನು ಇಹವೆಂದು ತಿಳಿಯಲು ಸಾಧ್ಯವಾದದ್ದು ಎಂದಂತೆಯೂ ಹೌದಲ್ಲವೇ? ಅಲ್ಲದೆ; ಇಲ್ಲಿನ ಅನುಭವಕ್ಕಿಂತ ಭಿನ್ನ ಅನುಭವಗಳನ್ನು ಕಲ್ಪಿಸುವುದು ಇಲ್ಲಿನ ಅನುಭವಗಳಿಗೆ ಬೆಲೆ ಕಟ್ಟಿದಂತೆಯೂ ಹೌದು. ಇದನ್ನು ವಿವೇಚಿಸಿದಂತೆಯೂ ಹೌದು. ಅಲ್ಲಿದೆ ನಮ್ಮ ಮನೆ- ಇಲ್ಲಿ ಬಂದೆ ಸುಮ್ಮನೆ ಎಂದು ದಾಸರು ಹೇಳಿದರಲ್ಲ- ಈ ‘ಸುಮ್ಮನೆ’ ಎಂಬ ಪದವನ್ನು ಗಮನಿಸಿ. ಸುಮ್ಮನೆ ಗಮನಿಸಿ. ಇದು ಕಚಗುಳಿ ಇಡುವ ಪದ! ‘ಸುಮ್ಮನೆ’ ಎಂದಾಗ ಹೀ…ಗೇ ಬಂದೆ; ಏನೋ ಕಾರ್ಯನಿಮಿತ್ತ ಬಂದದ್ದಲ್ಲ , ಬರಬೇಕೆಂಬ ಘನ ಉದ್ದೇಶದಿಂದಲ್ಲ- ಸುಮ್ಮನೆ ಕಾಲಾಡಿಸುತ್ತ ಬಂದದ್ದಾಯಿತು, ಯಾಕೆ ಸುಮ್ಮಗೆ ಇರುವುದು ನಿಮಗೆ ಅಭ್ಯಾಸವಿಲ್ಲವೆ? ಸುಮ್ಮಗಿರುವುದು- ಸುಮ್ಮನೆ ಬಂದೆ ಎಂಬ ಮಾತನ್ನು ಕೇಳಿಸಿಕೊಳ್ಳುವುದು ನಿಮ್ಮ ಅಹಂಕಾರಕ್ಕೆ ಕಷ್ಟವಾಗುತ್ತದೆಯೆ? ಅಯ್ಯೋ ಪಾಪ- ಎಂಬೆಲ್ಲ ಅರ್ಥಗಳು ಕೇಳಿಸುತ್ತವೆ. ಈ ಎಲ್ಲದಕ್ಕಿಂತ ಹೆಚ್ಚಾಗಿ, ‘ಅಲ್ಲಿ’ ಎಂಬ ಪದವನ್ನು ಬಳಸುವಾಗ ‘ಇಲ್ಲಿ’ ಎಂಬ ಪದವನ್ನು ಬಳಸಲೇಬೇಕಾಗಿ ಬರುವಂಥ ಅರಿವಿನ ಸ್ಥಿತಿಯೊಂದು ನಮ್ಮದಾಗಿದೆ; ಅಂದರೆ ನಮ್ಮ ಅರಿವು ಸಾಪೇಕ್ಷವಾಗಿಯೇ ಎಚ್ಚರಗೊಳ್ಳುವುದು; ಆದುದರಿಂದ ‘ಅಲ್ಲಿದೆ’ ಎನ್ನುವಾಗ ‘ಇಲ್ಲಿ’ ಎನ್ನುವ ಪದವನ್ನು ಸುಮ್ಮನೆಯಾದರೂ ಬಳಸಬೇಕಾಗುತ್ತದೆ; ಇಲ್ಲವಾದರೆ ‘ಅಲ್ಲಿದೆ’ ಎನ್ನುವುದೂ ಅರ್ಥವಾಗುವುದಿಲ್ಲ- ಎನ್ನುವ ಅಂಶವನ್ನು ‘ಸುಮ್ಮನೆ’ ಸೂಚಿಸಿಯೇ ಸೂಚಿಸುತ್ತದೆ! ‘ನಿಮಿತ್ತ’ ಎಂಬ ಪದವನ್ನು ನಾವು ಕೇಳಿಬಲ್ಲೆವು. ಕೃಷ್ಣನಿಗೆ ಇಷ್ಟವಾದ ಪದವಿದು. ಕೃಷ್ಣಪ್ರಜ್ಞೆಗೆ ಕೂಡ ನಿಮಿತ್ತವಾಗಿ, ಬರಿಯೆ ನಿಮಿತ್ತವಾಗಿ ಒಂದು ನರಪ್ರಜ್ಞೆ ಬೇಕು! ಏಕೆಂದರೆ ‘ಅರ್ಥವಾಗುವಿಕೆ’ ಎಂಬ ಪ್ರಜ್ಞಾವ್ಯಾಪಾರವು ಸಾಪೇಕ್ಷವಾಗಿಯೇ ಕೆಲಸವನ್ನು ನಿರ್ವಹಿಸುವುದಾದುದರಿಂದ. ಸಾಪೇಕ್ಷವೆಂದರೆ relative, ಇನ್ನೊಂದನ್ನು ಸೂಚಿಸುವ ಮೂಲಕವೇ ತನ್ನನ್ನು ತೋರ್ಪಡಿಸುವ ರೀತಿ!

ಆದುದರಿಂದಲೇ ಸ್ವರ್ಗದ ಚಿಂತೆಯನ್ನು ಈ ಲೋಕದಲ್ಲಿದ್ದುಕೊಂಡೇ ಮಾಡದೇ ಇರುವಂತಿಲ್ಲ. ಇಲ್ಲಿನದಕ್ಕಿಂತ ಭಿನ್ನವಾದ ಅನುಭವದ ಕುರಿತು ಹಂಬಲಿಸದೇ ಇರುವಂತಿಲ್ಲ. ಉಪನಿಷತ್ತನ್ನು ಕಾಡಿದ, ಆದುದರಿಂದ ಅದು ತೀವ್ರವಾಗಿ ಚಿಂತಿಸಿದ ಮೂಲಭಾವನೆ ಎಂದರೆ- ‘ಭಯ’. ಯಾವುದರ ಭಯ? ಪ್ರಕೃತಿಯ ಭಾಗವೇ ಆಗಿರುವ ಮನುಷ್ಯ ಜೀವಿಗೆ ಪ್ರಕೃತಿಯದ್ದೇ ಭಯ! ಎಂಥ ಆಶ್ಚರ್ಯವಿದು! ರೋಗರುಜಿನಗಳ ಭಯ; ಮುಪ್ಪಿನ ಭಯ; ಕೊನೆಗೆ ಸಾವಿನ ಭಯ. ಕೊನೆಗೆ ಎನ್ನುವಂತಿಲ್ಲ. ಏಕೆಂದರೆ ‘ಸಾವು’ ಯಾವಾಗ ಎರಗುತ್ತದೋ ಬಲ್ಲವರಾರು? ಹಾಗೆ, ಸದಾ ಸಾವಿನ ಭಯ. ಇವೆಲ್ಲ ಪ್ರಾಕೃತಿಕವಾದರೆ ಸಾಂಸ್ಕೃತಿಕವಾಗಿ ನಮಗೆ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವ ಭಯ. ದ್ವಿತೀಯಾದ್‌ ವೈಭಯಂ ಭವತಿ ಎನ್ನುತ್ತದೆ ಉಪನಿಷತ್ತು. ‘ಈ ಎರಡನೆಯವನಿಂದಲ್ಲವೆ ಹೆದರಿಕೆಯುಂಟಾಗಿರುವುದು!’ ಯಾರೀತ ಈ ಎರಡನೆಯವನು? ಯಾರೆಂದರೆ ಈತ ನನ್ನಂತೆಯೇ ಇರುವವನು. ಆದುದರಿಂದಲೇ ನನ್ನ ಪ್ರತಿಸ್ಪರ್ಧಿಯಂತೆ ಕಾಣುವನು. ಯಾವುದರಲ್ಲಿ ಸ್ಪರ್ಧಿ? ಈತ ತನ್ನ ವ್ಯಕ್ತಿತ್ವಕ್ಕೇ ಸ್ಪರ್ಧಿಯಾಗಿರುವನು. ಆದುದರಿಂದ ನನ್ನ ಅಧಿಕೃತತೆಯನ್ನೇ ಕಸಿದುಕೊಳ್ಳಬಹುದಾದವನು! ಇದೇ ಆಳವಾದ ಭೀತಿಗೆ ಕಾರಣವಾದ ಅಂಶ. ಅಂದರೆ ನನ್ನಂತೆಯೇ ಇರುವ ಇನ್ನೊಬ್ಬನ ಬಗೆಗಿನ ಭಯವೆಂದರೆ ಅದು ನನ್ನ ಕುರಿತಾಗಿ ನನಗೇ ಇರುವ ಭಯವೆಂದಾಯಿತು. ಅನ್ಯ ಭಯದ ರೂಪದಲ್ಲಿ ಸ್ವ-ಭಯವೇ ಕಾಡುತ್ತಿರುವುದು. ಮನುಷ್ಯ ಜೀವ ಹೇಗೆ ಸ್ವ-ರತವೋ ಹಾಗೆಯೇ ಸ್ವ-ಭೀತವೂ ಹೌದು! ತನ್ನ ಕುರಿತು ತನಗೇ ಭಯ. ಈ ಪರಿಯ ಸ್ವ-ಭಯಕ್ಕೆ ಅನೇಕ ಮುಖಗಳಿವೆ. ನಾನು ಪಟ್ಟ ಪಾಡುಗಳಿಂದ ಪಟ್ಟ ಸಂಕಟಗಳಿಂದ ನನ್ನ ವ್ಯಕ್ತಿತ್ವವು ಮಾಗಲು ನಾನೇ ಅಡ್ಡಿಯಾಗುವೆನೇನೋ ಎಂದು ಭೀತರಾದ ಆತಂಕಿತ ದಾರ್ಶನಿಕರಿದ್ದಾರೆ!

ಆದುದರಿಂದಲೇ- ಮನುಷ್ಯ ಮೊದಲು ಬಯಸುವುದು ಭಯವಿಲ್ಲದ ನೆಲೆಯೊಂದನ್ನು. ಸಾವು ನಮ್ಮ ಮೈಯಲ್ಲೇ ಮನೆಮಾಡಿಕೊಂಡಿದೆಯಾಗಿ ಆ ಭಯವಿಲ್ಲದ ಜಾಗ ಈ ಲೋಕದಲ್ಲಿ ಇರಲಾರದು. ನಮ್ಮ ಮೈಯೊಡನೆ ಸಾವನ್ನೂ ಇಲ್ಲೇ ಬಿಟ್ಟು ಭಯವಿಲ್ಲದ ನೆಲೆಗೆ ಸೇರೋಣವೆಂದರೆ ಅದು ಸ್ವರ್ಗವೇ ಸೈ. ಸ್ವರ್ಗೇಲೋಕೇ ನ ಭಯಂ ಕಿಂಚನಾಸ್ತಿ. ಏಕೆಂದರೆ ಅಲ್ಲಿ ಯಮನಿಲ್ಲವಲ್ಲ. ಮುಪ್ಪಿಲ್ಲ. ಅಲ್ಲಿ ಕಾಲ ಸರಿಯುವುದಿಲ್ಲ. ಕಣ್ಣೆವೆ ಮಿಟುಕದು! ಅನಿಮಿಷರಂತೆ ಸ್ವರ್ಗವಾಸಿಗಳು!

ಇನ್ನೊಂದು ಮಾತು ನುಡಿಯುತ್ತಾನೆ ನಚಿಕೇತ : ಅಲ್ಲಿ ಹಸಿವು-ಬಾಯಾರಿಕೆಗಳಿಲ್ಲ! ಅದಲ್ಲವೆ ಸ್ವರ್ಗದ ಮುದ ಎನ್ನುತ್ತಾನೆ! ಹಸಿವಿಗೂ-ಮೃತ್ಯುವಿಗೂ ಎಂಥ ನಿಕಟತೆ! ನಮ್ಮ ಹಸಿವನ್ನು ತಣಿಸಲೆಂದು ನಾವು ತಿನ್ನುವ ಆಹಾರ ನಮ್ಮನ್ನೂ ತಿನ್ನುವುದು. ಸೂಕ್ಷ್ಮವಾಗಿ ನಮ್ಮ ಆಹಾರಕ್ಕೆ ನಾವೇ ತುತ್ತಾಗುವೆವು. ಅದಕ್ಕೆ ನಾವು ತುತ್ತಾಗದೆ ಅದು ನಮ್ಮ ತುತ್ತಾಗದು. ಈ ಸೂಕ್ಷ್ಮ ನಮ್ಮ ಅರಿವಿಗೆ ಬಾರದೇ ಉಳಿಯುತ್ತದೆ- ಅಷ್ಟೆ. ಈ ಲೋಕದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ‘ಹಸಿವು’ ಇರುವಂತಿದೆ. ಅಶನಾಯಾ ಹಿ ಮೃತ್ಯುಃ ಎಂದು ಉಪನಿಷತ್ತು ಹೇಳಿತ್ತು. ಇನ್ನೊಂದೆಡೆಯಲ್ಲಿ. ಈ ಸೃಷ್ಟಿಗೆ ಮುನ್ನ ಏನೂ ಇರಲಿಲ್ಲವಂತೆ. ಮೃತ್ಯುವೇ ಇದನ್ನೆಲ್ಲ ಆವರಿಸಿಕೊಂಡಿತ್ತಂತೆ. ಆದರೆ, ಆ ಮೃತ್ಯುವಾದರೋ ಹಸಿವಿನ ರೂಪದಲ್ಲಿ ಇತ್ತಂತೆ! ಈ ಸೃಷ್ಟಿ ಎಂದರೆ ಮೃತ್ಯುವಿನ ಹಸಿವಿಗೆ ತುತ್ತೆಂಬಂತೆ ಒಡಮೂಡಿದ್ದು! ಉಪನಿಷತ್ತಿನ ಈ ದರ್ಶನಗಳೆಲ್ಲ ಅನನ್ಯವಾಗಿವೆ. ಇದರ ನಡುವೆ ಹಸಿವಿನ ಕಾಟವಿಲ್ಲದ ಸ್ವರ್ಗಸುಖದ ಕಲ್ಪನೆಯೂ ಇದೆ. ಅಂದರೆ, ಯಜ್ಞಾಗ್ನಿಯಲ್ಲಿ ಹವಿಸ್ಸನ್ನು ಅರ್ಪಿಸಿ ಅಗ್ನಿಯ ಮತ್ತು ದೇವತೆಗಳ ಹಸಿವನ್ನು ನೀಗಿಸಿ ಆ ಮೂಲಕ ನಮ್ಮ ಹಸಿವೂ ನೀಗಬಲ್ಲುದು ಎಂಬ ಕರ್ಮದರ್ಶನವೇ ಇದೆ! ಇದು ನಚಿಕೇತನ ಎರಡನೆಯ ಚಿಂತನೆಯಾಗಿರುವುದು ಅವನ ‘ಕಟ್ಟುವ’ ಮನಸ್ಸಿಗೆ ಕನ್ನಡಿ ಹಿಡಿಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next