ನವದೆಹಲಿ: ದೇಶದ ಪ್ರಖ್ಯಾತ ತಾಂತ್ರಿಕ ದೈತ್ಯ ಸಂಸ್ಥೆ ವಿಪ್ರೋ ಇತ್ತೀಚೆಗೆ 300 ಮಂದಿಯನ್ನು ದಿಢೀರನೆ ಕೆಲಸದಿಂದ ಕಿತ್ತು ಹಾಕಿತ್ತು. ಇದಕ್ಕೆ ನೀಡಿದ ಕಾರಣ, ಆ ಉದ್ಯೋಗಿಗಳು ಒಂದೇ ಕಾಲದಲ್ಲಿ ಎರಡೆರಡು ಕಂಪನಿಗಳಿಗೆ ಸೇವೆ ಸಲ್ಲಿಸುತ್ತಿದ್ದರು ಎನ್ನುವುದು. ಆದರೆ ಇದನ್ನು ಪತ್ತೆಹಚ್ಚಿದ್ದು ಹೇಗೆ? ಮನೆಯಲ್ಲಿ ಕುಳಿತು ಅವರು ಇನ್ನೊಂದು ಕಂಪನಿಗೆ ಕೆಲಸ ಮಾಡಿದರೆ, ಅದು ಗೊತ್ತಾಗುವುದಾದರೂ ಹೇಗೆ?ಎರಡು ಲ್ಯಾಪ್‌ಟಾಪ್, ಒಂದೇ ವೈಫೈ, ಎರಡು ಕಂಪನಿಗಳಿಗೆ ಸೇವೆ!
ಹೀಗೆ ಕೆಲಸ ಮಾಡುವವರು ವಿಪಿಎನ್ ಬಳಸುತ್ತಾರೆ. ಆಗ ಅವರ ಐಪಿಯನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಇನ್ನೊಂದು ಕಂಪನಿಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಅಂತರ್ಜಾಲದ ಮೂಲಕ ಯಾವುದೇ ಸುಳಿವು ಸಿಗಲ್ಲ.
ಹಾಗಿದ್ದರೂ ವಿಪ್ರೋ ಕಂಡುಹಿಡಿದಿದ್ದು ಹೇಗೆ? ಇದಕ್ಕೆ ರಾಜೀವ್ ಮೆಹ್ತಾ ಎಂಬ ಷೇರುಪೇಟೆ ತಜ್ಞ ಉತ್ತರ ನೀಡಿದ್ದಾರೆ. ಅವರ ಉತ್ತರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ.”ಉದ್ಯೋಗಿಗಳಿಗೆ ವೇತನ ನೀಡುವಾಗ ಕಂಪನಿಗಳು ಪಿಎಫ್ ಅನ್ನು ನಿಗಪಡಿಸುತ್ತವೆ.
ಆಗ ಆಧಾರ್, ಪ್ಯಾನ್‌ಗಳನ್ನು ಪಡೆದುಕೊಂಡಿರುತ್ತವೆ. ಇವು ಅಕೌಂಟ್‌ಗಳಿಗೆ ಲಿಂಕ್ ಆಗಿರುತ್ತವೆ. ಒಬ್ಬನೇ ವ್ಯಕ್ತಿಗೆ ಎರಡು ಕಂಪನಿಗಳಿಂದ ಪಿಎಫ್ ಹಣ ಪಾವತಿಯಾಗಿದ್ದು ಸರ್ಕಾರದ ಗಮನಕ್ಕೆ ಬರುತ್ತದೆ. ಅದು ಈ ಮಾಹಿತಿಯನ್ನು ಕಂಪನಿಗಳಿಗೆ ಕಳುಹಿಸಿರುತ್ತದೆ’ ಎನ್ನುವುದು ಮೆಹ್ತಾ ಅಂದಾಜು. ಒಟ್ಟಾರೆ ಮೆಹ್ತಾ, ಈ ಪತ್ತೆಗೆ ಡಿಜಿಟಲ್ ಇಂಡಿಯಾವೇ ಕಾರಣ ಎಂದು ಹೊಗಳಿದ್ದಾರೆ.