Advertisement

ಹಿಮ ಮರುಭೂಮಿ ‘ಅಕ್ಸಾಯ್ ಚಿನ್’ಪ್ರದೇಶವನ್ನು ಕೆಂಪು ರಾಷ್ಟ್ರ ಕಬಳಿಸಿದ ಕಥೆ

11:25 PM Jun 22, 2020 | Hari Prasad |

ಉಪಖಂಡವಾಗಿ ಗುರುತಿಸಲ್ಪಟ್ಟಿರುವ ಮತ್ತು ವಿಶ್ವದಲ್ಲೇ ಅತೀ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಒಂದಾಗಿರುವ ಭಾರತಕ್ಕೆ ಗಡಿ ತಕರಾರು ಎಂಬುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ಅದರಲ್ಲೂ 1947ರಲ್ಲಿ ಬ್ರಿಟಿಷ್ ಆಡಳಿತಗಾರರ ಒಡೆದು ಆಳುವ ನೀತಿ ಹಾಗೂ ಮಹಮ್ಮದ್ ಅಲಿ ಜಿನ್ನಾ ಎಂಬಾ ಮಹತ್ವಾಕಾಂಕ್ಷಿ ನಾಯಕನ ಕುಮ್ಮಕ್ಕಿನಿಂದ ನಮ್ಮ ದೇಶವನ್ನೇ ವಿಭಜಿಸಿ ಪಾಕಿಸ್ಥಾನ ಎಂಬ ಹೊಸ ದೇಶ ಉದಯವಾಗುವುದರೊಂದಿಗೆ ಭಾರತ ತನ್ನ ಗಡಿ ವಿಚಾರದಲ್ಲಿ ಹೊಸ ತಲೆಬಿಸಿಯನ್ನು ಎದುರಿಸುವಂತಾಯಿತು.

ಮಾತ್ರವಲ್ಲದೇ ಸರಿ ಸುಮಾರು 70 ವರ್ಷಗಳ ಬಳಿಕವೂ ಆ ಐತಿಹಾಸಿಕ ತಪ್ಪಿಗೆ ನಾವು ಬೆಲೆ ತೆರುತ್ತಲೇ ಇದ್ದೇವೆ. ಕಾಶ್ಮೀರ ಭಾಗದಲ್ಲಿ ಪಾಕಿಸ್ಥಾನದ ತಂಟೆ-ತಕರಾರು ಹಾಗೂ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ವಿಚಾರದಲ್ಲಿ ಉಂಟಾಗಿರುವ ತಗಾದೆ ಹಲವಾರು ರಾಜತಾಂತ್ರಿಕ ಮಾತುಕತೆ ಮತ್ತು ಸೇನಾ ದಾಳಿಗಳ ಬಳಿಕವೂ ಗೊಂದಲದ ಗೂಡಾಗಿಯೇ ಉಳಿದುಬಿಟ್ಟಿದೆ.

ಇಷ್ಟು ಸಾಲದೆಂಬಂತೆ ವಿಶ್ವದ ದೈತ್ಯ ಶಕ್ತಿಯಾಗಿ ಹೊರಹೊಮ್ಮುತ್ತಿರುವ ನಮ್ಮ ನೆರೆ ರಾಷ್ಟ್ರ ಚೀನಾವೂ ಸಹ ನಮ್ಮೊಂದಿಗೆ ಗಡಿ ತಂಟೆಗೆ ನಿಂತುಬಿಟ್ಟಿರುವುದು ಖೇದಕರ ಸಂಗತಿಯೇ ಸರಿ.

ಹಾಗಾದರೆ ಭಾರತ ಯಾವೆಲ್ಲಾ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಯಾವೆಲ್ಲಾ ದೇಶಗಳೊಂದಿಗೆ ಗಡಿ ವಿಚಾರವಾಗಿ ತಕರಾರಿದೆ ಎಂದು ನೋಡಿದರೆ ನಮಗೆ ಪ್ರಮುಖವಾಗಿ ಕಾಣಿಸುವ ಹೆಸರು ಪಾಕಿಸ್ಥಾನ ಹಾಗೂ ಚೀನಾ ಮಾತ್ರ. ಮತ್ತು ಇದಕ್ಕೆ ಇತ್ತೀಚಿನ ದಿನಗಳಲ್ಲಿ ಹೊಸ ಸೇರ್ಪಡೆಯಾಗಿ ನೇಪಾಳ ಬಂದುಬಿಟ್ಟಿದೆ! ಅದೂ ಚೀನಾದ ಕುಮ್ಮಕ್ಕಿನಿಂದಲೇ.

Advertisement

ಅಫ್ಘಾನಿಸ್ಥಾನ, (106 ಕಿಲೋಮೀಟರ್), ಬಾಂಗ್ಲಾದೇಶ (4,096 ಕಿಲೋಮೀಟರ್), ಭೂತಾನ್ (699 ಕಿಲೋಮೀಟರ್), ಚೀನಾ (3,488 ಕಿಲೋಮೀಟರ್), ಮಯನ್ಮಾರ್ (1,643 ಕಿಲೋಮೀಟರ್), ನೇಪಾಳ (1,751 ಕಿಲೋಮೀಟರ್) ಮತ್ತು ಪಾಕಿಸ್ಥಾನ (3,323 ಕಿಲೋಮೀಟರ್) ಸೇರಿದಂತೆ ಒಟ್ಟು ಏಳು ನೆರೆಯ ದೇಶಗಳು ಭಾರತದೊಂದಿಗೆ ಭೂಗಡಿಯನ್ನು ಹಂಚಿಕೊಂಡಿವೆ.

ಇನ್ನು ಶ್ರೀಲಂಕಾ, ಇಂಡೋನೇಷಿಯಾ, ಥಾಯ್ಲೆಂಡ್ ಮತ್ತು ಮಾಲ್ಡೀವ್ಸ್ ಸಹಿತ ಪಾಕಿಸ್ಥಾನ, ಮಯನ್ಮಾರ್ ಹಾಗೂ ಬಾಂಗ್ಲಾದೇಶಗಳು ನಮ್ಮೊಂದಿಗೆ ಜಲ ಗಡಿಯನ್ನು (ಸಮುದ್ರ ಗಡಿ) ಹಂಚಿಕೊಂಡಿವೆ.

ಆದರೆ ನಮಗೆ ಪ್ರಮುಖವಾಗಿ ಗಡಿ ತಕರಾರಿರುವುದು ಪಾಕಿಸ್ಥಾನ ಹಾಗೂ ಚೀನಾ ದೇಶಗಳೊಂದಿಗೆ ಎನ್ನುವುದು ಇಲ್ಲಿ ಪ್ರಮುಖವಾದ ವಿಚಾರವಾಗಿದೆ. ಮತ್ತು ಭಾರತ ಇದುವರೆಗೆ ನಡೆಸಿರುವ ಯುದ್ಧಗಳೆಲ್ಲವೂ (ಬಾಂಗ್ಲಾ ವಿಮೋಚನಾ ಕಾಳಗವನ್ನು ಹೊರತುಪಡಿಸಿ) ನಮ್ಮ ಭೂಭಾಗದ ರಕ್ಷಣೆಗಾಗಿಯೇ ಎನ್ನುವುದು ಮಹತ್ವದ ವಿಚಾರವಾಗಿದೆ.

ಪಾಕಿಸ್ಥಾನ ಹಾಗೂ ಚೀನಾ ದೇಶಗಳು ದಶಕಗಳಿಂದ ನಮಗೆ ಸೇರಿದ ಭೂಭಾಗವನ್ನು ಅತಿಕ್ರಮಿಸಿ ಕೂತಿವೆ ಹಾಗೂ ಇವು ತಮಗೆ ಸೇರಿದ್ದೆಂದು ವಾದಿಸುತ್ತಲೇ ಬಂದಿವೆ. ಪಾಕ್ ಆಕ್ರಮಿತ ಕಾಶ್ಮೀರ ಒಂದು ಕಡೆಯಾದರೆ, ಚೀನಾದ ಸುಪರ್ದಿಯಲ್ಲಿರುವ ಅಕ್ಸಾಯ್ ಚಿನ್ ಇನ್ನೊಂದೆಡೆ.


ಏನಿದು ಅಕ್ಸಾಯ್ ಚಿನ್ ಕಥೆ?
ಭೂತಾನ್ ದೇಶದಷ್ಟು ವಿಶಾಲ ಭೂಪ್ರದೇಶವನ್ನು ಹೊಂದಿರುವ ಹಾಗೂ ಯುರೋಪಿನ ಪ್ರವಾಸಿ ಸ್ವರ್ಗ ಸ್ವಿಝರ್ ಲ್ಯಾಂಡ್ ಗಿಂತ ಸ್ವಲ್ಪ ಚಿಕ್ಕದಾಗಿರುವ ಹಿಮ ಮರುಭೂಮಿ ಎಂದೇ ಕರೆಯಿಸಿಕೊಳ್ಳುತ್ತಿರುವ ‘ಅಕ್ಸಾಯ್ ಚಿನ್’ ಪ್ರದೇಶವನ್ನು ಚೀನಾ 1950ರಿಂದಲೇ ಕಬಳಿಸಿ ಕೂತಿದೆ. ಇನ್ನು 1962ರ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಚೀನಾ ಈ ಪ್ರದೇಶದಲ್ಲಿ ತನ್ನ ಸೇನಾ ಪಾರುಪತ್ಯವನ್ನೂ ಸಾಧಿಸಿತ್ತು.

37,555 ಸ್ಕ್ವೇರ್ ಕಿಲೋ ಮೀಟರ್ ಗಳಷ್ಟು (16,481 ಸ್ಕ್ವೇರ್ ಮೀಟರ್) ವಿಸ್ತಾರವಾಗಿರುವ ಈ ಪ್ರದೇಶ ವಿಶ್ವದ ಅತೀ ಎತ್ತರದಲ್ಲಿರುವ ಪ್ರದೇಶಗಳಲ್ಲಿ ಒಂದಾಗಿದೆ. ‘ಬಿಳಿ ಕಲ್ಲುಗಳ ಚೀನಾದ ಮರುಭೂಮಿ’ ಎಂಬುದು ಅಕ್ಸಾಯ್ ಚಿನ್ ಎಂಬ ಪದದ ಅರ್ಥವಾಗಿದ್ದು, ಅಂದಿನಿಂದ ಚೀನಾ ಇದು ತನ್ನದೇ ಭೂಪ್ರದೇಶವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾದಿಸುತ್ತಲೇ ಬಂದಿದೆ.

ಈ ಪ್ರದೇಶದಲ್ಲಿ ಮಳೆಯಾಗಲಿ, ಹಿಮ ಬೀಳುವಿಕೆಯಾಗಲಿ ನಡೆಯುವದಿಲ್ಲ. ಜನವಾಸಕ್ಕೆ ಯೋಗ್ಯವಾದ ಪ್ರದೇಶ ಇದಲ್ಲ. ಇದೇ ಕಾರಣಕ್ಕೆ ಮಾಜೀ ಪ್ರದಾನಿ ಜವಹರಲಾಲ್ ನೆಹರೂ ಅವರು ಈ ಪ್ರದೇಶದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ಒಂದೊಮ್ಮೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು!

ಈ ಪ್ರದೇಶ ಪುರಾತನ ಹಾಗೂ ಮಧ್ಯಕಾಲೀನ ಚೀನೀ ಸಾಮ್ರಾಜ್ಯದ ಭಾಗವಾಗಿತ್ತು ಎಂಬ ಕಾರಣವನ್ನು ನೀಡಿ ಚೀನಾ ಈ ಪ್ರದೇಶವನ್ನು ಭಾರತದ ಬಳಿಯಿಂದ ಕಬಳಿಸಿಕೊಂಡಿದೆ. ಆದರೆ ಇತಿಹಾಸವನ್ನು ಗಮನಿಸಿದಾಗ ಚೀನಾದ ವಾದ ಎಷ್ಟು ಸುಳ್ಳೆಂಬುದು ನಮಗೆ ಮನವರಿಕೆಯಾಗುತ್ತದೆ.

ಹಾಗೆ ನೋಡಿದರೆ ಟಿಬೆಟ್ ಅನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ. ಒಂದು ಕಾಲದಲ್ಲಿ ಅಕ್ಸಾಯ್ ಚಿನ್ ಲಡಾಖ್ ನ ಭಾಗವಾಗಿತ್ತು ಮತ್ತು ಇದೇ ಲಡಾಖ್ ನೊಂದಿಗೆ ಟಿಬೆಟ್ ಪರಸ್ಪರ ವ್ಯಾಪಾರ ವಹಿವಾಟು ನಡೆಸುತ್ತಿತ್ತು ಎಂಬುದನ್ನು ಚೀನಾ ಇದೀಗ ಉದ್ದೇಶಪೂರ್ವಕವಾಗಿ ಮರೆತಂತಿದೆ!

1660ರಲ್ಲಿ ಮುಘಲ್ ದೊರೆಗಳು ಲಡಾಖ್ ಪ್ರದೇಶದ ಮೇಲೆ ಪಾರುಪತ್ಯ ಸಾಧಿಸಿದ ಬಳಿಕವೂ ಟಿಬೆಟ್ – ಲಡಾಖ್ ಬಾಂಧವ್ಯಕ್ಕೆ ಧಕ್ಕೆ ಬಂದಿರಲಿಲ್ಲ. 1680ರಲ್ಲಿ ಲಢಾಕನ್ನು ಆಳುತ್ತಿದ್ದ ರಾಜ ಮನೆತನಗಳು ಮಾಡಿಕೊಂಡಿರುವ ಒಪ್ಪಂದವು, ಲಡಾಖ್ ಟಿಬೆಟ್ ನ ಭಾಗವಾಗಿತ್ತು ಎಂಬ ಚೀನಾದ ಹಸಿ ಸುಳ್ಳನ್ನು ಜಾಹೀರುಗೊಳಿಸುವಂತಿದೆ.

ಇನ್ನು ಇದರ ಬಳಿಕವೂ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಟಿಬೆಟ್ ಹಾಗೂ ಕಾಶ್ಮೀರದ ದೊರೆಗಳ ನಡುವೆ 1842ರಲ್ಲಿ ಆಗಿರುವ ಒಂದು ಒಪ್ಪಂದದಲ್ಲಿ ಲಡಾಖ್ ಕಾಶ್ಮೀರದ ಭಾಗ ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಲಾಗಿದೆ.

ಇನ್ನು ಇದರ ಬಳಿಕವೂ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಟಿಬೆಟ್ ಹಾಗೂ ಕಾಶ್ಮೀರದ ದೊರೆಗಳ ನಡುವೆ 1842ರಲ್ಲಿ ಆಗಿರುವ ಒಂದು ಒಪ್ಪಂದದಲ್ಲಿ ಲಡಾಖ್ ಕಾಶ್ಮೀರದ ಭಾಗ ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಲಾಗಿದೆ. ಇದಕ್ಕೂ ಮುಂಚೆ 1834ರಲ್ಲಿ ಮಹಾರಾಜ್ ಗುಲಾಬ್ ಸಿಂಗ್ ಲಡಾಖ್ ಭಾಗವನ್ನು ಗೆದ್ದುಕೊಂಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಇದಾದ ಬಳಿಕ ಲಡಾಖ್ ಸಹಿತವಾಗಿದ್ದ ಕಾಶ್ಮೀರದ ಪಾರುಪತ್ಯ 1846ರಲ್ಲಿ ಬ್ರಿಟಿಷ್ ಆಡಳಿತದ ಕೈಗೆ ಬಂತು ಮತ್ತು ಸ್ವತಃ ಬ್ರಿಟಿಷ್ ಅಧಿಕಾರಿಗಳೇ ಟಿಬೆಟ್ ಹಾಗೂ ಲಡಾಖ್ ನ ಗಡಿ ರೇಖೆಗಳನ್ನು ಗುರುತಿಸುವ ಕೆಲಸವನ್ನು ಮಾಡಿದ್ದರು.

1950ರ ವರೆಗೆ ಲಡಾಖ್ ಹಾಗೂ ಅಕ್ಸಾಯ್ ಚಿನ್ ಭಾರತದ್ದೇ ಭೂಭಾಗ ಎಂಬ ವಿಚಾರದಲ್ಲಿ ಚೀನಾಕ್ಕೂ ಯಾವುದೇ ತಕರಾರು ಇರಲಿಲ್ಲ. ಸಮಗ್ರ ಜಮ್ಮು ಮತ್ತು ಕಾಶ್ಮೀರದ ಭೂಪ್ರದೇಶ ಭಾರತ ಗಣತಂತ್ರದ ಸ್ವಾಮ್ಯಕ್ಕೆ ಒಳಪಟ್ಟಿದ್ದು ಎಂದು ನಮ್ಮ ಸಂವಿಧಾನ ಘೋಷಿಸಿದ ಸಂದರ್ಭದಲ್ಲೂ ಚೀನಾ ಮೌನವಾಗಿಯೇ ಇತ್ತು.

1920ರ ಚೀನಾದ ಯಾವುದೇ ನಕ್ಷೆಗಳಲ್ಲಿ ಅಕ್ಸಾಯ್ ಚಿನ್ ತಮ್ಮ ಭೂಭಾಗ ಎಂಬ ಉಲ್ಲೇಖ ಕಾಣಸಿಗುವುದಿಲ್ಲ ಮತ್ತು 1930ರ ಕ್ಸಿನ್ ಝಿಯಾಂಗ್ ನಕ್ಷೆಯಲ್ಲಿ, ಇದೀಗ ಚೀನಾ ವಾದಿಸುತ್ತಿರುವ ಕಾರಕೋರಂ ಪ್ರದೇಶದ ಬದಲಿಗೆ ಕುನ್ಲುಂ ಪರ್ವತ ಶ್ರೇಣಿಯನ್ನೇ ಈ ಭಾಗದಲ್ಲಿ ಎರಡೂ ದೇಶಗಳ ಗಡಿ ಭಾಗ ಎಂದು ತೋರಿಸಲಾಗಿತ್ತು, ಮತ್ತು ಭಾರತ ಅಂದಿನಿಂದ ಇಂದಿನವರೆಗೂ ಇದೇ ವಾದವನ್ನು ಮುಂದಿಡುತ್ತಿದೆ. ಆದರೆ ಆ ಬಳಿಕ ಚೀನಾದ ವರಸೆ ಬದಲಾಗಿದೆಯೇ ಹೊರತು ಭಾರತದ್ದಲ್ಲ!

1950ರಲ್ಲಿ ಚೀನಾದಲ್ಲಿನ ಕಮ್ಯುನಿಸ್ಟ್ ಆಡಳಿತಾವಧಿಯಲ್ಲಿ ಟಿಬೆಟ್ ನ ಪಶ್ಚಿಮ ಗಡಿ ಭಾಗದಲ್ಲಿ ಚೀನಾ ಆಕ್ರಮಣಕಾರಿ ನೀತಿಯನ್ನು ಅಳವಡಿಸತೊಡಗಿತು ಮತ್ತು ಈ ಭಾಗದಲ್ಲಿ ಅಕ್ಸಾಯ್ ಚಿನ್ ಮೂಲಕ ಹಾದುಹೋಗುವಂತೆ ಮೂರು ಪ್ರಮುಖ ರಸ್ತೆಗಳ ನಿರ್ಮಾಣವೂ ಚೀನಾ ಮಿಲಿಟರಿಯ ಸುಪರ್ದಿಯಲ್ಲಿ ನಡೆಯಿತು. ಇದರಲ್ಲಿ ಹೆದ್ದಾರಿ ಸಂಖ್ಯೆ 219 ಕ್ಸಿನ್ ಝಿಯಾಂಗ್ ನ ಹೊಟಾನ್ ಪ್ರದೇಶವನ್ನು ಟಿಬೆಟ್ ನ ಲ್ಹಾಸಾದೊಂದಿಗೆ ಸಂಪರ್ಕಿಸುತ್ತದೆ.

ಇಷ್ಟು ಮಾತ್ರವಲ್ಲದೇ ಕ್ಲಾಡ್ ಅರ್ಪಿ ಎಂಬ ಲೇಖಕ ಹಾಗೂ ಇತಿಹಾಸಕಾರ, ಮಾತ್ರವಲ್ಲದೇ ಟಿಬೆಟ್ ದೇಶದ ಇತಿಹಾಸದ ಕುರಿತಾಗಿ ವಿಸ್ತೃತ ಅಧ್ಯಯನವನ್ನು ಮಾಡಿದ್ದ ವ್ಯಕ್ತಿ ಸಿ.ಐ.ಎ. ದಾಖಲೆಯೊಂದನ್ನು ಉಲ್ಲೇಖಿಸಿ ಬರೆದಿರುವ ಪ್ರಕಾರ ಚೀನಾ ಮಿಲಿಟರಿಯು ಲಡಾಖ್ – ಅಕ್ಸಾಯ್ ಚಿನ್ ಪ್ರದೇಶಕ್ಕೆ 1951ರ ಸುಮಾರಿಗೆ ಕಾಲಿರಿಸಿತ್ತು ಮತ್ತು ಯಾವಾಗ ನಮ್ಮಲ್ಲಿ ನೆಹರೂ ಅವರು ಇಂಡಿಯಾ ಚೀನಾ ಭಾಯಿ ಭಾಯಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರೋ ಅದೇ ಸಮಯದಲ್ಲಿ ಅಂದರೆ 1953ರ ಬಳಿಕ ಈ ಭಾಗದಲ್ಲಿ ಚೀನಾ ಹಲವಾರು ನಿರ್ಮಾಣ ಕಾರ್ಯಗಳನ್ನು ಕೈಗೊಂಡಿತ್ತು ಎಂಬುದನ್ನು ಇವರು ಉಲ್ಲೇಖಿಸಿದ್ದಾರೆ.

ನೆನಪಿಡಿ, ಇದು ಅಮೆರಿಕಾದ ಗುಪ್ತಚರ ಇಲಾಖೆ ಸಿ.ಐ.ಎ. ದಾಖಲೆಗಳನ್ನು ಆಧರಿಸಿ ಕ್ಲಾಡ್ ನೀಡಿರುವ ಮಾಹಿತಿ. ಹಾಗಾದರೆ ಆ ಸಂದರ್ಭದಲ್ಲೇ ಚೀನಾ ನಮ್ಮ ಸದಾಶಯವನ್ನು ಭಂಗಗೊಳಿಸಿ ಭವಿಷ್ಯದಲ್ಲಿ ಸಂಭವಿಸಬಹುದಾಗಿದ್ದ ಅತೀ ದೊಡ್ಡ ಗಡಿ ಕಲಹಕ್ಕೆ ಮುನ್ನುಡಿ ಬರೆಯುತ್ತಿತ್ತು!

ಅಕ್ಸಾಯ್ ಚಿನ್ ಪ್ರದೇಶ ನಮ್ಮ ಕೈತಪ್ಪಿ ಹೋಗುತ್ತಿದೆ ಎಂದು ಪಂಡಿತ್ ನೆಹರೂ ಅವರಿಗೆ ಅರಿವಾಗುತ್ತಲೇ 1959ರಲ್ಲಿ ಅವರು ರಾಜತಾಂತ್ರಿಕ ಕ್ರಮಗಳ ಮೂಲಕ ಈ ಪ್ರದೇಶದಲ್ಲಿ ಭಾರತದ ಹಕ್ಕುಸ್ವಾಮ್ಯವನ್ನು ಪ್ರತಿಪಾದಿಸುವ ಕೆಲಸಕ್ಕೆ ಕೈ ಹಾಕಿದರು. ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು. ಎಲ್ಲಾ ರೀತಿಯ ವ್ಯೂಹಾತ್ಮಕ ಕ್ರಮಗಳ ಮೂಲಕ ನಂಬಿಕೆ ದ್ರೋಹಿ ಚೀನಾ ಒಂದು ಸಣ್ಣ ರಾಷ್ಟ್ರದಷ್ಟಿದ್ದ ಭೂಭಾಗವನ್ನು ಸದ್ದಿಲ್ಲದೇ ಕಬ್ಜಾ ಮಾಡಿಕೊಂಡು ನಗುತ್ತಿತ್ತು!

ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆಯುವ 5 ವರ್ಷ ಮೊದಲೇ ಚೀನಾ ಈ ಪ್ರದೇಶವನ್ನು ತಲುಪಲು ಅಗತ್ಯವಾಗಿದ್ದ ಹೆದ್ದಾರಿ ನಿರ್ಮಿಸಿ ಅದರಲ್ಲಿ ಸೇನಾ ವಾಹನಗಳನ್ನು ಓಡಿಸಿ ತಾಲೀಮು ನಡೆಸಿತ್ತು. 1958ರಂದು ವಿದೇಶಾಂಗ ಕಾರ್ಯದರ್ಶಿ ಸುಬಿಮಲ್ ದತ್ ಅವರು ಅಂದು ಪ್ರಧಾನಿಯಾಗಿದ್ದ ಪಂಡಿತ್ ನೆಹರೂ ಅವರಿಗೆ ಪತ್ರವೊಂದನ್ನು ಬರೆಯುತ್ತಾರೆ ಮತ್ತು, ಚೀನಾ ಹೊಸದಾಗಿ ನಿರ್ಮಿಸಿರುವ 1,200 ಕಿಲೋಮೀಟರ್ ಹೆದ್ದಾರಿ ನಮ್ಮ ಭೂಭಾಗವಾಗಿರುವ ಅಕ್ಸಾಯ್ ಚಿನ್ ಮೂಲಕ ಹಾದುಹೋಗುತ್ತದೆ ಎಂಬ ಗುಮಾನಿ ಇದೆ ಎಂದು ಅವರು ಆ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸುತ್ತಾರೆ.

ಹೀಗಿರುತ್ತಾ 1962ರ ಯುದ್ಧದ ಬಳಿಕ ಚೀನಾ ಈ ಪ್ರದೇಶದಲ್ಲಿ ತನ್ನ ಸೇನಾ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತು ಮಾತ್ರವಲ್ಲದೇ ಗಲ್ವಾನ್ ಕಣಿವೆ ಪ್ರದೇಶವನ್ನೂ ಸೇರಿಸಿಕೊಂಡು ಏಕಪಕ್ಷೀಯವಾಗಿ ವಾಸ್ತವ ನಿಯಂತ್ರಣ ರೇಖೆಯನ್ನು (LAC) ಈ ಕಮ್ಯುನಿಸ್ಟ್ ರಾಷ್ಟ್ರ ಹಾಕಿಕೊಂಡುಬಿಟ್ಟಿತ್ತು! ಇದೇ ಪ್ರದೇಶದಲ್ಲಿ ಮೊನ್ನೆ ನಮ್ಮ 20 ಯೋಧರು ಚೀನಾ ಸೈನಿಕರ ಸಂಚಿಗೆ ಎದಿರೇಟು ನೀಡಿ ಹುತಾತ್ಮರಾಗಿದ್ದು.

ಒಂದೆಡೆ ಚೀನಾ ಅರುಣಾಚಲ ಪ್ರದೇಶದಲ್ಲಿ ಮೆಕ್ ಮೋಹನ್ ರೇಖೆಯನ್ನು ಒಪ್ಪಿಕೊಂಡು ಲಡಾಕ್ ನ ಅಕ್ಸಾಯ್ ಚಿನ್ ಭಾಗದಲ್ಲಿ ತನ್ನ ಸೇನೆಯನ್ನು ನೇಮಿಸಿ ಭಾರತದೊಂದಿಗೆ ದ್ವಿಮುಖ ನೀತಿಯನ್ನು ಅನುಸರಿಸುತ್ತಲೇ ಬರುತ್ತಿದೆ.

ಮಾಹಿತಿ ಮೂಲ: ಇಂಡಿಯಾ ಟುಡೇ/ವಿಕಿಪೀಡಿಯಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next