Advertisement
ವಿವಾದಾತೀತ ವಿಷಯವೆಂದರೆ ಬಿ.ಜೆ.ಪಿಯ ಹಾಗೂ ಎನ್.ಡಿ.ಎದ ಐತಿಹಾಸಿಕ ಗೆಲುವಿನ ಹಿಂದೆ ಇರುವ ದೊಡ್ಡ ಬಲ ಮೋದಿಯವರ ಸಂವಹನ ಶಕ್ತಿಯೇ! ಚುನಾವಣೆಗೆ ಸಂಬಂಧಿಸಿದ ಬೇರೆಲ್ಲ ಶಕ್ತಿಗಳಿಗೆ ಜೀವ ತುಂಬಿದ್ದು ಮೋದಿಯವರ ಮಾಂತ್ರಿಕ ಸಂವಹನ. ಇಲ್ಲಿ ತುಂಬ ಕುತೂಹಲದ, ಅಧ್ಯಯನದ ವಿಷಯಗಳಿವೆ. ಮೋದಿಯವರು ಇಷ್ಟೊಂದು ವೈವಿಧ್ಯತೆ ಇರುವ ದೇಶಕ್ಕೆ ಹೇಗೆ ಸಂವಹಿಸಿಕೊಂಡರು? ವೈವಿಧ್ಯಮಯ ಭಾಷೆಗಳ ಜನರೊಂದಿಗೂ ಹೇಗೆ ಮಾತನಾಡಿಕೊಂಡರು? ಯಾವ ಸಂಕೇತಗಳನ್ನು ಬಳಸಿದರು? ಯಾವ ರೀತಿ ಜನರ ಮನಸ್ಸನ್ನು ಗೆದ್ದರು? ಇತ್ಯಾದಿ. ಈ ಪ್ರಶ್ನೆಗಳಿಗೆ ಉತ್ತರಗಳು ರಾಜಕೀಯ ಇತಿಹಾಸದಲ್ಲಿ ದಾಖಲೆಯಾಗುವಂತಹ ವಿಷಯಗಳು.
Related Articles
Advertisement
ರಾಜಕೀಯ ಸಂವಹನ ತುಂಬ ಸಂಕೀರ್ಣವಾದುದು. ಸಂವಹನ ಅಲ್ಲಿ ನಾಯಕ ಮತ್ತು ಹಿಂಬಾಲಕನ ನಡುವೆ ಹಲವು ರೀತಿಯ ಸಂಕೇತಗಳ ಮೂಲಕ ನಡೆಯುತ್ತದೆ. ಅಲ್ಲದೆ ರಾಜಕೀಯ ಸಂವಹನದಲ್ಲಿ ಪ್ರಮುಖವಾದವು ನಾಯಕ ಎತ್ತಿ ಹಿಡಿಯುವ ಐಡಿಯಾಗಳು ಮತ್ತು ತತ್ವಗಳು. ತಮ್ಮ ಸಮಯವನ್ನು ಕಂಡುಕೊಂಡಿರುವ ಇಂತಹ ಐಡಿಯಾಗಳು ಮತ್ತು ತತ್ವಗಳು ರಾಮಾಯಣ ಅಥವಾ ಮಹಾಭಾರತದಲ್ಲಿ ಬರುವ ಶಸ್ತ್ರಗಳಂತೆ ತಮ್ಮ ಗುರಿಗಳನ್ನು ತಾವೇ ಕಂಡುಕೊಳ್ಳುತ್ತವೆ. ತತ್ವಗಳೇ ಮಲ್ಲಿಗೆ ಹೂಗಳಾಗಿ ಪರಿಮಳ ಬೀರುತ್ತವೆ. ಅಥವಾ ಖಡ್ಗಗಳಾಗಿ ತಮ್ಮ ಗುರಿಗಳನ್ನು ಕಂಡುಕೊಳ್ಳುತ್ತವೆ. ಅವು ಜನರನ್ನು ತಮ್ಮ ಪರವಾಗಿ ನಿಲ್ಲಲು ಓಲೈಸುತ್ತವೆ ಅಥವಾ ತಮ್ಮ ವಿರೋಧವಾಗಿ ನಿಲ್ಲದಂತೆ ಬೆದರಿಸುತ್ತವೆ. ಮಾತನಾಡುವುದು ತತ್ವಗಳು. ಗಾಂಧಿ ಚಳವಳಿಯನ್ನು ಗಮನಿಸಿಕೊಳ್ಳಬೇಕು. ಅಲ್ಲಿ ಗಾಂಧಿಯವರ ಸತ್ಯಾಗ್ರಹ, ಉಪವಾಸ, ನೂಲುವಿಕೆ ಇತ್ಯಾದಿ ಕ್ರಿಯೆಗಳೆಲ್ಲವೂ ಸಂಕೇತಗಳಾಗಿ, ರೂಪಕಗಳಾಗಿ ಹೋಗಿ ಮನೆ ಮನೆಗೂ ಗಾಂಧೀಜಿಯವರ ಕುರಿತಾಗಿ ಹೇಳಿದವು. ಗಾಂಧಿ ಚಳವಳಿಯನ್ನು ಯಶಸ್ಸುಗೊಳಿಸಿದ್ದು ಹೀಗೆ ಅವರು ಸೃಷ್ಟಿಸಿದ ಸಂವಹನ ಸಂಕೇತಗಳು. ಹಾಗೆಯೇ ಮೋದಿಯವರ ಪ್ರಚಂಡ ಸಂವಹನ ಯಶಸ್ವಿಗೂ ಕಾರಣವಾದದ್ದು ಅವರು ಎತ್ತಿ ಹಿಡಿದ ಮೌಲ್ಯಗಳು, ತತ್ವಗಳು. ಮೋದಿಯವರ ಸಂವಹನದ ಭಾರೀ ಯಶಸ್ಸಿನಲ್ಲಿ ನಿಜಕ್ಕೂ ಬಹಳ ದೊಡ್ಡ ಪಾತ್ರ ವಹಿಸಿದವು ಮೋದಿ ಎತ್ತಿ ಹಿಡಿದ ಮೌಲ್ಯಗಳು ಮತ್ತು ರಾಜಕೀಯ ತತ್ವಗಳು.
ಎಂತಹ ಮೌಲ್ಯಗಳು ಮತ್ತು ತತ್ವಗಳು? ಗಮನಿಸೋಣ. ಮೊದಲನೆಯ ಪೀಳಿಗೆಯ ಮತದಾರನಿಗೆ/ಳಿಗೆ ಸಂವಹಿಸಿದ್ದು ಮೋದಿಯವರ ವೈಯಕ್ತಿಕ ಗ್ಲಾಮರ್, ಸ್ಮಾರ್ಟ್‌ನೆಸ್ ಮತ್ತು ನೀಷ್‌ನೆಸ್ ಎಂದೇ ಭಾವನೆ. ಮುಖ್ಯವಾಗಿ ಯುವಜನತೆಯ ಹೃದಯ ಕಟ್ಟಿದ್ದು, ಮೀಟಿದ್ದು, ಮಿಡಿದಿದ್ದು ಮೋದಿ ಪ್ರಾಮಾಣಿಕ ಎನ್ನುವ ಭಾವನೆ ಭವ್ಯ ದೇಶದ ಕನಸು. ಆದರೆ ಇಡೀ ದೇಶದ ವೈವಿಧ್ಯಪೂರ್ಣ ಹಿನ್ನೆಲೆಗಳ, ಸಂಸ್ಕೃತಿಗಳ, ಭೂಭಾಗಗಳ ಜನತೆಯ ಹೃದಯಗಳ ಬಾಗಿಲನ್ನು ಮೋದಿ ತೆರೆದಿದ್ದು ಒಂದು ಬಲವಾದ ಮಾತಿನ ಮೂಲಕ. ಮೋದಿ ಮುಂದಿಟ್ಟ ಈ ಬಲಿಷ್ಟ ಭವ್ಯ ಭಾರತದ ಪರಿಕಲ್ಪನೆ ವಿವಿಧ ಅಂಶಗಳನ್ನು ಹೊಂದಿದೆ. ಒಂದನೆಯ ಅಂಶ ತನ್ನ ದೇಶದ ಸಂಸ್ಕೃತಿಯ, ಸನಾತನತೆಯ, ಧಾರ್ಮಿಕತೆಯ ಗರ್ವವನ್ನು ಮೋದಿ ಎತ್ತಿ ಹಿಡಿದ ರೀತಿ. ಮೋದಿ ವಿಜೃಂಭಿಸಿದ ಈ ಅಂಶ ದೇಶದಲ್ಲಿ ಒಂದು ಸಾಂಸ್ಕೃತಿಕ ಕ್ರಾಂತಿಯನ್ನು ಸೃಷ್ಟಿಸಿ, ಒಂದು ಏಕತೆಯ ಭಾವನೆಯನ್ನು ಸೃಷ್ಟಿಸಿದೆ. ಇಂತಹ ಭಾವನೆಯೇ ದೇಶದ ಲಕ್ಷಾಂತರ ಹಳ್ಳಿಗಳನ್ನು ಮತ್ತು ಸಾಮಾನ್ಯರ ಹೃದಯಗಳನ್ನು ತಟ್ಟಿದ್ದು. ಇದರಿಂದಾಗಿಯೇ ಮೋದಿ ಎಲ್ಲರ ಮತ ಪಡೆಯುವುದರಲ್ಲಿ ಭಾರಿ ಯಶಸ್ವಿಯಾಗಿದ್ದು.
ಕುತೂಹಲದ ವಿಷಯವೆಂದರೆ ಇಂತಹ ಒಂದು ರಾಷ್ಟ್ರೀಯ ಏಕತೆಯ ಪರಿಕಲ್ಪನೆಯನ್ನು ಮೋದಿ ಕೇವಲ ಹಿಂದುತ್ವವನ್ನಾಗಿ ಬಲವಾಗಿ ಸಮೀಕರಿಸಿದಂತಿಲ್ಲ. ಕೇಂದ್ರಪ್ರಜ್ಞೆಯಲ್ಲಿ ಹಿಂದುತ್ವವಿತ್ತೇನೋ ಸರಿ. ಪಕ್ಷದ ಪ್ರಚಾರದಲ್ಲಿ ಹಿಂದುತ್ವದ ಸಂಕೇತಗಳು ಬಲವಾಗಿದ್ದವೇನೋ ನಿಜ. ಮೋದಿ ಸ್ಪರ್ಧಿಸಿದ್ದು ವಾರಣಾಸಿಯಿಂದ. ಅಲ್ಲದೆ ಪಕ್ಷ ಹಾರ್ಡಲೈನ್ ಹಿಂದುತ್ವವಾದಿಗಳಿಗೆ ಟಿಕೆಟ್ ನೀಡಿದ್ದು ಹೌದು. ಆದರೂ ಕೂಡ ತಮ್ಮ ಬಹಿರಂಗ ಭಾಷಣಗಳಲ್ಲಿ ಮೋದಿ ತಮ್ಮ ಬಲವಾದ ಭಾರತ ಪರಿಕಲ್ಪನೆಯನ್ನು ತುಸು ಸೂಕ್ಷ್ಮವಾಗಿ ಹಿಂದುತ್ವಕ್ಕಿಂತಲೂ ಮುಂದೆ ಹೋಗಿ ಬಳಸಿಕೊಂಡರು ಎಂದೇ ಭಾವನೆ. ಬಲವಾದ ರಾಷ್ಟ್ರೀಯತೆಯ ಭಾವನೆಗೆ ಇನ್ನೂ ಎರಡು ಆಯಾಮಗಳಿವೆ. ಅವೆಂದರೆ ಆರ್ಥಿಕವಾಗಿ ಬಲಾಡ್ಯವಾದ ಭವ್ಯ ಭಾರತ. ಹಾಗೆಯೇ ಮಿಲಿಟರಿ ದೃಷ್ಟಿಯಿಂದ ಬಲಿಷ್ಟವಾದ ಭಾರತದ ಪರಿಕಲ್ಪನೆ. ಮೋದಿ ಇಡೀ ದೇಶದ ನರನರಗಳನ್ನು ಮುಟ್ಟಿದ್ದು ಇಲ್ಲಿ. ಗಮನಿಸಿಕೊಳ್ಳಬೇಕು, ಏನೆಂದರೆ ಪಾಕಿಸ್ತಾನದ ಆಟಗಳ ವಿರುದ್ಧ ದೇಶದ ಜನತೆ ರೋಸಿ ಹೋಗಿತ್ತು. ತನ್ನ ಸಹನೆ ಕಳೆದುಕೊಳ್ಳುವ ಸ್ಥಿತಿ ತಲುಪಿತ್ತು. ಇಂತಹ ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮಗೆ ಸಾಧ್ಯವಿಲ್ಲವೇ? ಎನ್ನುವ ಪ್ರಶ್ನೆ ಎಲ್ಲರ ಮನಸ್ಸನ್ನೂ ಕಾಡುತ್ತಿತ್ತು. ಸೇಡು ತೀರಿಸಿಕೊಳ್ಳಬೇಕು ಎಂದು ದೇಶ ಬಯಸುತ್ತಿತ್ತು. ಇಂತಹ ಪಾಕಿಸ್ತಾನವನ್ನು ನಾಚಿಗೆಗೇಡು ಮಾಡಿ ಬಂದಿದ್ದ ಮೋದಿ ಭವ್ಯ ಭಾರತದ ಶಕ್ತಿಯ ರೂಪಕವಾಗಿ ದೇಶದ ಜನರ ಮುಂದೆ ನಿಂತಿದ್ದು ಹೌದು.
ಮೋದಿಯವರ ಪ್ರಚಂಡ ಆಕರ್ಷಣೆಯ ಹಿಂದೆ ಇದ್ದಿದ್ದು, ಈ ಚುನಾವಣೆಯ ಪ್ರಮುಖ ರೂಪಕವಾಗಿ ಸಂವಹನಗೊಂಡಿದ್ದು ಶಕ್ತಿಯುತ ಭಾರತದ ಮೋದಿ ಕನಸು. ಜನರ ಮನಸ್ಸುಗಳೊಳಗಿದ್ದ ಇಂತಹ ಕನಸುಗಳನ್ನು ಸಾಕ್ಷಾತ್‌ಕರಿಸಿ ನಿಂತಿದ್ದ ಮೋದಿ ಹೀಗಾಗಿಯೇ ಒಂದು ಸೂಪರ್ ಮ್ಯಾನ್ ಆಗಿ ದೇಶದ ಜನತೆಗೆ ಕಂಡು ಬಂದರು. ಆರಾಧ್ಯ ದೈವವಾಗಿ ಹೋದರು. ಮೋದಿ ಜನರೊಡನೆ ಸಂವಹಿಸಿಕೊಂಡಿದ್ದು ಹೀಗೆ. ಈ ಐಡಿಯಾದ ಪ್ರತಿಮೆಯಾಗಿ. ಹೀಗೆ ಬಲವಾದ ರಾಷ್ಟ್ರೀಯತೆಯ ಪರಿಕಲ್ಪನೆಯ ಮೂಲಕ ಜನರ ಮನಸೆಳೆದ ಮೋದಿ ಒಂದು ಹೊಸ ರಾಜಕೀಯದ ರೂಪಕವಾಗಿ ಹೋಗಿದ್ದೇ ಅವರ ಸಂವಹನ ಯಶಸ್ಸಿಗೆ ಕಾರಣ.. ಮೋದಿ ಗೆದ್ದಿದ್ದು ಇಲ್ಲಿ.
– ಡಾ. ಆರ್.ಜಿ. ಹೆಗಡೆ