ಮುಂಬೈ: 2022ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನ ತಯಾರಿ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ಮೆಗಾ ಹರಾಜು ಇರುವ ಕಾರಣ ಮಂಗಳವಾರ ರಾತ್ರಿ ಎಲ್ಲ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಆಟಗಾರರನ್ನು ಉಳಿಸಿಕೊಂಡಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸೀಸ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ರನ್ನು ಆರ್ ಸಿಬಿ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿದೆ.
ವಿರಾಟ್ ಕೊಹ್ಲಿ ಅವರನ್ನು ಆರ್ ಸಿಬಿ ತಂಡವು ಈ ಹಿಂದಿನ ಮೆಗಾ ಹರಾಜಿನ ವೇಳೆಯೂ ಉಳಿಸಿಕೊಂಡಿತ್ತು. ಆ ಸಮಯದಲ್ಲಿ 17 ಕೋಟಿ ರೂ. ಬೆಲೆಗೆ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಮೊದಲ ಆಯ್ಕೆಯ ರಿಟೆನ್ಶನ್ ಆದರೂ ಕೊಹ್ಲಿಗೆ 15 ಕೋಟಿ ರೂ. ನೀಡಲಾಗಿದೆ. ಮ್ಯಾಕ್ಸವೆಲ್ ಗೆ 11 ಕೋಟಿ ರೂ. ಮತ್ತು ಸಿರಾಜ್ ಗೆ 7 ಕೋಟಿ ರೂ. ನೀಡಲಾಗಿದೆ.
ಕೊಹ್ಲಿ ಅವರ ವೇತನ ಕಡಿತ ಹಲವರ ಅಚ್ಚರಿಗೆ ಕಾರಣವಾಗಿದೆ. ತಂಡದ ಹಿತವನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿ ಅವರು ತಮ್ಮ ವೇತನ ಕಡಿತಕ್ಕೆ ಸೂಚಿಸಿದ್ದಾರೆ ಎಂದು ಮಾಜಿ ಆರ್ ಸಿಬಿ ಆಟಗಾರ ಪಾರ್ಥಿವ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ. “ತಂಡದ ಹಿತಾಸಕ್ತಿಯಿಂದ ಅವರು ವೇತನ ಕಡಿತಗೊಳಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು 15 ಕೋಟಿ ರೂ ಪಡೆದಿರುವ ಕಾರಣ 2 ಕೋಟಿ ರೂ. ತಂಡಕ್ಕೆ ಉಳಿದಿದೆ” ಎಂದು ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ:ಐಪಿಎಲ್ ನ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ
ಸದ್ಯ ಆರ್ ಸಿಬಿ ತಂಡ ಮೂವರು ಆಟಗಾರರಿಗೆ ಒಟ್ಟು 33 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಮೆಗಾ ಹರಾಜಿನಲ್ಲಿ 57 ಕೋಟಿ ರೂಪಾಯಿ ಪರ್ಸ್ ಉಳಿದಿದೆ.
ಸಿಎಸ್ ಕೆ ತಂಡವು ನಾಲ್ಕು ಆಟಗಾರರನ್ನು ಉಳಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಎರಡನೇ ಆಯ್ಕೆಯಾಗಿ ರಿಟೈನ್ ಮಾಡಲಾಗಿದೆ. ರವೀಂದ್ರ ಜಡೇಜಾ ಅವರನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಂಡಿದ್ದು, ಜಡೇಜಾಗೆ 16 ಕೋಟಿ ರೂ. ನೀಡಲಾಗಿದೆ.
ಆರ್ ಸಿಬಿ ತಂಡದ ರಿಟೆನ್ಶನ್ ಬಳಿಕ ವಿರಾಟ್ ಅವರು “ಈ ಅದ್ಭುತ ತಂಡದೊಂದಿಗೆ ವಿಶೇಷ ಬಾಂಧವ್ಯವಿದೆ. ಪ್ರಯಾಣ ಮುಂದುವರಿಯುತ್ತದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.