ಕಾಡಿನಲ್ಲಿದ್ದ ಕಪ್ಪೆಗಳು ತಮ್ಮ ಕಪ್ಪೆಗಳ ಸಂಘದ ವತಿಯಿಂದ ವಾರ್ಷಿಕ ಕ್ರೀಡೋತ್ಸವವನ್ನು ಆಯೋಜಿಸುವುದೆಂದು ನಿರ್ಧರಿಸಿತು. ಅದರಲ್ಲೂ ಓಟದ ಸ್ಪರ್ಧೆಗೆ ಪ್ರಾಮುಖ್ಯತೆ ಕೊಡುವುದೆಂದು ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು. ಅದರ ಹಿಂದೊಂದು ಕಾರಣವಿತ್ತು. ಇಡೀ ಕಾಡಿನಲ್ಲಿ ಕಪ್ಪೆಗಳ ಓಟ ನಗೆಪಾಟಲಿಗೀಡಾಗಿತ್ತು. ಕಪ್ಪೆಗಳಿಗೆ ಓಡಲು ಬರುವುದಿಲ್ಲ ಎಂದು ಕಾಡಿನವಾಸಿಗಳು ಆಡಿಕೊಳ್ಳುತ್ತಿದ್ದರು. ಅದಕ್ಕೇ ಈ ಅಪವಾದದಿಂದ ಹೊರಬರಬೇಕೆಂದು ಈ ಬಾರಿ ಓಟದ ಸ್ಪರ್ಧೆಯನ್ನು ವಿಶೇಷವಾಗಿ ಆಯೋಜಿಸಲು ನಿರ್ಧರಿಸಿದ್ದು.
ಅದರಂತೆ ಓಟದ ಟ್ರ್ಯಾಕನ್ನು ಸಿದ್ಧಪಡಿಸಿದವು ಕಪ್ಪೆಗಳು. ಚಿಕ್ಕ ಟ್ರ್ಯಾಕನ್ನು ಸಿದ್ಧಪಡಿಸಿದರೆ ಕಾಡಿನವಾಸಿಗಳು ಆಡಿಕೊಳ್ಳುತ್ತಾರೆಂದು ಉದ್ದದ ಟ್ರ್ಯಾಕನ್ನೇ ಸಿದ್ಧಪಡಿಸಲಾಗಿತ್ತು. ಇಡೀ ಕಾಡಿನಲ್ಲಿ ಕಪ್ಪೆಗಳ ಈ ಉತ್ಸಾಹ ಮನೆಮಾತಾಯಿತು. ಕಪ್ಪೆಗಳಂತೂ ಉಬ್ಬಿ ಹೋದವು. ಹೋಗಿದ್ದ ಗೌರವವನ್ನು ಪಡೆಯಲು ಅವೆಲ್ಲವೂ ಉತ್ಸುಕವಾಗಿದ್ದವು. ನಿಜ ಹೇಳಬೇಕೆಂದರೆ ಕಾಡಿನವಾಸಿಗಳೆಲ್ಲವಕ್ಕೂ ಕಪ್ಪೆಗಳ ನಿಜವಾದ ಸಾಮರ್ಥಯದ ಅರಿವಿತ್ತು. ಅಷ್ಟು ಉದ್ದದ ಟ್ರ್ಯಾಕಿನಲ್ಲಿ ಕಪ್ಪೆಗಳು ಓಡಲು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು. ಅವೆಲ್ಲವೂ ಕಪ್ಪೆಗಳು ಸೋಲುವುದನ್ನು ಕಾಯುತ್ತಿದ್ದವು. ಸೋತಾಗ ಅವುಗಳನ್ನು ಆಣಕಿಸಿ ನಗುವ ಅವಕಾಶಕ್ಕಾಗಿ ಕಾಯುತ್ತಿತ್ತು.
ಅಂತೂ ಇಂತೂ ವಾರ್ಷಿಕೋತ್ಸವದ ದಿನ ಬಂದೇಬಿಟ್ಟಿತು. ಕಪ್ಪೆಗಳ ಉತ್ಸಾಹ ಎಲ್ಲೆ ಮೀರಿತ್ತು. ಓಟದ ಶರ್ಟು, ದಿರಿಸು, ಟ್ರ್ಯಾಕ್ ಪ್ಯಾಂಟನ್ನು ಧರಿಸಿ ಸಿದ್ಧವಾಗಿ ಮಿರಿಮಿರಿ ಮಿಂಚುತ್ತಿದ್ದವು. ಅದನ್ನು ನೋಡಿ ಕಾಡಿನ ಇತರೆ ಪ್ರಾಣಿಗಳೆಲ್ಲಾ ಮುಸಿ ಮುಸಿ ನಗುತ್ತಿದ್ದವು. ಅಂತೂ ಇಂತೂ ಓಟಗಾರರು ಅಂಕಣಕ್ಕೆ ಬರಬೇಕೆಂದು ಧ್ವನಿವರ್ಧಕದಲ್ಲಿ ಕರೆನೀಡಿದರು. ಓಟಗಾರ ಕಪ್ಪೆಗಳು ಅಂಕಣಕ್ಕೆ ಬಂದು ನಿಂತು ಲಟಿಕೆ ಮುರಿಯತೊಡಗಿದವು. ರೆಫರಿ ಕಪ್ಪೆ “ರೆಡಿ… 1… 2… 3…’ ಹೇಳಿದ ತಕ್ಷಣ ಓಟ ಪ್ರಾರಂಭವಾಯಿತು. ಕಪ್ಪೆಗಳು ಓಂದೇ ಸಮನೆ ಓಡತೊಡಗಿದವು. ಒಂದು ಸಮಸ್ಯೆ ಎದುರಾಯಿತು. ಏನಪ್ಪಾ ಅಂದರೆ, ಎಷ್ಟು ದೂರವನ್ನು ಕ್ರಮಿಸಿದರೂ ಓಟ ಮುಗಿಯುತ್ತಲೇ ಇಲ್ಲ. ಗುರಿ ತುಂಬಾ ದೂರದಲ್ಲಿದೆ. ಆಗಲೇ ಅವಕ್ಕೆ ಅರಿವಾಗಿದ್ದು, ತಾವು ಅತಿ ಉದ್ದದ ಓಡುವ ಟ್ರ್ಯಾಕನ್ನು ಸಿದ್ಧಪಡಿಸಿದ್ದೆವೆಂದು. ಆದರೆ ಈಗೇನು ಮಾಡುವುದು? ಇತರೆ ಪ್ರಾಣಿಗಳ ಮುಂದೆ ಮುಖಭಂಗವಾಗುವುದರಿಂದ ತಪ್ಪಿಸಿಕೊಳ್ಳಲಾದರೂ ಗುರಿಯನ್ನು ತಲುಪಲೇಬೇಕಿತ್ತು.
ಅಷ್ಟರಲ್ಲಿ ಕಪ್ಪೆಯೊಂದು “ಅಯ್ಯೋ ನನ್ನಿಂದಾಗದು ಅಷ್ಟು ದೂರ ಕ್ರಮಿಸಲು. ನಾನು ಸತ್ತೇಹೋಗಿಬಿಡುತ್ತೇನೆ’ ಎಂದಿತು. ಈ ಮಾತನ್ನು ಕೇಳಿ ಇತರೆ ಓಟಗಾರ ಕಪ್ಪೆಗಳಿಗೆ ಇದ್ದ ಧೈರ್ಯವೂ ಹಾರಿಹೋಗಿತ್ತು. ಅಷ್ಟರಲ್ಲಿ ಒಂದೊಂದೇ ಕಪ್ಪೆ ದಣಿವಾಗಿ ಕುಸಿದುಬೀಳತೊಡಗಿತ್ತು. ಅವರಲ್ಲಿ ಕೆಲ ಕಪ್ಪೆಗಳು ನಾಟಕ ಮಾಡುತ್ತಾ ನೆಲಕ್ಕೆ ಬೀಳತೊಡಗಿದ್ದವು. ಏಕೆಂದರೆ ಗಾಯದ ನೆಪದಲ್ಲಿ ಮಾನ ಉಳಿಸಿಕೊಳ್ಳಬಹುದಲ್ಲ ಎಂದು. ಓಡುತ್ತಲೇ ಕಪ್ಪೆಗಳು ತಮ್ಮಲ್ಲೇ ಮಾತಾಡಿಕೊಂಡು ಏನೇನೋ ನಾಟಕವಾಡಿ, ನಾನಾ ಕಾರಣಗಳಿಂದ ಓಟದ ಸ್ಪರ್ಧೆಯಿಂದ ನಿವೃತ್ತವಾದವು. ಆದರೆ ಒಂದು ಮರಿ ಕಪ್ಪೆ ಮಾತ್ರ ಓಡುತ್ತಲೇ ಇತ್ತು. ಅದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಂಕಣದಿಂದ ಹೊರಕ್ಕೆ ಬಿದ್ದ ಕಪ್ಪೆಗಳು “ಮರಿಕಪ್ಪೆ ಯಾಕೆ ಆ ಥರ ಓಡುತ್ತಿದ್ದೀಯಾ. ನಮ್ಮಂತೆ ನೀನೂ ಕುಂಟು ನೆಪ ಹೇಳಿ ಹೊರಬಂದುಬಿಡು. ನಿನ್ನಿಂದ ಖಂಡಿತ ಓಟ ಮುಗಿಸಲು ಆಗುವುದಿಲ್ಲ. ಪ್ರಾಣ ಕಳೆದುಕೊಳ್ಳುತ್ತೀಯಾ ಅಷ್ಟೇ’ ಎಂದವು. ಆದರೆ ಆ ಮರಿ ಕಪ್ಪೆ ಮಾತ್ರ ಒಂದೇ ಸಮನೆ ಓಡುವುದನ್ನು ಮುಂದುವರಿಸಿತ್ತು. ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಆ ಮರಿ ಕಪ್ಪೆ ಏಕಾಂಗಿಯಾಗಿ ಓಟವನ್ನು ಪೀರ್ತಿಗೊಳಿಸಿ ಜಯಶಾಲಿಯಾಗಿತ್ತು. ಕಪ್ಪೆಗಳಿಗೆ ಹೆಮ್ಮೆಯೋ ಹೆಮ್ಮೆ, ಅಂತೂ ಕಪ್ಪೆಗಳ ಗೌರವ ಆ ಮರಿ ಕಪ್ಪೆಯಿಂದ ಉಳಿಯಿತೆಂದು.
ಎಲ್ಲಾ ಕಪ್ಪೆಗಳಿಗೂ ಒಂದೇ ಸಂದೇಹ, “ನಾವೆಲ್ಲರೂ ಅಷ್ಟು ಹಿಮ್ಮೆಟ್ಟಿಸುವ ಮಾತಾಡುತ್ತಿದ್ದರೂ ಕುಗ್ಗದೆ, ಓಟ ಮುಗಿಸಿ ಜಯಶಾಲಿಯಾದೆಯಲ್ಲ, ಹೇಗೆ?’. ಆ ಮರಿ ಕಪ್ಪೆ “ಹಾಂ, ಏನಂದಿರಿ. ನನಗೆ ಕಿವಿ ಕೇಳುವುದಿಲ್ಲ, ಜೋರಾಗಿ ಮಾತಾಡಿ’ ಎಂದಾಗ ಕಪ್ಪೆಗಳೆಲ್ಲವೂ ಬೇಸ್ತು ಬಿದ್ದಿತು. ಆ ಮರಿ ಕಪ್ಪೆಗೆ ಅವರ ಮಾತುಗಳೊಂದೂ ಕಿವಿಗೆ ಬಿದ್ದಿರಲಿಲ್ಲ. ತಾವು ಸೋಲಿನ ಮಾತಿಗೆ ಭಯಪಟ್ಟಿದ್ದೇ ತಮ್ಮ ಸೋಲಿಗೆ ಕಾರಣವೆನ್ನುವುದು ಅವುಗಳಿಗೆ ತಿಳಿದುಹೋಯಿತು.
– ಮೀರಾ