ಚಾಮರಾಜನಗರ: ಜಿಲ್ಲೆಯೊಳಗೆ ಹೊರ ಜಿಲ್ಲೆಯಿಂದ ಜನರನ್ನು ಬಿಡುತ್ತಿಲ್ಲ. ಆದರೂ ಈ ಮುಖ್ಯ ಪೇದೆ ಬೆಂಗಳೂರಿನಿಂದ ಚೆಕ್‌ಪೋಸ್ಟ್ ದಾಟಿ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ಪೊಲೀಸ್ ಪೇದೆಯೆಂಬ ಕಾರಣದಿಂದ ಆತನನ್ನು ಚೆಕ್‌ಪೋಸ್ಟ್ ನಲ್ಲಿ ಬಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೆಂಗಳೂರು ಕಡೆಯಿಂದ ಕೊಳ್ಳೇಗಾಲ ತಾಲೂಕು ಪ್ರವೇಶಿಸಲು ಸತ್ತೇಗಾಲ ಚೆಕ್‌ಪೋಸ್ಟ್ ದಾಟಿ ಬರಬೇಕು. ಸತ್ತೇಗಾಲ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರಿಗೆ ಆತ ವೈದ್ಯಕೀಯ ತುರ್ತಿಗಾಗಿ ಬಂದಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಸಹ ತಮ್ಮದೇ ಇಲಾಖೆಯವರಾದ್ದರಿಂದ ಆತನಿಗೆ ರಿಯಾಯಿತಿ ನೀಡಿ ಒಳಬಿಟ್ಟಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಪೊಲೀಸ್ ಮುಖ್ಯಪೇದೆ, ಕೋವಿಡ್ ಟೆಸ್ಟ್ ನಡೆದ ಮೇಲೆ ಮನೆ ಬಿಟ್ಟು ಹೀಗೆ ಹೊರಬಂದದ್ದು ಸರಿಯಲ್ಲ ಎಂಬ ಆಕ್ಷೇಪ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ವೈದ್ಯಕೀಯ ನೆಪ ಹೇಳಿ ಪ್ರವೇಶ: ಈ ಮುಖ್ಯ ಪೇದೆ ಬೆಂಗಳೂರಿನಿಂದ ಹೇಗೆ ಹೊರಟರು ಎಂಬುದು ಮಾಹಿತಿ ಇಲ್ಲ. ಅವರಿಗೆ ಅನುಮತಿ ಇದ್ದಂತೆ ಕಾಣುತ್ತಿಲ್ಲ. ಪೊಲೀಸರು ಪ್ರಾರಂಭದಲ್ಲಿ ಒಳ ಬಿಟ್ಟಿಲ್ಲ. ವಿಚಾರಣೆ ಮಾಡಿದ್ದಾರೆ. ತಾವು ಪೊಲೀಸ್ ಎಂದು ತಿಳಿಸಿ ವೈದ್ಯಕೀಯ ಕಾರಣಕ್ಕಾಗಿ ಬಂದಿದ್ದೇನೆ ಎಂದು ಹೇಳಿದ್ದರಿಂದ ಬಿಟ್ಟಿದ್ದಾರೆ. ಚೆಕ್‌ಪೋಸ್ಟ್ ನಲ್ಲಿ ಅವರನ್ನು ತಪಾಸಣೆ ನಡೆಸಿದ ಪೊಲೀಸರನ್ನೂ ಕ್ವಾರಂಟೈನ್ ನಲ್ಲಿಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರವಿ ಅವರು ಮಾಹಿತಿ ನೀಡಿದ್ದಾರೆ.
ಪೇದೆ ಮಾಡಿರುವುದು ಅಕ್ಷಮ್ಯ. ಗಡಿ ಬಂದ್ ಮಾಡಿದ್ದರೂ, ಬಂದಿದ್ದರೂ ಡಿಜಿಯವರಿಗೆ ಪತ್ರ ಬರೆದಿದ್ದೇನೆ. ಜನತೆ ಗಾಬರಿ ಪಡುವ ಅವಶ್ಯಕತೆಯಿಲ್ಲ. ವದಂತಿಗಳಿಗೆ ಕಿವಿ ಕೊಡಬೇಡಿ.
ಚಾಮರಾಜನಗರ ಜಿಲ್ಲೆ ಹಸಿರು ವಲಯದಲ್ಲೇ ಇದೆ.
● ಡಾ.ರವಿ, ಜಿಲ್ಲಾಧಿಕಾರಿ